Sankashti Chaturthi: ಇಂದು ಸಂಕಷ್ಟಿ, ಗಣೇಶನ ಒಲುಮೆಯಿಂದ ಇಷ್ಟಾರ್ಥ ಸಿದ್ಧಿ

By Suvarna NewsFirst Published Dec 22, 2021, 12:28 PM IST
Highlights

ಇಂದು ಸಂಕಷ್ಟಿ, ಸಂಜೆ ಚಂದ್ರ ದರ್ಶನದ ನಂತರ ವೃತ ಆಚರಿಸಿ, ಗಣಪತಿ ಪೂಜೆ ನೆರವೇರಿಸುವುದರಿಂದ ಇಷ್ಟಾರ್ಥ ಸಿದ್ಧಿಯಾಗುವುದು. 

ಯಾವುದೇ ಪೂಜೆಗೂ ಮೊದಲು ಗಣಪತಿಯನ್ನು ಪೂಜಿಸುವುದು ವಾಡಿಕೆ. ಅದಕ್ಕೇ ಆತನನ್ನು ಪ್ರಥಮ ಪೂಜಿತ ಎನ್ನುವುದು. ಪ್ರತಿಯೊಂದು ಶುಭ ಕಾರ್ಯಕ್ಕೂ ವಿಘ್ನ ನಿವಾರಕನನ್ನು ನೆನಸಿಕೊಳ್ಳಲೇಬೇಕು. ಸಂಕಷ್ಟಿಯ ದಿನ ಗಣಪತಿ ಆರಾಧನೆಗೆ ಬಹಳ ಪವಿತ್ರವಾದ ದಿನ. ಅದರಲ್ಲೂ ಮಂಗಳವಾರ ಇಲ್ಲವೇ ಶುಕ್ರವಾರ ಸಂಕಷ್ಟಿ ಬಂದರೆ ಅದು ಹೆಚ್ಚು ಪವಿತ್ರ. 
ಪ್ರತಿ ಮಾಸದ ನಾಲ್ಕನೇ ದಿನ ಅಂದರೆ ಚತುರ್ಥಿಯಂದು ಸಂಕಷ್ಟಿ ಚತುರ್ಥಿ(Sankashti Chaturthi) ಆಚರಿಸಲಾಗುತ್ತದೆ. ಸಂಸ್ಕೃತದಲ್ಲಿ ಸಂಕಷ್ಟಿ ಎಂದರೆ ಎಲ್ಲ ಸಮಸ್ಯೆಗಳಿಂದ ಮುಕ್ತಿ ಪಡೆಯುವುದು ಎಂದರ್ಥ. ಈ ದಿನದಂದು ಗಣೇಶನನ್ನು ಪೂಜಿಸಿದರೆ ಆಗ ಜೀವನದಲ್ಲೂ ಸುಖ ಹಾಗೂ ಸಮೃದ್ಧಿ ಸಿಗುವುದು. ತಮ್ಮ ಸಮಸ್ಯೆಗಳಿಂದ ಮುಕ್ತರಾಗಲು ಈ ದಿನ ಜನ ಸಂಕಷ್ಟಿ ಆಚರಿಸುವರು. 

ಭಾರತದಾದ್ಯಂತ ಹಿಂದೂಗಳು ಸಂಕಷ್ಟಿ ಆಚರಿಸುತ್ತಾರೆ. ಕೃಷ್ಣಪಕ್ಷ, ಅಂದರೆ ಚಂದ್ರನು ಕ್ಷೀಣಿಸುವ ಸಂದರ್ಭದಲ್ಲಿ ಈ ದಿನ ಬರುತ್ತದೆ. ಸಾಮಾನ್ಯವಾಗಿ ಜನರು ಇಂದು ಉಪವಾಸ(fast) ಆಚರಿಸುತ್ತಾರೆ. 

ಸಂಕಷ್ಟಿ ಪೂಜಾ ವಿಧಾನ(rituals)
ಈ ದಿನ ಬೆಳಿಗ್ಗೆ ಎಳ್ಳನ್ನು ಅರೆದು ಹಾಲು ಅಥವಾ ಎಣ್ಣೆಯಲ್ಲಿ ಬೆರೆಸಿ ತಲೆಗೆ ಹಚ್ಚಿ ಸ್ನಾನ ಮಾಡಬೇಕು. ನಂತರ ಸಂಕಷ್ಟಹರ ಗಣಪತಿ ವ್ರತ ಮಾಡುತ್ತಿದ್ದೀನಿ ಅಂತ ಮನಸ್ಸಿನಲ್ಲಿ ಸಂಕಲ್ಪ ಮಾಡಬೇಕು.
ಇಂದು ಕೆಂಪು ಬಣ್ಣದ ಬಟ್ಟೆ ಧರಿಸುವುದು ಒಳ್ಳೆಯದು. 

Chakras in our body: ದೇಹದ ಏಳು ಚಕ್ರಗಳ ಕೆಲಸವೇನ್ ಗೊತ್ತಾ?

ದೇವರ ಕೋಣೆಯಲ್ಲಿ ಅಷ್ಟದಳ ಪದ್ಮ ರಂಗೋಲಿ ಹಾಕಿ ಅದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಕಳಸದಲ್ಲಿ ಸ್ವಲ್ಪ ನೀರು, ನಾಣ್ಯ ಹಾಕಿ, ಅದರ ಮೇಲೆ ತೆಂಗಿನಕಾಯಿ ಇಟ್ಟು, ಪಕ್ಕದಲ್ಲಿ ವೀಳ್ಯದೆಲೆ ಇಡಬೇಕು.  ಕಳಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲಿಡಬೇಕು. ಈ ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲಿಡಬೇಕು. ಈ ಕಲಶಕ್ಕೆ ಗಣಪತಿಯನ್ನು ಆವಾಹನೆ ಮಾಡಿ, ಕಲಶ ಪೂಜೆ ಮಾಡಬೇಕು.  

ನಂತರ ಕಳಸದ ಮೇಲಿರುವ ತೆಂಗಿನಕಾಯಿಗೆ ಗಣಪತಿಯೆಂದು ಪೂಜಿಸಬೇಕು. ಪೂಜೆಗೆ ಕೂರುವಾಗ ಪೂರ್ವ(east) ಅಥವಾ ಉತ್ತರ(North) ದಿಕ್ಕಿಗೆ ಮುಖ ಹಾಕಿರಬೇಕು. ಗಣಪತಿಯನ್ನು ವಿವಿಧ ಹೂಗಳಿಂದ ಪೂಜಿಸಿದ ಬಳಿಕ ಆತನಿಗೆ ದೂರ್ವೆ ಅರ್ಪಿಸಬೇಕು. ವಿಶೇಷವಾಗಿ ತಯಾರಿಸಿದ ನೈವೇದ್ಯ ಸಮರ್ಪಿಸಬೇಕು. ಕಡಲೆ, ಬೆಲ್ಲ, ಕಬ್ಬು, ಹಣ್ಣುಗಳು, ಮೋದಕ, ಲಡ್ಡು ನೀಡಬಹುದು. ಈ ಪೂಜೆಯ ಸಮಯದಲ್ಲಿ ದುರ್ಗೆ(Durga)ಯ ಫೋಟೋವನ್ನೂ ಗಣಪತಿಯ ಪಕ್ಕದಲ್ಲಿಟ್ಟು ಆರಾಧಿಸುವುದು ಮಂಗಳಕರ ಎನ್ನಲಾಗುತ್ತದೆ. ಪೂಜೆಯ ಬಳಿಕ ಸಂಕಷ್ಟಿ ವೃತ ಕತೆಯನ್ನು ಓದಬೇಕು. ಪೂಜೆ ಮಾಡುವಾಗ ಗಣೇಶನಿಗೆ ಸಂಬಂಧಿಸಿದ ಮಂತ್ರಗಳನ್ನು ಹೇಳುತ್ತಿರಬೇಕು. ಗಣೇಶ ಅಷ್ಟೋತ್ತರ, ಸಂಕಷ್ಟನಾಶನ ಸ್ತ್ರೋತ್ರ ಹೇಳಿಕೊಳ್ಳಬಹುದು. 

Auspicious Signs : ದಾರಿಯಲ್ಲಿ ಈ ವಸ್ತುಗಳು ಕಣ್ಣಿಗೆ ಬಿದ್ರೆ ಮಂಗಳ ಎಂದರ್ಥ

ಇಂದು ಇಡೀ ದಿನ ಭಕ್ತರು ಉಪವಾಸ ಆಚರಿಸಬೇಕು. ರಾತ್ರಿ ಚಂದ್ರ(Moon)ನನ್ನು ನೋಡಿದ ನಂತರ ಈ ಉಪವಾಸವನ್ನು ಕೈ ಬಿಡಬೇಕು.  ಉಪವಾಸ ಎಂದರೆ ಹಣ್ಣು ತರಕಾರಿಗಳನ್ನು ಸೇವಿಸಬಹುದಾಗಿದೆ. ಸಂಕಷ್ಟಿ ಪೂಜೆಯನ್ನು ಸಂಜೆ ಚಂದ್ರನ ದರ್ಶನವಾದ ಮೇಲೆ, ಚಂದ್ರನ ಬೆಳಕಿನಲ್ಲಿ ಮಾಡುವುದು ಕೂಡಾ ಶ್ರೇಷ್ಠವಾಗಿದೆ. 

ಚಂದ್ರನ ಪೂಜೆ
ಸಂಕಷ್ಟಿಯ ದಿನ ಚಂದ್ರನನ್ನು ಕೂಡಾ ಪೂಜಿಸುವುದು ಶ್ರೇಷ್ಠ. ಚಂದ್ರನ ದಿಕ್ಕಿಗೆ ಮುಖ ಹಾಕಿ ಕುಳಿತು ನೀರು, ಚಂದನ, ಅಕ್ಕಿ ಹಾಗೂ ಹೂಗಳನ್ನು ಚಂದ್ರನಿಗೆ ಅರ್ಪಿಸಬೇಕು. 

ಸಂಕಷ್ಟಿ ಚತುರ್ಥಿಯ ಮಹತ್ವ 
ಹಿಂದೂ ನಂಬಿಕೆಗಳ ಪ್ರಕಾರ , ಒಟ್ಟು 21 ತಿಂಗಳು ಸಂಕಷ್ಟಿ ಆಚರಿಸಿ ಉದ್ಯರ್ಪಣೆ ಮಾಡಬೇಕು. ಸಂಕಷ್ಟ ಚತುರ್ಥಿಯ ದಿನ ಗಣಪತಿಯನ್ನು ಪೂಜಿಸುವುದರಿಂದ ಮನೆಯ ಎಲ್ಲ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಗಣಪತಿ ಮನೆಯ ಎಲ್ಲಾ ಅಶುಭಗಳನ್ನು ತೊಡೆದು ಹಾಕುತ್ತಾನೆ. ಯಾವುದೋ ಇಷ್ಟಾರ್ಥ ಸಿದ್ಧಿಗಾಗಿ ವೃತ ಆಚರಿಸುತ್ತಿದ್ದರೆ, ಖಂಡಿತವಾಗಿ ಆ ಆಸೆ ನೆರವೇರುವುದು. 

click me!