* ಇಂಡಿಯನ್ ಸೂಪರ್ ಲೀಗ್ ಫೈನಲ್ ಇಂದಿನಿಂದ ಆರಂಭ
* ಪ್ರಶಸ್ತಿಗಾಗಿ ಬಿಎಫ್ಸಿ-ಎಟಿಕೆ ಮೋಹನ್ ಬಗಾನ್ ಪೈಪೋಟಿ
* ಗೋವಾದ ಜವಹರಲಾಲ್ ನೆಹರೂ ಕ್ರೀಡಾಂಗಣ ಆತಿಥ್ಯ
ಪಣಜಿ(ಮಾ.18): 9ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್(ಐಎಸ್ಎಲ್) ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯ ಶನಿವಾರ ನಡೆಯಲಿದ್ದು, ಮಾಜಿ ಚಾಂಪಿಯನ್ಗಳಾದ ಬೆಂಗಳೂರು ಎಫ್ಸಿ ಹಾಗೂ ಎಟಿಕೆ ಮೋಹನ್ ಬಗಾನ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಪಂದ್ಯಕ್ಕೆ ಗೋವಾದ ಜವಹರಲಾಲ್ ನೆಹರೂ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
2017-18ರಲ್ಲಿ ಫೈನಲ್ಗೇರಿ, 2018-19ರ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಬಿಎಫ್ಸಿ ಮೂರನೇ ಬಾರಿ ಫೈನಲ್ ಪ್ರವೇಶಿಸಿದ್ದು, 2ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಟೂರ್ನಿಯ ಆರಂಭದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಬಿಎಫ್ಸಿ ಬಳಿಕ 2023ರಲ್ಲಿ ಆಡಿದ 8 ಲೀಗ್ ಪಂದ್ಯಗಳಲ್ಲೂ ಗೆದ್ದು ನಾಕೌಟ್ ಪ್ರವೇಶಿಸಿತ್ತು. ವಿವಾದದೊಂದಿಗೆ ಮುಗಿದಿದ್ದ ಪ್ಲೇ-ಆಫ್ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ ತಂಡವನ್ನು ಮಣಿಸಿದ್ದ ಬಿಎಫ್ಸಿ ಸೆಮಿಫೈನಲ್ನಲ್ಲಿ ಬಲಿಷ್ಠ ಮುಂಬೈ ಸಿಟಿ ಎಫ್ಸಿ ವಿರುದ್ಧ ಅತಿ ರೋಚಕವಾಗಿ ಗೆದ್ದು ಪ್ರಶಸ್ತಿ ಸುತ್ತಿಗೇರಿದೆ.
undefined
ಮತ್ತೊಂದೆಡೆ 2014ರ ಚೊಚ್ಚಲ ಆವೃತ್ತಿ, 2016 ಹಾಗೂ 2019-20ರಲ್ಲಿ ಪ್ರಶಸ್ತಿ ಗೆದ್ದಿರುವ ಎಟಿಕೆಗೆ ಇದು 5ನೇ ಫೈನಲ್. ಲೀಗ್ ಹಂತದಲ್ಲಿ 3ನೇ ಸ್ಥಾನಿಯಾಗಿದ್ದ ಕೋಲ್ಕತಾದ ತಂಡ ಪ್ಲೇ-ಆಫ್ನಲ್ಲಿ ಒಡಿಶಾ ವಿರುದ್ಧ ಗೆದ್ದಿತ್ತು. ಬಳಿಕ ಸೆಮಿಫೈನಲ್ನಲ್ಲಿ ಹಾಲಿ ಚಾಂಪಿಯನ್ ಹೈದರಾಬಾದ್ ಎಫ್ಸಿ ತಂಡವನ್ನು ಮಣಿಸಿ ಫೈನಲ್ಗೇರಿದೆ.
ಪಂದ್ಯ: ಸಂಜೆ 7.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಆಲ್ ಇಂಗ್ಲೆಂಡ್: ಸೆಮೀಸ್ ತಲುಪಿದ ತ್ರೀಸಾ-ಗಾಯತ್ರಿ
ಬರ್ಮಿಂಗ್ಹ್ಯಾಮ್: ಭಾರತದ ತಾರಾ ಶಟ್ಲರ್ಗಳಾದ ತ್ರೀಸಾ ಜಾಲಿ ಹಾಗೂ ಗಾಯತ್ರಿ ಗೋಪಿಚಂದ್ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸತತ 2ನೇ ಬಾರಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಇದೊಂದು ವಿಭಾಗ ಹೊರತುಪಡಿಸಿ ಉಳಿದ ನಾಲ್ಕೂ ವಿಭಾಗಗಳಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಕಳೆದ ವರ್ಷ ಸೆಮೀಸ್ನಲ್ಲಿ ಸೋತು ಹೊರಬಿದ್ದಿದ್ದ ತ್ರೀಸಾ-ಗಾಯತ್ರಿ ಜೋಡಿ ಈ ಬಾರಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದೆ.
ಶುಕ್ರವಾರ ಮಹಿಳಾ ಡಬಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಭಾರತದ ಜೋಡಿ ಚೀನಾದ ಲೀ ವೆನ್ ಮೆಯ್-ಲಿಯು ಕ್ಷಾನ್ ಜೋಡಿ ವಿರುದ್ಧ 21-14, 18-21, 21-12 ಗೇಮ್ಗಳಲ್ಲಿ ಗೆಲುವು ಸಾಧಿಸಿತು. ಸೆಮೀಸ್ನಲ್ಲಿ ಭಾರತದ ಜೋಡಿ ಚೈನೀಸ್ ತೈಪೆಯ ಬೀಕ್ ಹಾನಾ-ಲೀ ಹೀ ಜೋಡಿ ವಿರುದ್ಧ ಸೆಣಸಾಡಲಿದೆ.
ಆಸ್ಟ್ರೇಲಿಯಾ ವಿರುದ್ಧ ರಾಹುಲ್ -ಜಡೇಜಾ ಹೋರಾಟ, ಏಕದಿನದಲ್ಲಿ ಶುಭಾರಂಭ ಮಾಡಿದ ಭಾರತ!
ಇದಕ್ಕೂ ಮೊದಲು ಗುರುವಾರ ರಾತ್ರಿ ಪುರುಷರ ಸಿಂಗಲ್ಸ್ನ 2ನೇ ಸುತ್ತಿನಲ್ಲಿ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್ ಜಪಾನ್ನ ಕಡಾಯಿ ನರೋಕಾ ವಿರುದ್ಧ 17-21, 15-21 ಅಂತರದಲ್ಲಿ ಸೋತರೆ, ಎಚ್.ಎಸ್.ಪ್ರಣಯ್ ಇಂಡೋನೇಷ್ಯಾದ ಆ್ಯಂಟನಿ ಗಿಂಟಿಂಗ್ ವಿರುದ್ಧ 20-22, 21-15, 17-21 ಗೇಮ್ಗಳಲ್ಲಿ ಪರಾಭವಗೊಂಡರು.
ಮಹಿಳಾ ವಿಶ್ವ ಬಾಕ್ಸಿಂಗ್: ಜ್ಯಾಸ್ಮೀನ್, ಶಶಿಗೆ ಜಯ
ನವದೆಹಲಿ: 13ನೇ ಆವೃತ್ತಿಯ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್ಶಿಪ್ನ 2ನೇ ದಿನವೂ ಭಾರತೀಯ ಬಾಕ್ಸರ್ಗಳು ಉತ್ತಮ ಪ್ರದರ್ಶನ ತೋರಿದ್ದು, ಜ್ಯಾಸ್ಮೀನ್, ಶಶಿ ಚೋಪ್ರಾ 2ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಆದರೆ ಶ್ರುತಿ ಯಾದವ್ ಮೊದಲ ಸುತ್ತಲ್ಲೇ ಸೋತು ಹೊರಬಿದ್ದಿದ್ದಾರೆ.
ಶುಕ್ರವಾರ 60 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಜ್ಯಾಸ್ಮೀನ್ ತಾನ್ಜಾನಿಯಾದ ನ್ಯಾಮ್ಬೆಗಾ ಆ್ಯಂಬ್ರೋಸ್ ವಿರುದ್ಧ ತಾಂತ್ರಿಕ ಪ್ರಾಬಲ್ಯದೊಂದಿಗೆ ಗೆಲುವು ಸಾಧಿಸಿದರು. ಜ್ಯಾಸ್ಮೀನ್ರ ಪಂಚ್ಗಳಿಗೆ ಉತ್ತರಿಸಲು ಎದುರಾಳಿಗೆ ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಮನಗಂಡ ರೆಫ್ರಿ ಮೊದಲ ಸುತ್ತಲ್ಲೇ ಪಂದ್ಯ ನಿಲ್ಲಿಸಿ ಜ್ಯಾಸ್ಮೀನ್ ಗೆದ್ದಿರುವುದಾಗಿ ಘೋಷಿಸಿದರು. ಇನ್ನು ಶಶಿ ಚೋಪ್ರಾ(63 ಕೆ.ಜಿ.) ಕೀನ್ಯಾದ ಮ್ವಾಂಗಿ ವಾಂಜಿರು ವಿರುದ್ಧ 5-0 ಗೆಲುವು ಸಾಧಿಸಿ ಪ್ರಿ ಕ್ವಾರ್ಟರ್ ಫೈನಲ್ಗೇರಿದರು. ಇದೇ ವೇಳೆ ಕೂಟ ಆರಂಭಕ್ಕೂ ಹಿಂದಿನ ದಿನ ಸನಾಮಚಾ ಚಾನು ಬದಲಿಗರಾಗಿ ಆಯ್ಕೆಯಾಗಿದ್ದ ಶ್ರುತಿ 70 ಕೆ.ಜಿ. ವಿಭಾಗದಲ್ಲಿ ಚೀನಾದ ಝೊಯು ಪಾನ್ ಎದುರು 0-5 ಅಂತರದಲ್ಲಿ ಪರಾಭವಗೊಂಡರು. ಕೂಟದಲ್ಲಿ ಇದು ಭಾರತಕ್ಕೆ ಮೊದಲ ಸೋಲು.