2022ರ ಮೊದಲ ಚಂದ್ರಗ್ರಹಣವು ಮೇ 16ರಂದು ಸಂಭವಿಸುತ್ತಿದೆ. ಬಲು ಅಪರೂಪದ ಈ ಖಗೋಳ ವಿದ್ಯಮಾನವನ್ನು ಹೇಗೆ, ಎಲ್ಲಿ ವೀಕ್ಷಿಸಬಹುದು ಎಂಬ ವಿವರಗಳು ಇಲ್ಲಿವೆ.
ಮೇ 15-16 ರಂದು ನಡೆಯುವ ಸಂಪೂರ್ಣ ಚಂದ್ರಗ್ರಹಣ(Lunar Eclipse)ವು ಚಂದ್ರನಿಗೆ ಕೆಂಪು ಬಣ್ಣವನ್ನು ನೀಡುತ್ತದೆ, ಹಾಗಾಗಿಯೇ ಇದನ್ನು ಬ್ಲಡ್ ಮೂನ್(Blood Moon) ಎಂದು ಕರೆಯಲಾಗುತ್ತದೆ. ಚಂದ್ರ ಗ್ರಹಣಗಳು ವೀಕ್ಷಿಸಲು ಅತ್ಯಂತ ಸುಂದರವಾದ ಆಕಾಶ ಘಟನೆಗಳಲ್ಲಿ ಒಂದಾಗಿವೆ. 2022ರ ಮೊದಲ ಸೂರ್ಯಗ್ರಹಣದ ನಂತರ, ಮುಂಬರುವ ಚಂದ್ರಗ್ರಹಣವು ಆಕಾಶವೀಕ್ಷಕ ಪ್ರಿಯರ ಪಾಲಿಗೆ ರಸದೌತಣವಾಗಿದೆ.
ನೀವೂ ಖಗೋಳಕ್ರಿಯೆಗಳ ಬಗ್ಗೆ ಕುತೂಹಲಿಗಳಾಗಿದ್ದರೆ 2022ರ ಮೊದಲ ಚಂದ್ರಗ್ರಹಣವನ್ನು ಎಲ್ಲಿ ಮತ್ತು ಹೇಗೆ ವೀಕ್ಷಿಸಬಹುದು ತಿಳಿಸುತ್ತೇವೆ.
ಚಂದ್ರಗ್ರಹಣ 2022: ಇದು ಏಕೆ ನಡೆಯುತ್ತದೆ?
ಚಂದ್ರನು ಭೂಮಿಯ ನೆರಳಿನಲ್ಲಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ, ಅಂದರೆ ಭೂಮಿ ಸೂರ್ಯ ಮತ್ತು ಚಂದ್ರನ ನಡುವೆ ಬರುತ್ತದೆ. ಆಗ ಸೂರ್ಯನ ಪ್ರಕಾಶಮಾನ ಕಿರಣ ಭೂಮಿಯ ಮೇಲೆ ಬಿದ್ದು, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಚಂದ್ರನು ಭೂಮಿಯ ನೆರಳಿನ ಕಪ್ಪು ಭಾಗವನ್ನು ಪ್ರವೇಶಿಸಿದಾಗ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸುತ್ತದೆ. ಚಂದ್ರಗ್ರಹಣವನ್ನು ಬರಿಗಣ್ಣಿನಲ್ಲೇ ವೀಕ್ಷಿಸಬಹುದಾಗಿದೆ, ಇದರಿಂದ ಯಾವುದೇ ಅಪಾಯವಿಲ್ಲ.
ಮೇ 15 ಮತ್ತು 16ರಂದು ನಡೆಯಲಿರುವ ಚಂದ್ರಗ್ರಹಣ 2022 ಸಂಪೂರ್ಣ ಚಂದ್ರಗ್ರಹಣವಾಗಿರುತ್ತದೆ, ಆದಾಗ್ಯೂ ಕೆಲವು ಸ್ಥಳಗಳು ಸೂರ್ಯನು ದಿಗಂತದ ಮೇಲಿರುವಾಗ ವೀಕ್ಷಣಾ ಹಂತಗಳನ್ನು ಕಳೆದುಕೊಳ್ಳುತ್ತವೆ. ಚಂದ್ರಗ್ರಹಣದ ಗೋಚರತೆಯು ಸಮಯ ವಲಯವನ್ನು ಅವಲಂಬಿಸಿರುತ್ತದೆ. ಈ ಬಾರಿ ಭಾರತದಲ್ಲಿ ಈ ಚಂದ್ರಗ್ರಹಣ ಗೋಚರವಾಗುವುದಿಲ್ಲ. ಹಾಗಂಥ ಭಾರತೀಯ ಖಗೋಳಪ್ರಿಯರು ಚಂದ್ರಗ್ರಹಣ ವೀಕ್ಷಣೆ ತಪ್ಪಿ ಹೋಯ್ತೆಂದು ಕೊರಗುವ ಅಗತ್ಯವಿಲ್ಲ. ತಂತ್ರಜ್ಞಾನ ಮುಂದಿರುವ ಈ ಕಾಲದಲ್ಲಿ ಎಲ್ಲವೂ ಸಾಧ್ಯವಾಗುತ್ತದೆ.
ಚಂದ್ರಗ್ರಹಣ 2022: ನೀವು ತಿಳಿಯಬೇಕಾದ ಸಂಪೂರ್ಣ ವಿವರ ಇಲ್ಲಿದೆ..
ಹೇಗೆ ವೀಕ್ಷಿಸುವುದು?(How to watch)
ಹೌದು, ಈ ಬಾರಿ ಚಂದ್ರಗ್ರಹಣವು ಭಾರತದಲ್ಲಿ ಗೋಚರವಾಗುತ್ತಿಲ್ಲವಾದ ಕಾರಣ, ಚಂದ್ರಗ್ರಹಣ ನೋಡಬಯಸುವವರು ನಾಸಾವು ಈ ವಿದ್ಯಮಾನವನ್ನು ಆನ್‌ಲೈನ್‌ನಲ್ಲಿ ಲೈವ್ ಸ್ಟ್ರೀಮ್ ಮಾಡುವುದನ್ನು ವೀಕ್ಷಿಸಬಹುದು.
ಚಂದ್ರಗ್ರಹಣ 2022: ಗೋಚರತೆಯ ಸಮಯ ಯಾವುದು?
ಈ ಬಾರಿ ಗ್ರಹಣದ ಸಂಪೂರ್ಣ ವಿದ್ಯಮಾನವು ಸುಮಾರು 3 ಗಂಟೆ 15 ನಿಮಿಷಗಳ ಕಾಲ ನಡೆಯಲಿದೆ. ಭಾರತೀಯ ಸಮಯ ತೆಗೆದುಕೊಂಡರೆ ಮೇ 15ರ ತಡರಾತ್ರಿ 9.40ಕ್ಕೆ ಗ್ರಹಣ ಆರಂಭವಾಗಿ ಮೇ 16ರಂದು ಬೆಳಗ್ಗೆ 12.20ರವರೆಗೆ ಗ್ರಹಣ ಇರಲಿದೆ. ರಾತ್ರಿ 10.23ರ ಹೊತ್ತಿಗೆ ಗ್ರಹಣ ತನ್ನ ಗರಿಷ್ಠ ಮಟ್ಟ ತಲುಪಲಿದೆ.
ಎಲ್ಲಿ ಗೋಚರಿಸುತ್ತದೆ?
ಇದು ಇಡೀ ದಕ್ಷಿಣ ಅಮೆರಿಕಾ(South America) ಮತ್ತು ಉತ್ತರ ಅಮೆರಿಕಾ(North America)ದ ಪೂರ್ವ ಭಾಗಗಳಲ್ಲಿ ಗೋಚರಿಸುತ್ತದೆ. ಬಹುಪಾಲು ಅಮೆರಿಕ ಮತ್ತು ಅಂಟಾರ್ಕ್ಟಿಕಾದಿಂದ ಗೋಚರಿಸುತ್ತದೆ, ಜೊತೆಗೆ ಯುರೋಪ್ ಮತ್ತು ಆಫ್ರಿಕಾದ ಪಶ್ಚಿಮ ಭಾಗಗಳು ಮತ್ತು ಪೆಸಿಫಿಕ್‌ನ ಪೂರ್ವ ಭಾಗದಿಂದ ಗೋಚರಿಸುತ್ತದೆ.
ನ್ಯೂಜಿಲೆಂಡ್, ಮಧ್ಯಪ್ರಾಚ್ಯ ಮತ್ತು ಪೂರ್ವ ಯುರೋಪಿನ ಆಕಾಶವೀಕ್ಷಕರು ಸಹ ಭಾಗಶಃ ಗ್ರಹಣವನ್ನು ಅನುಭವಿಸುತ್ತಾರೆ, ಅಂದರೆ, ಈ ಸಮಯದಲ್ಲಿ ಭೂಮಿಯ ನೆರಳಿನ ಅಂಚು ಮಾತ್ರ ಚಂದ್ರನ ಮೇಲೆ ಬೀಳುವುದು ಇವರಿಗೆ ಗೋಚರವಾಗುತ್ತದೆ.
ವರ್ಷದ ಮೊದಲ ಚಂದ್ರಗ್ರಹಣ; ಈ ರಾಶಿಗಳು ಪಡೆಯಲಿವೆ ಭಾರೀ ಲಾಭ!
ಬ್ಲಡ್ ಮೂನ್: ಚಂದ್ರ ಏಕೆ ಕೆಂಪು?
ರಾಷ್ಟ್ರೀಯ ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ಆಡಳಿತದ ಪ್ರಕಾರ, ಚಂದ್ರನ ಮೇಲ್ಮೈಯನ್ನು ತಲುಪುವ ಏಕೈಕ ಬೆಳಕು ಭೂಮಿಯ ವಾತಾವರಣದ ಅಂಚುಗಳಿಂದ. ಭೂಮಿಯ ವಾತಾವರಣದಿಂದ ಗಾಳಿಯ ಅಣುಗಳು ಹೆಚ್ಚಿನ ನೀಲಿ ಬೆಳಕನ್ನು ಚದುರಿಸುತ್ತವೆ. ಉಳಿದ ಬೆಳಕು ಚಂದ್ರನ ಮೇಲ್ಮೈಯಲ್ಲಿ ಕೆಂಪು ಹೊಳಪಿನಿಂದ ಪ್ರತಿಫಲಿಸುತ್ತದೆ, ಅದು ರಾತ್ರಿಯ ಆಕಾಶದಲ್ಲಿ ಚಂದ್ರನನ್ನು ಕೆಂಪು ಬಣ್ಣದಲ್ಲಿ ಕಾಣುವಂತೆ ಮಾಡುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.