* 9ನೇ ಆವೃತ್ತಿಯ ಐಎಸ್‌ಎಸ್ ಸೆಮೀಸ್‌ನಲ್ಲಿಂದು ಬಿಎಫ್‌ಸಿ-ಮುಂಬೈ ಮತ್ತೊಂದು ಫೈಟ್
* ಮೊದಲ ಸುತ್ತಿನಲ್ಲಿ 1-0 ಅಂತರದಲ್ಲಿ ಗೆಲುವು ಸಾಧಿಸಿರುವ ಬೆಂಗಳೂರು ಎಫ್‌ಸಿ
* ಎರಡನೇ ಚರಣದ ಪಂದ್ಯಕ್ಕೆ ನಗರದ ಕಂಠೀರವ ಕ್ರೀಡಾಂಗಣ ಆತಿಥ್ಯ
ಬೆಂಗಳೂರು(ಮಾ.12): 9ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫುಟ್ಬಾಲ್ ಟೂರ್ನಿಯ ಫೈನಲ್ ಪ್ರವೇಶಿಸುವ ನಿರೀಕ್ಷೆಯಲ್ಲಿರುವ ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ ಮೊದಲ ಸೆಮಿಫೈನಲ್ನ 2ನೇ ಚರಣದ ಪಂದ್ಯದಲ್ಲಿ ಭಾನುವಾರ ಮುಂಬೈ ಸಿಟಿ ಎಫ್‌ಸಿ ವಿರುದ್ಧ ಸೆಣಸಾಡಲಿದೆ. ಪಂದ್ಯಕ್ಕೆ ನಗರದ ಕಂಠೀರವ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಸೆಮೀಸ್‌ನಲ್ಲಿ ತಂಡಗಳು ಎರಡು ಬಾರಿ ಮುಖಾಮುಖಿಯಾಗಲಿದ್ದು, ಎರಡೂ ಪಂದ್ಯಗಳಲ್ಲಿ ಗರಿಷ್ಠ ಗೋಲು ಬಾರಿಸುವ ತಂಡ ಫೈನಲ್‌ಗೇರಲಿದೆ. ಈಗಾಗಲೇ ಮುಂಬೈನಲ್ಲಿ ನಡೆದಿದ್ದ ಸೆಮಿಫೈನಲ್ನ ಮೊದಲ ಚರಣದ ಪಂದ್ಯದಲ್ಲಿ ಬೆಂಗಳೂರು ತಂಡ ಮುಂಬೈ ವಿರುದ್ಧ 1-0 ಗೆಲುವು ಸಾಧಿಸಿದೆ. ಹೀಗಾಗಿ ಬಿಎಫ್‌ಸಿ ಭಾನುವಾರ ಡ್ರಾ ಸಾಧಿಸಿದರೂ ಫೈನಲ್ ಪ್ರವೇಶಿಸಲಿದೆ. ಅತ್ತ 2020-21ರ ಚಾಂಪಿಯನ್ ಮುಂಬೈಗೆ ಕನಿಷ್ಠ 2-0 ಅಂತರದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.
ಬಿಎಫ್‌ಸಿ 2023ರಲ್ಲಿ ಆಡಿದ ಕೊನೆಯ 10 ಪಂದ್ಯಗಳಲ್ಲಿ ಒಂದೂ ಪಂದ್ಯದಲ್ಲೂ ಸೋಲನುಭವಿಸಿಲ್ಲ. ಆಡಿದ ಎಲ್ಲಾ 10 ಪಂದ್ಯಗಳಲ್ಲೂ ಗೆದ್ದು ತುಂಬು ಆತ್ಮವಿಶ್ವಾಸದಲ್ಲಿದೆ. ಅತ್ತ ಮುಂಬೈ ಸತತ 3 ಪಂದ್ಯಗಳಲ್ಲಿ ಸೋತಿದ್ದು, ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಿಎಫ್ಸಿಯನ್ನು ಸೋಲಿಸಲೇಬೇಕಾದ ಅನಿವಾರ್ಯತೆ ಇದೆ. ಬಿಎಫ್‌ಸಿ 3ನೇ ಫೈನಲ್ ಮೇಲೆ ಕಣ್ಣಿಟ್ಟಿದ್ದರೆ, ಮುಂಬೈ 2ನೇ ಬಾರಿ ಪ್ರಶಸ್ತಿ ಸುತ್ತಿಗೇರುವ ತವಕದಲ್ಲಿದೆ. ಫೈನಲ್ಗೇರುವ ತಂಡ ಹಾಲಿ ಚಾಂಪಿಯನ್ ಹೈದರಾಬಾದ್ ಎಫ್‌ಸಿ ಅಥವಾ ಎಟಿಕೆ ಮೋಹನ್ ಬಗಾನ್ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡಲಿದೆ.
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪ್ರೊ ಲೀಗ್ ಹಾಕಿ: ಇಂದು ಭಾರತ-ಆಸ್ಪ್ರೇಲಿಯಾ ಫೈಟ್
ರೂರ್ಕೆಲಾ: 2022-23ರ ಎಫ್‌ಐಎಚ್ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಆತಿಥೇಯ ಭಾರತ ಭಾನುವಾರ ಆಸ್ಪ್ರೇಲಿಯಾ ವಿರುದ್ಧ ಸೆಣಸಾಡಲಿದೆ. ಭಾರತ ಲೀಗ್ನಲ್ಲಿ ಆಡಿರುವ 5 ಪಂದ್ಯಗಳಲ್ಲಿ 3 ಜಯ 1 ಡ್ರಾ, 1 ಸೋಲಿನೊಂದಿಗೆ 11 ಅಂಕ ಪಡೆದು 4ನೇ ಸ್ಥಾನದಲ್ಲಿದ್ದು, ಆಸ್ಪ್ರೇಲಿಯಾ 4 ಪಂದ್ಯಗಳಲ್ಲಿ ಕೇವಲ 4 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ.
ನಿಮ್ಮಿಂದ ದೇಶದ ಕ್ರೀಡಾ ಪರಾಕ್ರಮ ವಿಶ್ವವೇ ನೋಡಿದೆ: ಸಾನಿಯಾ ಮಿರ್ಜಾಗೆ ಪತ್ರ ಬರೆದು ಪ್ರಧಾನಿ ಮೋದಿ ಶ್ಲಾಘನೆ
ಶುಕ್ರವಾರ ಹಾಲಿ ಚಾಂಪಿಯನ್ ಜರ್ಮನಿಗೆ ಸೋಲುಣಿಸಿದ್ದ ಭಾರತ, ಆಸೀಸ್ ತಂಡದ ವಿರುದ್ಧ ಜಯಗಳಿಸುವ ನಿರೀಕ್ಷೆಯಲ್ಲಿದೆ. ಸೋಮವಾರ ಭಾರತ ತಂಡ ಜರ್ಮನಿ ವಿರುದ್ಧ ಸೆಣಸಾಡಲಿದ್ದು, ಬಳಿಕ ಆಸ್ಪ್ರೇಲಿಯಾ ವಿರುದ್ಧ ಮಾ.15ರಂದು ಮತ್ತೊಮ್ಮೆ ಮುಖಾಮುಖಿಯಾಗಲಿದೆ.
ಯುವ ಅಥ್ಲೆಟಿಕ್ಸ್: ರಾಜ್ಯದ ಗೌತಮಿಗೆ ಹೈಜಂಪ್ ಕಂಚು
ಉಡುಪಿ: ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಆಯೋಜಿಸಿದ 18ನೇ ರಾಷ್ಟ್ರೀಯ ಯುವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕದ ಗೌತಮಿ ಬಾಲಕಿಯರ ಹೈಜಂಪ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಅವರು 1.60 ಮೀ. ಎತ್ತರಕ್ಕೆ ನೆಗೆದು 3ನೇ ಸ್ಥಾನ ಪಡೆದರೆ, ಹರಾರಯಣದ ಪೂಜಾ(1.76 ಮೀ.) ಚಿನ್ನ, ಪಶ್ಚಿಮ ಬಂಗಾಳದ ಮೊಹುರು ಮುಖರ್ಜಿ(1.63 ಮೀ.) ಬೆಳ್ಳಿ ಪಡೆದರು.