ಹಣ ದೇವತೆ ಲಕ್ಷ್ಮೀದೇವಿ ಮೈಬಣ್ಣ ಕಪ್ಪು ಆಗಿದ್ರೆ ಏನಾಗುತ್ತೆ?

By Suvarna NewsFirst Published Nov 23, 2020, 3:28 PM IST
Highlights

ಲಕ್ಷ್ಮೀದೇವಿ ಕಮಲದೆಲೆಯ ಮೇಲೆ ಕುಳಿತು ಧವಳಕಾಂತಿಯಿಂದ ನಗುನಗುತ್ತಿರಬೇಕು. ಹಾಗಿಲ್ಲದೆ ಆಕೆ ಕಪ್ಪು ಬಣ್ಣದವಳಾಗಿದ್ದರೆ ನಾವು ಏನು ಚಿಂತಿಸುತ್ತೇವೆ?

ನಮ್ಮ ಮನೆಗಳಲ್ಲಿ ನಾವು ತೂಗು ಹಾಕಿರುವ ಕ್ಯಾಲೆಂಡರ್‌ಗಳಲ್ಲಿ ಇರೋ ದೇವರ ಚಿತ್ರಗಳನ್ನು ನೋಡಿ. ಗಣೇಶ, ಶಿವ, ಮಹಾವಿಷ್ಣು, ಪಾರ್ವತಿ, ಲಕ್ಷ್ಮೀದೇವಿ- ಎಲ್ಲರೂ ಬಿಳಿಬಿಳಿಯಾಗಿ, ದಂತದಿಂದ ಮಾಡಿದ ಮೈಬಣ್ಣ ಹೊಂದಿದವರ ಹಾಗೆ ಕಾಣಿಸುತ್ತಾರೆ ಅಲ್ಲವೇ? ನಿಜಕ್ಕೂ ಆ ದೇವತೆಗಳೆಲ್ಲ ಹಾಗೇ ಇದ್ದಾರೆಯೇ?

ಕೆಲವು ಸಂಶೋಧಕರ ಪ್ರಕಾರ, ಈ ದೇವತೆಗಳ ಮೈಬಣ್ಣ ಹಾಗೂ ಚಿತ್ರ ಮಾಡುವಿಕೆ ಆರಂಭ ಆದದ್ದು ಬ್ರಿಟಿಷರು ನಮ್ಮಲ್ಲಿಗೆ ಬಂದು ನಮ್ಮನ್ನು ಆಳಲು ಆರಂಭಿಸಿದ ಮೇಲೆ. ಕೇರಳದ ರಾಜಾ ರವಿವರ್ಮ ಬಿಡಿಸಿದ ಹಲವು ಚಿತ್ರಗಳನ್ನು ನೀವು ನೋಡಿ. ಅದರಲ್ಲಿ ಇರುವ ಅನೇಕ ದೇವ ದೇವತೆಗಳು ಬ್ರಿಟಿಷ್ ಪುರುಷ ಮಹಿಳೆಯರ ಮೈಕಟ್ಟು ಹಾಗೂ ಮೈಬಣ್ಣಗಳನ್ನು ಹೊಂದಿರುವುದು ಕಾಣಿಸುತ್ತದೆ. ಇದು ವಸಾಹತುಶಾಹಿ ಮನಸ್ಥಿತಿ ನಮ್ಮ ಮೇಲೆ ಮಾಡಿದ ಪ್ರಭಾವ. ಅಂದಿನಿಂದ ಈಚೆಗೆ ನಾವು ಎಲ್ಲ ದೇವತೆಗಳೂ ಬಿಳಿ ಬಣ್ಣದವರು ಅಂದುಕೊಂಡಿದ್ದೇವೆ. 


ಆದರೆ ಇದಕ್ಕೂ ಮುನ್ನ ನಮ್ಮಲ್ಲಿ ನಮ್ಮ ಸಹಜವಾದ ಕಪ್ಪು ಬಣ್ಣವೇ ಮೂರ್ತಿಗಳಿಗೂ ಇತ್ತು. ಸಾವಿರಾರು ವರ್ಷಗಳ ಹಿಂದಿನ ದೇವಾಲಯದ ಮೂರ್ತಿಗಳನ್ನು ನೋಡಿದರೆ, ಅವೆಲ್ಲವೂ ಕಪ್ಪು ಕಲ್ಲಿನಿಂದ ಮಾಡಿರುವುದು ಕಂಡುಬರುತ್ತದೆ. ಶಿವಲಿಂಗ ಕಪ್ಪು, ಉಡುಪಿಯ ಶ್ರೀಕೃಷ್ಣ ಕಪ್ಪು, ದುರ್ಗಾದೇವಿ ಕಪ್ಪು. ಕಪ್ಪು ಸುಂದರ, ಕಪ್ಪು ಚಂದದ ಬಣ್ಣ. ಕೃಷ್ಣ ಎಂಬ ಹೆಸರಿನ ಅರ್ಥವೇ ಕಪ್ಪು ಎಂದು. ಆದರೆ ನಾವು ಕೃಷ್ಣನನ್ನೂ ಟಿವಿ ಸೀರಿಯಲ್‌ಗಳಲ್ಲಿ ನೀಲಿ ಅಥವಾ ಬಿಳಿ ಮೈಬಣ್ಣದವನನ್ನಾಗಿ ಮಾಡಿಬಿಟ್ಟಿದ್ದೇವೆ. ಶಿವ ಮೈಬಣ್ಣ ಕೂಡ ನೀಲಿ. ಕೃಷ್ಣ ನೀಲಮೇಘಶ್ಯಾಮನೆಂದೇ ಪ್ರಸಿದ್ಧ. ಪಾರ್ವತಿ, ಹಿಮಾಲಯ ಪರ್ವತರಾಜನ ಮಗಳು. ಅವಳೂ ಕಪ್ಪು ಮೈಬಣ್ಣದವಳಾಗಿರುವುದು ಸ್ವಾಭಾವಿಕ. 

ಇತ್ತೀಚೆಗೆ ಕೋಲ್ಕೊತ್ತಾದ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಕಲಾವಿದ ರಿಂತು ದಾಸ್ ಎಂಬವರು ಒಂದು ಪ್ರಯೋಗ ಮಾಡಿದರು. ನಮ್ಮ ನಂಬಿಕೆ- ಪೂರ್ವಾಗ್ರಹಗಳನ್ನು ಕಳಚುವಂತೆ, ದುರ್ಗೆಯ ಮೂರ್ತಿಯ ಜಾಗದಲ್ಲಿ ವಲಸೆ ಹೋಗುತ್ತಿದ್ದ ವಲಸೆ ಕಾರ್ಮಿಕಳೊಬ್ಬಳ ಹಾಗೂ ಆಕೆಯ ಮೂವರು ಮಕ್ಕಳ ಶಿಲ್ಪವನ್ನು ರಚಿಸಿ ನಿಲ್ಲಿಸಿದರು. ಅದು ಕಪ್ಪು ಮೈಬಣ್ಣದ್ದಾಗಿತ್ತು. ಹಾಗೇ ದುರ್ಗೆಯ ಬಗ್ಗೆ ನಾವೆಲ್ಲ ಕಟ್ಟಿಕೊಂಡ ಪರಿಕಲ್ಪನೆ ನಂಬಿಕೆಗಳನ್ನು ಒಡೆದು ಹಾಕುವಂಥದ್ದಾಗಿತ್ತು. ಇದನ್ನು ನೋಡಿದವರು ಭಾವುಕರಾಗದೆ ಇರಲಿಲ್ಲ. ಕೊರೊನಾ ಲಾಕ್‌ಡೌನ್‌ ಕಾಲದಲ್ಲಿ ನಗರದಲ್ಲಿ ಕೆಲಸವಿಲ್ಲದೆ ಊರಿಗೆ ನಡೆದು ವಲಸೆ ಹೋಗುತ್ತಿದ್ದ ವಲಸೆ ಹೆಣ್ಣುಮಕ್ಕಳು ಮತ್ತು ಅವರ ಕಷ್ಟ ಹಾಗೂ ಸಾಧನೆಗಳನ್ನು ಈ ಶಿಲ್ಪ ಬಿಂಬಿಸಿತು. ಆದರೆ ಈ ಪ್ರಯೋಗಕ್ಕೆ ಆಕ್ಷೇಪವೈ ವ್ಯಕ್ತವಾಯಿತು ಅನ್ನಿ. ದೇವತೆಯನ್ನುಹೀಗೆ ಸಾಮಾನ್ಯ ಮನುಷ್ಯಳಂತೆ ಚಿತ್ರಿಸಬಹುದೇ ಅಂತ ಕೆಲವರು ಟೀಕಿಸಿದರು. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವಾಗುತ್ತದೆ ಎಂದು ವಿವಾದವನ್ನೂ ಎಬ್ಬಿಸಲು ಯತ್ನಿಸಿದರು. 

ಗುರು ಗ್ರಹದ ರಾಶಿ ಪರಿವರ್ತನೆ; ಅಶುಭ ಪ್ರಭಾವದಿಂದ ಪಾರಾಗಲು ಇಲ್ಲಿದೆ ಪರಿಹಾರ ...

ಜ್ಯೋತಿ ನೇಲ್ ಎಂಬ ಕಲಾವಿದೆಯೊಬ್ಬರು ಇನ್ನೊಂದು ಪ್ರಯೋಗ ಮಾಡಿದರು. ಸೀತೆ, ಲಕ್ಷ್ಮಿ ಹೀಗೆ ಹಲವಾರು ದೇವಾನುದೇವತೆಯರನ್ನು ಕಪ್ಪು ಬಣ್ಣದಲ್ಲಿ ಚಿತ್ರಿಸಿದರು. ಯಾವಾಗಲೂ ನಾವು ಪೂಜಿಸುವ ದೇವರುಗಳು ಹಾಗೂ ಜಾಹೀರಾತಿನಲ್ಲಿ ನಾವು ನೋಡುವ ಮಾಡೆಲ್‌ಗಳು ಬಿಳಿ ಮೈಬಣ್ಣದವರೇ ಆಗಿರಬೇಕೆಂದು ಏನು? ಕಪ್ಪು ಮೈಬಣ್ಣದವರೂ ಮನುಷ್ಯರಲ್ಲವೇ? ಅವರಿಗೂ ಭಾವನೆಗಳಿಲ್ಲವೇ? ಕಪ್ಪು ಬಣ್ಣದವರನ್ನು ವಿಲನ್‌ಗಳಂತೆ ಚಿತ್ರಿಸುವುದು ಏಕೆ? ಎಂಬುದು ಅವರ ಪ್ರಶ್ನೆಯಾಗಿತ್ತು.

ಸಿಂಹ, ತುಲಾ, ಕಟಕ ರಾಶಿಯವರೇ ದಯವಿಟ್ಟು ಗಮನಿಸಿ ...

ಚಿಕ್ಕಂದಿನಲ್ಲಿ ನಾವು ನೋಡುತ್ತಿದ್ದ ಅಮರ ಚಿತ್ರಕತೆ. ಚಂದಮಾಮ ಮುಂತಾದ ಮಕ್ಕಳ ಕತೆ ಪುಸ್ತಕಗಳಲ್ಲೂ ಕೂಡ, ರಾಮ- ಕೃಷ್ಣ- ಶಿವ ಮುಂತಾದ ದೇವತೆಗಳೆಲ್ಲ ಬಿಳಿ ಬಣ್ಣದವರಾಗಿದ್ದರು. ರಾವಣ, ಹಿರಣ್ಯಾಕ್ಷ, ಹಿರಣ್ಯಕಶ್ಯಪು  ಮುಂತಾದ ರಾಕ್ಷಸರೆಲ್ಲ ಕಪ್ಪಗಿನವರಾಗಿದ್ದರು. ಇದೊಂದು ಪೂರ್ವಗ್ರಹ. ಹೀಗಾಗಿಯೇ ಬಿಳಿ ಎಂದರೆ ಪವಿತ್ರ, ಚಂದ ಎಂಬ ಭಾವನೆ, ಕಪ್ಪು ಎಂದರೆ ಕೊಳಕು, ಅಪವಿತ್ರ ಎಂಬ ಭಾವನೆ ನಮ್ಮಲ್ಲಿ ಚಿಕ್ಕಂದಿನಿಂದಲೂ ಮೂಡಿಬಂದಿದೆ. ಇದನ್ನು ಬದಲಾಯಿಸಬೇಕು ಎಂಬ ಪ್ರಯತ್ನ ಈ ಎಲ್ಲ ಪ್ರಯೋಗಗಳ ಹಿಂದೆ ಇದೆ. 

ಮಕರ ರಾಶಿಗೆ ಗುರು ಪ್ರವೇಶ; ಯಾವ ಯಾವ ರಾಶಿಯವರಿಗೆ ಲಕ್..? ...

 

click me!