FIFA World Cup 2026: ಕಾಲ್ಚೆಂಡಿನ ಕಾಳಗದಲ್ಲಿ ಈ ಸಲ 48 ಸೈನ್ಯಗಳು! ಯಾವ ತಂಡ ಬಲಿಷ್ಠ?

Kannadaprabha News   | Kannada Prabha
Published : Jun 06, 2026, 10:16 AM IST
FIFA World Cup 2026

ಸಾರಾಂಶ

23ನೇ ಆವೃತ್ತಿಯ ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ 48 ತಂಡಗಳು 12 ಗುಂಪುಗಳಲ್ಲಿ ಸೆಣಸಾಡಲಿವೆ. ಈ ಲೇಖನವು ಮೊದಲ ನಾಲ್ಕು ಗುಂಪುಗಳಾದ 'ಎ', 'ಬಿ', 'ಸಿ' ಮತ್ತು 'ಡಿ' ಯಲ್ಲಿರುವ ತಂಡಗಳ ಸಂಕ್ಷಿಪ್ತ ಪರಿಚಯ, ಅವುಗಳ ಬಲಾಬಲ ಮತ್ತು ಪ್ರಮುಖ ಆಟಗಾರರ ಬಗ್ಗೆ ಮಾಹಿತಿ ನೀಡುತ್ತದೆ.

  • ಸ್ಪಂದನ್ ಕಣಿಯಾರ್, ಕನ್ನಡಪ್ರಭ ವಿಶೇಷ

23ನೇ ಆವೃತ್ತಿಯ ಫಿಫಾ ಫುಟ್ಬಾಲ್ ವಿಶ್ವಕಪ್‌ಗೆ ದಿನಗಣನೆ ಆರಂಭಗೊಂಡಿದ್ದು, ಈ ಬಾರಿ ದಾಖಲೆಯ 48 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ತಲಾ 4 ತಂಡಗಳಂತೆ ಬರೋಬ್ಬರಿ 12 ಗುಂಪುಗಳನ್ನು ರಚಿಸಲಾಗಿದೆ. ಟೂರ್ನಿಯಲ್ಲಿ ಆಡಲಿರುವ ತಂಡಗಳು ಯಾವುವು? ಯಾವ ತಂಡ ಯಾವ ಗುಂಪಿನಲ್ಲಿದೆ? ಯಾವ ಗುಂಪಿನಲ್ಲಿ ಭಾರೀ ಪೈಪೋಟಿ ನಿರೀಕ್ಷಿಸಬಹುದು? ಹೀಗೆ ತಂಡಗಳ ಸಂಕ್ಷಿಪ್ತ ಪರಿಚಯವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಸೋದರ ಸಂಸ್ಥೆ 'ಕನ್ನಡಪ್ರಭ' ಓದುಗರ ಮುಂದಿಡುತ್ತಿದೆ. ದಿನಕ್ಕೆ 4 ಗುಂಪುಗಳಂತೆ 3 ದಿನ ತಂಡಗಳ ಪರಿಚಯ ಮಾಡಿಕೊಡಲಾಗುತ್ತದೆ. ಮೊದಲ 4 ಗುಂಪುಗಳ ಪರಿಚಯ ಇಂದು, ಉಳಿದ 8 ತಂಡಗಳ ಪರಿಚಯ ನಾಳೆ, ನಾಡಿದ್ದು ನೀಡಲಾಗುತ್ತದೆ.

ಗುಂಪು ‘ಎ’

1. ಮೆಕ್ಸಿಕೋ

ಫಿಫಾ ವಿಶ್ವ ರ್‍ಯಾಂಕಿಂಗ್‌: 15

ಅರ್ಹತೆ ಪಡೆದಿದ್ದು ಹೇಗೆ?: ಆತಿಥೇಯ ರಾಷ್ಟ್ರ

ಹಿಂದಿನ ಶ್ರೇಷ್ಠ ಪ್ರದರ್ಶನ: 1970, 1986ರಲ್ಲಿ ಕ್ವಾರ್ಟರ್‌ ಫೈನಲ್‌

ಆತಿಥೇಯ ರಾಷ್ಟ್ರಗಳಲ್ಲಿ ಒಂದಾದ ಮೆಕ್ಸಿಕೋ, ಭಾರೀ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದೆ. ತವರಿನಲ್ಲಿ ಆರಂಭಿಕ ಪಂದ್ಯಗಳನ್ನು ಆಡಲಿರುವ ಕಾರಣ, ದೊಡ್ಡ ಲಾಭ ಸಿಗಲಿದೆ. ಎಡ್ಸನ್‌ ಆಲ್ವರೆಜ್‌, ದಿಗ್ಗಜ ಗೋಲ್‌ಕೀಪರ್‌ ಗ್ಯುಲೆರ್ಮೊ ಓಚಾ ತಂಡದ ಆಧಾರಸ್ತಂಭ. ಫಾರ್ವರ್ಡ್‌ ಆಟಗಾರ ಸ್ಯಾಂಟಿಯಾಗೋ ಜಿಮೆನೆಜ್‌ ಅಸ್ಥಿರ ಆಟ ತಂಡಕ್ಕೆ ತಲೆನೋವಾಗಬಹುದು.

2. ದಕ್ಷಿಣ ಕೊರಿಯಾ

ಫಿಫಾ ವಿಶ್ವ ರ್‍ಯಾಂಕಿಂಗ್‌: 25

ಅರ್ಹತೆ ಪಡೆದಿದ್ದು ಹೇಗೆ?: ಎಎಫ್‌ಸಿ ಗ್ರೂಪ್‌ ಬಿ ವಿಜೇತರು

ಹಿಂದಿನ ಶ್ರೇಷ್ಠ ಪ್ರದರ್ಶನ: 2002ರಲ್ಲಿ 4ನೇ ಸ್ಥಾನ

ಏಷ್ಯನ್‌ ಅರ್ಹತಾ ಸುತ್ತಿನಲ್ಲಿ ಆಕರ್ಷಕ ಆಟವಾಡಿ ಸತತ 11ನೇ ಬಾರಿಗೆ ವಿಶ್ವಕಪ್‌ಗೆ ಅರ್ಹತೆ ಪಡೆದ ದ.ಕೊರಿಯಾ, ತಾಂತ್ರಿಕವಾಗಿ ಬಹಳ ಸದೃಢವಾಗಿರುವ ತಂಡ. ತಂಡದ ಪ್ರಮುಖ ಆಕರ್ಷಣೆ ಸನ್‌ ಹ್ಯುಯೆಂಗ್‌-ಮಿನ್‌ ಏಕಾಂಗಿಯಾಗಿ ತಂಡ ಗೆಲ್ಲಿಸುವ ಸಾರ್ಮಥ್ಯವಿರುವ ಆಟಗಾರ. ಆದರೆ ಕೆಲವರ ಮೇಲೆ ಹೆಚ್ಚು ಅವಲಂಬನೆ ತಂಡಕ್ಕೆ ಮುಳುವಾಗಬಹುದು.

3. ದಕ್ಷಿಣ ಆಫ್ರಿಕಾ

ಫಿಫಾ ವಿಶ್ವ ರ್‍ಯಾಂಕಿಂಗ್‌: 60

ಅರ್ಹತೆ ಪಡೆದಿದ್ದು ಹೇಗೆ?: ಸಿಎಎಫ್‌ ಸಿ ಗುಂಪಿನ ವಿಜೇತರು

ಹಿಂದಿನ ಶ್ರೇಷ್ಠ ಪ್ರದರ್ಶನ: 3 ಬಾರಿ ಗುಂಪು ಹಂತ

2010ರಲ್ಲಿ ಟೂರ್ನಿಗೆ ಆತಿಥ್ಯ ವಹಿಸಿದ್ದ ದ.ಆಫ್ರಿಕಾ, ಆ ಬಳಿಕ ಇದೇ ಮೊದಲ ಬಾರಿಗೆ ವಿಶ್ವಕಪ್‌ಗೆ ಕಾಲಿಟ್ಟಿದೆ. ಪ್ರಚಂಡ ಮಿಡ್‌ಫೀಲ್ಡರ್‌ ಟೆಬೊಹೊ ಮೊಕೊಯೆನಾ ತಂಡದ ಸ್ಟಾರ್‌ ಆಟಗಾರ. ಹೆಚ್ಚು ಒತ್ತಡವಲ್ಲಿದ ಕಾರಣ ನಿರ್ಭೀತ ಆಟವಾಡಬಹುದು. ಆದರೆ ತಂಡದಲ್ಲಿ ಅನುಭವಿಗಳ ಕೊರತೆ ಇದೆ.

4. ಚೆಕ್‌ ಗಣರಾಜ್ಯ

ಫಿಫಾ ವಿಶ್ವ ರ್‍ಯಾಂಕಿಂಗ್‌: 41

ಅರ್ಹತೆ ಪಡೆದಿದ್ದು ಹೇಗೆ?: ಯುಇಎಫ್‌ಎ ಪ್ಲೇ-ಆಫ್ಸ್‌ ವಿಜೇತರು

ಹಿಂದಿನ ಶ್ರೇಷ್ಠ ಪ್ರದರ್ಶನ: 2006ರಲ್ಲಿ ಗುಂಪು ಹಂತ

2006ರ ಬಳಿಕ ಮೊದಲ ಬಾರಿಗೆ ಅರ್ಹತೆ ಪಡೆದಿರುವ ಚೆಕ್‌ ಗಣರಾಜ್ಯ, ಸೆಟ್‌-ಪೀಸ್‌ ಆಟಕ್ಕೆ ಹೆಸರುವಾಸಿ. ತಂಡದಲ್ಲಿರುವ ಅಕಾಶದೆತ್ತರದ ಥಾಮಸ್‌ ಸೊಚೆಕ್‌, ಪ್ಯಾಟ್ರಿಕ್‌ ಶಿಚಿಕ್‌ ಅತ್ಯಂತ ಅಪಾಯಕಾರಿ ಆಟಗಾರರು. ಆದರೆ ಅಂ.ರಾ. ಅನುಭವದ ಕೊರತೆ, ಮೆಕ್ಸಿಕೋದ ಅತಿಯಾದ ಬಿಸಿಲು ತಂಡಕ್ಕೆ ಸಮಸ್ಯೆ ತಂದೊಡ್ಡಬಹುದು.

ಗುಂಪು ‘ಬಿ’

1. ಕೆನಡಾ

ಫಿಫಾ ವಿಶ್ವ ರ್‍ಯಾಂಕಿಂಗ್‌: 30

ಅರ್ಹತೆ ಪಡೆದಿದ್ದು ಹೇಗೆ?: ಆತಿಥೇಯ ರಾಷ್ಟ್ರ

ಹಿಂದಿನ ಶ್ರೇಷ್ಠ ಪ್ರದರ್ಶನ: 2 ಬಾರಿ ಗುಂಪು ಹಂತ

ತವರಿನ ಲಾಭದೊಂದಿಗೆ ವಿಶ್ವಕಪ್‌ನಲ್ಲಿ ಅಬ್ಬರಿಸಲು ಕಾಯುತ್ತಿರುವ ಕೆನಡಾಕ್ಕೆ ಟಜೊನ್‌ ಬುಕಾನನ್‌, ಜೊನಾಥನ್‌ ಡೇವಿಡ್‌ರಂಥ ಆಟಗಾರರ ಬಲವಿದೆ. ಆದರೆ ತಂಡದ ರಕ್ಷಣಾ ಪಡೆ (ಡಿಫೆನ್ಸ್‌) ದುರ್ಬಲವಾಗಿದ್ದು, ಬಲಿಷ್ಠ ತಂಡಗಳ ಎದುರು ಕುಸಿಯಬಹುದು. ನಾಯಕ ಅಲ್ಫಾನ್ಸೋ ಡೇವಿಸ್‌ಗೆ ಗಾಯದ ಭೀತಿ ಇದ್ದು, ತಂಡದ ಮೇಲೆ ಪರಿಣಾಮ ಬೀರಬಹುದು.

2. ಸ್ವಿಜರ್‌ಲೆಂಡ್‌

ಫಿಫಾ ವಿಶ್ವ ರ್‍ಯಾಂಕಿಂಗ್‌: 19

ಅರ್ಹತೆ ಪಡೆದಿದ್ದು ಹೇಗೆ?: ಯುಇಎಫ್‌ಎ ಅರ್ಹತಾ ಸುತ್ತು

ಹಿಂದಿನ ಶ್ರೇಷ್ಠ ಪ್ರದರ್ಶನ: 1934, 38, 54ರಲ್ಲಿ ಕ್ವಾರ್ಟರ್‌ಫೈನಲ್‌

ಗುಂಪಿನಲ್ಲಿರುವ ಬಲಿಷ್ಠ ತಂಡ. ಯುಇಎಫ್‌ಎ ‘ಬಿ’ ಗುಂಪಿನ ವಿಜೇತರಾಗಿ ವಿಶ್ವಕಪ್‌ಗೆ ಪ್ರವೇಶ. ನಾಯಕ ಹಾಗೂ ತಂಡದ ತಾರಾ ಮಿಡ್‌ಫೀಲ್ಡರ್‌ ಗ್ರಾನಿಟ್‌ ಝ್ಸಾಕಾ ಪರಿಸ್ಥಿತಿಗೆ ತಕ್ಕಂತೆ ಆಟ ಬದಲಿಸುವ ಚಾಕಚಕ್ಯತೆ ಇರುವ ಆಟಗಾರ. ಗುಂಪು ಹಂತದಿಂದ ಮುಂದೆ ಸಾಗಲು ಸಮಸ್ಯೆ ಆಗದು, ನಾಕೌಟ್‌ಗಳಲ್ಲಿ ತಂಡಕ್ಕೆ ಅನುಭವಿಗಳ ಕೊರತೆ ಎದುರಾಗಬಹುದು.

3. ಬೋಸ್ನಿಯಾ-ಹರ್ಜೆಗೋವಿನಾ

ಫಿಫಾ ವಿಶ್ವ ರ್‍ಯಾಂಕಿಂಗ್‌: 65

ಅರ್ಹತೆ ಪಡೆದಿದ್ದು ಹೇಗೆ?: ಯುಇಎಫ್‌ಎ ಅರ್ಹತಾ ಸುತ್ತು

ಹಿಂದಿನ ಶ್ರೇಷ್ಠ ಪ್ರದರ್ಶನ: 2014ರಲ್ಲಿ ಗುಂಪು ಹಂತ

ಕೇವಲ 2 ಬಾರಿಗೆ ವಿಶ್ವಕಪ್‌ಗೆ ಕಾಲಿಟ್ಟಿರುವ ತಂಡ. ಯುಇಎಫ್‌ಎ ಅರ್ಹತಾ ಸುತ್ತಿನಲ್ಲಿ ಇಟಲಿಗೆ ಆಘಾತ ನೀಡಿ ಫುಟ್ಬಾಲ್‌ ಜಗತ್ತನ್ನು ಬೆರಗಾಗಿಸಿತ್ತು. ಗುಂಪಿನ ವೈಲ್ಡ್‌ಕಾರ್ಡ್‌ ಎಂದೇ ಕರೆಸಿಕೊಳ್ಳುತ್ತಿರುವ ಬೋಸ್ನಿಯಾಕ್ಕೆ 40ರ ದಿಗ್ಗಜ ಸ್ಟ್ರೈಕರ್‌ ಎಡಿನ್‌ ಝೆಕೊ ಬಲವಿದೆ. ಆದರೆ ತಂಡದಲ್ಲಿ ಪ್ರತಿಷ್ಠಿತ ಟೂರ್ನಿಗಳಲ್ಲಿ ಆಡಿದ ಅನುಭವಿಗಳ ಕೊರತೆ ಇದೆ.

4. ಕತಾರ್‌

ಫಿಫಾ ವಿಶ್ವ ರ್‍ಯಾಂಕಿಂಗ್‌: 55

ಅರ್ಹತೆ ಪಡೆದಿದ್ದು ಹೇಗೆ?: ಎಎಫ್‌ಸಿ ಅರ್ಹತಾ ಸುತ್ತಿನ ವಿಜೇತರು

ಹಿಂದಿನ ಶ್ರೇಷ್ಠ ಪ್ರದರ್ಶನ: 2022ರಲ್ಲಿ ಗುಂಪು ಹಂತ

ಎಎಫ್‌ಸಿ ಏಷ್ಯನ್‌ ಕಪ್‌ನಲ್ಲಿ ಸತತ 2 ಬಾರಿ ಚಾಂಪಿಯನ್‌. ಏಷ್ಯಾದ ಪವರ್‌ಹೌಸ್‌. ಕಳೆದ ವಿಶ್ವಕಪ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿತ್ತು. ಅಕ್ರಮ್‌ ಅಫಿಫ್‌-ಅಲ್ಮೊಯೆಜ್‌ ಅಲಿ ಜೊತೆಯಾಟ ಯಾವುದೇ ರಕ್ಷಣಾ ಪಡೆಯನ್ನೂ ಛಿದ್ರಗೊಳಿಸುವ ತಾಕತ್ತು ಹೊಂದಿದೆ. ಎತ್ತರದ ಡಿಫೆಂಡರ್‌ಗಳು ಇಲ್ಲದಿರುವುದರಿಂದ ಸಮಸ್ಯೆಯಾಗಬಹುದು.

ಗುಂಪು ‘ಸಿ’

1. ಬ್ರೆಜಿಲ್‌

ಫಿಫಾ ವಿಶ್ವ ರ್‍ಯಾಂಕಿಂಗ್‌: 6

ಅರ್ಹತೆ ಪಡೆದಿದ್ದು ಹೇಗೆ?: ದ. ಅಮೆರಿಕ ಅರ್ಹತಾ ಸುತ್ತು

ಹಿಂದಿನ ಶ್ರೇಷ್ಠ ಪ್ರದರ್ಶನ: 1958, 62, 70, 94, 2002ರಲ್ಲಿ ಚಾಂಪಿಯನ್‌

ದಕ್ಷಿಣ ಅಮೆರಿಕದ ಅರ್ಹತಾ ಸುತ್ತಿನಲ್ಲಿ ನಂಬಲಸಾಧ್ಯ ಎನ್ನುವಂತೆ 5ನೇ ಸ್ಥಾನಕ್ಕೆ ಕುಸಿದರೂ ಬ್ರೆಜಿಲ್‌ ಮೇಲಿನ ನಿರೀಕ್ಷೆ ಕಡಿಮೆ ಆಗಿಲ್ಲ. ವಿನಿಶಿಯಸ್‌ ಜೂ., ರಫೀನ್ಯಾರಂಥ ವಿಶ್ವಶ್ರೇಷ್ಠರು ತಂಡದಲ್ಲಿದ್ದಾರೆ. ನೇಯ್ಮರ್‌ ವಾಪಸಾಗಿರುವುದು ತಂಡದ ಬಲ ಹೆಚ್ಚಿಸಿದೆ. ಆದರೂ ತಂಡ ಇತ್ತೀಚಿನ ಪ್ರದರ್ಶನ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

2. ಮೊರಾಕ್ಕೊ

ಫಿಫಾ ವಿಶ್ವ ರ್‍ಯಾಂಕಿಂಗ್‌: 8

ಅರ್ಹತೆ ಪಡೆದಿದ್ದು ಹೇಗೆ?: ಸಿಎಎಫ್‌ ಅರ್ಹತಾ ಸುತ್ತಿನ ವಿಜೇತರು

ಹಿಂದಿನ ಶ್ರೇಷ್ಠ ಪ್ರದರ್ಶನ: 2022ರಲ್ಲಿ 4ನೇ ಸ್ಥಾನ

2022ರಲ್ಲಿ 4ನೇ ಸ್ಥಾನ ಪಡೆದಿತ್ತು. ತಂಡದಲ್ಲಿ ಅನುಭವಿಗಳ ದಂಡೇ ಇದೆ. ಅಚ್ರಾಫ್‌ ಹಕಿಮಿ, ನೌಸ್ಸೇರ್‌ ಮಝ್ರೌಯ ವೇಗ ಎದುರಾಳಿಗಳ ನಿದ್ದೆಗೆಡಿಸಬಹುದು. ಮಿಡ್‌ಫೀಲ್ಡ್‌ನಲ್ಲಿ ಬ್ರಹಿಮ್‌ ಡಯಜ್‌ರನ್ನು ನೋಡಿದಾಗ ಯಾರಿಗಾದರೂ ಗಾಬರಿ ಆಗುತ್ತೆ. ಆದರೆ ತಂಡಕ್ಕೆ ತನ್ನದೇ ಆದ ದೌರ್ಬಲ್ಯಗಳಿದ್ದು, ಎದುರಾಳಿಗಳು ಅದರ ಲಾಭವೆತ್ತಿದರೆ ಸಂಕಷ್ಟ ಖಚಿತ.

3. ಸ್ಕಾಟ್ಲೆಂಡ್‌

ಫಿಫಾ ವಿಶ್ವ ರ್‍ಯಾಂಕಿಂಗ್‌: 43

ಅರ್ಹತೆ ಪಡೆದಿದ್ದು ಹೇಗೆ?: ಯುಇಎಫ್‌ಎ ಅರ್ಹತಾ ಸುತ್ತು

ಹಿಂದಿನ ಶ್ರೇಷ್ಠ ಪ್ರದರ್ಶನ: 8 ಬಾರಿ ಗುಂಪು ಹಂತ

28 ವರ್ಷಗಳ ಬಳಿಕ ವಿಶ್ವಕಪ್‌ಗೆ ಕಾಲಿಟ್ಟಿರುವ ಸ್ಕಾಟ್ಲೆಂಡ್‌, ತಾಂತ್ರಿಕ ಶಿಸ್ತು ಹಾಗೂ ಕೂಡುಭಾವದೊಂದಿಗೆ ಟೂರ್ನಿಗೆ ಕಾಲಿಡಲಿದೆ. ಮೊದಲ ಸಲ ಗುಂಪು ಹಂತದಿಂದ ಮುಂದೆ ಹೋಗಲು ತಂಡ ಕಾತರಿಸುತ್ತಿದೆ. ನಾಯಕ ರಾಬರ್ಟ್‌ಸನ್‌, ಮೆಕ್‌ಗಿನ್‌, ಮ್ಯಾಕ್‌ಟಾಮಿನಾಯ್‌ ತಂಡ ಬಲ. ಆದರೆ ಬಲಿಷ್ಠ ರಕ್ಷಣಾ ಪಡೆಗಳೆದುರು ತಂಡ ಮಂಕಾಗಬಹುದು.

4. ಹೈಟಿ

ಫಿಫಾ ವಿಶ್ವ ರ್‍ಯಾಂಕಿಂಗ್‌: 83

ಅರ್ಹತೆ ಪಡೆದಿದ್ದು ಹೇಗೆ?: ದ.ಅಮೆರಿಕ ಅರ್ಹತಾ ಸುತ್ತು

ಹಿಂದಿನ ಶ್ರೇಷ್ಠ ಪ್ರದರ್ಶನ: 1 ಬಾರಿ ಗುಂಪು ಹಂತ

52 ವರ್ಷಗಳ ಬಳಿಕ ವಿಶ್ವಕಪ್‌ಗೆ ವಾಪಸಾಗಿರುವ ಹೈಟಿ, ಟೂರ್ನಿಯ ಅಂಡರ್‌ಡಾಗ್ಸ್‌ ಎನಿಸಿದೆ. ತಂಡಕ್ಕೆ ಕಳೆದುಕೊಳ್ಳಲು ಏನೂ ಇಲ್ಲ. ಹೀಗಾಗಿ ಯಾವುದೇ ಭೀತಿಯಿಲ್ಲದೆ ಆಡಬಹುದು ಎನ್ನುವುದೇ ದೊಡ್ಡ ಅಡ್ವಾಂಟೇಜ್‌. ತಂಡ ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿ. ಆದರೆ ವಿಶ್ವ ವೇದಿಕೆಯಲ್ಲಿ ತಂಡ ಎಷ್ಟರ ಮಟ್ಟಿಗೆ ಮಿಂಚಬಹುದು ಎನ್ನುವ ಬಗ್ಗೆ ಅನುಮಾನಗಳಿವೆ.

ಗುಂಪು ‘ಡಿ’

1. ಅಮೆರಿಕ

ಫಿಫಾ ವಿಶ್ವ ರ್‍ಯಾಂಕಿಂಗ್‌: 16

ಅರ್ಹತೆ ಪಡೆದಿದ್ದು ಹೇಗೆ?: ಆತಿಥೇಯ ರಾಷ್ಟ್ರ

ಹಿಂದಿನ ಶ್ರೇಷ್ಠ ಪ್ರದರ್ಶನ: 1930ರಲ್ಲಿ 3ನೇ ಸ್ಥಾನ

ಆತಿಥೇಯ ರಾಷ್ಟ್ರವಾಗಿ ಟೂರ್ನಿಯಲ್ಲಿ ಆಡುವಾಗ ಒತ್ತಡ ಸಹಜ. ಆದರೆ ತಂಡದಲ್ಲಿ ಯುರೋಪ್‌ನ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಆಡುವ ಕ್ರಿಸ್ಟಿಯನ್‌ ಪುಲಿಸಿಚ್‌, ಫೋಲಾರಿನ್‌ ಬಲೊಗನ್‌, ವೆಸ್ಟನ್‌ ಮೆಕೆನ್ನಿಯಂಥ ಆಟಗಾರರಿದ್ದಾರೆ. ಆದರೆ ಅಸ್ಥಿರ ಪ್ರದರ್ಶನ, ಸಂಯೋಜನೆಯಲ್ಲಿ ಪದೇಪದೇ ಬದಲು ಮಾಡುವ ಪ್ರಯೋಗ ಅಮೆರಿಕಕ್ಕೆ ಮುಳುವಾಗಿ ಪರಿಣಮಿಸಬಹುದು.

2. ಪರಗ್ವೆ

ಫಿಫಾ ವಿಶ್ವ ರ್‍ಯಾಂಕಿಂಗ್‌: 40

ಅರ್ಹತೆ ಪಡೆದಿದ್ದು ಹೇಗೆ?: ದ.ಅಮೆರಿಕ ಅರ್ಹತಾ ಸುತ್ತು

ಹಿಂದಿನ ಶ್ರೇಷ್ಠ ಪ್ರದರ್ಶನ: 2010ರಲ್ಲಿ ಕ್ವಾರ್ಟರ್‌ ಫೈನಲ್‌

16 ವರ್ಷಗಳ ಬಳಿಕ ಮೊದಲ ಬಾರಿಗೆ ವಿಶ್ವಕಪ್‌ಗೆ ಪ್ರವೇಶ. ಉತ್ಕೃಷ್ಟ ರಕ್ಷಣಾ ಪಡೆಯನ್ನು ಭೇದಿಸುವುದು ಎದುರಾಳಿಗಳಿಗೆ ಸವಾಲಿನ ಕೆಲಸ. ಆದರೆ ತಂಡದ ಇತಿಹಾಸ ನೋಡಿದಾಗ, ಚೆಂಡಿನ ಮೇಲೆ ಹಿಡಿತ ಸಾಧಿಸಲು ಕಷ್ಟಪಡುತ್ತದೆ. ಮೊದಲು ಗೋಲು ಬಿಟ್ಟುಕೊಟ್ಟ ಪಂದ್ಯಗಳಲ್ಲಿ ತಂಡ ಒತ್ತಡಕ್ಕೆ ಸಿಲುಕಿ ಪಂದ್ಯ ಕೈಚೆಲ್ಲಿದ ಉದಾಹರಣೆಗಳೇ ಹೆಚ್ಚು.

3. ಆಸ್ಟ್ರೇಲಿಯಾ

ಫಿಫಾ ವಿಶ್ವ ರ್‍ಯಾಂಕಿಂಗ್‌: 27

ಅರ್ಹತೆ ಪಡೆದಿದ್ದು ಹೇಗೆ?: ಎಎಫ್‌ಸಿ ಅರ್ಹತಾ ಸುತ್ತು

ಹಿಂದಿನ ಶ್ರೇಷ್ಠ ಪ್ರದರ್ಶನ: 2 ಬಾರಿ ಪ್ರಿ ಕ್ವಾರ್ಟರ್‌

‘ಸಾಕರೂಸ್‌’ ಎಂದು ಕರೆಸಿಕೊಳ್ಳುವ ಆಸ್ಟ್ರೇಲಿಯಾ ತಂಡ ಈ ಸಲವೂ ತನಗಿಂತ ಬಲಿಷ್ಠ ತಂಡಗಳನ್ನು ಹಣಿಯುವ ಉತ್ಸಾಹದಲ್ಲೇ ವಿಶ್ವಕಪ್‌ಗೆ ಕಾಲಿಟ್ಟಿದೆ. ಆಟಗಾರರ ದೈಹಿಕ ಸಾಮರ್ಥ್ಯ, ಮಾನಸಿಕ ಸದೃಢತೆಯೇ ತಂಡ ಅತಿದೊಡ್ಡ ಬಲ. ಆದರೆ ತಂಡದಲ್ಲಿ ‘ಜಾದೂ’ ಮಾಡಬಲ್ಲ, ಗೇಮ್‌ ಚೇಂಜರ್‌ ಎಂದು ಕರೆಸಿಕೊಳ್ಳುವ ಆಟಗಾರರಿಲ್ಲ.

4. ಟರ್ಕಿ

ಫಿಫಾ ವಿಶ್ವ ರ್‍ಯಾಂಕಿಂಗ್‌: 22

ಅರ್ಹತೆ ಪಡೆದಿದ್ದು ಹೇಗೆ?: ಯುಇಎಫ್‌ಎ ಅರ್ಹತಾ ಸುತ್ತು

ಹಿಂದಿನ ಶ್ರೇಷ್ಠ ಪ್ರದರ್ಶನ: 2002ರಲ್ಲಿ 3ನೇ ಸ್ಥಾನ

ಹೊಸ ಪೀಳಿಗೆಯ ಆಟಗಾರರಿಂದ ತುಂಬಿ ತುಳುಕುತ್ತಿರುವ ತಂಡ, ಉತ್ಸಾಹದ ಅಲೆಯಲ್ಲಿ ತೇಲುತ್ತಿದೆ. ಯುವ ಪಡೆಯಾದರೂ, ಜಾಗತಿಕ ಮಟ್ಟದಲ್ಲಿ ಅನುಭವ ಗಳಿಸಿದೆ. ತ್ರಿಕೋನ ಆಕಾರದಲ್ಲಿ ಚೆಂಡನ್ನು ಅತಿವೇಗವಾಗಿ ಪಾಸ್‌ ಮಾಡುವ ಕೌಶಲ್ಯವಿದೆ. ಆದರೆ ಅಟ್ಯಾಕಿಂಗ್‌ ಆಟಕ್ಕೆ ತಕ್ಕ ಡಿಫೆನ್ಸ್‌ ಇಲ್ಲ. ಇದು ತಂಡದ ಪ್ರಮುಖ ದೌರ್ಬಲ್ಯ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಭಾರತ ಮೂಲದ 4 ಆಟಗಾರರು..! 20 ವರ್ಷ ಬಳಿಕ ಭಾರತ ಮೂಲದ ಆಟಗಾರರು ಸ್ಪರ್ಧೆ
FIFA World Cup 2026: ವಿಶ್ವಕಪ್‌ ನೋಡುವ ಮುನ್ನ ಫುಟ್‌ಬಾಲ್‌ ಜಗತ್ತಿನಲ್ಲಾದ ಪ್ರಮುಖ ನಿಯಮ ಬದಲಾವಣೆ ತಿಳಿದುಕೊಳ್ಳಿ..