FIFA World Cup ಬ್ರೆಜಿಲ್ ಹ್ಯಾಟ್ರಿಕ್‌ಗೆ ಕ್ಯಾಮರೊನ್ ಬ್ರೇಕ್..!

By Naveena K V  |  First Published Dec 4, 2022, 9:16 AM IST

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬ್ರೆಜಿಲ್‌ಗೆ ಆಘಾತಕಾರಿ ಸೋಲು
24 ವರ್ಷಗಳ ಬಳಿಕ ಮೊದಲ ಸೋಲು ಅನುಭವಿಸಿದ ಬ್ರೆಜಿಲ್
ಸೋಲಿನ ಹೊರತಾಗಿಯೂ ನಾಕೌಟ್ ಹಂತಕ್ಕೇರಿದ ಬ್ರೆಜಿಲ್


ಲುಸೈಲ್‌(ಡಿ.04): 92ನೇ ನಿಮಿಷದಲ್ಲಿ ಗೋಲು ಬಾರಿಸಿದ ವಿನ್ಸೆಂಟ್‌ ಅಬೂಬಕ್ಕರ್‌ 2002ರ ಬಳಿಕ ವಿಶ್ವಕಪ್‌ನಲ್ಲಿ ಕ್ಯಾಮರೂನ್‌ಗೆ ಮೊದಲ ಗೆಲುವು ತಂದುಕೊಟ್ಟರು. ಅದೂ 5 ಬಾರಿ ಚಾಂಪಿಯನ್‌, ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿರುವ ಬ್ರೆಜಿಲ್‌ ವಿರುದ್ಧ. ಬ್ರೆಜಿಲ್‌, 24 ವರ್ಷಗಳಲ್ಲಿ ವಿಶ್ವಕಪ್‌ನ ಗುಂಪು ಹಂತದಲ್ಲಿ ಮೊದಲ ಸೋಲು ಅನುಭವಿಸಿತು.

ಪಂದ್ಯದುದ್ದಕ್ಕೂ ಹಲವು ಗೋಲು ಬಾರಿಸುವ ಸನ್ನಿವೇಶಗಳನ್ನು ಬ್ರೆಜಿಲ್‌ ಆಟಗಾರರು ಸೃಷ್ಟಿಸಿದರೂ, ಕ್ಯಾಮರೂನ್‌ನ ಗೋಲ್‌ಕೀಪರ್‌ ಡೇವಿಸ್‌ ಈಪಾಸ್ಸಿಯನ್ನು ವಂಚಿಸಲು ಸಾಧ್ಯವಾಗಲಿಲ್ಲ. ಬ್ರೆಜಿಲ್‌ನ 7 ಗೋಲು ಗಳಿಸುವ ಅವಕಾಶಗಳನ್ನು ಈಪಾಸ್ಸಿ ವ್ಯರ್ಥಗೊಳಿಸಿದರು.

Latest Videos

undefined

ಈ ಪಂದ್ಯಕ್ಕೂ ಮೊದಲೇ ನಾಕೌಟ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದ್ದ ಬ್ರೆಜಿಲ್‌ ತನ್ನ ಬೆಂಚ್‌ ಬಲ ಪರೀಕ್ಷಿಸಲು ನಿರ್ಧರಿಸಿತು. ಮೀಸಲು ಪಡೆಯಲ್ಲಿದ್ದ ಆಟಗಾರರನ್ನು ಕಣಕ್ಕಿಳಿಸಿದ ಬ್ರೆಜಿಲ್‌ ಸೋಲಿನ ಹೊರತಾಗಿಯೂ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು. ಸತತ 11ನೇ ಬಾರಿ ಬ್ರೆಜಿಲ್‌ ತಾನ್ನಿದ್ದ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದು ವಿಶೇಷ.

ಸತತ 4ನೇ ಬಾರಿ ನಾಕೌಟ್‌ ಪ್ರವೇಶಿಸದ ಸರ್ಬಿಯಾ!

ದೋಹಾ: 9 ನಿಮಿಷದಲ್ಲಿ 2 ಗೋಲು ಬಾರಿಸಿದ ಹೊರತಾಗಿಯೂ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಹಿಂದೆ ಬಿದ್ದ ಸರ್ಬಿಯಾ, ಸತತ 4ನೇ ಬಾರಿಗೆ ವಿಶ್ವಕಪ್‌ ನಾಕೌಟ್‌ ಹಂತಕ್ಕೇರಲು ವಿಫಲವಾಗಿದೆ. 2006ರಲ್ಲಿ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಸ್ಪರ್ಧಿಸಿದ್ದ ಸರ್ಬಿಯಾ, 2010, 2018, 2022ರಲ್ಲೂ ಮೊದಲ ಸುತ್ತಿನಲ್ಲೇ ಹೊರಬಿದ್ದಿದೆ. ಇದೇ ಮೊದಲ ಬಾರಿಗೆ ಗುಂಪು ಹಂತದಲ್ಲಿ ಒಂದೂ ಗೆಲುವು ದಾಖಲಿಸುವಲ್ಲಿ ವಿಫಲವಾಯಿತು.

FIFA World Cup ಆಸೀಸ್‌ ಸವಾಲಿಗೆ ಲಿಯೋನೆಲ್ ಮೆಸ್ಸಿ ಪಡೆ ಸಜ್ಜು

20ನೇ ನಿಮಿಷದಲ್ಲೇ ಶಾಕಿರಿ ಬಾರಿಸಿದ ಗೋಲು ಸ್ವಿಜರ್‌ಲೆಂಡ್‌ಗೆ ಮುನ್ನಡೆ ತಂದುಕೊಟ್ಟಿತು. ಆದರೆ 26ನೇ ನಿಮಿಷದಲ್ಲಿ ಮಿಟ್ರೋವಿಚ್‌, 35ನೇ ನಿಮಿಷದಲ್ಲಿ ವ್ಲಹೋವಿಚ್‌ ಸರ್ಬಿಯಾಗೆ ಮುನ್ನಡೆ ಒದಗಿಸಿದರು. ಆದರೆ 44ನೇ ನಿಮಿಷದಲ್ಲಿ ಎಂಬೊಲೊ, 48ನೇ ನಿಮಿಷದಲ್ಲಿ ಫ್ರುಲೆರ್‌ ಗೋಲು ಗಳಿಸಿ ಸ್ವಿಜ್‌ ಮುನ್ನಡೆಯಲು ನೆರವಾದರು.

ಕ್ಯಾನ್ಸರ್ ಚಿಕಿತ್ಸೆಗೆ ಸ್ಪಂದಿಸದ ಫುಟ್ಬಾಲ್ ದಂತಕಥೆ ಪೀಲೆ

ಪರ್ತ್‌: ಫುಟ್ಬಾಲ್ ದಂತಕಥೆ, ಬ್ರೆಜಿಲ್‌ನ ಪೀಲೆ ಕ್ಯಾನ್ಸರ್ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಅವರನ್ನು ಮತ್ತಿನ್ಯಾವ ಪರೀಕ್ಷೆಗೆ ಒಳಪಡಿಸುವುದಿಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಕಳೆದ ಸೆಪ್ಟೆಂಬರ್‌ನಲ್ಲಿ ಕರುಳಿನ ಕ್ಯಾನ್ಸರ್‌ಗೆ ತುತ್ತಾಗಿದ್ದ ಪೀಲೆ, ಕೀಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ಪೀಲೆ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

click me!