2023ರಿಂದ 2024ಕ್ಕೆ ಕಾಲಿಡುತ್ತಿದ್ದೇವೆ. 2023 ಸತ್ಯ ಮತ್ತು ಆಂತರಿಕ ಭಾವನೆಗಳ ಪ್ರಕಾರ ನಡೆಯುವುದಕ್ಕೆ ಆದ್ಯತೆ ನೀಡಿದರೆ, 2024 ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯನ್ನು ವ್ಯಕ್ತಪಡಿಸುತ್ತದೆ. ಖಾಸಗಿ ಗುರಿಗಳನ್ನು ಶ್ರದ್ಧೆಯಿಂದ ಸಾಧಿಸಲು ಬ್ರಹ್ಮಾಂಡವು ನಮಗೆ ಹೇಳುತ್ತಿದೆ. ಹಾಗೆಯೇ, ವರ್ಷಾಂತ್ಯದ ಆಚರಣೆ ವೇಳೆ ಎಚ್ಚರದಿಂದಿರಿ.
2023 ಇನ್ನೇನು ಮುಗಿದೇ ಹೋಗುತ್ತಿದೆ. ಇಯರ್ ಎಂಡ್ ಹಲವರಲ್ಲಿ ಹಲವು ಭಾವ ಮೂಡಿಸುತ್ತಿದೆ. “ನೋಡ್ತಾ ನೋಡ್ತಾ ಒಂದು ವರ್ಷ ಕಳೆದೋಯ್ತುʼ ಎನ್ನುವ ಉದ್ಗಾರವನ್ನು ಎಲ್ಲರೂ ಮಾಡುತ್ತಿದ್ದಾರೆ. ಇಯರ್ ಎಂಡ್ ದಿನದಂದು ಪಾರ್ಟಿ ಮಾಡಿ ಹೊಸ ವರ್ಷವನ್ನು ಸ್ವಾಗತಿಸಲು ಮದ್ಯಪ್ರಿಯರು ಈಗಲೇ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಈ ಸಮಯದಲ್ಲಿ ಗರಿಷ್ಠ ಪ್ರಮಾಣದ ಮದ್ಯದ ಮಾರಾಟ ನಡೆಯುತ್ತವೆ. ಎಲ್ಲ ಸರಿ, ಆದರೆ, ಇಯರ್ ಎಂಡ್ ಎನ್ನುವುದು ಯಾವ ರೀತಿ ನಮ್ಮ ಮೇಲೆ ಪ್ರಭಾವ ಬೀರಬಲ್ಲದು ಗೊತ್ತೇ? ಸಂಖ್ಯಾಶಾಸ್ತ್ರದ ಪ್ರಕಾರ, ವರ್ಷದ ಕೊನೆಯ ದಿನದ ಸಂಖ್ಯೆಗಳು ನಮ್ಮ ಮೇಲೆ ತಮ್ಮದೇ ಆದ ಪ್ರಭಾವ ಹೊಂದಿವೆ. ಈ ಬಾರಿಯ ಸಂಖ್ಯೆಗಳಂತೂ ಭಾರೀ ವಿಶಿಷ್ಟವಾಗಿವೆ. 31-12-23 ಎನ್ನುವ ಸಂಖ್ಯೆಯಲ್ಲಿ ಕೇವಲ 1,2,3 ಮಾತ್ರ ಇವೆ ಎನ್ನುವುದು ವಿಶೇಷ. ಈ ಅನುಕ್ರಮ ಸಂಖ್ಯೆಗಳು ಏಂಜೆಲ್ ಸಂಖ್ಯೆಗಳಾಗಿದ್ದು, ಅತ್ಯುತ್ತಮ ಪ್ರಭಾವ ಹೊಂದಿವೆ. ಹೊಸತರ ಆರಂಭಕ್ಕೆ ಸಾಮೂಹಿಕ ಸಂದೇಶದ ಒತ್ತು ನೀಡುತ್ತಿವೆ ಈ ಸಂಖ್ಯೆಗಳು.
ಈ ಬಾರಿಯ ಡಿಸೆಂಬರ್ ಅಂತ್ಯದ ದಿನದ ಸಂಖ್ಯೆಗಳು ಬೇರೆ ಎಲ್ಲ ವರ್ಷಗಳಿಗಿಂತ ಭಿನ್ನ ಹಾಗೂ ವಿಶಿಷ್ಟ. ಸಂಖ್ಯಾಶಾಸ್ತ್ರದ ಪ್ರಕಾರ, 123 ಅನುಕ್ರಮ ಸಂಖ್ಯೆಗಳು ದೇವದೂತರ ಸಂಖ್ಯೆಗಳಾಗಿವೆ. ಇವು ಬ್ರಹ್ಮಾಂಡದ ಸಂದೇಶವನ್ನು ನಮಗೆ ತಲುಪಿಸುತ್ತಿರುವುದಾಗಿ ನಂಬಲಾಗುತ್ತದೆ. ಅಸಲಿಗೆ, ಇಂತಹ ಸಂಖ್ಯೆಗಳು ಯಾವುದೇ ವ್ಯಕ್ತಿಗಳ ಜೀವನದಲ್ಲಿ ಒಮ್ಮೆ ಮಾತ್ರ ಕಾಣಲು ಸಿಗುತ್ತವೆ. ಹೀಗಾಗಿ, ಹೆಚ್ಚಿನ ಗಮನ ಹರಿಸುವುದು ಸೂಕ್ತ. 2022, 2021, 2000ದ ಇಸವಿಯ ಸಂಖ್ಯೆಗಳು ಸಹ ಇಂಥದ್ದೇ ವಿಶೇಷತೆ ಹೊಂದಿದ್ದವು.
2024 ನಿಮಗೆ ಹೇಗಿರುತ್ತೆ? ಸಂಖ್ಯಾಶಾಸ್ತ್ರ ಹೀಗೆ ಹೇಳ್ತಿದೆ ನೋಡಿ
ವಿಶಿಷ್ಟ ಮಾದರಿ
ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿಯೊಂದೂ ಸಂಖ್ಯೆಗೂ ತನ್ನದೇ ಆದ ವಿಶಿಷ್ಟತೆಯಿದೆ. ಇವು ನಿಗದಿತ ಅನುಕ್ರಮದಲ್ಲಿ ಅಥವಾ ಮಾದರಿಯಲ್ಲಿ ಬಂದಾಗ ಇನ್ನೂ ಅಗಾಧವಾದ ಅರ್ಥ ಹೊಂದುತ್ತವೆ. ಒಂದೊಂದೇ ಸಂಖ್ಯೆ ವೈಶಿಷ್ಟ್ಯವನ್ನು ಪರಿಗಣಿಸುವುದು ಸಹ ಮುಖ್ಯ. ಸಂಖ್ಯಾಶಾಸ್ತ್ರದ ಮೂಲಕ ಭವಿಷ್ಯವನ್ನು ನೋಡಲಾಗುತ್ತದೆ. 1ನೇ ಸಂಖ್ಯೆ ಹೊಸತರ ಆರಂಭ ಹಾಗೂ ವಿನೂತನ ಹುಟ್ಟನ್ನು ಪ್ರತಿನಿಧಿಸುತ್ತದೆ. ಸಂಖ್ಯೆ 2 ಭಾವನೆಗಳು ಮತ್ತು ಜೀವನದ ಉತ್ತಮ ಸಮಯವನ್ನು ಆನಂದಿಸುವುದಕ್ಕೆ ಸಂಬಂಧಿಸಿವೆ. ಸಂಖ್ಯೆ 3, ಕಲಿಯುವಿಕೆ ಮತ್ತು ಖಾಸಗಿ ಬೆಳವಣಿಗೆಗೆ ಆದ್ಯತೆ ನೀಡುವುದಕ್ಕೆ ಸಂಬಂಧಿಸಿದೆ. ಈ ಮೂರೂ ಸೇರಿದಾಗ ಎಂತಹ ಅದ್ಭುತ ಮಾದರಿಯಾಗಬಲ್ಲದು ಎನ್ನುವುದಕ್ಕೆ ಇದು ಸಾಕ್ಷಿ.
ಹೊಸ ಪಯಣ
ಈ ಮೂರೂ ಸಂಖ್ಯೆಯನ್ನು ಅನುಕ್ರಮವಾಗಿ ಜೋಡಿಸಿದಾಗ, “ಹೊಸ ಪಯಣ ಆರಂಭಿಸಿ, ಪ್ರಕ್ರಿಯೆಯನ್ನು ಆನಂದಿಸಿ, ಪ್ರತಿಫಲಕ್ಕಾಗಿ ಮುನ್ನಡೆಯಿರಿ, ಕಾರ್ಯಗತರಾಗಿʼ ಎನ್ನುವ ಸಂದೇಶವನ್ನು ಅರ್ಥೈಸಲಾಗಿದೆ. ಇದೇ ನಮಗೆ ಹೊಸ ವರ್ಷಕ್ಕೆ ಬ್ರಹ್ಮಾಂಡ ನೀಡುತ್ತಿರುವ ಸಂದೇಶವಾಗಿದೆ.
ಇನ್ನೊಂದು ವಿಧಾನವೆಂದರೆ, ಈ ಮೂರೂ ಸಿಂಗಲ್ ಸಂಖ್ಯೆಗಳನ್ನು ಸೇರಿಸಿದಾಗ 6 ಬರುತ್ತದೆ. ಈ ಸಂಖ್ಯೆಯು ಕಾಳಜಿ, ಸಮತೋಲನ, ಪ್ರೀತಿಗೆ ಸಂಬಂಧಿಸಿದೆ. ಹೀಗಾಗಿ, ಡಿಸೆಂಬರ್ ಅಂತ್ಯದ ದಿನಾಂಕದ ಸಂಖ್ಯೆಗಳು ಧನಾತ್ಮಕವಾಗಿದ್ದು, ಪ್ರಭಾವಿ ಪಾತ್ರ ವಹಿಸುತ್ತಿವೆ.
ಭಾವನಾತ್ಮಕವಾಗಿ ಇನ್ನೊಬ್ರೊಟ್ಟಿಗೆ ಕನೆಕ್ಟ್ ಆಗ್ತಿಲ್ವಾ? ಈ ನಂಬರ್ ನಿಮ್ಮಿಂದ ಮಿಸ್ ಆಗಿರುತ್ತೆ!
ಡಬಲ್ ಸಂದೇಶ
ತಜ್ಞರ ಪ್ರಕಾರ, 123 ಅನುಕ್ರಮ ಸಂಖ್ಯೆಗಳು ಎರಡು ರೀತಿಯ ಸಂದೇಶಗಳನ್ನು ಒಳಗೊಂಡಿವೆ. ಪ್ರಗತಿಗಾಗಿ ಸಾಮೂಹಿಕ ಅವಕಾಶದ ಸಾಧ್ಯತೆಗಳನ್ನು ಬಿಂಬಿಸುತ್ತಿದೆ. ಭವಿಷ್ಯದ ಬಗ್ಗೆ ಹೊಳಹು ನೀಡುತ್ತಿದ್ದು, ಏಕತೆ ಮತ್ತು ಸೌಲಭ್ಯಗಳನ್ನು ಹಂಚಿಕೊಳ್ಳುವುದರ ಬಗ್ಗೆ ತಿಳಿಹೇಳುತ್ತಿದೆ ಎನ್ನಲಾಗಿದೆ. ಈ ಸಂಖ್ಯೆಯೊಳಗಿನ ಸಂಖ್ಯೆಗಳು ಸಹ ಅತ್ಯುತ್ತಮವಾದದ್ದೇ ಆಗಿರುವುದು ವಿಶೇಷ. ಉದಾಹರಣೆಗೆ, 12ನೇ ಸಂಖ್ಯೆ ಸಂಖ್ಯಾಶಾಸ್ತ್ರದ ಪ್ರಕಾರ, ವ್ಯಕ್ತಿಯ ನಿಜವಾದ ಬಯಕೆಯನ್ನು ತೋರುತ್ತದೆ. 23ನೇ ಸಂಖ್ಯೆ ದೃಢತೆ ಮತ್ತು ಸ್ಥಿರವಾದ ಶಕ್ತಿಯನ್ನು ಬಿಂಬಿಸುತ್ತದೆ. 31ನೇ ಸಂಖ್ಯೆ ಯೋಜನೆಯ ಪ್ರಕಾರ ನಡೆಯದ ವಿದ್ಯಮಾನವೊಂದರಿಂದ ಉಂಟಾಗುವ ಅವಘಡವನ್ನು ಸೂಚಿಸುತ್ತದೆ. ಹೀಗಾಗಿ, ಹೊಸ ವರ್ಷಾಚರಣೆಯ ವೇಳೆ ಹೆಚ್ಚಿನ ಎಚ್ಚರಿಕೆಯನ್ನೂ ತೆಗೆದುಕೊಳ್ಳಬೇಕಾಗಿದೆ.