FIFA World Cupಗೆ ಇನ್ನು 5 ದಿನ: ಫುಟ್ಬಾಲ್‌ ವಿಶ್ವಕಪ್‌ ಬೆಳೆದು ಬಂದ ಹಾದಿ ಹೀಗಿದೆ..

By Kannadaprabha News  |  First Published Nov 15, 2022, 9:42 AM IST

2022ರ ಫಿಫಾ ಫುಟ್ಬಾಲ್‌ ವಿಶ್ವಕಪ್‌ಗೆ ಇನ್ನು ಕೇವಲ 5 ದಿನ ಬಾಕಿ ಇದೆ. ಟೂರ್ನಿಯ ಇತಿಹಾಸ, ಸ್ವಾರಸ್ಯಕರ ಸಂಗತಿಗಳು, ಈ ವಿಶ್ವಕಪ್‌ ಎಲ್ಲಿ ನಡೆಯಲಿದೆ? ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಈ ಆವೃತ್ತಿ ಏಕೆ ವಿಶಿಷ್ಟ ಹೀಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.. 


2022ರ ಫಿಫಾ ಫುಟ್ಬಾಲ್‌ ವಿಶ್ವಕಪ್‌ಗೆ (FIFA Football World Cup) ಇನ್ನು ಕೇವಲ 5 ದಿನ ಬಾಕಿ ಇದೆ. ಟೂರ್ನಿಯ (Tournament) ಬಗ್ಗೆ ಸಮಗ್ರ ಚಿತ್ರಣ ಕಟ್ಟಿಕೊಡುವ ಪ್ರಯತ್ನವನ್ನು ‘ಕನ್ನಡಪ್ರಭ’ ಇಂದಿನಿಂದ ಆರಂಭಿಸಿದೆ. ಟೂರ್ನಿಯ ಇತಿಹಾಸ (Hitory), ಸ್ವಾರಸ್ಯಕರ ಸಂಗತಿಗಳು, ಹಿಂದಿನ ಚಾಂಪಿಯನ್ನರು (Champions) ಯಾರ್ಯಾರು?, ಈ ವರ್ಷ ಆಡಲಿರುವ ತಂಡಗಳು ಯಾವುವು, ಆ ತಂಡಗಳ ಬಲಾಬಲವೇನು?, ಈ ವಿಶ್ವಕಪ್‌ ಎಲ್ಲಿ ನಡೆಯಲಿದೆ? ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಈ ಆವೃತ್ತಿ ಏಕೆ ವಿಶಿಷ್ಟ. ಹೀಗೆ ಸಂಪೂರ್ಣ ಮಾಹಿತಿಯನ್ನು ಮುಂದಿನ 5 ದಿನಗಳ ಕಾಲ ನಿಮ್ಮ ಮುಂದಿಡಲಿದ್ದೇವೆ.

ಫಿಫಾ ವಿಶ್ವಕಪ್‌ನ ಇತಿಹಾಸ ನಿಮಗೆಷ್ಟು ಗೊತ್ತು?
ಫಿಫಾ ಫುಟ್ಬಾಲ್‌ ವಿಶ್ವಕಪ್‌. ಜಗತ್ತಿನ ಕ್ರೀಡಾಭಿಮಾನಿಗಳೆಲ್ಲರನ್ನೂ ಒಟ್ಟಿಗೆ ಸೆಳೆಯುವ, ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಪಂದ್ಯಾವಳಿ. ಅಂತಾರಾಷ್ಟ್ರೀಯ ಫುಟ್ಬಾಲ್‌ ಸಂಸ್ಥೆಗಳ ಒಕ್ಕೂಟ (International Federation of Association Football) (ಫಿಫಾ) (FIFA) ಆಯೋಜಿಸುವ ಜಾಗತಿಕ ಮಟ್ಟದ ಟೂರ್ನಿ ಇದು. ಈ ವಿಶ್ವಕಪ್‌ ಆರಂಭವಾಗಿದ್ದು 1930ರಲ್ಲಿ. ಚೊಚ್ಚಲ ಆವೃತ್ತಿಗೆ ದಕ್ಷಿಣ ಅಮೆರಿಕದ ಉರುಗ್ವೆ ಆತಿಥ್ಯ ವಹಿಸಿತ್ತು.

Latest Videos

undefined

ಮೊದಲ ಅಂತಾರಾಷ್ಟ್ರೀಯ ಫುಟ್ಬಾಲ್‌ ಪಂದ್ಯ ನಡೆದಿದ್ದು 1872ರಲ್ಲಿ. ಸ್ಕಾಟ್ಲೆಂಡ್‌ ಹಾಗೂ ಇಂಗ್ಲೆಂಡ್‌ ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. 1900 ಹಾಗೂ 1904ರ ಒಲಿಂಪಿಕ್ಸ್‌ಗಳಲ್ಲಿ ಫುಟ್ಬಾಲ್‌ ಕ್ರೀಡೆಯನ್ನು ಕೇವಲ ಪ್ರದರ್ಶನಕ್ಕಷ್ಟೇ ನಡೆಸಲಾಗಿತ್ತು. ಪದಕ ಹಂಚಿಕೆಯಾಗಿರಲಿಲ್ಲ. 1904ರಲ್ಲಿ ಫಿಫಾ ಸ್ಥಾಪನೆಗೊಂಡ ಬಳಿಕ ಒಲಿಂಪಿಕ್ಸ್‌ನಿಂದಾಚೆಗೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವ ಪ್ರಯತ್ನ ಆರಂಭವಾಯಿತು.

ಇದನ್ನು ಓದಿ: ಫಿಫಾ ಯು-17 ವಿಶ್ವಕಪ್‌: ಕೊಲಂಬಿಯಾ ಮಣಿಸಿದ ಸ್ಪೇನ್‌ ಚಾಂಪಿಯನ್‌

1908ರ ಒಲಿಂಪಿಕ್ಸ್‌ನಲ್ಲಿ ಫುಟ್ಬಾಲ್‌ಗೆ ಅಧಿಕೃತ ಮಾನ್ಯತೆ ದೊರೆಯಿತು. ಗ್ರೇಟ್‌ ಬ್ರಿಟನ್‌ ಚೊಚ್ಚಲ ಚಿನ್ನದ ಪದಕ ಜಯಿಸಿತು. ಆನಂತರ ವಿಶ್ವಕಪ್‌ ಎನ್ನುವ ಪರಿಕಲ್ಪನೆ ಆರಂಭವಾಗಿ, ಮೊದಲ ಆವೃತ್ತಿಯನ್ನು 1930ರಲ್ಲಿ ಆಯೋಜಿಸಲಾಯಿತು.

ಈ ತನಕ 21 ಆವೃತ್ತಿ: 2ನೇ ವಿಶ್ವ ಮಹಾಯುದ್ಧದ ಸಮಯದಲ್ಲಿ ಹೊರತುಪಡಿಸಿ 1930ರಿಂದ ಈ ವರೆಗೂ ಒಟ್ಟು 21 ಆವೃತ್ತಿಗಳು ನಡೆದಿವೆ. 1950ರಲ್ಲಿ ಮೊದಲ ಬಾರಿಗೆ ಬ್ರಿಟನ್‌ ಟೂರ್ನಿಗೆ ಕಾಲಿಟ್ಟಿತು. ಅಲ್ಲಿಯವರೆಗೂ ತಾನು ಯುದ್ಧ ನಡೆಸುತ್ತಿದ್ದ ತಂಡಗಳ ವಿರುದ್ಧ ಆಡಲು ಬ್ರಿಟನ್‌ ನಿರಾಕರಿಸಿತ್ತು. 1948ರ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಭಾರತ 1950ರ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಪಡೆದಿತ್ತಾದರೂ, ಟೂರ್ನಿಯಲ್ಲಿ ಸ್ಪರ್ಧಿಸಲಿಲ್ಲ.

ಇದನ್ನೂ ಓದಿ: BYJU'S ಜಾಗತಿಕ ರಾಯಭಾರಿಯಾಗಿ ಲಿಯೋನೆಲ್ ಮೆಸ್ಸಿ ನೇಮಕ

ವಿಶ್ವಕಪ್‌ ಸ್ಪರ್ಧೆಗೆ ಅರ್ಹತೆ ಹೇಗೆ?
ವಿಶ್ವಕಪ್‌ನ 2ನೇ ಆವೃತ್ತಿಯಿಂದ ಅಂದರೆ 1938ರಿಂದಲೇ ಪ್ರಧಾನ ಟೂರ್ನಿಯಲ್ಲಿ ಸ್ಪರ್ಧಿಸುವ ರಾಷ್ಟ್ರಗಳ ಸಂಖ್ಯೆಯನ್ನು ಸಾಧ್ಯವಾದಷ್ಟುಕಡಿಮೆ ಇಡಬೇಕು ಎನ್ನುವ ಉದ್ದೇಶದಿಂದ ಫಿಫಾ 6 ಭೂಖಂಡದ ವಲಯಗಳಲ್ಲಿ ಅರ್ಹತಾ ಟೂರ್ನಿಗಳನ್ನು ನಡೆಸುತ್ತಾ ಬಂದಿದೆ. ಫಿಫಾದ ಎಲ್ಲಾ ಸದಸ್ಯ ತಂಡಗಳು ಅರ್ಹತಾ ಟೂರ್ನಿಯಲ್ಲಿ ಸ್ಪರ್ಧಿಸಲಿವೆ. ಆತಿಥ್ಯ ವಹಿಸುವ ರಾಷ್ಟ್ರಕ್ಕೆ ನೇರ ಪ್ರವೇಶ ಸಿಗಲಿದೆ. ಉಳಿದ ಸ್ಥಾನಗಳಿಗೆ ಯಾವ ವಲಯದಿಂದ ಎಷ್ಟುತಂಡಗಳನ್ನು ಆಯ್ಕೆ ಮಾಡಬೇಕು ಎನ್ನುವುದನ್ನು ಫಿಫಾ ನಿರ್ಧರಿಸಲಿದೆ. 1934ರಿಂದ 1978ರವರೆಗೂ(1938 ಹೊರತುಪಡಿಸಿ) ಟೂರ್ನಿಯಲ್ಲಿ ತಲಾ 16 ತಂಡಗಳು ಸ್ಪರ್ಧಿಸಿದ್ದವು. ಆ ಬಳಿಕ 1982ರಲ್ಲಿ ಮೊದಲ ಬಾರಿಗೆ 24 ತಂಡಗಳಿಗೆ ಹೆಚ್ಚಿಸಲಾಯಿತು. 1998ರಿಂದ 32 ತಂಡಗಳು ಸ್ಪರ್ಧೆಸುತ್ತಿವೆ. 2026ರಿಂದ ವಿಶ್ವಕಪ್‌ ಪ್ರಧಾನ ಸುತ್ತಿನಲ್ಲಿ ಆಡುವ ತಂಡಗಳ ಸಂಖ್ಯೆಯನ್ನು 48ಕ್ಕೆ ಏರಿಸಲಾಗುತ್ತದೆ.

79 ರಾಷ್ಟ್ರಗಳು ಸ್ಪರ್ಧಿಸಿದರೂ ಟ್ರೋಫಿ ಗೆದ್ದಿರೋದು 8 ಮಾತ್ರ!
ಈ ವರೆಗೂ ವಿಶ್ವಕಪ್‌ನ ಪ್ರಧಾನ ಟೂರ್ನಿಯಲ್ಲಿ 79 ರಾಷ್ಟ್ರಗಳು ಸೆಣಸಿ ತಮ್ಮ ಅದೃಷ್ಟಪರೀಕ್ಷೆ ನಡೆಸಿವೆ. ಆದರೆ ಚಾಂಪಿಯನ್‌ ಪಟ್ಟಕ್ಕೇರಲು ಸಾಧ್ಯವಾಗಿರುವುದು ಕೇವಲ 8 ರಾಷ್ಟ್ರಗಳಿಗೆ. ಬ್ರೆಜಿಲ್‌ ದಾಖಲೆಯ 5 ಬಾರಿ ಚಾಂಪಿಯನ್‌ ಆಗಿದೆ. ಎಲ್ಲಾ 21 ಆವೃತ್ತಿಗಳಲ್ಲಿ ಆಡಿದ ಏಕೈಕ ತಂಡ ಎನ್ನುವ ಹಿರಿಮೆಗೂ ಆ ದೇಶಕ್ಕಿದೆ. ಇನ್ನು ಜರ್ಮನಿ ಹಾಗೂ ಇಟಲಿ ತಲಾ 4, ಅರ್ಜೆಂಟೀನಾ, ಫ್ರಾನ್ಸ್‌, ಉರುಗ್ವೆ ತಲಾ 2, ಇಂಗ್ಲೆಂಡ್‌ ಹಾಗೂ ಸ್ಪೇನ್‌ ತಲಾ ಒಂದು ಬಾರಿ ಟ್ರೋಫಿಗೆ ಮುತ್ತಿಟ್ಟಿವೆ.

ಇದನ್ನೂ ಓದಿ: Indonesia ಫುಟ್ಬಾಲ್‌ ಪಂದ್ಯದ ವೇಳೆ ಕಾಲ್ತುಳಿತ: 174 ಜನರು ಬಲಿ

ಜಗತ್ತಿನ ಅತಿ ಜನಪ್ರಿಯ ಟೂರ್ನಿ ಫಿಫಾ ವಿಶ್ವಕಪ್‌!
ಜಗತ್ತಿನಲ್ಲೇ ಅತಿಹೆಚ್ಚು ಜನಪ್ರಿಯತೆ ಪಡೆದಿರುವ ಟೂರ್ನಿ ಎನ್ನುವ ಹಿರಿಮೆಗೆ ಫಿಫಾ ಫುಟ್ಬಾಲ್‌ ವಿಶ್ವಕಪ್‌ ಪಾತ್ರವಾಗಿದೆ. ಬಹುತೇಕ ಫುಟ್ಬಾಲ್‌ ಪ್ರಿಯರು ವಿಶ್ವಕಪ್‌ ಟೂರ್ನಿ ಬಂದಾಗಷ್ಟೇ ಕ್ರೀಡೆಯತ್ತ ಆಸಕ್ತಿ ತೋರುವುದು ಸಾಮಾನ್ಯ. ಇನ್ನು ಫುಟ್ಬಾಲ್‌ ವಿಶ್ವಕಪ್‌ ಜಗತ್ತಿನಲ್ಲಿ ಅತಿಹೆಚ್ಚು ವೀಕ್ಷಣೆಗೆ ಒಳಪಡುವ ಪಂದ್ಯಾವಳಿಯೂ ಹೌದು. 2006ರ ವಿಶ್ವಕಪ್‌ನ ಟೂರ್ನಿ(ಎಲ್ಲಾ ಪಂದ್ಯಗಳು ಸೇರಿ)ಯನ್ನು ಅಂದಾಜು 26.29 ಬಿಲಿಯನ್‌ ಮಂದಿ ವೀಕ್ಷಿಸಿದ್ದರು ಎಂದು ಸಮೀಕ್ಷೆಯೊಂದು ತಿಳಿಸಿದೆ. ಇನ್ನು ಅದೇ ಆವೃತ್ತಿಯ ಫೈನಲ್‌ ಪಂದ್ಯವೊಂದೇ 715.1 ಮಿಲಿಯನ್‌ ಜನರಿಂದ ಅಂದರೆ ಜಗತ್ತಿನ ಆಗಿನ ಒಟ್ಟು ಜನಸಂಖ್ಯೆಯ ಒಂಭತ್ತನೇ ಒಂದು ಭಾಗ ಮಂದಿಯಿಂದ ವೀಕ್ಷಣೆಗೆ ಒಳಪಟ್ಟಿತ್ತು ಎನ್ನುವ ಅಂಕಿ-ಅಂಶವೂ ದಾಖಲಾಗಿದೆ.

ಎಷ್ಟು ರಾಷ್ಟ್ರಗಳು ಆತಿಥ್ಯ ವಹಿಸಿವೆ?
ಫಿಫಾ ಫುಟ್ಬಾಲ್‌ ವಿಶ್ವಕಪ್‌ಗೆ ಈವರೆಗೂ 17 ರಾಷ್ಟ್ರಗಳ ಆತಿಥ್ಯ ವಹಿಸಿವೆ. ಬ್ರೆಜಿಲ್‌, ಫ್ರಾನ್ಸ್‌, ಇಟಲಿ, ಜರ್ಮನಿ ಹಾಗೂ ಮೆಕ್ಸಿಕೋ ತಲಾ 2 ಬಾರಿ ಆತಿಥ್ಯ ನೀಡಿವೆ. ಉರುಗ್ವೆ, ಸ್ವಿಜರ್‌ಲೆಂಡ್‌, ಸ್ವೀಡನ್‌, ಚಿಲಿ, ಇಂಗ್ಲೆಂಡ್‌, ಅರ್ಜೆಂಟೀನಾ, ಸ್ಪೇನ್‌, ಅಮೆರಿಕ, ಜಪಾನ್‌ ಹಾಗೂ ದ.ಕೊರಿಯಾ(ಜಂಟಿ ಆತಿಥ್ಯ), ದಕ್ಷಿಣ ಆಫ್ರಿಕಾ ಹಾಗೂ ರಷ್ಯಾ ತಲಾ ಒಂದು ಬಾರಿ ವಿಶ್ವಕಪ್‌ಗೆ ವೇದಿಕೆಯಾಗಿವೆ.

ಆತಿಥ್ಯ ಹಕ್ಕು ಸಿಗುವುದು ಹೇಗೆ?
ಆರಂಭದಲ್ಲಿ ಫಿಫಾ ಸಭೆಯಲ್ಲಿ ಆತಿಥ್ಯ ರಾಷ್ಟ್ರವನ್ನು ಆಯ್ಕೆ ಮಾಡಲಾಗುತ್ತಿತ್ತು. ಫುಟ್ಬಾಲ್‌ನಲ್ಲಿ ಬಲಿಷ್ಠ ಎನಿಸಿದ್ದ ದಕ್ಷಿಣ ಅಮೆರಿಕ ಹಾಗೂ ಯುರೋಪಿಯನ್‌ ರಾಷ್ಟ್ರಗಳ ನಡುವೆ ಪ್ರಯಾಣಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ ಎನ್ನುವ ಕಾರಣಕ್ಕೆ ಅನೇಕ ರಾಷ್ಟ್ರಗಳು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದವು. 1958ರಿಂದ ಒಮ್ಮೆ ದಕ್ಷಿಣ ಅಮೆರಿಕದ ರಾಷ್ಟ್ರಕ್ಕೆ ಮತ್ತೊಮ್ಮೆ ಯುರೋಪಿಯನ್‌ ರಾಷ್ಟ್ರಕ್ಕೆ ಆತಿಥ್ಯ ನೀಡುತ್ತಾ ಬರಲಾಯಿತು. 1998ರ ವರೆಗೂ ಈ ಪದ್ಧತಿ ಜಾರಿಯಲ್ಲಿತ್ತು. ಕಳೆದ 2 ದಶಕದಿಂದ ಆತಿಥ್ಯ ವಹಿಸಲು ಇಚ್ಛಿಸುವ ರಾಷ್ಟ್ರಗಳು ಬಿಡ್‌ನಲ್ಲಿ ಪಾಲ್ಗೊಳ್ಳಬೇಕಿದ್ದು ಹೆಚ್ಚು ಮತ ಪಡೆಯುವ ರಾಷ್ಟ್ರಕ್ಕೆ ಆತಿಥ್ಯ ಹಕ್ಕು ಸಿಗಲಿದೆ.

ವಿಶ್ವಕಪ್‌ ಟ್ರೋಫಿ ವಿಶೇಷತೆ ಗೊತ್ತಾ?
ಫುಟ್ಬಾಲ್‌ ವಿಶ್ವಕಪ್‌ ಟ್ರೋಫಿಯು 36 ಸೆ.ಮೀ. ಉದ್ದವಿದ್ದು, 18 ಕ್ಯಾರಟ್‌ ಚಿನ್ನದಿಂದ ತಯಾರಾಗಿದೆ. ಇದರ ತೂಕ 6.175 ಕೆ.ಜಿ. ಆಸಕ್ತಿದಾಯಕ ಸಂಗತಿಯೆಂದರೆ ಫೈನಲ್‌ನಲ್ಲಿ ಗೆದ್ದ ಬಳಿಕ ಸಂಭ್ರಮಾಚರಣೆಗಷ್ಟೇ ಮೂಲ ಟ್ರೋಫಿಯನ್ನು ವಿಜೇತ ತಂಡಕ್ಕೆ ನೀಡಲಾಗುತ್ತದೆ. ಆ ಬಳಿಕ ವಿಜೇತರಿಗೆ ಮೂಲ ಟ್ರೋಫಿಯನ್ನು ಹೋಲುವ, ಚಿನ್ನದ ಕೋಟಿಂಗ್‌ ಇರುವ ಮತ್ತೊಂದು ಟ್ರೋಫಿ ನೀಡಲಾಗುತ್ತದೆ.

click me!