ಫುಟ್ಬಾಲ್ ಕ್ಷೇತ್ರದ ಪ್ರತಿಷ್ಠಿತ ಬ್ಯಾಲನ್ ಡಿ ಓರ್ ಪ್ರಶಸ್ತಿಯನ್ನು ಈ ವರ್ಷ ನೀಡದಿರಲು ಆಯೋಜಕರು ತೀರ್ಮಾನಿಸಿದ್ದಾರೆ. ಯಾಕೆ ಹೀದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಪ್ಯಾರಿಸ್(ಜು.21): ಕೊರೋನಾ ಸೋಂಕು ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ಪ್ರತಿಷ್ಠಿತ ಬ್ಯಾಲನ್ ಡಿ ಓರ್ ಪ್ರಶಸ್ತಿ ನೀಡದಿರಲು ಆಯೋಜಕರು ನಿರ್ಧರಿಸಿದ್ದಾರೆ.
ಫ್ರಾನ್ಸ್ ಫುಟ್ಬಾಲ್ ನಿಯತಕಾಲಿಕೆ ಕೊಡುವ ಈ ಪ್ರಶಸ್ತಿಯನ್ನು ಅರ್ಜೆಂಟೀನಾ ಹಾಗೂ ಬಾರ್ಸಿಲೋನಾ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ ದಾಖಲೆಯ 6 ಬಾರಿ ಗೆದ್ದಿದ್ದಾರೆ. ‘1956ರ ನಂತರ ಇದೇ ಮೊದಲ ಬಾರಿಗೆ ಪ್ರಶಸ್ತಿ ಸಮಾರಂಭ ನಡೆಯುತ್ತಿಲ್ಲ. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಫುಟ್ಬಾಲ್ ಪಂದ್ಯಗಳು ನಡೆದಿಲ್ಲ. ಪ್ರಶಸ್ತಿ ವಿಜೇತರನ್ನು ನಿರ್ಧರಿಸಲು ಅಸಾಧ್ಯ’ ಎಂದು ನಿಯತಕಾಲಿಕದ ಸಂಪಾದಕ ಪಾಸ್ಕಲ್ ಫೆರ್ರ್ ತಿಳಿಸಿದ್ದಾರೆ.
ಫುಟ್ಬಾಲ್ ಸಂಸ್ಥೆಗಳಿಗೆ ಫಿಫಾ ಭರ್ಜರಿ ನೆರವು!
2019ರಲ್ಲಿ ಲಯೋನೆಲ್ ಮೆಸ್ಸಿ ಬ್ಯಾಲನ್ ಡಿ ಓರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಇದೀಗ ಪ್ರಶಸ್ತಿ ಇನ್ನೊಂದು ವರ್ಷ ಮುಂದೂಡಿರುವುದರಿಂದ ಇನ್ನು 12 ತಿಂಗಳುಗಳ ಕಾಲ ಮೆಸ್ಸಿಯೇ ಬ್ಯಾಲನ್ ಡಿ ಓರ್ ಪ್ರಶಸ್ತಿಯ ಒಡೆಯರಾಗಿ ಮುಂದುವರೆಯಲಿದ್ದಾರೆ. ಇನ್ನು ಮೆಸ್ಸಿ ಬದ್ಧ ಎದುರಾಳಿ, ಯುವೆಂಟಸ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಐದು ಬಾರಿ ಬ್ಯಾಲನ್ ಡಿ ಓರ್ ಪ್ರಶಸ್ತಿಗೆ ಪಾತ್ರವಾಗಿದ್ದು, ಮೆಸ್ಸಿ ದಾಖಲೆ ಸರಿಗಟ್ಟಲು ಇನ್ನೂ ಒಂದು ವರ್ಷ ಕಾಯಬೇಕಾಗಿದೆ.