
ನ್ಯೂಯಾರ್ಕ್: ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾ ಮತ್ತು ಸ್ಪೇನ್ ಮುಖಾಮುಖಿಯಾಗಲು ಸಿದ್ಧವಾಗಿವೆ. ಈ ನಡುವೆ, ಸ್ಪೇನ್‌ನ ಯುವ ಆಟಗಾರ ಲಮಿನ್ ಯಮಾಲ್ ಜೊತೆಗಿನ ತಮ್ಮ ವೈರಲ್ ಫೋಟೋ ಬಗ್ಗೆ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ಕೊನೆಗೂ ಮೌನ ಮುರಿದಿದ್ದಾರೆ. 2007ರಲ್ಲಿ ಯಮಾಲ್ ಮಗುವಾಗಿದ್ದಾಗ ಮೆಸ್ಸಿ ಆತನನ್ನು ಎತ್ತಿಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನ್ಯೂಯಾರ್ಕ್‌ನಲ್ಲಿ ನಡೆದ ಫಿಫಾದ ಫನಾಟಿಕ್ಸ್ ಫೆಸ್ಟ್‌ನಲ್ಲಿ ಮಾತನಾಡಿದ ಮೆಸ್ಸಿ, ಮೊದಲ ಬಾರಿಗೆ ಈ ಫೋಟೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
“ಆ ಫೋಟೋ ನೋಡಿದ್ರೆ ನನಗೇ ನಂಬೋಕೆ ಆಗಲ್ಲ. ಅವನು ಮಗುವಾಗಿದ್ದಾಗ ನಾನು ಆ ಫೋಟೋ ತೆಗೆಸಿಕೊಂಡಿದ್ದೆ. ಈಗ ನಾವು ಇಬ್ಬರೂ ಒಂದೇ ವಿಶ್ವಕಪ್ ಫೈನಲ್‌ನಲ್ಲಿ ಆಡುತ್ತಿದ್ದೇವೆ ಅನ್ನೋದು ನಿಜಕ್ಕೂ ವಿಶೇಷವಾದದ್ದು,” ಎಂದು ಮೆಸ್ಸಿ ಹೇಳಿದ್ದಾರೆ. “ಯಮಾಲ್ ಈಗ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬ. ಅವನು ಅದ್ಭುತ ಆಟಗಾರ, ಜಾಗತಿಕ ತಾರೆ. ಅವನ ಯಶಸ್ಸು ಬಾರ್ಸಿಲೋನಾದ ಯಶಸ್ಸು ಕೂಡ, ಹಾಗಾಗಿ ನಾನು ಅವನಿಗೆ ಶುಭ ಹಾರೈಸುತ್ತೇನೆ. ಯಮಾಲ್‌ಗೆ ಈಗ ಕೇವಲ 19 ವರ್ಷ, ಅವನ ಮುಂದೆ ದೊಡ್ಡ ವೃತ್ತಿಜೀವನವಿದೆ. ಅವನಿಗೆ ಒಳ್ಳೆಯದಾಗಲಿ, ಆದರೆ ಫೈನಲ್‌ನಲ್ಲಿ ಅವನು ತನ್ನ ಅತ್ಯುತ್ತಮ ಆಟವಾಡದಂತೆ ನೋಡಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ. ಈ ಬಾರಿ ಅವನು ಚಾಂಪಿಯನ್ ಆಗುವುದಿಲ್ಲ ಎನ್ನುವಂತೆ ನಾವು ಹೋರಾಡುತ್ತೇವೆ. ಸ್ಪೇನ್ ಒಂದು ಬಲಿಷ್ಠ ತಂಡ, ಅಲ್ಲಿ ಯಮಾಲ್ ಮಾತ್ರವಲ್ಲ ಬೇರೆ ಆಟಗಾರರೂ ಇದ್ದಾರೆ,” ಎಂದು ಮೆಸ್ಸಿ ಸ್ಪಷ್ಟಪಡಿಸಿದ್ದಾರೆ.
الصورة الشهيرة مع لامين❓
🚨🚨 الأسطورة ميسي: "أن نكون اليوم، لامين وأنا، في مواجهة بعضنا بعدما التُقطت لنا صورة عندما كان طفلًا رضيعًا، فهذا أمر جنوني. سنحاول تقديم مباراة جيدة، لكن آمل ألا يقدم هو وفريقه مباراة جيدة." pic.twitter.com/qdtDHlhpAt— Messi World (@M10GOAT) July 17, 2026
2007ರಲ್ಲಿ ಯುನಿಸೆಫ್ ಮತ್ತು ಸ್ಪ್ಯಾನಿಷ್ ಮಾಧ್ಯಮ 'ಸ್ಪೋರ್ಟ್' ಜಂಟಿಯಾಗಿ ನಡೆಸಿದ ಚಾರಿಟಿ ಕ್ಯಾಲೆಂಡರ್‌ಗಾಗಿ ಬಾರ್ಸಿಲೋನಾ ಸ್ಟೇಡಿಯಂನಲ್ಲಿ ಈ ಫೋಟೋವನ್ನು ತೆಗೆಯಲಾಗಿತ್ತು. 18 ವರ್ಷಗಳ ನಂತರ, ಇಬ್ಬರೂ ಒಂದೇ ವಿಶ್ವಕಪ್ ಫೈನಲ್‌ನಲ್ಲಿ ಎದುರಾಳಿಗಳಾಗಿರುವುದು ಈ ಕಥೆಯ ಅತಿದೊಡ್ಡ ಟ್ವಿಸ್ಟ್.
#VsSportsSomos26 | "LO DE ESA FOTO ES UNA LOCURA..."
"El bien de él, será el bien del Barcelona"
Lionel Messi en el Fanatic Fest habló sobre la famosa foto viral, donde se lo ve a él junto a Lamine Yamal de bebé.#Mundial07 pic.twitter.com/Hgcuk4W72M— Vs Sports (@SomosVsSports) July 18, 2026
ಈ ಫೋಟೋವನ್ನು ಮೊದಲ ಬಾರಿಗೆ ನೋಡಿದಾಗ ಸ್ಪ್ಯಾನಿಷ್ ಆಟಗಾರ ಮಿಕೆಲ್ ಮೆರಿನೊ ಅವರಿಗೂ ಅಚ್ಚರಿಯಾಗಿತ್ತು. “ನಾನು ಇದನ್ನು ಮೊದಲು ನೋಡಿದಾಗ, ಇದು ಎಐನಿಂದ ಮಾಡಿದ ಫೋಟೋ, ನಿಜವಲ್ಲ ಅಂದುಕೊಂಡಿದ್ದೆ. ಫುಟ್‌ಬಾಲ್ ಇತಿಹಾಸದ ಇಬ್ಬರು ಶ್ರೇಷ್ಠ ಆಟಗಾರರು ಈ ರೀತಿ ಒಂದೇ ಫೋಟೋದಲ್ಲಿರುವುದು ನಂಬಲಾಗದ ವಿಷಯ,” ಎಂದು ಸ್ಪೇನ್‌ಗಾಗಿ ಪ್ರೀ-ಕ್ವಾರ್ಟರ್ ಮತ್ತು ಕ್ವಾರ್ಟರ್ ಫೈನಲ್‌ನಲ್ಲಿ ಬದಲಿ ಆಟಗಾರನಾಗಿ ಬಂದು ಗೆಲುವಿನ ಗೋಲು ಗಳಿಸಿದ್ದ ಮೆರಿನೊ ಹೇಳಿದ್ದಾರೆ.
ಇತ್ತ, ಇಬ್ಬರೂ ಆಟಗಾರರ ಕ್ಲಬ್ ಆದ ಬಾರ್ಸಿಲೋನಾ ಅಭಿಮಾನಿಗಳು ದೊಡ್ಡ ಗೊಂದಲದಲ್ಲಿದ್ದಾರೆ. ಮೆಸ್ಸಿ ಮತ್ತು ಯಮಾಲ್ ಇಬ್ಬರ ಮೇಲೂ ಸಮಾನ ಪ್ರೀತಿ ಇರುವುದರಿಂದ, ಯಾರು ಗೆಲ್ಲಬೇಕು ಎಂಬ ವಿಷಯದಲ್ಲಿ ತಮ್ಮ ಹೃದಯವೇ ಎರಡು ಭಾಗವಾಗಿದೆ ಎಂದು ಬಾರ್ಸಿಲೋನಾ ಅಭಿಮಾನಿಗಳು ಹೇಳಿಕೊಳ್ಳುತ್ತಿದ್ದಾರೆ. ಜುಲೈ 19, ಭಾನುವಾರದಂದು ನ್ಯೂಜೆರ್ಸಿಯಲ್ಲಿ ನಡೆಯಲಿರುವ ಈ ಮೆಸ್ಸಿ-ಯಮಾಲ್ ಕನಸಿನ ಕದನಕ್ಕಾಗಿ ಕ್ರೀಡಾ ಜಗತ್ತು ಕಾತುರದಿಂದ ಕಾಯುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.