
ನವದೆಹಲಿ: ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ ಆಡುವ ಭಾಗ್ಯ ಭಾರತಕ್ಕೆ ಇಲ್ಲದಿದ್ದರೂ ಭಾರತ ಮೂಲದ ನಾಲ್ವರು ಫುಟ್ಬಾಲಿಗರು ಈ ಬಾರಿ ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಈ ನಾಲ್ವರೂ ಬೇರೆ ಬೇರೆ ತಂಡಗಳನ್ನು ಪ್ರತಿನಿಧಿಸಲಿದ್ದಾರೆ.
ಜೂನ್ 12ರಿಂದ ಜುಲೈ 19ರವರೆಗೂ ಅಮೆರಿಕ, ಮೆಕ್ಸಿಕೋ ಹಾಗೂ ಕೆನಡಾದಲ್ಲಿ 24ನೇ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯು ನಡೆಯಲಿದೆ. ಇದರಲ್ಲಿ ಒಟ್ಟು 48 ತಂಡಗಳು ಪಾಲ್ಗೊಳ್ಳಲಿವೆ. ಈ ಪೈಕಿ ನ್ಯೂಜಿಲೆಂಡ್, ಕತಾರ್, ಆಸ್ಟ್ರೇಲಿಯಾ ಹಾಗೂ ಕಾಂಗೊ ಗಣರಾಜ್ಯ ತಂಡಗಳಲ್ಲಿ ಭಾರತೀಯ ಮೂಲದ ಆಟಗಾರರು ಸ್ಥಾನ ಪಡೆದಿದ್ದಾರೆ. ಆ ನಾಲ್ವರು ಆಟಗಾರರು ಯಾರು, ಅವರ ಹಿನ್ನೆಲೆ ಏನು ಎನ್ನುವುದರ ಬಗ್ಗೆ ಸಣ್ಣ ಪರಿಚಯ ಇಲ್ಲಿದೆ.
ತಮ್ಮ ಪೋಷಕರು ಪಂಜಾಬ್‌ನವರಾಗಿದ್ದರೂ, ಸರ್ಪ್ರೀತ್ ಜನಿಸಿದ್ದು ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ. 2018ರಲ್ಲಿ ಅವರು ಭಾರತದ ವಿರುದ್ಧ ಮುಂಬೈನಲ್ಲಿ ಆಡಿದ್ದರು. 2017, 2019ರಲ್ಲಿ ನ್ಯೂಜಿಲೆಂಡ್ ಪರ ಅಂಡರ್-20 ಫಿಫಾ ವಿಶ್ವಕಪ್ ಆಡಿದ್ದಾರೆ. ಈಗ ಅವರಿಗೆ 27 ವರ್ಷ.
ತಹ್ಸಿನ್ ತಂದೆ ಜಂಶಿದ್ ಕೇರಳದವರು. ಮಾಜಿ ಫುಟ್ಬಾಲ್ ಆಟಗಾರನೂ ಆಗಿರುವ ಜಂಶಿದ್ 2006ರಲ್ಲಿ ಕತಾರ್‌ಗೆ ಸ್ಥಳಾಂತರಗೊಂಡಿದ್ದರು. ಅವರ ಪುತ್ರ ತಹ್ಸಿನ್ 2024ರಲ್ಲಿ ತಮಗೆ ಕೇವಲ 18 ವರ್ಷವಾಗಿದ್ದಾಗ ಕತಾರ್ ಪರ ಪಾದಾರ್ಪಣೆ ಮಾಡಿದ್ದರು. ಈಗ ಫುಟ್ಬಾಲ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಆಂಗ್ಲೋ-ಇಂಡಿಯನ್ ತಾಯಿ ಮತ್ತು ಶ್ರೀಲಂಕಾದ ತಮಿಳು ಮೂಲದ ಮಲೇಷ್ಯಾದ ತಂದೆಗೆ ಮೆಲ್ಬರ್ನ್‌ನಲ್ಲಿ ಜನಿಸಿದರು ನಿಶಾನ್ ವೇಲುಪಿಳ್ಳೈ. 2024ರಲ್ಲಿ ಆಸ್ಟ್ರೇಲಿಯಾ ಪರ ಆಡುವ ಅವಕಾಶ ಪಡೆದುಕೊಂಡಿದ್ದರು. ಈವರೆಗೂ ಒಟ್ಟು 7 ಪಂದ್ಯಗಳನ್ನಾಡಿದ್ದಾರೆ.
ಮುತ್ತುಸ್ವಾಮಿ ತಂದೆ ಭಾರತದ ತಮಿಳುನಾಡು ಮೂಲದವರು. ಅವರ ತಾಯಿಯ ದೇಶ ಕಾಂಗೊ ಗಣರಾಜ್ಯ. ಹುಟ್ಟಿದ್ದು ಫ್ರಾನ್ಸ್‌ನಲ್ಲಿ. 2019ರಿಂದ ಕಾಂಗೊ ಪರ ಆಡುತ್ತಿದ್ದಾರೆ. ಫ್ರಾನ್ಸ್, ಟರ್ಕಿಯ ಕ್ಲಬ್‌ಗಳನ್ನೂ ಪ್ರತಿನಿಧಿಸಿದ್ದಾರೆ.
ಫಿಫಾ ವಿಶ್ವಕಪ್‌ನಲ್ಲಿ ಬರೋಬ್ಬರಿ 20 ವರ್ಷಗಳ ಬಳಿಕ ಭಾರತೀಯ ಮೂಲದ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. 2006ರಲ್ಲಿ ಫ್ರಾನ್ಸ್ ಪರ ವಿಕಾಸ್ ಧೋರಸೂ ಆಡಿದ್ದರು. ಆ ಬಳಿಕ ಭಾರತೀಯ ಮೂಲದವರು ಆಡುತ್ತಿರುವುದು ಇದೇ ಮೊದಲು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.