FIFA World Cup 2022: ಕ್ವಾರ್ಟರ್‌ ಫೈನಲ್‌ಗೆ ಹಾಲಿ ಚಾಂಪಿಯನ್‌ ಫ್ರಾನ್ಸ್‌!

By Santosh NaikFirst Published Dec 5, 2022, 8:37 AM IST
Highlights

16ರ ಘಟ್ಟದ ಪಂದ್ಯದಲ್ಲಿ ಪೋಲೆಂಡ್‌ ವಿರುದ್ಧ 3-1  ಅಂತರದ ಭರ್ಜರಿ ಗೆಲುವು ಕಂಡ ಫ್ರಾನ್ಸ್‌ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಹಂತಕ್ಕೇರಿತು. ಇದು ಪೋಲೆಂಡ್‌ ವಿರುದ್ಧ ತಂಡಕ್ಕೆ ಸತತ 8ನೇ ಗೆಲುವು ಎನಿಸಿದೆ.

ದೋಹಾ (ಡಿ.5): ಹಾಲಿ ಚಾಂಪಿಯನ್‌ ಫ್ರಾನ್ಸ್‌ 2022ರ ಫುಟ್ಬಾಲ್‌ ವಿಶ್ವಕಪ್‌ನ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಭಾನುವಾರ ನಡೆದ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಪೋಲೆಂಡ್‌ ವಿರುದ್ಧ 3-1 ಗೋಲುಗಳ ಗೆಲುವು ಸಾಧಿಸಿತು. ಪೋಲೆಂಡ್‌ ವಿರುದ್ಧ ಸತತ 8ನೇ ಗೆಲುವು ದಾಖಲಿಸಿದ ಫ್ರಾನ್ಸ್‌ ಮತ್ತೊಂದು ಆಸಕ್ತಿದಾಯಕ ಮೈಲಿಗಲ್ಲು ಸಾಧಿಸಿತು. 1986ರಲ್ಲಿ ಪ್ರಿ ಕ್ವಾರ್ಟರ್‌ ಮಾದರಿ ಪರಿಚಯವಾದ ಬಳಿಕ ಪ್ರತಿ ಬಾರಿ ಅಂತಿಮ 16 ಪ್ರವೇಶಿಸಿದಾಗಲೂ ಫ್ರಾನ್ಸ್‌ಗೆ ಗೆಲುವು ಸಾಧಿಸಿ ಮುನ್ನಡೆದಿದೆ. 1986, 1998, 2006, 2014, 2018ರಲ್ಲಿ ಪ್ರಿ ಕ್ವಾರ್ಟರ್‌ ಪಂದ್ಯ ಗೆದ್ದಿದ್ದ ಫ್ರಾನ್ಸ್‌ ಈ ಸಲವೂ ಜಯ ಸಾಧಿಸುವಲ್ಲಿ ಹಿಂದೆ ಬೀಳಲಿಲ್ಲ. ಪಂದ್ಯದ ಮೊದಲಾರ್ಧದಲ್ಲಿ ಪೋಲೆಂಡ್‌ನಿಂದ ಪ್ರಬಲ ಪೈಪೋಟಿ ಎದುರಾಯಿತು. ಗೋಲ್‌ಕೀಪರ್‌ ಲೋರಿಸ್‌ರ ಆಕರ್ಷಕ ಪ್ರದರ್ಶನ ಪೋಲೆಂಡ್‌ ಗೋಲು ದಾಖಲಿಸುವುದನ್ನು ತಪ್ಪಿಸಿತು. 44ನೇ ನಿಮಿಷದಲ್ಲಿ ಗೋಲು ಬಾರಿಸಿದ ಓಲಿವಿಯರ್‌ ಜಿರೊಡ್‌ ಮೊದಲಾರ್ಧವನ್ನು ಫ್ರಾನ್ಸ್‌ 1-0 ಮುನ್ನಡೆಯೊಂದಿಗೆ ಮುಗಿಸಲು ಕಾರಣರಾದರು.

ದ್ವಿತೀಯಾರ್ಧದಲ್ಲಿ ಪೋಲೆಂಡ್‌ ಸಂಪೂರ್ಣ ಮಂಕಾಯಿತು. ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪರದಾಟ ನಡೆಸಿದ ರಾಬರ್ಚ್‌ ಲೆವಾಂಡೋವ್ಸಿ$್ಕ ಪಡೆ ಕಿಲಿಯಾನ್‌ ಎಂಬಾಪೆ ಸೇರಿ ಫ್ರಾನ್ಸ್‌ನ ಮಿಡ್‌ಫೀಲ್ಡರ್‌ಗಳು ಹಾಗೂ ಫಾರ್ವರ್ಡ್‌ ಆಟಗಾರರ ವೇಗದ ಎದುರು ಸುಸ್ತಾಯಿತು. 74ನೇ ನಿಮಿಷದಲ್ಲಿ ಫ್ರಾನ್ಸ್‌ ಮುನ್ನಡೆಯನ್ನು 2-0ಗೇರಿಸಿದ ಎಂಬಾಪೆ, 91ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ ಗೆಲುವನ್ನು ಖಚಿತಪಡಿಸಿದರು. 99ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಅವಕಾಶದಲ್ಲಿ ಗೋಲು ಬಾರಿಸಿದ ಲೆವಾಂಡೋವಸ್ಕಿ ಸೋಲಿನ ಅಂತರವನ್ನು ತಗ್ಗಿಸಿದರು. 1982ರ ಬಳಿಕ ಮೊದಲ ಬಾರಿಗೆ ಕ್ವಾರ್ಟರ್‌ ಫೈನಲ್‌ಗೇರುವ ಪೋಲೆಂಡ್‌ ಕನಸು ಭಗ್ನಗೊಂಡಿತು.

52ನೇ ಗೋಲು, ಜಿರೊಡ್‌ ದಾಖಲೆ: ಫ್ರಾನ್ಸ್‌ ಪರ ಅತಿಹೆಚ್ಚು ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಓಲಿವಿಯರ್‌ ಜಿರೊಡ್‌ ಮೊದಲ ಸ್ಥಾನಕ್ಕೇರಿದರು. ರಾಷ್ಟ್ರೀಯ ತಂಡದ ಪರ 116ನೇ ಪಂದ್ಯವನ್ನಾಡಿದ ಜಿರೊಡ್‌ 52ನೇ ಗೋಲು ಬಾರಿಸಿ, ಥಿಯೆರಿ ಹೆನ್ರಿ ಅವರ 51 ಗೋಲುಗಳ ದಾಖಲೆಯನ್ನು ಮುರಿದರು. 2011ರಲ್ಲಿ ಅಂ.ರಾ.ಫುಟ್ಬಾಲ್‌ಗೆ ಜಿರೊಡ್‌ ಪಾದಾರ್ಪಣೆ ಮಾಡಿದ್ದರು.


 

click me!