ಮಹಿಳೆಯರು ಮೂಗುತಿಯನ್ನು ಎಡದಲ್ಲಿ ಧರಿಸಬೇಕೋ, ಬಲಮೂಗಿನಲ್ಲೋ?

By Suvarna NewsFirst Published Sep 6, 2022, 5:05 PM IST
Highlights

ಮೂಗುತಿ ಧರಿಸುವ ಸಂಪ್ರದಾಯವು ಭಾರತೀಯ ಸಂಸ್ಕೃತಿಯಲ್ಲಿ ಇರುವ ಕೆಲವು ತತ್ವಗಳನ್ನು ಆಧರಿಸಿದೆ. ಅಂದ ಹಾಗೆ ಹೆಣ್ಣುಮಕ್ಕಳು ಮೂಗಿನ ಈ ಭಾಗದಲ್ಲಿ ಚುಚ್ಚಿಸಿಕೊಳ್ಳಬೇಕು. ಯಾವ ಭಾಗ, ಕಾರಣವೇನು ನೋಡೋಣ..

ಮೂಗಿಗೆ ನತ್ತಿದ್ದರೆ ಮುಖಕ್ಕೆ ಗತ್ತೊಂದು ಬರುತ್ತದೆ. ಮೂಗುತಿ ಎಂದರೆ ಸಾಂಪ್ರದಾಯಿಕ ಆಭರಣವೆನಿಸಿಕೊಂಡ ಕಾಲವಿತ್ತು. ಈಗ ಅದು ಫ್ಯಾಶನ್ ಕೂಡಾ ಆಗಿದೆ. ಸಾಂಪ್ರದಾಯಿಕ ಆಭರಣವಾದರೂ ಇದು ಅತ್ಯಂತ ಸೆಡಕ್ಟಿವ್ ಅಲಂಕರಣವೆಂದು ಪರಿಗಣಿಸಲಾಗಿದೆ. ಮೂಗಿನ ನತ್ತು ಮಹಿಳೆಯನ್ನು ಆಕರ್ಷಕ, ಮಾದಕ ಮತ್ತು ಸುಂದರವಾಗಿಸುತ್ತದೆ. ಈ ಕಾರಣದಿಂದ ಆಧುನಿಕ ಮಹಿಳೆ ಕೂಡಾ ಮೂಗು ಚುಚ್ಚಿಸಿಕೊಳ್ಳಲು ಒಲವು ತೋರುತ್ತಾಳೆ. ಮೂಗುತಿ ಸುಂದರಿಯಾಗಲು ಬಯಸುತ್ತಾಳೆ. 
ಮೂಗು ಚುಚ್ಚುವುದು(Nose piercing) ಭಾರತೀಯ ಮಹಿಳೆ ಅಳವಡಿಸಿಕೊಂಡ ಮಹತ್ವದ ಸಾಂಪ್ರದಾಯಿಕ ಆಚರಣೆಯಾಗಿದೆ. ಕೆಲವೆಡೆ ಮದುವೆಯಾದ ಮಹಿಳೆಯು ತಾಳಿ, ಕಾಲುಂಗುರ, ಬಳೆ ಧರಿಸುವಂತೆ ಮೂಗುತಿಯನ್ನೂ ಧರಿಸಬೇಕೆಂಬ ನಿಯಮವಿದೆ. ಮತ್ತೆ ಕೆಲವೆಡೆ ಕಾಲೇಜು ಹುಡುಗಿಯರೇ ಮೂಗು ಚುಚ್ಚಿಸಿಕೊಳ್ಳುತ್ತಾರೆ. ಈಗಂತೂ ಪ್ರೆಸಿಂಗ್ಸ್ ಕೂಡಾ ಬಂದಿದ್ದು ಮೂಗು ಚುಚ್ಚಿಸುವ ಅಗತ್ಯವೇ ಇಲ್ಲ. ಹಾಗಿದ್ದೂ ಮೂಗು ಚುಚ್ಚಿಸೋದೇ ಒಳ್ಳೆಯದು. ಕಾರಣ ತಿಳಿಯೋಣ.

ಭಾರತೀಯ ಸಂಸ್ಕೃತಿಯಲ್ಲಿ ಮೂಗುತಿ ಧರಿಸುವ ಪದ್ಧತಿಯು 16ನೇ ಶತಮಾನದಲ್ಲಿ ಪ್ರಾರಂಭವಾಯಿತು. ಇದು ಮಧ್ಯಪ್ರಾಚ್ಯ ದೇಶಗಳಲ್ಲಿ ಹುಟ್ಟಿಕೊಂಡಿತು ಮತ್ತು ಮುಖ್ಯವಾಗಿ ಮೊಘಲ್ ಚಕ್ರವರ್ತಿಗಳ ಆಳ್ವಿಕೆಯಲ್ಲಿ ಭಾರತದಲ್ಲಿ ಜನಪ್ರಿಯವಾಯಿತು. 

ಇಷ್ಟಕ್ಕೂ ಮೂಗು ಚುಚ್ಚಿಸಿಕೊಳ್ಳುವ ಧಾರ್ಮಿಕ, ಆಯುರ್ವೇದ ಮಹತ್ವವೇನು, ಯಾವ ಭಾಗದ ಮೂಗನ್ನು ಚುಚ್ಚಿಸಬೇಕು, ಏಕಾಗಿ ಚುಚ್ಚಿಸಬೇಕು ಎಂಬ ವಿವರಗಳನ್ನು ನೋಡೋಣ. 

ಕೇರಳದ ಸ್ಪೆಷಲ್ ಹಬ್ಬದೂಟ 'ಓಣಂ ಸದ್ಯ'; ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸಿಗುತ್ತೆ ?

ಎಡ ಭಾಗದಲ್ಲಿ ಚುಚ್ಚಬೇಕು..
ಭಾರತದಲ್ಲಿ ಮೂಗಿನ ಎಡಭಾಗವನ್ನು ಸಾಮಾನ್ಯವಾಗಿ ಮೂಗಿನ ಉಂಗುರಗಳಿಗೆ ಸೂಕ್ತವಾದ ಸ್ಥಾನವೆಂದು ಪರಿಗಣಿಸಲಾಗುತ್ತದೆ. ಪ್ರಾಚೀನ ಆಯುರ್ವೇದ ಪುಸ್ತಕವಾದ ಸುಶ್ರುತ ಸಂಹಿತಾದಲ್ಲಿ ಹೇಳಿರುವ ಪ್ರಕಾರ ಮೂಗು ಚುಚ್ಚುವ ಮಚ್ಚೆಯು ಸ್ತ್ರೀ ಸಂತಾನೋತ್ಪತ್ತಿ ಅಂಗಗಳಿಗೆ ಸಂಬಂಧಿಸಿದೆ. ಎಡ ಮೂಗಿನ ಹೊಳ್ಳೆಯಿಂದ ಚಲಿಸುವ ನರಗಳು ಸ್ತ್ರೀ ಸಂತಾನೋತ್ಪತ್ತಿ ಅಂಗಗಳೊಂದಿಗೆ ಸಂಬಂಧ ಹೊಂದಿವೆ. ಹೀಗಾಗಿ ಮಹಿಳೆಯು ಎಡಭಾಗದಲ್ಲಿ ಮೂಗು ಚುಚ್ಚಿಸಿಕೊಂಡರೆ ಹೆರಿಗೆಯ ಸಮಯದಲ್ಲಿ ಕಡಿಮೆ ನೋವು ಅನುಭವಿಸುತ್ತಾರೆ ಮತ್ತು ಅವರಿಗೆ ಕಡಿಮೆ ಮುಟ್ಟಿನ ನೋವು ಇರುತ್ತದೆ ಎಂದು ಸಾಮಾನ್ಯವಾಗಿ ನಂಬಲಾಗಿದೆ. ಮೂಗುತಿ ಧರಿಸುವುದರಿಂದ ಮಗುವಿನ ಜನನ ಪ್ರಕ್ರಿಯೆ ಸುಲಭವಾಗುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಅಲ್ಲದೆ, ಮಹಿಳೆಯರಲ್ಲಿ, ಇದು ಸಂತಾನೋತ್ಪತ್ತಿ ಅಂಗಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಬಂಜೆತನವನ್ನು ಕಡಿಮೆ ಮಾಡುತ್ತದೆ. 

ನತ್ತಿನ ಧಾರ್ಮಿಕ ಮಹತ್ವ
ಭಾರತದಲ್ಲಿ ಮೂಗು ಚುಚ್ಚುವಿಕೆಗೆ ಹೆಚ್ಚಿನ ಧಾರ್ಮಿಕ ಮಹತ್ವವಿದೆ. ಹಿಂದೂ ಧರ್ಮದ ಪ್ರಕಾರ, ಮೂಗು ಚುಚ್ಚುವುದು ಸುಖ ವೈವಾಹಿಕ ಜೀವನಕ್ಕೆ ಕಾರಣವಾಗುವ ಹಿಂದೂ ದೇವತೆಯಾದ ಪಾರ್ವತಿಯನ್ನು ಗೌರವಿಸುವ ಮಾರ್ಗವೆಂದು ಪರಿಗಣಿಸಲಾಗಿದೆ.

ಹಣಕಾಸಿನ ಶಕ್ತಿ ಮತ್ತು ಕುಟುಂಬದ ಸ್ಥಿತಿಯ ಸಂಕೇತ
ಭಾರತದ ಕೆಲವು ಭಾಗಗಳಲ್ಲಿ, ಮೂಗಿನ ಉಂಗುರದ ಗಾತ್ರವು ಆರ್ಥಿಕ ಶಕ್ತಿ ಮತ್ತು ಕುಟುಂಬದ ಸ್ಥಿತಿಯ ಸಂಕೇತವಾಗಿ ಕಾಣಿಸಿಕೊಳ್ಳುತ್ತದೆ. ಕೆಲವು ರಾಜ್ಯಗಳ ಸಂಪ್ರದಾಯಗಳ ಪ್ರಕಾರ, ಮನೆಯ ಮಹಿಳೆ ಧರಿಸಿರುವ ಮೂಗಿನ ಉಂಗುರದ ಗಾತ್ರವು ಸಮಾಜದಲ್ಲಿ ಕುಟುಂಬದ ಆರ್ಥಿಕ ಶಕ್ತಿ ಮತ್ತು ಸ್ಥಾನಮಾನವನ್ನು ಸೂಚಿಸುತ್ತದೆ. ಕುಟುಂಬದ ಆರ್ಥಿಕ ಸ್ಥಿತಿಯ ಹೆಚ್ಚಳದೊಂದಿಗೆ, ಮೂಗಿನ ಉಂಗುರದ ಗಾತ್ರವೂ ಹೆಚ್ಚುತ್ತಲೇ ಇರುತ್ತದೆ.

ಶನಿ, ಮಂಗಳ ದೋಷ ನಿವಾರಿಸಲು ಜೇನುತುಪ್ಪವನ್ನು ಹೀಗೆ ಬಳಸಿ

ಕಾರಣಗಳೇನೇ ಇರಲಿ, ನತ್ತು ಹೆಣ್ಣು ಮಕ್ಕಳ ಸ್ವತ್ತು.. ಸೌಂದರ್ಯ ಹೆಚ್ಚಿಸುವುದೆಲ್ಲವೂ ಹೆಣ್ಣಿಗೆ ಆಪ್ತವೇ.. ಅಂತೆಯೇ ಮೂಗುತಿ ಕೂಡಾ.. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!