
ಪಿತೃ ಪಕ್ಷವು ಸನಾತನ ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಈ 16 ದಿನಗಳ ಅವಧಿಯು ಪೂರ್ವಜರಿಗೆ ಗೌರವ, ಕೃತಜ್ಞತೆ ಸಲ್ಲಿಸಲು ಮತ್ತು ಶ್ರಾದ್ಧ ಮಾಡಲು ಮೀಸಲಾಗಿರುತ್ತದೆ. ಭಾದ್ರಪದ ಪೂರ್ಣಿಮೆಯಂದು ಪ್ರಾರಂಭವಾಗಿ ಅಶ್ವಿನ್ ಅಮವಾಸ್ಯೆಯವರೆಗೆ ಮುಂದುವರಿಯುವ ಈ ಅವಧಿಯಲ್ಲಿ, ಜನರು ತರ್ಪಣ ಮತ್ತು ಪಿಂಡ ದಾನವನ್ನು ಮಾಡುತ್ತಾರೆ. ಈ ದಿನಗಳಲ್ಲಿ, ಪೂರ್ವಜರು ಭೂಮಿಗೆ ಭೇಟಿ ನೀಡ್ತಾರೆ ಎನ್ನುವ ನಂಬಿಕೆ ಇದೆ. ಈ ಸಮಯದಲ್ಲಿ ಕೆಲ ಶುಭ ಕಾರ್ಯಗಳು ನಿಷಿದ್ಧ.
ಈ ಬಾರಿ ಸೆಪ್ಟೆಂಬರ್ 26 ರಿಂದ ಪಿತೃ ಪಕ್ಷ ಶುರುವಾಗ್ತಿದೆ. ಈ ಸಮಯದಲ್ಲಿ ನೀವು ಹೊಸ ಬಟ್ಟೆ ಹಾಗೂ ಚಿನ್ನ-ಬೆಳ್ಳಿಯ ಆಭರಣಗಳನ್ನು ಖರೀದಿಸಬೇಡಿ. ಹೊಸ ಬಟ್ಟೆ ಮತ್ತು ಆಭರಣಗಳು ಸಂಭ್ರಮ ಹಾಗೂ ಭೌತಿಕ ಸುಖದ ಸಂಕೇತ. ಪಿತೃಪಕ್ಷದ ಸರಳತೆಯ ಆಚರಣೆಗೆ ಇದು ಸೂಕ್ತವಲ್ಲ. ಇದ್ರಿಂದ ಹಿರಿಯರು ಕೋಪಗೊಳ್ತಾರೆ ಎಂಬ ನಂಬಿಕೆ ಇದೆ.
ಹೊಸ ಮನೆ ಅಥವಾ ವಾಹನ ಖರೀದಿ ಸಾಮಾನ್ಯವಾಗಿ ಕುಟುಂಬಕ್ಕೆ ಸಂತಸ ನೀಡುವಂತ ವಿಷ್ಯವಾಗಿದೆ. ಆದ್ರೆ ಪಿತೃಪಕ್ಷವನ್ನು ಪೂರ್ವಜರ ಸ್ಮರಣೆ ಮತ್ತು ಶ್ರಾದ್ಧಕ್ಕೆ ಮೀಸಲಿಡಲಾಗಿದೆ. ಈ ಅವಧಿಯಲ್ಲಿ ದೊಡ್ಡ ಖರೀದಿಗಳನ್ನು ಮುಂದೂಡುವ ಪದ್ಧತಿ ಕೆಲವು ಕುಟುಂಬಗಳಲ್ಲಿದೆ. ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಅವಧಿಯಲ್ಲಿ ಹೊಸ ಆಸ್ತಿ ಅಥವಾ ವಾಹನ ಖರೀದಿಸುವುದನ್ನು ಶುಭವೆಂದು ಪರಿಗಣಿಸುವುದಿಲ್ಲ.
ಫರ್ನಿಚರ್, ಎಲೆಕ್ಟ್ರಾನಿಕ್ ವಸ್ತು
ಮನೆಯ ಅಲಂಕಾರಕ್ಕಾಗಿ ಹೊಸ ಫರ್ನಿಚರ್, ದುಬಾರಿ ಎಲೆಕ್ಟ್ರಾನಿಕ್ ವಸ್ತುಗಳು ಅಥವಾ ಐಷಾರಾಮಿ ವಸ್ತು ಖರೀದಿಸುವುದನ್ನೂ ಪಿತೃಪಕ್ಷದಲ್ಲಿ ತಪ್ಪಿಸಬೇಕು. ಈ ಸಮಯದಲ್ಲಿ ಹೊಸ ವಸ್ತುಗಳನ್ನು ಮನೆಗೆ ತರುವುದಕ್ಕಿಂತ ದಾನ, ತರ್ಪಣ ಮತ್ತು ಪೂರ್ವಜರ ಸ್ಮರಣೆಗೆ ಆದ್ಯತೆ ನೀಡಬೇಕು.
ಕಪ್ಪು ಬಟ್ಟೆ
ಪಿತೃಪಕ್ಷದ ಸಂದರ್ಭದಲ್ಲಿ ಕಪ್ಪು ಅಥವಾ ಗಾಢ ಬಣ್ಣದ ಬಟ್ಟೆಗಳನ್ನು ಖರೀದಿಸುವುದನ್ನು ತಪ್ಪಿಸಬೇಕು. ಇದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ.
ಏನು ಮಾಡಬೇಕು?
ಧಾರ್ಮಿಕ ನಂಬಿಕೆಗಳ ಪ್ರಕಾರ ಪಿತೃಪಕ್ಷದಲ್ಲಿ ಸರಳ ಜೀವನಶೈಲಿಯನ್ನು ಪಾಲಿಸಬೇಕು. ಸಾತ್ವಿಕ ಆಹಾರ ಸೇವಿಸಬೇಕು. ತರ್ಪಣ-ಶ್ರಾದ್ಧ ಮಾಡುವುದು ಮತ್ತು ದಾನ-ಧರ್ಮಕ್ಕೆ ಆದ್ಯತೆ ನೀಡುವುದು ಮುಖ್ಯ. ಹೊಸ ಖರೀದಿ ಅಥವಾ ದೊಡ್ಡ ಸಂಭ್ರಮಗಳನ್ನು ಮುಂದೂಡಿ, ಪೂರ್ವಜರನ್ನು ಸ್ಮರಿಸುವುದಕ್ಕೆ ಹೆಚ್ಚಿನ ಮಹತ್ವ ನೀಡಬೇಕು.