FIFA World Cup 2026: ಸೆಮೀಸ್‌ನಲ್ಲಿ ಬದ್ಧವೈರಿಗಳ ನಡುವೆ ಜಿದ್ದಾಜಿದ್ದಿ!

Kannadaprabha News   | Kannada Prabha
Published : Jul 14, 2026, 09:26 AM IST
France football Team

ಸಾರಾಂಶ

ಫಿಫಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಮಾಜಿ ಚಾಂಪಿಯನ್‌ಗಳಾದ ಫ್ರಾನ್ಸ್‌-ಸ್ಪೇನ್‌ ಹಾಗೂ ಅರ್ಜೆಂಟೀನಾ-ಇಂಗ್ಲೆಂಡ್‌ ಮುಖಾಮುಖಿಯಾಗಲಿವೆ. ಫ್ರಾನ್ಸ್ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದರೆ, ಅರ್ಜೆಂಟೀನಾ-ಇಂಗ್ಲೆಂಡ್‌ ನಡುವಿನ ಐತಿಹಾಸಿಕ ವೈರತ್ವ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಮೆಸ್ಸಿ, ಎಂಬಾಪೆ, ಕೇನ್ ಅವರಂತಹ ತಾರಾ ಆಟಗಾರರ ನಡುವಿನ ಪೈಪೋಟಿ ಕುತೂಹಲ ಹೆಚ್ಚಿಸಿದೆ.

ಅಟ್ಲಾಂಟಾ: ಫಿಫಾ ವಿಶ್ವಕಪ್‌ನ ಸೆಮಿಫೈನಲ್‌ಗಳ ಭಾರೀ ಕುತೂಹಲ ಶುರುವಾಗಿದ್ದು, ಬದ್ಧವೈರಿಗಳ ನಡುವೆ ತೀವ್ರ ಜಿದ್ದಾಜಿದ್ದಿ ಏರ್ಪಡುವ ನಿರೀಕ್ಷೆ ಮೂಡಿಸಿದೆ. ಮೊದಲ ಸೆಮೀಸ್‌ನಲ್ಲಿ ಫ್ರಾನ್ಸ್‌ ಹಾಗೂ ಸ್ಪೇನ್‌ ಎದುರಾದರೆ, 2ನೇ ಸೆಮೀಸ್‌ನಲ್ಲಿ ಅರ್ಜೆಂಟೀನಾ ಹಾಗೂ ಇಂಗ್ಲೆಂಡ್‌ ಮುಖಾಮುಖಿ ಆಗಲಿವೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರ-4 ಸ್ಥಾನಗಳಲ್ಲಿರುವ ತಂಡಗಳೇ ಸೆಮೀಸ್‌ಗೇರಿರುವುದು ಸಹ ವಿಶೇಷ. ಅಲ್ಲದೇ, ಈ ನಾಲ್ಕೂ ತಂಡಗಳು ಮಾಜಿ ಚಾಂಪಿಯನ್‌ಗಳೇ. ಹೀಗಾಗಿ, ಯಾರಿಗೆ ಮತ್ತೊಮ್ಮೆ ಟ್ರೋಫಿ ಒಲಿಯಲಿದೆ ಎನ್ನುವ ಕುತೂಹಲವೂ ಇದೆ.

ಫ್ರಾನ್ಸ್‌ vs ಸ್ಪೇನ್‌

ಫ್ರಾನ್ಸ್ ಹಾಗೂ ಸ್ಪೇನ್‌ 2 ವರ್ಷದಲ್ಲಿ ಮತ್ತೊಂದು ಪ್ರತಿಷ್ಠಿತ ಟೂರ್ನಿಯ ಸೆಮೀಸ್‌ನಲ್ಲಿ ಪರಸ್ಪರ ಎದುರಾಗಲು ಸಜ್ಜಾಗಿವೆ. 2024ರ ಯುರೋಪಿಯನ್ ಚಾಂಪಿಯನ್‌ಶಿಪ್‌ನ ಸೆಮೀಸ್‌ನಲ್ಲಿ ಉಭಯ ತಂಡಗಳು ಸೆಣಸಿದ್ದವು. ಸ್ಪೇನ್‌ 2-1ರಲ್ಲಿ ಗೆದ್ದು, ಬಳಿಕ ಚಾಂಪಿಯನ್‌ ಸಹ ಆಗಿತ್ತು. 2024-25ರ ಯುಇಎಫ್‌ಎ ನೇಷನ್ಸ್‌ ಲೀಗ್‌ನ ಸೆಮೀಸ್‌ನಲ್ಲೂ ಸ್ಪೇನ್‌ ಮೇಲುಗೈ ಸಾಧಿಸಿತ್ತು. ಫ್ರಾನ್ಸ್‌ ವಿರುದ್ಧ 5-4ರಲ್ಲಿ ಜಯಿಸಿತ್ತು. ಹೀಗಾಗಿ, ಫ್ರಾನ್ಸ್‌ ಈಗ ಸೇಡಿಗೆ ಕಾಯುತ್ತಿದೆ.

ಅರ್ಜೆಂಟೀನಾ vs ಇಂಗ್ಲೆಂಡ್‌

ಈ ಎರಡು ದೇಶಗಳ ವಿರುದ್ಧದ ಪಂದ್ಯವನ್ನು ಶೇ.100ರಷ್ಟು, ಬದ್ಧವೈರಿಗಳ ನಡುವಿನ ಕಾದಾಟ ಎಂದು ಕರೆಯಬಹುದು. ಅರ್ಜೆಂಟೀನಾ ಹಾಗೂ ಇಂಗ್ಲೆಂಡ್‌ 1982ರಲ್ಲಿ ಫಾಲ್ಕ್‌ಲ್ಯಾಂಡ್ಸ್‌ ಯುದ್ಧದಲ್ಲಿ ಸೆಣಸಿದ್ದವು. ಆ ಬಳಿಕ 1986ರ ಫುಟ್ಬಾಲ್‌ ವಿಶ್ವಕಪ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಉಭಯ ದೇಶಗಳ ಎದುರಾದಾಗ, ಡಿಯಾಗೋ ಮರಡೋನಾರ ‘ಹ್ಯಾಂಡ್‌ ಆಫ್‌ ಗಾಡ್‌’ ಗೋಲು ದಾಖಲಾಗಿತ್ತು. ಅದೇ ಪಂದ್ಯದಲ್ಲಿ ಮರಡೋನಾ, ಶತಮಾನದ ಶ್ರೇಷ್ಠ ಗೋಲು ಎಂದು ಕರೆಸಿಕೊಳ್ಳುವಂತಹ ಗೋಲು ಬಾರಿಸಿ, ಇಂಗ್ಲೆಂಡನ್ನು ವಿಶ್ವಕಪ್‌ನಿಂದ ಹೊರದಬ್ಬಿದ್ದರು.

1998ರ ವಿಶ್ವಕಪ್‌ನಲ್ಲೂ ಈ ಎರಡು ದೇಶಗಳ ನಡುವೆ ಕಿತ್ತಾಟ ನಡೆದಿತ್ತು. ಇಂಗ್ಲೆಂಡ್‌ನ ಡೇವಿಡ್‌ ಬೆಕ್‌ಹ್ಯಾಮ್‌, ಅರ್ಜೆಂಟೀನಾದ ಡಿಯಾಗೋ ಸಿಮಿಯೋನಿಗೆ ಕಾಲಿನಿಂದ ಒದ್ದು ರೆಡ್‌ಕಾರ್ಡ್‌ಗೆ ಗುರಿಯಾಗಿದ್ದರು. ಆ ಪಂದ್ಯದಲ್ಲಿ ಇಂಗ್ಲೆಂಡ್‌ ಪೆನಾಲ್ಟಿಯಲ್ಲಿ ಸೋತಿತ್ತು. ಬಳಿಕ 2002ರ ವಿಶ್ವಕಪ್‌ನಲ್ಲಿ ಬೆಕ್‌ಹ್ಯಾಮ್‌ ಬಾರಿಸಿದ ಗೋಲಿನ ನೆರವಿನಿಂದ ಅರ್ಜೆಂಟೀನಾ ವಿರುದ್ಧ ಇಂಗ್ಲೆಂಡ್‌ ಗುಂಪು ಹಂತದ ಪಂದ್ಯವನ್ನು ಗೆದ್ದಿತ್ತು.

ತಾರಾ ಆಟಗಾರರ ನಡುವೆ ಪೈಪೋಟಿ

ಸೆಮಿಫೈನಲ್‌ಗಳಲ್ಲಿ ವಿಶ್ವದ ಶ್ರೇಷ್ಠ ಆಟಗಾರರ ನಡುವಿನ ಪೈಪೋಟಿಯೂ ಕುತೂಹಲಕ್ಕೆ ಕಾರಣವಾಗಿದೆ. ಫ್ರಾನ್ಸ್‌ ಹಾಗೂ ಸ್ಪೇನ್‌ ನಡುವಿನ ಪಂದ್ಯದಲ್ಲಿ ಕೀಲಿಯನ್‌ ಎಂಬಾಪೆ ಹಾಗೂ ಲ್ಯಾಮಿನೆ ಯಮಾಲ್‌ ನಡುವೆ ಜಿದ್ದಾಜಿದ್ದಿ ಏರ್ಪಡಲಿದೆ. ಎಂಬಾಪೆ ಈಗಾಗಲೇ 8 ಗೋಲು ಬಾರಿಸಿ ಅತ್ಯುತ್ತಮ ಲಯದಲ್ಲಿದ್ದಾರೆ. ಯಮಾಲ್‌ ಗಳಿಸಿರುವುದು ಒಂದೇ ಗೋಲಾದರೂ, ತಂಡದ ಬಹುತೇಕ ಗೋಲುಗಳಲ್ಲಿ ಅವರ ಪಾತ್ರವಿದೆ.

ಇನ್ನು, ಅರ್ಜೆಂಟೀನಾ ಹಾಗೂ ಇಂಗ್ಲೆಂಡ್‌ ನಡುವಿನ ಪಂದ್ಯ ಲಿಯೋನೆಲ್‌ ಮೆಸ್ಸಿ ಹಾಗೂ ಹ್ಯಾರಿ ಕೇನ್‌ ಮಧ್ಯೆ ಏರ್ಪಡಲಿರುವ ಕಾದಾಟದಿಂದಾಗಿ ಸದ್ದು ಮಾಡುತ್ತಿದೆ. ಈ ಇಬ್ಬರು ಗೋಲ್‌ ಸರದಾರರ ನಡುವೆ ಮೇಲುಗೈ ಸಾಧಿಸುವವರು ಯಾರು? ಕಾದು ನೋಡಬೇಕು.

ಗೋಲು ಮಷಿನ್‌ಗಳ ಪೈಪೋಟಿ!

ಈ ವಿಶ್ವಕಪ್‌ನಲ್ಲಿ ಅತಿಹೆಚ್ಚು ಗೋಲು ಬಾರಿಸಿರುವ ಅಗ್ರ-5 ಆಟಗಾರರ ಪೈಕಿ ನಾಲ್ವರು ಸೆಮೀಸ್‌ನಲ್ಲಿ ಆಡಲಿದ್ದಾರೆ. ಲಿಯೋನೆಲ್‌ ಮೆಸ್ಸಿ ಹಾಗೂ ಕೀಲಿಯನ್‌ ಎಂಬಾಪೆ ತಲಾ 8 ಗೋಲು ಗಳಿಸಿ ಜಂಟಿ ಮೊದಲ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಹ್ಯಾರಿ ಕೇನ್‌ ಹಾಗೂ ಜ್ಯೂಡ್‌ ಬೆಲ್ಲಿಂಗ್‌ಹ್ಯಾಮ್‌ ತಲಾ 6 ಗೋಲು ದಾಖಲಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫುಟ್ಬಾಲ್‌ ವಿಶ್ವಕಪ್‌ ಫೈನಲ್‌ ನಡೆಯುವ ಮೈದಾನದ ಹುಲ್ಲು ಮಾರಾಟಕ್ಕಿಟ್ಟ ಫಿಫಾ! ಬೆಲೆ ಎಷ್ಟು?
FIFA World Cup 2026: ವಿಶ್ವಚಾಂಪಿಯನ್‌ ಅರ್ಜೆಂಟೀನಾ ಸೆಮಿಫೈನಲ್‌ಗೆ