FIFA World Cup 2022 ಕಾಲ್ಚೆಂಡಿನ ಮಹಾಸಮರಕ್ಕೆ 8 ಕ್ರೀಡಾಂಗಣ ರೆಡಿ!

By Kannadaprabha News  |  First Published Nov 18, 2022, 11:31 AM IST

ಕತಾರ್‌ನಲ್ಲಿ ಆರಂಭವಾಗಲಿರುವ ಫಿಫಾ ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ
ಜಗತ್ತಿನ ಅತಿದೊಡ್ಡ ಕ್ರೀಡಾ ಜಾತ್ರೆಗೆ ಕತಾರ್‌ ಆತಿಥ್ಯ
8 ಕ್ರೀಡಾಂಗಣಗಳಲ್ಲಿ 32 ತಂಡಗಳು ಪ್ರಶಸ್ತಿಗಾಗಿ ಕಾದಾಟ


ಬೆಂಗಳೂರು(ನ.18): ವಿವಾದ, ಊಹಾಪೋಹಗಳ ನಡುವೆ ಚೊಚ್ಚಲ ಬಾರಿಗೆ ಫಿಫಾ ಫುಟ್ಬಾಲ್‌ ವಿಶ್ವಕಪ್‌ ಆತಿಥ್ಯಕ್ಕೆ ಗಲ್‌್ಫ ರಾಷ್ಟ್ರವೊಂದು ಸಜ್ಜಾಗಿದೆ. ಕತಾರ್‌ ಅಸಾಧಾರಣ ರೀತಿಯಲ್ಲಿ ಸಿದ್ಧತೆ ನಡೆದಿದ್ದು, ಕ್ರೀಡಾಂಗಣಗಳ ನಿರ್ಮಾಣಕ್ಕೆ ಸಾಮಗ್ರಿಗಳನ್ನು ಹೊತ್ತು ತಂದ ಹಡಗುಗಳ ಕಂಟೇನರ್‌ಗಳನ್ನೇ ಬಳಸಿ ಕ್ರೀಡಾಂಗಣವೊಂದನ್ನು ಕಟ್ಟಿದೆ. ಈ ಎಂಜಿನಿಯರಿಂಗ್‌ ಅದ್ಭುತದ ಜೊತೆಗೆ ಇನ್ನೂ 7 ಸ್ಟೇಡಿಯಂಗಳು 2022ರ ವಿಶ್ವಕಪ್‌ನ 64 ಪಂದ್ಯಗಳಿಗೆ ವೇದಿಕೆಯಾಗಲಿವೆ. ದೇಶದ 5 ನಗರಗಳು ವಿಶ್ವಕಪ್‌ ಸೆಣಸಾಟಕ್ಕೆ ಸಾಕ್ಷಿಯಾಗಲಿವೆ. ವಿಶೇಷ ಎಂದರೆ ಎಲ್ಲಾ 8 ಕ್ರೀಡಾಂಗಣಗಳಲ್ಲೂ ನಾಕೌಟ್‌ ಪಂದ್ಯಗಳೂ ನಡೆಯಲಿವೆ. ಕ್ರೀಡಾಂಗಣಗಳ ವಿಶೇಷತೆ ಏನು, ಸಾಮರ್ಥ್ಯವೆಷ್ಟುಎನ್ನುವ ವಿವರಗಳು ಇಲ್ಲಿವೆ.

ಸೇಡಿಯಂ 974, ದೋಹಾ

Latest Videos

undefined

ಫುಟ್ಬಾಲ್‌ ವಿಶ್ವಕಪ್‌ನಂತಹ ಜಾಗತಿಕ ಟೂರ್ನಿಗೆ ತಾತ್ಕಾಲಿಕ ಸ್ಟೇಡಿಯಂ. ಇದು ಆಧುನಿಕ ಜಗತ್ತಿನ ಎಂಜನಿಯರಿಂಗ್‌ ಅದ್ಭುತ. ಕತಾರ್‌ ಈ ಹಿಂದೆ ಕಂಡು ಕೇಳರಿಯದ ಸಾಹಸವೊಂದನ್ನು ಮಾಡಿದ್ದು, ಆ ಸಾಹಸವು ಅನಾವರಣಗೊಳ್ಳುವ ಸಮಯ ಬಂದಿದೆ. ಕತಾರ್‌ ರಾಜಧಾನಿ ದೋಹಾದಲ್ಲಿ 974 ಕಂಟೇನರ್‌ಗಳನ್ನು ಬಳಸಿ ಕ್ರೀಡಾಂಗಣವೊಂದನ್ನು ನಿರ್ಮಿಸಲಾಗಿದೆ. ವಿಶ್ವಕಪ್‌ ಟೂರ್ನಿ ಮುಕ್ತಾಯಗೊಂಡ ಬಳಿಕ ಈ ಕ್ರೀಡಾಂಗಣವನ್ನು ಬಿಚ್ಚಿ ಬೇರೆಡೆಗೆ ಕೊಂಡೊಯ್ಯಬಹುದು. ಮೊಬೈಲ್‌ ಕ್ಯಾಂಟೀನ್‌, ಮೊಬೈಲ್‌ ಮದುವೆ ಮಂಟಪಗಳನ್ನು ನೋಡಿರುತ್ತೀರಲ್ಲ, ಅದೇ ರೀತಿ ಇದು ಮೊಬೈಲ್‌ ಕ್ರೀಡಾಂಗಣ.

ಕಂಟೇನರ್‌ಗಳ ಬಳಕೆ ಏಕೆ?

ವಿಶ್ವಕಪ್‌ ಪಂದ್ಯಗಳ ಆತಿಥ್ಯಕ್ಕೆ ಕತಾರ್‌ ಹೊಸದಾಗಿ ಕ್ರೀಡಾಂಗಣಗಳ ನಿರ್ಮಾಣಕ್ಕೆ ಕೈಹಾಕಿದಾಗ ಸಾಮಗ್ರಿಗಳನ್ನು ಹೊತ್ತು ತಂದ ಹಡಗುಗಳ ಕಂಟೇನರ್‌ಗಳನ್ನೇ ಬಳಸಿ ಸ್ಟೇಡಿಯಂವೊಂದನ್ನು ಕಟ್ಟುವ ಯೋಜನೆಯನ್ನು ಆಯೋಜನಾ ಸಮಿತಿ ರೂಪಿಸಿತು. ಸ್ಥಳದ ಅಭಾವವಿರುವ ಕಡೆಗಳಲ್ಲೂ ಕಡಿಮೆ ಕಾಮಗಾರಿ ವೆಚ್ಚದಲ್ಲಿ ಶೇ.40ರಷ್ಟುನೀರಿನ ಉಳಿತಾಯದೊಂದಿಗೆ ವಿಶ್ವಶ್ರೇಷ್ಠ ಕ್ರೀಡಾಂಗಣವೊಂದನ್ನು ನಿರ್ಮಿಸಿ ಜಾಗತಿಕ ಮಟ್ಟದ ಟೂರ್ನಿಗೆ ಆತಿಥ್ಯ ವಹಿಸಬಹುದು ಎನ್ನುವುದನ್ನು ತೋರಿಸುವ ಉದ್ದೇಶ ಕತಾರ್‌ದ್ದಾಗಿತ್ತು. ನಿರ್ವಹಣಾ ವೆಚ್ಚವನ್ನೂ ಕಡಿತಗೊಳಿಸುವುದು ಈ ಯೋಜನೆಯ ಒಂದು ಭಾಗ. ಕತಾರ್‌ನ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕಾರ‍್ಯರೂಪಕ್ಕೆ ತಂದಿದ್ದು ಸ್ಪೇನ್‌ನ ಫೆನ್ವಿಕ್‌ ಇರಿಬ್ಯಾರೆನ್‌ ಆರ್ಕಿಟೆಕ್ಟ್ಸ್ ಸಂಸ್ಥೆ.

ಈ ಕಂಟೇನರ್‌ ಕ್ರೀಡಾಂಗಣದಲ್ಲಿ ಡ್ರೆಸ್ಸಿಂಗ್‌ ಕೊಠಡಿ, ಶೌಚಾಲಯಗಳು, ತಿಂಡಿ ಅಂಗಡಿಗಳು ಇವೆ. ದೋಹಾದ ಹಮದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಹಳ ಸಮೀಪದಲ್ಲಿರುವ ಕಾರಣ, ವಿಶ್ವಕಪ್‌ ವೀಕ್ಷಿಸಲು ಕತಾರ್‌ಗೆ ತೆರಳುವ ಅಭಿಮಾನಿಗಳ ಕಣ್ಣಿಗೆ ಬೀಳುವ ಮೊದಲ ಕ್ರೀಡಾಂಗಣವೇ ಇದು.

ಕ್ರೀಡಾಂಗಣಕ್ಕೆ ‘ನೈಸರ್ಗಿಕ ಎಸಿ’ ವ್ಯವಸ್ಥೆ!

ಕತಾರ್‌ನ ಸುಡು ಬಿಸಿಲಿನಲ್ಲೂ ಈ ಕ್ರೀಡಾಂಗಣಕ್ಕೆ ಹವಾ ನಿಯಂತ್ರಣ(ಏರ್‌ ಕಂಡೀಷನ್‌) ವ್ಯವಸ್ಥೆ ಅಳವಡಿಸಿಲ್ಲ. ಕ್ರೀಡಾಂಗಣದ ಆಕಾರ ಹಾಗೂ ಮಧ್ಯೆ ಮಧ್ಯೆ ಅಂತರವಿರುವ ಕಾರಣ ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ ಇದೆ. ಅಲ್ಲದೇ ಕ್ರೀಡಾಂಗಣ ಸಮುದ್ರದ ಪಕ್ಕದಲ್ಲೇ ಇರುವ ಕಾರಣ ತಣ್ಣನೆಯ ಗಾಳಿ ಬೀಸಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

974 ಹೆಸರೇಕೆ?

ಕ್ರೀಡಾಂಗಣ ನಿರ್ಮಿಸಲು 974 ಕಂಟೇನರ್‌ಗಳನ್ನು ಬಳಕೆ ಮಾಡಲಾಗಿದೆ. ವಿಶೇಷ ಎಂದರೆ ‘974’ ಕತಾರ್‌ ದೇಶದ ಅಂತಾರಾಷ್ಟ್ರೀಯ ಡಯಲಿಂಗ್‌ ಕೋಡ್‌. ಅಂದರೆ ಭಾರತದೊಳಗೆ ಅಥವಾ ಭಾರತದಿಂದ ಯಾವುದೇ ದೂರವಾಣಿ ಕರೆ ಮಾಡಿದರೂ +91 ಎನ್ನುವ ಡಯಲಿಂಗ್‌ ಕೋಡ್‌ ಇರುತ್ತದೆಯೋ ಅದೇ ರೀತಿ ಕತಾರ್‌ನ ಕೋಡ್‌ 974 ಆಗಿದೆ.

ಆಸನ ಸಾಮರ್ಥ್ಯ: 40,000, ಒಟ್ಟು ಪಂದ್ಯಗಳು: 07

ಲುಸೈಲ್‌ ಕ್ರೀಡಾಂಗಣ, ಲುಸೈಲ್‌

ಈ ವಿಶ್ವಕಪ್‌ನಲ್ಲಿ ಬಳಕೆಯಾಗಲಿರುವ ಅತಿದೊಡ್ಡ ಕ್ರೀಡಾಂಗಣ. 80000 ಆಸನ ಸಾಮರ್ಥ್ಯ ಹೊಂದಿದೆ. ಫೈನಲ್‌ ಸಹ ಇಲ್ಲೇ ನಡೆಯಲಿದೆ. ಕ್ರೀಡಾಂಗಣವು ಅರಬ್‌ ದೇಶಗಳಲ್ಲಿ ಜನಪ್ರಿಯವಾಗಿರುವ ಕೈಯಲ್ಲಿ ತಯಾರಿಸಿದ ಬಟ್ಟಲಿನ ಆಕಾರವನ್ನು ಹೋಲುತ್ತದೆ. ಬಿಸಿ ಗಾಳಿಯನ್ನು ತಡೆಯಲು ಹಾಗೂ ಪಿಚ್‌ ಮೇಲೆ ಸೀಮಿತ ಸೂರ್ಯನ ಕಿರಣಗಳು ಬೀಳುವಂತೆ ಮಾಡಲು ಪಾಲಿಟೆಟ್ರಾ ಫ್ಲೋರೋಎಥಲೀನ್‌ ಎನ್ನುವ ರಾಸಾಯನಿಕವನ್ನು ಬಳಸಲಾಗಿದೆ.

ಆಸನ ಸಾಮರ್ಥ್ಯ: 80000, ಒಟ್ಟು ಪಂದ್ಯಗಳು: 10

ಅಹಮದ್‌ ಬಿನ್‌ ಅಲಿ ಕ್ರೀಡಾಂಗಣ, ಅಲ್‌ ವಕ್ರಾ

ಮರುಭೂಮಿಯ ತುತ್ತ ತುದಿಯಲ್ಲಿರುವ ಕ್ರೀಡಾಂಗಣ. ಈ ಹಿಂದೆ ಈ ಜಾಗದಲ್ಲಿದ್ದ ಕ್ರೀಡಾಂಗಣವನ್ನು 2015ರಲ್ಲಿ ನೆಲಸಮಗೊಳಿಸಿ ಹೊಸ ಕ್ರೀಡಾಂಗಣ ಕಟ್ಟಲಾಗಿದೆ. ಭಾರತೀಯ ಮೂಲದ ಎಲ್‌ ಅಂಡ್‌ ಟಿ ಕಂಪನಿ ಈ ಯೋಜನೆಯನ್ನು ಪೂರ್ಣಗೊಳಿಸಿತ್ತು. ಇದೊಂದು ಓಪನ್‌ ಕ್ರೀಡಾಂಗಣ. ಹವಾ ನಿಯಂತ್ರಣ(ಎಸಿ) ಇದ್ದು, ಪಂದ್ಯಗಳ ವೇಳೆ 26 ಡಿಗ್ರಿ ತಾಪಮಾನ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ.

ಆಸನ ಸಾಮರ್ಥ್ಯ: 44740, ಒಟ್ಟು ಪಂದ್ಯ: 07

ಅಲ್‌ ಥುಮಾಮ ಕ್ರೀಡಾಂಗಣ, ದೋಹಾ

ಅರಬ್‌ ಪ್ರಾಂತ್ಯದಲ್ಲಿ ಬಳಸುವ ಸಾಂಪ್ರದಾಯಿಕವಾಗಿ ನೇಯ್ದ ಟೋಪಿ ‘ಗಹ್ಫಿಯಾ’ ಆಕಾರದಲ್ಲಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಕ್ರೀಡಾಂಗಣವನ್ನು ಫಿಫಾ ವಿಶ್ವಕಪ್‌ಗೆಂದೇ ನಿರ್ಮಿಸಲಾಗಿದೆ. ವಿಶ್ವಕಪ್‌ ಬಳಿಕ 40000 ಇರುವ ಆಸನ ಸಾಮರ್ಥ್ಯವನ್ನು 20000ಕ್ಕೆ ಇಳಿಸಲಾಗುತ್ತದೆ. ಹೆಚ್ಚುವರಿ ಆಸನಗಳನ್ನು ಬಡ ರಾಷ್ಟ್ರಗಳಿಗೆ ಉಡುಗೊರೆಯಾಗಿ ನೀಡಲಾಗುತ್ತದೆ. ಖಾಲಿಯಾಗುವ ಜಾಗದಲ್ಲಿ ಹೈಟೆಕ್‌ ಹೋಟೆಲ್‌ ಕಟ್ಟುವುದಾಗಿ ಆಯೋಜಕರು ಹೇಳಿದ್ದಾರೆ.

ಆಸನ ಸಾಮರ್ಥ್ಯ: 40000, ಒಟ್ಟು ಪಂದ್ಯ: 08

ಎಜುಕೇಶನ್‌ ಸಿಟಿ ಕ್ರೀಡಾಂಗಣ, ಅಲ್‌ ರಯ್ಯನ್‌

ಅಕ್ಕಪಕ್ಕದಲ್ಲಿನ ವಿಶ್ವವಿದ್ಯಾಲಯಗಳು ಇರುವ ಕಾರಣಕ್ಕೆ ಕ್ರೀಡಾಂಗಣಕ್ಕೆ ಈ ಹೆಸರಿಡಲಾಗಿದೆ. ಕ್ರೀಡಾಂಗಣದ ಹೊರ ವಿನ್ಯಾಸ ತ್ರಿಕೋನ ಆಕಾರದಲ್ಲಿದ್ದು ವಜ್ರದ ರೀತಿ ಕಾಣುತ್ತದೆ. ಸೂರ್ಯನ ಕಿರಣಗಳು ಬಿದ್ದಾಗ ಹೊಳೆಯಲಿದೆ. ಕ್ರೀಡಾಂಗಣದಲ್ಲಿ ಡಿಜಿಟೈಲ್‌ ಲೈಟ್‌ಶೋ ವ್ಯವಸ್ಥೆ ಇದ್ದು, ಪ್ರಮುಖ ಆಕರ್ಷಣೆ ಎನಿಸಿದೆ. ವಿಶ್ವಕಪ್‌ ಬಳಿಕ ಈ ಕ್ರೀಡಾಂಗಣದ ಮೇಲ್ಭಾಗದಲ್ಲಿರುವ ಆಸನಗಳನ್ನು ಬಿಚ್ಚಿ ಬಡ ರಾಷ್ಟ್ರಗಳಿಗೆ ಉಡುಗೊರೆ ನೀಡುವುದಾಗಿ ಫಿಫಾ ಹೇಳಿದೆ. ಜಾಗತಿಕ ಸುಸ್ಥಿರತೆಯ ಮೌಲ್ಯಮಾಪನ ವ್ಯವಸ್ಥೆ(ಜಿಎಸ್‌ಎಎಸ್‌)ಯಲ್ಲಿ ಫೈವ್‌ ಸ್ಟಾರ್‌ ರೇಟಿಂಗ್‌ ಹೊಂದಿರುವ ಕ್ರೀಡಾಂಗಣವಿದು.

ಆಸನ ಸಾಮರ್ಥ್ಯ: 45,350, ಒಟ್ಟು ಪಂದ್ಯ: 08

FIFA World Cup: ಒಂದು ಪಿಂಟ್‌ ಬಡ್ವೈಸರ್‌ಗೆ ಕೊಡೋ ಹಣದಲ್ಲಿ ನೀವಿಲ್ಲಿ ಗೋವಾಕ್ಕೇ ಹೋಗಿ ಬರಬಹುದು!

ಅಲ್‌ ಜನೌಬ್‌ ಕ್ರೀಡಾಂಗಣ, ಅಲ್‌ ವಕ್ರಾ

ಈ ಕ್ರೀಡಾಂಗಣದ ವಿನ್ಯಾಸವು ಸಾಂಪ್ರದಾಯಿಕ ಧೋ ದೋಣಿಗಳನ್ನು ಹೋಲಲಿದೆ. ಕ್ರೀಡಾಂಗಣಕ್ಕೆ ಹವಾನಿಯಂತ್ರಣ ವ್ಯವಸ್ಥೆ ಇದ್ದು, ಮೇಲ್ಚಾವಣೆ ಸಹ ಇದೆ. ಈ ಕ್ರೀಡಾಂಗಣದ ಸಾಮರ್ಥ್ಯವನ್ನೂ ವಿಶ್ವಕಪ್‌ ಬಳಿಕ 20000ಕ್ಕೆ ಇಳಿಸಲಾಗುತ್ತದೆ ಎಂದು ಫಿಫಾ ಹೇಳಿದೆ.

ಆಸನ ಸಾಮರ್ಥ್ಯ: 40000, ಒಟ್ಟು ಪಂದ್ಯ: 07

ಖಲೀಫಾ ಅಂ.ರಾ.ಕ್ರೀಡಾಂಗಣ, ಅಲ್‌ ರಯ್ಯನ್‌

ಕತಾರ್‌ನ ಅತ್ಯಂತ ಹಳೆಯ ಕ್ರೀಡಾಂಗಣಗಳಲ್ಲಿ ಒಂದು. 1976ರಲ್ಲಿ ಲೋಕಾರ್ಪಣೆಗೊಂಡ ಕ್ರೀಡಾಂಗಣವು 2006ರ ಏಷ್ಯನ್‌ ಗೇಮ್ಸ್‌ ಸೇರಿ ಹಲವು ಐತಿಹಾಸಿಕ ಕ್ರೀಡಾಕೂಟಗಳಿಗೆ ಸಾಕ್ಷಿಯಾಗಿದೆ. ವಿಶ್ವಕಪ್‌ಗೆಂದೇ ಹೊಸದಾಗಿ 10450 ಆಸನಗಳನ್ನು ಅಳವಡಿಸಲಾಗಿದೆ. ಈ ಕ್ರೀಡಾಂಗಣದಲ್ಲೂ ಹವಾ ನಿಯಂತ್ರಣ ವ್ಯವಸ್ಥೆ ಇದೆ.

ಆಸನ ಸಾಮರ್ಥ್ಯ: 45416, ಒಟ್ಟು ಪಂದ್ಯ: 08

ಅಲ್‌ ಬೈಟ್‌ ಕ್ರೀಡಾಂಗಣ, ಅಲ್‌ ಖೋರ್‌

ಈ ವಿಶ್ವಕಪ್‌ನ ಉದ್ಘಾಟನಾ ಪಂದ್ಯಕ್ಕೆ ಆತಿಥ್ಯ ವಹಿಸಲಿರುವ ಕ್ರೀಡಾಂಗಣ. ರಾಜಧಾನಿ ದೋಹಾದಿಂದ 35 ಕಿ.ಮೀ. ದೂರದಲ್ಲಿದೆ. ಕ್ರೀಡಾಂಗಣವು ಕತಾರ್‌ನಲ್ಲಿ ಅಲೆಮಾರಿ ಜನರು ಬಳಸುತ್ತಿದ್ದ ಟೆಂಟ್‌ಗಳ ಆಕಾರವನ್ನು ಹೋಲುತ್ತದೆ. ಕ್ರೀಡಾಂಗಣದ ಹೊರಗೆ ದೊಡ್ಡ ಉದ್ಯಾನವನವಿದ್ದು, 30 ಫುಟ್ಬಾಲ್‌ ಮೈದಾನಗಳನ್ನು ದೊಡ್ಡದಿದೆ ಎನ್ನಲಾಗಿದೆ.

ಆಸನ ಸಾಮರ್ಥ್ಯ: 60000, ಒಟ್ಟು ಪಂದ್ಯ: 09

click me!