FIFA World Cup 2026: ವಿಶ್ವಕಪ್‌ ನೋಡುವ ಮುನ್ನ ಫುಟ್‌ಬಾಲ್‌ ಜಗತ್ತಿನಲ್ಲಾದ ಪ್ರಮುಖ ನಿಯಮ ಬದಲಾವಣೆ ತಿಳಿದುಕೊಳ್ಳಿ..

Published : Jun 03, 2026, 07:25 PM IST
Fifa World Cup 2026

ಸಾರಾಂಶ

ಫಿಫಾ ಫುಟ್‌ಬಾಲ್ ವಿಶ್ವಕಪ್ 2026ರಲ್ಲಿ ಆಟದ ಶಿಸ್ತು, ಸಮಯ ಪಾಲನೆ ಮತ್ತು ಪಾರದರ್ಶಕತೆ ಹೆಚ್ಚಿಸಲು 8 ಕಠಿಣ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಬಾಯಿ ಮುಚ್ಚಿ ಮಾತನಾಡುವುದಕ್ಕೆ ರೆಡ್ ಕಾರ್ಡ್ ನೀಡುವುದರಿಂದ ಹಿಡಿದು ಹಲವು ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಲಾಗಿದೆ.

ಮೆಕ್ಸಿಕೋ ಸಿಟಿ (ಜೂ.3): ಜಾಗತಿಕ ಕ್ರೀಡಾಲೋಕದ ಮಹಾ ಜಾತ್ರೆ ‘ಫಿಫಾ ಫುಟ್‌ಬಾಲ್ ವಿಶ್ವಕಪ್ 2026’ (FIFA World Cup 2026) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂಬರುವ ಜೂನ್ 12ರಿಂದ ಈ ಮಹಾ ಸಮರಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಈ ಬಾರಿಯ ವಿಶ್ವಕಪ್ ಕೇವಲ ಕ್ರೀಡಾ ರೋಮಾಂಚನಕ್ಕಾಗಿ ಮಾತ್ರವಲ್ಲದೆ, ಮೈದಾನದಲ್ಲಿ ಶಿಸ್ತು ಮತ್ತು ಸಮಯ ಪಾಲನೆಗಾಗಿ ಫಿಫಾ ಜಾರಿಗೆ ತಂದಿರುವ ಕಠಿಣ ಹಾಗೂ ಅತ್ಯಂತ ಆಸಕ್ತಿದಾಯಕ ನಿಯಮಗಳಿಂದಾಗಿಯೂ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇನ್ಮುಂದೆ ಮೈದಾನದಲ್ಲಿ ಆಟಗಾರರು ಸಮಯ ವ್ಯರ್ಥ ಮಾಡಲು ಯಾವುದೇ ನೆಪ ಹೂಡುವಂತಿಲ್ಲ.

ಅಮೆರಿಕ, ಮೆಕ್ಸಿಕೋ ಮತ್ತು ಕೆನಡಾ ದೇಶಗಳು ಜಂಟಿಯಾಗಿ ಆತಿಥ್ಯ ವಹಿಸಿರುವ ಈ ಟೂರ್ನಿಯಲ್ಲಿ ಭಾಗವಹಿಸಲು ಈಗಾಗಲೇ 48 ದೇಶಗಳ ಬಲಿಷ್ಠ ತಂಡಗಳು ಕಣಕ್ಕಿಳಿದಿವೆ. ಫುಟ್‌ಬಾಲ್ ಇತಿಹಾಸದಲ್ಲೇ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ತಂಡಗಳು ಭಾಗವಹಿಸುತ್ತಿರುವುದು ಮತ್ತು ಇಷ್ಟೊಂದು ಹೊಸ ನಿಯಮಗಳನ್ನು ತರುತ್ತಿರುವುದು ಇದೇ ಮೊದಲು. ಪಂದ್ಯದ ಅವಧಿಯಲ್ಲಿ ನಡೆಯುವ ತಪ್ಪುಗಳು, ಮೋಸದಾಟ ಹಾಗೂ ಸಮಯ ವ್ಯರ್ಥ ಮಾಡುವ ತಂತ್ರಗಳಿಗೆ ಲಗಾಮು ಹಾಕಲು ಮತ್ತು ಪಂದ್ಯಗಳನ್ನು ಹೆಚ್ಚು ಪಾರದರ್ಶಕಗೊಳಿಸಲು ಫಿಫಾ 8 ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ಫಿಫಾ ವಿಶ್ವಕಪ್‌ನ ಆ 8 ಹೊಸ ನಿಯಮಗಳು

ಬಾಯಿ ಮುಚ್ಚಿಕೊಂಡು ಮಾತನಾಡಿದರೆ ನೇರ ರೆಡ್ ಕಾರ್ಡ್!

ಹೊಸ ನಿಯಮದ ಪ್ರಕಾರ, ಮೈದಾನದಲ್ಲಿ ಆಟಗಾರರು ತಮ್ಮ ಬಾಯಿಯನ್ನು ಕೈಯಿಂದ ಮುಚ್ಚಿಕೊಂಡು ರಹಸ್ಯವಾಗಿ ಮಾತನಾಡುವಂತಿಲ್ಲ. ಸಾಮಾನ್ಯವಾಗಿ ಎದುರಾಳಿ ತಂಡಕ್ಕೆ ತಂತ್ರಗಳು ತಿಳಿಯಬಾರದು ಎಂಬ ಕಾರಣಕ್ಕೆ ಆಟಗಾರರು ಈ ಟ್ರಿಕ್ ಬಳಸುತ್ತಿದ್ದರು. ಆದರೆ ಇನ್ಮುಂದೆ ಮೈದಾನದಲ್ಲಿ ಇಂತಹ ವರ್ತನೆ ಕಂಡುಬಂದರೆ ರೆಫ್ರಿ ನೇರವಾಗಿ 'ರೆಡ್ ಕಾರ್ಡ್' (Red Card) ತೋರಿಸಿ ಆಟಗಾರನನ್ನು ಮೈದಾನದಿಂದ ಹೊರಹಾಕಲಿದ್ದಾರೆ.

ಚೆಂಡು ಮೈದಾನಕ್ಕೆ ಬರುವ ಮುನ್ನವೇ ಫೌಲ್ ಆದಲ್ಲಿ ಪೆನಾಲ್ಟಿ!

ಥ್ರೋ-ಇನ್ (Throw-in), ಕಾರ್ನರ್ ಕಿಕ್ (Corner kick) ಅಥವಾ ಪೆನಾಲ್ಟಿ ಶೂಟ್ ಅವಧಿಯಲ್ಲಿ ಚೆಂಡು ಅಧಿಕೃತವಾಗಿ ಮೈದಾನದ ಒಳಗೆ ಬರುವ ಮುನ್ನವೇ ಯಾವುದೇ ಆಟಗಾರ ಫೌಲ್ ಮಾಡಿದರೆ, ಅದನ್ನು ವಿಡಿಯೋ ಅಸಿಸ್ಟೆಂಟ್ ರೆಫರಿ (VAR) ಸೂಕ್ಷ್ಮವಾಗಿ ಪರಿಶೀಲಿಸಿ ಪೆನಾಲ್ಟಿ ವಿಧಿಸಲು ನಿರ್ಧರಿಸಬಹುದು. ಪ್ರಸ್ತುತ ವಿಎಆರ್ (VAR) ವ್ಯವಸ್ಥೆಯು ಪಂದ್ಯ ನಡೆಯುತ್ತಿರುವಾಗಲೇ ಹಸ್ತಕ್ಷೇಪ ಮಾಡುವ ಅಧಿಕಾರ ಪಡೆದಿದೆ.

ರೆಫರಿ ತಪ್ಪು ನಿರ್ಧಾರ ಬದಲಿಸುವ ಅಧಿಕಾರ

ಒಂದು ವೇಳೆ ಮೈದಾನದ ಮುಖ್ಯ ರೆಫರಿ ತಪ್ಪಾಗಿ 'ಕಾರ್ನರ್ ಕಿಕ್' ನೀಡಿದರೆ ಅಥವಾ ಅದೇ ಪಂದ್ಯದಲ್ಲಿ ಒಬ್ಬನೇ ಆಟಗಾರನಿಗೆ ಎರಡನೇ ಬಾರಿಗೆ ಹಳದಿ ಕಾರ್ಡ್ (Yellow Card) ತೋರಿಸಿದರೆ, ಈ ಎರಡೂ ಸಂದರ್ಭಗಳಲ್ಲಿ ವಿಡಿಯೋ ಅಸಿಸ್ಟೆಂಟ್ ರೆಫರಿ (VAR) ತಕ್ಷಣ ಮಧ್ಯಪ್ರವೇಶಿಸಿ ಮುಖ್ಯ ರೆಫರಿಯ ನಿರ್ಧಾರವನ್ನು ಬದಲಾಯಿಸಬಹುದು.

5 ಸೆಕೆಂಡುಗಳ ಕೌಂಟ್‌ಡೌನ್ ನಿಯಮ

ಸಾಮಾನ್ಯವಾಗಿ ಥ್ರೋ-ಇನ್ ಅಥವಾ ಗೋಲ್ ಕಿಕ್ ಮಾಡುವಾಗ ಮೈದಾನದ ಆಟಗಾರರು ಅಥವಾ ಗೋಲ್‌ಕೀಪರ್‌ಗಳು ಉದ್ದೇಶಪೂರ್ವಕವಾಗಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಇನ್ಮುಂದೆ ಕೇವಲ 5 ಸೆಕೆಂಡುಗಳ ಕೌಂಟ್‌ಡೌನ್ ಇರಲಿದ್ದು, ಅಷ್ಟರೊಳಗೆ ಕಿಕ್ ಮಾಡದಿದ್ದರೆ ಎದುರಾಳಿ ತಂಡಕ್ಕೆ ಉಚಿತವಾಗಿ ಥ್ರೋ-ಇನ್ ಅಥವಾ ಕಾರ್ನರ್ ಕಿಕ್ ಅವಕಾಶವನ್ನು ಬಿಟ್ಟುಕೊಡಬೇಕಾಗುತ್ತದೆ.

10 ಸೆಕೆಂಡ್ ಒಳಗೆ ಆಟಗಾರರ ಬದಲಾವಣೆ ಕಡ್ಡಾಯ

ಪಂದ್ಯದ ಮಧ್ಯೆ ಆಟಗಾರರನ್ನು ಬದಲಾಯಿಸುವಾಗ (Substitution) ಕೇವಲ 10 ಸೆಕೆಂಡ್‌ಗಳ ಒಳಗಾಗಿ ಹೊಸ ಆಟಗಾರ ಮೈದಾನದೊಳಗೆ ಬರಬೇಕಾಗುತ್ತದೆ. ಒಂದು ವೇಳೆ ಈ ಸಮಯ ಮೀರಿದರೆ, ಆ ಬದಲಿ ಆಟಗಾರ ಮುಂದಿನ ಒಂದು ನಿಮಿಷದವರೆಗೆ ಮೈದಾನದ ಹೊರಗೇ ಕಾಯಬೇಕಾಗುತ್ತದೆ. ಅಂದರೆ ಆ ಒಂದು ನಿಮಿಷದ ಅವಧಿಯಲ್ಲಿ ಆ ತಂಡವು ಕೇವಲ 10 ಆಟಗಾರರೊಂದಿಗೆ ಆಡಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ಮೈದಾನ ತೊರೆದರೆ ಇಡೀ ತಂಡಕ್ಕೇ ರೆಡ್ ಕಾರ್ಡ್ ಶಾಕ್!

ರೆಫರಿಯ ತೀರ್ಪನ್ನು ಪ್ರತಿಭಟಿಸಿಯೋ ಅಥವಾ ಬೇರೆ ಯಾವುದೇ ಕಾರಣಕ್ಕಾಗಿಯೋ ಒಂದು ತಂಡದ ಆಟಗಾರರು ಮೈದಾನದಿಂದ ಹೊರನಡೆದರೆ (Walkout), ಅದಕ್ಕೆ ಕಠಿಣ ಶಿಕ್ಷೆಯಾಗಿ ಇಡೀ ತಂಡಕ್ಕೇ ಒಟ್ಟಾಗಿ ರೆಡ್ ಕಾರ್ಡ್ ತೋರಿಸಿ ಟೂರ್ನಿಯಿಂದಲೇ ಅಮಾನತುಗೊಳಿಸುವ ಅಧಿಕಾರ ರೆಫರಿಗಿರುತ್ತದೆ.

ಗಾಯಗೊಂಡ ಆಟಗಾರನಿಗೆ 1 ನಿಮಿಷದ ನಿಯಮ

ಪಂದ್ಯದ ವೇಳೆ ಯಾವುದೇ ಆಟಗಾರ ಗಾಯಗೊಂಡರೆ, ಆತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಆತ ಮೈದಾನಕ್ಕೆ ಮರಳಲು ಕನಿಷ್ಠ ಒಂದು ನಿಮಿಷಗಳ ಕಾಲ ಮೈದಾನದ ಹೊರಗೇ ಕಾಯಬೇಕಾಗುತ್ತದೆ. ಸಂಪೂರ್ಣ ಗುಣಮುಖನಾದ ನಂತರವೇ ಆತನಿಗೆ ಮರುಪ್ರವೇಶ ಸಿಗಲಿದೆ.

ಡಗೌಟ್‌ನಲ್ಲಿ ತಾಂತ್ರಿಕ ಸಿಬ್ಬಂದಿ ಜೊತೆ ಚರ್ಚೆ ನಿಷೇಧ

ಮೈದಾನದಲ್ಲಿ ಗೋಲ್‌ಕೀಪರ್ ಗಾಯಗೊಂಡು, ವೈದ್ಯಕೀಯ ತಂಡ (Medical Team) ಆತನಿಗೆ ಮೈದಾನದಲ್ಲೇ ತಪಾಸಣೆ ನಡೆಸುತ್ತಿರುವಾಗ, ಉಳಿದ ಯಾವುದೇ ಆಟಗಾರರು ತಾಂತ್ರಿಕ ವಲಯಕ್ಕೆ ಅಂದರೆ 'ಡಗೌಟ್' (Dugout) ಕಡೆಗೆ ಹೋಗಿ ತಮ್ಮ ಕೋಚಿಂಗ್ ಸಿಬ್ಬಂದಿ ಜೊತೆ ಪಂದ್ಯದ ಕುರಿತು ಯಾವುದೇ ತಂತ್ರಗಳನ್ನು ಚರ್ಚಿಸುವಂತಿಲ್ಲ. ಫಿಫಾ ಜಾರಿಗೆ ತಂದಿರುವ ಈ ನಿಯಮಗಳು ಆಟದ ವೇಗವನ್ನು ಹೆಚ್ಚಿಸುವುದರ ಜೊತೆಗೆ ಫುಟ್‌ಬಾಲ್ ಇತಿಹಾಸದಲ್ಲೇ ಅತ್ಯಂತ ರೋಚಕ ಹಾಗೂ ಶಿಸ್ತಿನ ವಿಶ್ವಕಪ್‌ಗೆ ಸಾಕ್ಷಿಯಾಗಲಿವೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಪ್ ಗೆದ್ರೂ ಕೈಗೆ ಸಿಗೋದಿಲ್ಲ ವಿಶ್ವದ ಅತ್ಯಂತ ದುಬಾರಿ ಟ್ರೋಫಿ, ಬೆಲೆ ಕೇಳಿದ್ರೆ ಶಾಕ್
FIFA ವಿಶ್ವಕಪ್ ಟೂರ್ನಿಗೆ ಸ್ಪೇನ್ ತಂಡ ಪ್ರಕಟ: ಬರೋಬ್ಬರಿ 92 ವರ್ಷಗಳ ದಾಖಲೆ ಮುರಿದ ಕೋಚ್!