
ಅಲ್ ವಕ್ರಾ(ನ.24): ಹಲವು ತಾರಾ ಆಟಗಾರರು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದರೂ ಹಾಲಿ ಚಾಂಪಿಯನ್ ಫ್ರಾನ್ಸ್ ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿದೆ. ಮಂಗಳವಾರ ತಡರಾತ್ರಿ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ಒಲಿವೀರ್ ಜಿರೌಡ್ ಬಾರಿಸಿದ ಗೋಲಿನಿಂದಾಗಿ ಫ್ರಾನ್ಸ್, ಆಸ್ಪ್ರೇಲಿಯಾ ವಿರುದ್ಧ 4-1 ಗೋಲುಗಳಿಂದ ಜಯಭೇರಿ ಬಾರಿಸಿತು.
ಫ್ರಾನ್ಸ್ ಆರಂಭದಲ್ಲಿ ಹಿನ್ನಡೆ ಅನುಭವಿಸಿತು. ಚೆಂಡಿನ ಮೇಲೆ ಹಿಡಿತ ಕಳೆದುಕೊಂಡಿದ್ದ ತಂಡಕ್ಕೆ 9ನೇ ನಿಮಿಷದಲ್ಲೇ ಆಸ್ಪ್ರೇಲಿಯಾ ಆಘಾತ ನೀಡಿತು. ಕ್ರೇಗ್ ಗುಡ್ವಿನ್ ಬಾರಿಸಿದ ಗೋಲು ಆಸ್ಪ್ರೇಲಿಯಾಕ್ಕೆ ಭರ್ಜರಿ ಆರಂಭ ಒದಗಿಸಿತು. ಆದರೆ ಈ ಸಂಭ್ರಮ ಹೆಚ್ಚು ಹೊತ್ತು ನಿಲ್ಲಲಿಲ್ಲ. 27ನೇ ನಿಮಿಷದಲ್ಲಿ ಎಡ್ರಿನ್ ರಾಬಿಯೊಟ್ ಮಿಂಚಿನ ವೇಗದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿ ಫ್ರಾನ್ಸ್ ಸಮಬಲ ಸಾಧಿಸಲು ನೆರವಾದರು. 32ನೇ ನಿಮಿಷದಲ್ಲಿ ಒಲಿವಿಯರ್ ಆಕರ್ಷಕ ಗೋಲು ದಾಖಲಿಸಿ, ಮೊದಲಾರ್ಧಕ್ಕೆ ಫ್ರಾನ್ಸ್ 2-1ರ ಮುನ್ನಡೆ ಸಾಧಿಸಲು ನೆರವಾದರು. ಬಳಿಕ ಯುವ ತಾರೆ ಕಿಲಿಯಾನ್ ಎಂಬಾಪೆ 68ನೇ ನಿಮಿಷದಲ್ಲಿ ಹೊಡೆದ ಆಕರ್ಷಕ ಗೋಲು ಆಸ್ಪ್ರೇಲಿಯಾಕ್ಕೆ ಮತ್ತೊಂದು ಆಘಾತ ನೀಡಿತು. ಇದರಿಂದ ಮಹತ್ವದ ಮುನ್ನಡೆ ಪಡೆದ ಫ್ರಾನ್ಸ್‌ಗೆ 3 ನಿಮಿಷಗಳ ಅಂತರದಲ್ಲಿ ಒಲಿವಿಯರ್ ಮತ್ತೊಮ್ಮೆ ನೆರವಾದರು. 71ನೇ ನಿಮಿಷದಲ್ಲಿ ಅವರು ಬಾರಿಸಿದ ಗೋಲು ತಂಡಕ್ಕೆ ದೊಡ್ಡ ಅಂತರದ ಗೆಲುವು ತಂದುಕೊಟ್ಟಿತು. ಪಂದ್ಯದುದ್ದಕ್ಕು ಪಾಸ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಿದ ಫ್ರಾನ್ಸ್ ಅದರಲ್ಲಿ ಯಶ ಕಂಡಿತು.
ಜಿರೌಡ್ ಫ್ರಾನ್ಸ್‌ನ ಟಾಪ್ ಸ್ಕೋರರ್!
ಜಿರೌಡ್, ಫ್ರಾನ್ಸ್ ಪರ ಸಾರ್ವಕಾಲಿಕ ಅತೀ ಹೆಚ್ಚು ಗೋಲು ಬಾರಿಸಿದವರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಆಸ್ಪ್ರೇಲಿಯಾ ವಿರುದ್ಧ 2 ಗೋಲು ಬಾರಿಸಿದ ಅವರು, ಒಟ್ಟಾರೆ ಗೋಲು ಗಳಿಕೆಯನ್ನು 51ಕ್ಕೆ ಏರಿಸಿದರು. ಈ ಮೂಲಕ ಥಿಯರಿ ಹೆನ್ರಿ(51 ಗೋಲು) ದಾಖಲೆಯನ್ನು ಸರಿಗಟ್ಟಿದರು.
ಕ್ರೊವೇಷಿಯಾ ಕಟ್ಟಿ ಹಾಕಿದ ಮೊರೊಕ್ಕೊ
ಅಲ್ ಖೋರ್: ಪ್ರಮುಖ ಆಟಗಾರ ಲೂಕಾ ಮೊಡ್ರಿಚ್‌ರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದ ಮೊರೊಕ್ಕೊ ತಂಡ ಬುಧವಾರ ಫಿಫಾ ವಿಶ್ವಕಪ್‌ನಲ್ಲಿ ಕಳೆದ ಬಾರಿ ರನ್ನರ್-ಅಪ್ ಕ್ರೊವೇಷಿಯಾ ವಿರುದ್ಧ 0-0 ಡ್ರಾ ಸಾಧಿಸಿತು. ಪಂದ್ಯದಲ್ಲಿ ಕ್ರೊವೇಷಿಯಾ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದ್ದರೂ ಅದಕ್ಕೆ ಮೊರೊಕ್ಕೊ ರಕ್ಷಣಾ ಪಡೆ ಅವಕಾಶ ನೀಡಲಿಲ್ಲ. ಪಂದ್ಯದುದ್ದಕ್ಕೂ ಉಭಯ ತಂಡಗಳಿಂದ ತೀವ್ರ ಪೈಪೋಟಿ ಕಂಡುಬಂತು. ಆದರೆ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ್ದ ಕ್ರೊವೇಷಿಯಾ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಮೊಡ್ರಿಚ್ ಕೂಡಾ ಸಿಕ್ಕ ಅವಕಾಶವನ್ನು ವಿಫಲಗೊಳಿಸಿದರು. ಮೊರೊಕ್ಕೊಗೆ 2 ಬಾರಿ ಗೋಲು ಬಾರಿಸಲು ಅವಕಾಶವಿದ್ದರೂ ಅದಕ್ಕೆ ಕ್ರೊವೇಷಿಯಾ ಗೋಲ್‌ಕೀಪರ್ ಡಾಮಿನಿಕ್ ವಿವಾಕೊವಿಚ್ ಅವಕಾಶ ನೀಡಲಿಲ್ಲ.
FIFA World Cup 2022: ನಾಲ್ಕು ಬಾರಿಯ ವಿಶ್ವಚಾಂಪಿಯನ್ ಜರ್ಮನಿಗೆ ಶಾಕ್ ನೀಡಿದ ಜಪಾನ್!
ಮೆಕ್ಸಿಕೋ ವಿರುದ್ಧ ಪೋಲೆಂಡ್ ಡ್ರಾ
ದೋಹಾ: ನಾಯಕ ರಾಬರ್ಚ್ ಲೆವಾಡೋವ್ಸಿ$್ಕ ತಪ್ಪಿಸಿಕೊಂಡ ಪೆನಾಲ್ಟಿಗೋಲಿನಿಂದಾಗಿ ಮೆಕ್ಸಿಕೋ ವಿರುದ್ಧದ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಪೋಲೆಂಡ್ 0-0 ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ಪಂದ್ಯದ ಆರಂಭದಲ್ಲಿ ಉಭಯ ತಂಡಗಳಿಂದ ಸಮಬಲದ ಹೋರಾಟ ಕಂಡುಬಂತು. ಮೊದಲಾರ್ಧ ಗೋಲುರಹಿತ ಡ್ರಾಗೊಂಡ ಬಳಿಕ ಪೋಲೆಂಡ್ ಚೆಂಡಿನ ಮೇಲೆ ಹಿಡಿತ ಸಾಧಿಸಿದರೂ ಗೋಲು ಬಾರಿಸಲು ಮೆಕ್ಸಿಕೋ ಡಿಫೆನ್ಸ್ ಅವಕಾಶ ನೀಡಲಿಲ್ಲ. ಪೋಲೆಂಡ್ ಪರ ದಾಖಲೆಯ 76 ಗೋಲುಗಳನ್ನು ಬಾರಿಸಿರುವ ಲೆವಾಂಡೋವ್ಸಿ$್ಕಗೆ ಪಂದ್ಯದ 57ನೇ ನಿಮಿಷದಲ್ಲಿ ಪೆನಾಲ್ಟಿಅವಕಾಶ ಒದಗಿಬಂದರೂ, ಮೆಕ್ಸಿಕೋ ಗೋಲ್‌ಕೀಪರ್ ಗಿಲ್ಲೆರ್ಮೊ ಒಚೋವಾ ತಡೆದು ಪೋಲೆಂಡ್‌ಗೆ ಗೆಲುವು ನಿರಾಕರಿಸಿದರು. ಪೋಲೆಂಡ್ 4 ಬಾರಿ ಗೋಲಿನ ಅವಕಾಶವನ್ನು ಕೈಚೆಲ್ಲಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.