FIFA World Cup ಸೆನಗಲ್‌ ಮಣಿಸಿ ಇಂಗ್ಲೆಂಡ್‌ ಕ್ವಾರ್ಟರ್‌ಗೆ ಲಗ್ಗೆ

By Kannadaprabha News  |  First Published Dec 6, 2022, 10:13 AM IST

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಕ್ವಾರ್ಟರ್ ಫೈನಲ್ ಪ್ರವೇಶ
ಸೆನೆಗಲ್ ಎದುರು ಭರ್ಜರಿ ಗೆಲುವು ಸಾಧಿಸಿದ ಹ್ಯಾರಿ ಕೇನ್ ಪಡೆ
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 10ನೇ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಇಂಗ್ಲೆಂಡ್


ಅಲ್‌ ಖೋರ್‌(ಡಿ.06): ಇಂಗ್ಲೆಂಡ್‌ ನಾಯಕ ಹ್ಯಾರಿ ಕೇನ್‌ ಈ ವಿಶ್ವಕಪ್‌ನಲ್ಲಿ ಮೊದಲ ಗೋಲು ಬಾರಿಸಿ, ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ತಮ್ಮ ತಂಡ ಸೆನೆಗಲ್‌ ವಿರುದ್ಧ 3-0 ಗೋಲುಗಳಲ್ಲಿ ಗೆಲ್ಲಲು ನೆರವಾದರು. 10ನೇ ಬಾರಿಗೆ ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿರುವ ಇಂಗ್ಲೆಂಡ್‌, ಸೆಮೀಸ್‌ನಲ್ಲಿ ಸ್ಥಾನಕ್ಕಾಗಿ ಹಾಲಿ ಚಾಂಪಿಯನ್‌ ಫ್ರಾನ್ಸ್‌ ವಿರುದ್ಧ ಸೆಣಸಲಿದೆ.

ತಮ್ಮ ದೇಶದ ಪರ 52ನೇ ಗೋಲು ಬಾರಿಸಿದ ಕೇನ್‌, ವೇಯ್‌್ನ ರೂನಿ ಅವರ ದಾಖಲೆ ಮುರಿಯುವ ಸನಿಹಕ್ಕೆ ತಲುಪಿದ್ದಾರೆ. ಕಳೆದ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ಇಂಗ್ಲೆಂಡ್‌, ಸೆನೆಗಲ್‌ ವಿರುದ್ಧ ಸುಲಭ ಜಯ ದಾಖಲಿಸಿತು. ಪಂದ್ಯದುದ್ದಕ್ಕೂ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಇಂಗ್ಲೆಂಡ್‌ ಮೊದಲಾರ್ಧ ಮುಗಿಯುವ ಮೊದಲೇ ಎರಡು ಗೋಲು ಬಾರಿಸಿತು.

Tap to resize

Latest Videos

undefined

39ನೇ ನಿಮಿಷದಲ್ಲಿ ಜೊರ್ಡನ್‌ ಹೆಂಡರ್ಸನ್‌ ಇಂಗ್ಲೆಂಡ್‌ ಪರ ಖಾತೆ ತೆರೆದರು. 45+3 ನಿಮಿಷದಲ್ಲಿ ಹ್ಯಾರಿ ಕೇನ್‌ ಗೋಲು ಬಾರಿಸಿದರು. ದ್ವಿತೀಯಾರ್ಧ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ (57ನೇ ನಿಮಿಷ) ಬುಕಾಯೊ ಸಾಕಾ ಮುನ್ನಡೆಯನ್ನು ಹೆಚ್ಚಿಸಿದರು. ಆ ಬಳಿಕ ಇಂಗ್ಲೆಂಡ್‌ ರಕ್ಷಣಾತ್ಮಕ ಆಟಕ್ಕೆ ಮುಂದಾಯಿತು. ಪಂದ್ಯ ತನ್ನ ಕೈಜಾರದಂತೆ ಎಚ್ಚರಿಕೆ ವಹಿಸಿ ಗೆಲುವು ಸಂಪಾದಿಸಿತು. ಗೋಲು ಬಾರಿಸಲು ಅವಕಾಶಗಳನ್ನು ಸೃಷ್ಟಿಸಿದ ಮಿಡ್‌ಫೀಲ್ಡರ್‌ ಜ್ಯೂಡ್‌ ಬೆಲ್ಲಿಂಗ್‌ಹ್ಯಾಮ್‌ ಆಟದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು.

ಒಬ್ಬ ಕೋಚ್‌ ಮಾರ್ಗದರ್ಶನದಲ್ಲಿ ತಲಾ 2 ಬಾರಿ ಕ್ವಾರ್ಟರ್‌ಗೆ ಇಂಗ್ಲೆಂಡ್‌!

ಇಂಗ್ಲೆಂಡ್‌ ಒಟ್ಟು 10 ಬಾರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದು, ಒಬ್ಬೊಬ್ಬ ಕೋಚ್‌ ಮಾರ್ಗದರ್ಶನದಲ್ಲಿ ತಲಾ ಎರಡು ಬಾರಿ ಈ ಸಾಧನೆ ಮಾಡಿರುವುದು ವಿಶೇಷ. 1954 ಹಾಗೂ 1962ರಲ್ಲಿ ವಾಲ್ಟರ್‌ ವಿಂಟರ್‌ಬಾಟಮ್‌, 1966 ಹಾಗೂ 1970ರಲ್ಲಿ ಆಲ್‌್ಫ ರಾಮ್ಸೆ, 1986 ಹಾಗೂ 1990ರಲ್ಲಿ ಬಾಬಿ ರಾಬ್ಸನ್‌, 2002 ಹಾಗೂ 2006ರಲ್ಲಿ ಸ್ವೆನ್‌-ಗೊರಾನ್‌ ಎರಿಕ್ಸನ್‌, 2018, 2022ರಲ್ಲಿ ಗೆರಾಥ್‌ ಸೌಥ್‌ಗೇಟ್‌ ಮಾರ್ಗದರ್ಶನದಲ್ಲಿ ಇಂಗ್ಲೆಂಡ್‌ ಅಂತಿಮ 8ರ ಸುತ್ತಿಗೆ ಪ್ರವೇಶಿಸಿದೆ.

FIFA World Cup 2022: ಶೂಟೌಟ್ ಗೆದ್ದ ಕ್ರೊವೇಷಿಯಾ, ಜಪಾನ್ ತಂಡಕ್ಕೆ ನಿರಾಸೆ..!

20 ವರ್ಷ ಬಳಿಕ ಕ್ವಾರ್ಟರ್‌ಗೇರುವ ಸೆನೆಗಲ್‌ ತಂಡದ ಕನಸು ಭಗ್ನ!

ಸೆನೆಗಲ್‌ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಆಡಿದ್ದು 2002ರಲ್ಲಿ. ಚೊಚ್ಚಲ ಆವೃತ್ತಿಯಲ್ಲೇ ಕ್ವಾರ್ಟರ್‌ ಫೈನಲ್‌ಗೇರಿತ್ತು. ಆ ನಂತರ ಅರ್ಹತೆ ಪಡೆದಿದ್ದು 2018ರಲ್ಲಿ. ಆ ವರ್ಷ ಗುಂಪು ಹಂತದಲ್ಲೇ ಹೊರಬಿದ್ದಿತ್ತು. 2022ರಲ್ಲಿ ಪ್ರಿ ಕ್ವಾರ್ಟರ್‌ನಲ್ಲಿ ಸೋತು ನಿರಾಸೆ ಅನುಭವಿಸಿದೆ.

2002ರಲ್ಲಿ ನಾಯಕ, 2022ರಲ್ಲಿ ಕೋಚ್‌!

ಸೆನೆಗಲ್‌ ವಿಶ್ವಕಪ್‌ನಲ್ಲಿ ಎರಡು ಬಾರಿ ನಾಕೌಟ್‌ ಪ್ರವೇಶಿಸಿದೆ. 2002ರಲ್ಲಿ ಮೊದಲ ಬಾರಿಗೆ ತಂಡ ಅಂತಿಮ 16ರ ಸುತ್ತಿಗೆ ಪ್ರವೇಶಿಸಿದ್ದಾಗ ಅಲಿಯೊ ಸಿಸೇ ನಾಯಕರಾಗಿದ್ದರು. 2022ರಲ್ಲಿ ಅವರು ಸೆನೆಗಲ್‌ನ ಕೋಚ್‌ ಆಗಿ ಕಾರ‍್ಯನಿರ್ವಹಿಸಿ ತಂಡವನ್ನು ನಾಕೌಟ್‌ ಹಂತಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು.

click me!