FIFA World Cup ಪೋರ್ಚುಗಲ್‌ಗೆ ಕೊರಿಯಾ ಆಘಾತ, ನಾಕೌಟ್‌ಗೆ ಲಗ್ಗೆ..!

By Kannadaprabha NewsFirst Published Dec 3, 2022, 9:48 AM IST
Highlights

ಪೋರ್ಚುಗಲ್ ಎದುರು ಅಚ್ಚರಿಯ ಗೆಲುವು ಸಾಧಿಸಿದ ದಕ್ಷಿಣ ಕೊರಿಯಾ
ಪೋರ್ಚುಗಲ್‌ ಎದುರು 2-1 ಅಂತರದ ಗೆಲುವು ಸಾಧಿಸಿದ ಕೊರಿಯಾ
ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಪೋರ್ಚುಗಲ್‌, ದಕ್ಷಿಣ ಕೊರಿಯಾ

ಅಲ್‌ ರಯ್ಯನ್‌(ಡಿ.03): 91ನೇ ನಿಮಿಷದಲ್ಲಿ ಹವಾಂಗ್‌ ಹೀ-ಚಾನ್‌ ಬಾರಿಸಿದ ಗೋಲು ದಕ್ಷಿಣ ಕೊರಿಯಾವನ್ನು ಪ್ರಿ ಕ್ವಾರ್ಟರ್‌ ಫೈನಲ್‌ಗೇರಿಸಿತು. ಪೋರ್ಚುಗಲ್‌ ವಿರುದ್ಧ 2-1 ಗೋಲುಗಳ ಅಚ್ಚರಿಯ ಗೆಲುವು ಸಾಧಿಸಿದ ದಕ್ಷಿಣ ಕೊರಿಯಾ, ‘ಎಚ್‌’ ಗುಂಪಿನಲ್ಲಿ 2ನೇ ಸ್ಥಾನ ಪಡೆದು ಅಂತಿಮ 16ರ ಸುತ್ತು ಪ್ರವೇಶಿಸಿತು. ಉರುಗ್ವೆ ಜೊತೆ ಗೋಲು ವ್ಯತ್ಯಾಸದಲ್ಲೂ ಸಮಬಲ ಸಾಧಿಸಿದ ದಕ್ಷಿಣ ಕೊರಿಯಾ ಟೂರ್ನಿಯಲ್ಲಿ ಹೆಚ್ಚು ಗೋಲು ಬಾರಿಸಿದ ಆಧಾರದಲ್ಲಿ ಮುನ್ನಡೆಯಿತು. 3 ಪಂದ್ಯಗಳಲ್ಲಿ ಕೊರಿಯಾ 4 ಗೋಲುಗಳನ್ನು ಬಾರಿಸಿದರೆ, ಉರುಗ್ವೆ ಕೇವಲ 2 ಗೋಲು ಬಾರಿಸಿತು.

5ನೇ ನಿಮಿಷದಲ್ಲೇ ರಿಕಾರ್ಡೊ ಹೊರ್ಟಾ ಬಾರಿಸಿದ ಗೋಲು ಪೋರ್ಚುಗಲ್‌ಗೆ 1-0 ಮುನ್ನಡೆ ಒದಗಿಸಿತು. 27ನೇ ನಿಮಿಷದಲ್ಲಿ ಕಿಮ್‌ ಯಂಗ್‌ ವೊನ್‌ ಕೊರಿಯಾ ಸಮಬಲ ಸಾಧಿಸಲು ಕಾರಣರಾದರು. ಮೊದಲಾರ್ಧದ ಮುಕ್ತಾಯಕ್ಕೆ ಎರಡೂ ತಂಡಗಳು ತಲಾ ಒಂದು ಗೋಲು ಗಳಿಸಿದವು. ಡ್ರಾನೊಂದಿಗೆ ಕೊರಿಯಾ ಹೊರಬೀಳಲಿದೆ ಎನ್ನುವ ಲೆಕ್ಕಾಚಾರ 91ನೇ ನಿಮಿಷದಲ್ಲಿ ಬದಲಾಯಿತು. ಹವಾಂಗ್‌ ಆಕರ್ಷಕ ಗೋಲು ಗಳಿಸಿ ಅಚ್ಚರಿಯ ಗೆಲುವು ತಂದುಕೊಟ್ಟಿದ್ದಲ್ಲದೇ ಕೊರಿಯಾವನ್ನು 2010ರ ಬಳಿಕ ಮೊದಲ ಬಾರಿಗೆ ಅಂತಿಮ 16ರ ಸುತ್ತಿಗೆ ಪ್ರವೇಶಿಸಿತು.

ಉರುಗ್ವೆಗೆ ನಾಕೌಟ್‌ ಶಾಕ್‌!

ಅಲ್‌-ವಕ್ರಾ: ನಿರ್ಣಾಯಕ ಪಂದ್ಯದಲ್ಲಿ 2-0 ಅಂತರದಲ್ಲಿ ಘಾನಾ ವಿರುದ್ಧ ಗೆದ್ದರೂ ಉರುಗ್ವೆಗೆ ಅದೃಷ್ಟ ಕೈಹಿಡಿಯಲಿಲ್ಲ. ಮೊದಲೆರಡು ಪಂದ್ಯಗಳಲ್ಲಿ ಒಂದೂ ಗೋಲು ಬಾರಿಸದೆ ಇದ್ದಿದ್ದು 2 ಬಾರಿ ಚಾಂಪಿಯನ್‌ ತಂಡಕ್ಕೆ ಮುಳುವಾಯಿತು. ಕಳೆದ 3 ವಿಶ್ವಕಪ್‌ಗಳಲ್ಲಿ ನಾಕೌಟ್‌ ಹಂತಕ್ಕೇರುವಲ್ಲಿ ಯಶಸ್ವಿಯಾಗಿದ್ದ ಉರುಗ್ವೆ ಈ ಬಾರಿ ಗುಂಪು ಹಂತದಲ್ಲೇ ಹೊರಬಿದ್ದಿದೆ.

ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಗೋಲು ರಹಿತ ಡ್ರಾಗೆ ತೃಪ್ತಿಪಟ್ಟಿದ್ದ ಉರುಗ್ವೆ, 2ನೇ ಪಂದ್ಯದಲ್ಲಿ ಪೋರ್ಚುಗಲ್‌ಗೆ 0-2 ಗೋಲುಗಳಲ್ಲಿ ಶರಣಾಗಿತ್ತು. 3ನೇ ಪಂದ್ಯದಲ್ಲಿ ಘಾನಾವನ್ನು ಸೋಲಿಸಿ, ದಕ್ಷಿಣ ಕೊರಿಯಾ ಪೋರ್ಚುಗಲ್‌ ವಿರುದ್ಧ ಸೋತು ಇಲ್ಲವೇ ಡ್ರಾ ಮಾಡಿಕೊಂಡರೆ ಉರುಗ್ವೆ ನಾಕೌಟ್‌ಗೇರುತ್ತಿತ್ತು. 

FIFA World Cup ಜಪಾನ್‌ ಗನ್‌ಗೆ ಉರುಳಿದ ಸ್ಪೇನ್‌, ಮ್ಯಾಚ್‌ ನೋಡ್ತಿದ್ದ 4 ಬಾರಿ ಚಾಂಪಿಯನ್ ಜರ್ಮನಿ ಸ್ಟನ್‌!

ಮೊದಲಾರ್ಧದಲ್ಲೇ 2 ಗೋಲು ಬಾರಿಸಿದ್ದ ತಂಡ ಆತ್ಮವಿಶ್ವಾಸದಿಂದಲೇ ಆಡುತ್ತಿತ್ತು. ಆದರೆ ಪೋರ್ಚುಗಲ್‌ ವಿರುದ್ಧ 91ನೇ ನಿಮಿಷದಲ್ಲಿ ಕೊರಿಯಾ 2ನೇ ಗೋಲು ಬಾರಿಸಿದ ವಿಷಯ ತಿಳಿಯುತ್ತಿದ್ದಂತೆ ಉರುಗ್ವೆ ಆಟಗಾರರು ಆಘಾತಕ್ಕೊಳಗಾದರು. ಸುವಾರೆಜ್‌ ಸೇರಿ ಬಹುತೇಕ ಆಟಗಾರರು ಕಣ್ಣೀರಿಟ್ಟರು. ಪಂದ್ಯದ ಮುಗಿದ ಬಳಿಕ ರೆಫ್ರಿಗಳ ಜೊತೆ ಉರುಗ್ವೆಯ ಕೆಲ ಆಟಗಾರರು ಕಿತ್ತಾಡಿದ ಪ್ರಸಂಗವೂ ನಡೆಯಿತು.

ಸತತ 2ನೇ ಬಾರಿ ಗುಂಪು ಹಂತದಲ್ಲೇ ಜರ್ಮನಿ ಔಟ್‌!

ಅಲ್‌ ಖೋರ್‌: ಸತತ 2ನೇ ಬಾರಿಗೆ ಜರ್ಮನಿ ವಿಶ್ವಕಪ್‌ನ ಗುಂಪು ಹಂತದಲ್ಲೇ ಹೊರಬಿದ್ದಿದೆ. 4 ಬಾರಿ ಚಾಂಪಿಯನ್‌ ಜರ್ಮನಿ ಗುರುವಾರ ರಾತ್ರಿ ನಡೆದ ಕೋಸ್ಟರಿಕಾ ವಿರುದ್ಧದ ಪಂದ್ಯದಲ್ಲಿ 4-2 ಗೋಲುಗಳ ಅಂತರದಲ್ಲಿ ಗೆದ್ದರೂ, ಜಪಾನ್‌ ವಿರುದ್ಧ ಸ್ಪೇನ್‌ ಸೋತ ಕಾರಣ ಗೋಲು ವ್ಯತ್ಯಾಸದ ಆಧಾರದಲ್ಲಿ ಹಿಂದೆ ಬಿದ್ದು, ‘ಇ’ ಗುಂಪಿನಲ್ಲಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಹಾಲಿ ಚಾಂಪಿಯನ್‌ ಆಗಿ ಕಳೆದ ವಿಶ್ವಕಪ್‌ನಲ್ಲಿ ಕಣಕ್ಕಿಳಿದಿದ್ದ ಜರ್ಮನಿ ಆಗಲೂ ಮೊದಲ ಸುತ್ತಿನಲ್ಲೇ ಹೊರಬಿದ್ದಿತ್ತು.

ಪಂದ್ಯವನ್ನು ಜರ್ಮನಿ ಉತ್ತಮವಾಗೇ ಆರಂಭಿಸಿತು. 10ನೇ ನಿಮಿಷದಲ್ಲೇ ಸೆರ್ಜೆ ಗ್ಯಾಬ್ರಿ ಗೋಲು ಬಾರಿಸಿದರು. ಅತ್ತ ಜಪಾನ್‌ ವಿರುದ್ಧ ಸ್ಪೇನ್‌ ಸಹ ಮುನ್ನಡೆ ಪಡೆಯಿತು. ಆದರೆ ದ್ವಿತೀಯಾರ್ಧದಲ್ಲಿ ಎರಡೂ ಪಂದ್ಯಗಳು ತಲೆಕೆಳಗಾದವು.

58, 70ನೇ ನಿಮಿಷದಲ್ಲಿ ಕೋಸ್ಟರಿಕಾ ಗೋಲು ಬಾರಿಸಿ 2-1ರ ಮುನ್ನಡೆ ಪಡೆಯಿತು. ಆದರೆ ಜರ್ಮನಿ ಆ ಬಳಿಕ 3 ಗೋಲು ಬಾರಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ತಂಡ ಗೋಲು ವ್ಯತ್ಯಾಸದ ಆಧಾರದಲ್ಲಿ ಸ್ಪೇನ್‌ ತಂಡವನ್ನು ಹಿಂದಿಕ್ಕಬೇಕಿದ್ದರೆ ಇನ್ನೂ 5 ಗೋಲು ಗಳಿಸಬೇಕಿತ್ತು.

ಜಪಾನನ್ನು ನಾಕೌಟ್‌ಗೇರಿಸಿದ ವಿವಾದಿತ ಗೋಲು!

ದೋಹಾ: ಅದೇ ಕ್ರೀಡಾಂಗಣ, ಅದೇ ಫಲಿತಾಂಶ. ಜಪಾನ್‌ಗೆ ಮತ್ತೊಂದು ಅಚ್ಚರಿಯ ಜಯ. ಮೊದಲ ಪಂದ್ಯದಲ್ಲಿ ಜರ್ಮನಿಯನ್ನು 2-1ರ ಅಂತರದಲ್ಲಿ ಸೋಲಿಸಿದ್ದ ಜಪಾನ್‌, ಗುರುವಾರ ಸ್ಪೇನ್‌ ವಿರುದ್ಧವೂ 2-1ರಲ್ಲಿ ಜಯಿಸಿ ಅಂತಿಮ 16ರ ಸುತ್ತಿಗೆ ಪ್ರವೇಶಿಸಿತು. ಸೋಲಿನ ಹೊರತಾಗಿಯೂ ಉತ್ತಮ ಗೋಲು ವ್ಯತ್ಯಾಸದ ಕಾರಣ ಸ್ಪೇನ್‌ ಕೂಡ ಪ್ರಿ ಕ್ವಾರ್ಟರ್‌ ಪ್ರವೇಶಿಸಿತು.

ಕೋಸ್ಟರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ 7 ಗೋಲು ಬಾರಿಸಿದ್ದು ಸ್ಪೇನ್‌ಗೆ ನೆರವಾಯಿತು. ಅವೊ ತನಾಕ ಬಾರಿಸಿದ ಗೆಲುವಿನ ಗೋಲು ವಿವಾದಕ್ಕೆ ಕಾರಣವಾಯಿತು. ರೆಫ್ರಿಗಳು ಸುಮಾರು 2 ನಿಮಿಷಕ್ಕೂ ಹೆಚ್ಚು ಕಾಲ ರೀಪ್ಲೇಗಳನ್ನು ವೀಕ್ಷಿಸಿ ಗೋಲು ಮಾನ್ಯಗೊಳಿಸಿದರು. ಇದರೊಂದಿಗೆ ಜಪಾನ್‌ ‘ಇ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆಯಿತು.

ಚೆಂಡು ಹೊರಗಿದ್ದರೂ ಜಪಾನ್‌ಗೆ ಗೋಲು ದೊರೆತಿದ್ದು ಹೇಗೆ?

51ನೇ ನಿಮಿಷದಲ್ಲಿ ಮಿತೊಮಾ ಗೋಲು ಪೆಟ್ಟಿಗೆಗೆ ನೇರವಾಗಿದ್ದ ಗೆರೆಯ ಸನಿಹದಿಂದ ನೀಡಿದ ಪಾಸನ್ನು ತನಾಕ ಗೋಲಾಗಿಸಿದರು. ಮಿತೊಮಾ ಚೆಂಡನ್ನು ಬಾರಿಸುವ ವೇಳೆಗೆ ಹೊರಗೆ ಗೆರೆಯಿಂದ ಹೊರ ಹೋದಂತೆ ಕಂಡಬಂತು. ವಿಡಿಯೋ ವಿಶ್ಲೇಷಣೆ (ವಿಎಆರ್‌) ಮೂಲಕ ರೆಫ್ರಿ 2 ನಿಮಿಷಕ್ಕೂ ಹೆಚ್ಚು ಸಮಯ ಪರಿಶೀಲಿಸಿ ಗೋಲು ಮಾನ್ಯಗೊಳಿಸಿದರು. ಇದು ವಿವಾದಕ್ಕೆ ಕಾರಣವಾಯಿತು. ಚೆಂಡು ಹೊರಹೋಗಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಮೇಲ್ಭಾಗದಿಂದ ನೋಡಿದಾಗ ಚೆಂಡು ಗೆರೆ ಮೇಲಿರುವಂತೆ ಕಾಣುತ್ತಿತ್ತು. ಇದರಿಂದಾಗಿ ಗೋಲು ನೀಡಲಾಯಿತು. ಒಂದು ವೇಳೆ ಪಂದ್ಯ ಡ್ರಾಗೊಂಡಿದ್ದರೆ ಜರ್ಮನಿ ನಾಕೌಟ್‌ ಪ್ರವೇಶಿಸುತ್ತಿತ್ತು. ಈ ಗೋಲಿನ ಸಂಬಂಧ ಜರ್ಮನಿ ಫಿಫಾಗೆ ದೂರು ನೀಡಿದೆ.

click me!