ಇಲ್ಲಿ ಮಗಳೇ ದೇವತೆಯಾಗುತ್ತಾಳೆ: ನೇಪಾಳದ ಕುಮಾರಿ ಪೂಜೆಯ ಹಿಂದಿದೆ ರೋಚಕ ಪರಂಪರೆ!

Published : Sep 24, 2026, 04:23 PM IST
Kumari Puja tradition

ಸಾರಾಂಶ

ನೇಪಾಳದಲ್ಲಿ ಋತುಮತಿಯಾಗದ ಚಿಕ್ಕ ಬಾಲಕಿಯರನ್ನು 'ಕುಮಾರಿ' ಅಥವಾ ಜೀವಂತ ದೇವತೆಯಾಗಿ ಪೂಜಿಸುವ ವಿಶಿಷ್ಟ ಸಂಪ್ರದಾಯವಿದೆ. ತಲೇಜು ಭವಾನಿ ದೇವಿಯ ಅವತಾರವೆಂದು ನಂಬಲಾಗುವ ಈ ಬಾಲಕಿಯರನ್ನು ಕಠಿಣ ನಿಯಮಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಶತಮಾನಗಳ ಇತಿಹಾಸವಿರುವ ಈ ಆಚರಣೆ ಹಿನ್ನೆಲೆ, ಮಹತ್ವ ತಿಳಿಯಿರಿ

ಭಾರತೀಯರು ಅದರಲ್ಲೂ ಹಿಂದೂ ಸಂಪ್ರಾದಾಯಗಳಲ್ಲಿ ಮಹಿಳೆಗೆ ಪುರುಷರಿಗಿಂತ ಹೆಚ್ಚು ಮಹತ್ವ ಮತ್ತು ಪೂಜನೀಯ ಸ್ಥಾನವಿದೆ. ಹೀಗಾಗಿ ಹೆಣ್ಣಮಗಳು ಲಕ್ಷ್ಮೀ ದೇವತೆಗೆ ಸಮಾನವಾಗಿ ಕಾಣಲಾುತ್ತೆ, ಪೂಜಿಸಲಾಗುತ್ತೆ. ಹೆಣ್ಣುಮಗಳನ್ನ ದೇವತೆಯಂತೆ ಪೂಜಿಸುವ ಸಂಪ್ರದಾಯ ಭಾರತಕಷ್ಟೇ ಸಿಮೀತವಾಗಿಲ್ಲ. ನೆರೆಯ ದೇಶ ನೇಪಾಳದಲ್ಲಿ ಹೆಣ್ಣನ್ನು ಪೂಜಿಸುವ ವಿಶಿಷ್ಟ ಆಚರಣೆಯೇ ಇದೆ.

ನೇಪಾಳದ ಪವಿತ್ರ ಕುಮಾರಿ ಪೂಜೆ

ತಲೇಜು ಭವಾನಿ ದೇವಸ್ಥಾನದ ಮುಂಭಾಗದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಪವಿತ್ರ ಕುಮಾರಿ ಪೂಜೆ ನಡೆಯುತ್ತಿದೆ. ಇಂದು ಪುಟಾಣಿ ಬಾಲಕಿಯರು ದೇವತೆಯಂತೆ ಸಿಂಗರಿಸಿಕೊಂಡು ದೇವಸ್ಥಾನದ ಬಂದ ಬಂದ ಪ್ರತಿ ಹೆಣ್ಣುಮಗುವು ಸಾಕ್ಷ್ಯತ್ ಕುಮಾರಿ ದೇವತೆಯಂತೆ ಕಾಣಿಸಿದರು. ನೇಪಾಳದ ಆರಾಧ್ಯ ಜೀವಂತ ದೇವತೆ ‘ಕುಮಾರಿ’ಯಂತೆ ಕಾಣುವ ನೂರಾರು ಬಾಲಕಿಯರು(ಪ್ರೌಡಾವಸ್ಥಗೆ ಮುನ್ನ) ಕಠ್ಮಂಡು ದರ್ಬಾರ್ ಸ್ಕ್ವೇರ್‌ನಲ್ಲಿ ಸೇರಿದ್ದರು. ಈ ಐತಿಹಾಸಿಕ ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಇಂದು ಬಣ್ಣ, ಭಕ್ತಿ ಮತ್ತು ಶತಮಾನಗಳಷ್ಟು ಹಳೆಯ ಆಚರಣೆಯ ವೇದಿಕೆಯಾಗಿ ಮಾರ್ಪಟ್ಟಿತು.

ನೇಪಾಳದ ಮಳೆ ನಡುವೆಯೂ ಕನ್ಯಾಸ್ ಅದ್ದೂರಿ ಆಚರಣೆ

ಮಳೆಯ ನಡುವೆಯೇ ಸ್ಥಳೀಯವಾಗಿ ‘ಕನ್ಯಾಸ್’ ಎಂದು ಕರೆಯಲ್ಪಡುವ ಪುಟಾಣಿ ಬಾಲಕಿಯರು ದೇವತೆಗಳಾಗಿ ವಾರ್ಷಿಕ ಕುಮಾರಿ ಪೂಜೆಯಲ್ಲಿ ಭಾಗವಹಿಸಿದರು. ಈ ಆಚರಣೆಯು ಅದೃಷ್ಟವನ್ನು ತಂದುಕೊಡುತ್ತದೆ, ಕೆಟ್ಟ ಶಕುನಗಳನ್ನು ದೂರ ಮಾಡುತ್ತದೆ ಹಾಗೂ ರೋಗಗಳಿಂದ ರಕ್ಷಿಸುತ್ತದೆ ಎಂಬ ನಂಬಿಕೆ ನೇಪಾಳಿಗರದ್ದು.

ತಲೇಜು ಭವಾನಿ ದೇವಸ್ಥಾನದ ಮುಂಭಾಗದಲ್ಲಿ ಈ ಧಾರ್ಮಿಕ ಆಚರಣೆ ನಡೆಯಿತು.. ದಶೈನ್ ಹಬ್ಬದ ಸಂದರ್ಭದಲ್ಲಿ ವರ್ಷದಲ್ಲಿ ಒಂದು ದಿನ ಮಾತ್ರ ಈ ದೇವಸ್ಥಾನದ ಬಾಗಿಲು ಭಕ್ತರಿಗಾಗಿ ತೆರೆಯುತ್ತದೆ. ತಲೇಜು ಭವಾನಿಯನ್ನು ದೈವಿಕ ಸ್ತ್ರೀ ಶಕ್ತಿಯ ಭೂಲೋಕ ರೂಪವೆಂದು ನಂಬಲಾಗಿದೆ. ನೇಪಾಳದ ‘ಕುಮಾರಿ’ ಅಥವಾ ಜೀವಂತ ದೇವತೆಯ ಆರಾಧನಾ ಪರಂಪರೆಯೊಂದಿಗೆ ಈ ದೇವತೆ ನಿಕಟ ಸಂಬಂಧ ಹೊಂದಿದೆ.

ದೇವಿಯ ಮುಖ ಸಾರ್ವಜನಿಕರಿಗೆ ತೋರಿಸುವಂತಿಲ್ಲ

ಆಚರಣೆಯ ವೇಳೆ ಬಾಲಕಿಯರನ್ನು ತಲೇಜು ಭವಾನಿ ದೇವಸ್ಥಾನದ ಸುತ್ತಲೂ ಕರೆದೊಯ್ಯಲಾಗುತ್ತದೆ. ವಿಶೇಷವೆಂದರೆ ಈ ದೇವಸ್ಥಾನದ ದೇವಿಯ ಮುಖವನ್ನು ಸಾರ್ವಜನಿಕರಿಗೆ ತೋರಿಸಲಾಗುವುದಿಲ್ಲ. ಸಂಪ್ರದಾಯದ ಪ್ರಕಾರ ಶತಮಾನಗಳಿಂದಲೂ ಈ ರೀತಿ ಮುಂದುವರಿದಿದೆ. ಈ ಪೂಜೆಯಲ್ಲಿ ಹಿಂದೂಗಳಷ್ಟೆ ಅಲ್ಲದೆ ಬೌದ್ಧ ಧರ್ಮ ಮತ್ತು ತಾಂತ್ರಿಕ ಆಚರಣೆಗಳ ಕೂಡ ನಡೆಯುತ್ತವೆ. ವಾರ್ಷಿಕ ಆಚರಣೆಯಲ್ಲಿ ಭಾಗವಹಿಸುವ ಬಾಲಕಿಯರಿಗೆ ಆರೋಗ್ಯ ಸಮಸ್ಯೆಗಳು ಎದುರಾಗುವುದಿಲ್ಲ ಎಂಬ ನಂಬಿಕೆಯೂ ಇದೆ.

ಕುಮಾರಿ ಪೂಜಾ ನೇಪಾಳಿಗರ ವಿಶಿಷ್ಟ ಆಚರಣೆ

ಕುಮಾರಿ ಪರಂಪರೆ ನೇಪಾಳದ ವಿಶಿಷ್ಟ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ. ಕಟ್ಟುನಿಟ್ಟಿನ ನಿಯಮಗಳ ಮೂಲಕ ನೇವಾರ್ ಸಮುದಾಯದ ಒಬ್ಬ ಬಾಲಕಿಯನ್ನು ‘ಕುಮಾರಿ’ಯಾಗಿ ಆಯ್ಕೆ ಮಾಡಲಾಗುತ್ತದೆ. ಈ ಬಾಲಕಿಯನ್ನು ಮಲ್ಲ ಮತ್ತು ಶಾಹ್ ರಾಜವಂಶಗಳ ಆರಾಧ್ಯ ದೇವತೆಯಾಗಿದ್ದ ತಲೇಜು ದೇವಿಯ ಅವತಾರವೆಂದು ನಂಬುತ್ತಾರೆ.

ಕುಮಾರಿಗಾಗಿ ನೇವಾರ್ ಸಮುದಾಯದ ಶಾಕ್ಯ ಜಾತಿಯ ಬಾಲಕಿಯರನ್ನು ಆಯ್ಕೆ ಮಾಡಲಾಗುತ್ತದೆ. ಕೆಲವೊಮ್ಮೆ ನಾಲ್ಕು ವರ್ಷ ವಯಸ್ಸಿನ ಬಾಲಕಿಯರೂ ಆಯ್ಕೆಯಾಗುತ್ತಾರೆ. ಆಯ್ಕೆಯೂ ಸುಲಭವಲ್ಲ ಕಠಿಣ ಪರೀಕ್ಷೆಗಳ ಮೂಲಕ ನಡೆಯುತ್ತದೆ. ಈ ಸಂದರ್ಭದಲ್ಲಿ ಬಾಲಕಿ ಶಾಂತವಾಗಿರಬೇಕು, ಯಾವುದೇ ರೀತಿಯ ಭಯವನ್ನು ತೋರಿಸಬಾರದು.

ಕುಮಾರಿಯಾಗಿ ಆಯ್ಕೆಯಾದ ಬಳಿಕ ಬಾಲಕಿಯನ್ನು ‘ಕುಮಾರಿ ಘರ್’ ಅಥವಾ ‘ಕುಮಾರಿಯ ಮನೆ’ಗೆ ಕರೆದೊಯ್ಯಲಾಗುತ್ತದೆ. ಆಕೆಯ ಕಾಲುಗಳು ನೆಲಕ್ಕೆ ತಾಗಬಾರದು ಎಂಬ ನಿಯಮವಿದೆ. ನಿರ್ದಿಷ್ಟ ಹಬ್ಬಗಳ ಸಂದರ್ಭದಲ್ಲಿ ಮಾತ್ರ ಆಕೆ ತನ್ನ ನಿವಾಸದಿಂದ ಹೊರಬರುತ್ತಾಳೆ.ಕುಮಾರಿ ಬಾಲ್ಯದಲ್ಲಿರುವವರೆಗೆ ಆಕೆಯನ್ನು ‘ಜೀವಂತ ದೇವತೆ’ಯಾಗಿ ಪೂಜಿಸಲಾಗುತ್ತದೆ. ಸಾಮಾನ್ಯವಾಗಿ ಪ್ರೌಢಾವಸ್ಥೆ ತಲುಪುವ ಸಮಯದಲ್ಲಿ ಮೊದಲ ಬಾರಿಗೆ ರಕ್ತಸ್ರಾವವಾದ ಬಳಿಕ ಆಕೆಯ ಕುಮಾರಿ ಸ್ಥಾನಮಾನ ಕೊನೆಗೊಳ್ಳುತ್ತದೆ.

ಕುಮಾರಿಯನ್ನು ಅತ್ಯಂತ ಭಕ್ತಿಯಿಂದ ಪೂಜಿಸುವ ಈ ಪರಂಪರೆ 17ನೇ ಶತಮಾನದಿಂದಲೂ ನಡೆದುಕೊಂಡು ಬಂದಿದೆ. ಮಲ್ಲ ರಾಜವಂಶದ ಕಾಲದಲ್ಲಿ ಇದಕ್ಕೆ ಅಧಿಕೃತ ಸ್ವರೂಪ ನೀಡಲಾಯಿತು. ನಂತರ ಮಲ್ಲ ರಾಜವಂಶವನ್ನು ಬದಲಿಸಿದ ಶಾಹ್ ರಾಜರು ಕೂಡ ಕುಮಾರಿಯನ್ನು ಪೂಜಿಸುವ ಪರಂಪರೆಯನ್ನು ಮುಂದುವರಿಸಿದರು. 2008ರವರೆಗೆ ಶಾಹ್ ರಾಜರು ಕುಮಾರಿಯನ್ನು ಭೇಟಿ ಮಾಡಿ ಆಕೆಯಿಂದ ಹಣೆಗೆ ತಿಲಕ ಹಾಕಿಸಿಕೊಳ್ಳುತ್ತಿದ್ದರು. ಈ ಆಚರಣೆಯನ್ನು ರಾಜನಿಗೆ ಅಧಿಕಾರ ಮತ್ತು ಶಕ್ತಿ ನೀಡುವ ಸಂಕೇತವೆಂದು ಪರಿಗಣಿಸಲಾಗುತ್ತಿತ್ತು. ಈ ಪರಂಪರೆಯ ಮೂಲವು ಮಲ್ಲ ರಾಜ ಜ್ಞಾನ ಪ್ರಕಾಶ್ ಮಲ್ಲ ಮತ್ತು ತಲೇಜು ದೇವಿಯನ್ನು ಒಳಗೊಂಡ ಶತಮಾನಗಳಷ್ಟು ಹಳೆಯ ಪೌರಾಣಿಕ ಕಥೆಯೊಂದಿಗೆ ಸಂಬಂಧಿಸಿದೆ.

ಕಥೆಯ ಪ್ರಕಾರ ತಲೇಜು ದೇವಿ ಮಾನವ ರೂಪದಲ್ಲಿ ರಾಜನ ಮುಂದೆ ಕಾಣಿಸಿಕೊಂಡು ಆತನೊಂದಿಗೆ ಆಟವಾಡುತ್ತಿದ್ದಳು. ಮದ್ಯದ ಪ್ರಭಾವದಲ್ಲಿದ್ದ ರಾಜನು ದೇವಿಯ ಬಗ್ಗೆ ಕಾಮದ ಭಾವನೆ ವ್ಯಕ್ತಪಡಿಸಲು ಆರಂಭಿಸಿದನು. ಆಗ ರಾಜನ ವರ್ತನೆಯಿಂದ ಅಸಮಾಧಾನಗೊಂಡ ದೇವಿ, ತಾನು ಸದಾ ವಾಸಿಸುವ ಕನ್ಯೆಯನ್ನು ಆಯ್ಕೆ ಮಾಡುವುದಾಗಿ ರಾಜನು ಪ್ರಮಾಣ ಮಾಡಬೇಕು ಎಂದು ಆದೇಶಿಸಿದಳು. ಅಂದಿನಿಂದ ಈ ಪರಂಪರೆ ಮುಂದುವರಿಯಿತು ಎಂಬ ನಂಬಿಕೆ ಇದೆ.

ನಂತರ ಮಲ್ಲ ರಾಜವಂಶವನ್ನು ಪೃಥ್ವಿ ನಾರಾಯಣ ಶಾಹ್ ರಾಜರು ಸೋಲಿಸಿದರೂ, ಹೊಸ ಆಡಳಿತಗಾರರ ಕಾಲದಲ್ಲೂ ಕುಮಾರಿಯನ್ನು ಗೌರವಿಸುವ ಆಚರಣೆ ಮುಂದುವರಿಯಿತು. ಇಂದು ನಡೆಯುವ ವಾರ್ಷಿಕ ಕುಮಾರಿ ಪೂಜೆಯ ಮೂಲಕ ಈ ಶತಮಾನಗಳ ಹಳೆಯ ಪರಂಪರೆ ಮತ್ತೆ ಗತಕಾಲದ ಆಚರಣೆಗಳು ನಡೆಯುತ್ತಿವೆ. ದೈವಿಕ ರೂಪದಲ್ಲಿ ಅಲಂಕರಿಸಲಾದ ಬಾಲಕಿಯರನ್ನು ನೇಪಾಳದ ಐತಿಹಾಸಿಕ ಧಾರ್ಮಿಕ ತಾಣಗಳಲ್ಲಿ ನಡೆಯುವ ವಿವಿಧ ಆಚರಣೆಗಳಲ್ಲಿ ಭಾಗವಹಿಸುವಂತೆ ಮಾಡಲಾಗುತ್ತದೆ.

PREV
Read more Articles on
click me!

Recommended Stories

ಅಕ್ಟೋಬರ್ 2 ರಂದು ಬುಧ ಮತ್ತು ಮಂಗಳ ಗ್ರಹದ 'ಕೇಂದ್ರ ದೃಷ್ಟಿ'ಯಿಂದಾಗಿ 4 ರಾಶಿಗೆ ಅದೃಷ್ಟ, ಆರ್ಥಿಕ ಲಾಭ
ಶನಿಯಲ್ಲಿ ಮಂಗಳ ಗ್ರಹದ ದೋಷ..3 ರಾಶಿಚಕ್ರ ಚಿಹ್ನೆಗಳಿಗೆ ಉದ್ವಿಗ್ನತೆ, ದೊಡ್ಡ ನಷ್ಟ