ಗಂಗಾಜಲ ಪವಿತ್ರವಾದದ್ದು. ಮನೆಯ ಶುದ್ಧಿಗೆ ಇದನ್ನು ಬಳಕೆ ಮಾಡಲಾಗುತ್ತದೆ. ವಿದೇಶದಲ್ಲಿ ಗಂಗಾಜಲ ಸಿಗೋದು ಕಷ್ಟ. ಆ ಸಂದರ್ಭದಲ್ಲಿ ನಿಮ್ಮ ಮನೆ ನಕಾರಾತ್ಮಕ ಶಕ್ತಿಯಿಂದ ದೂರವಿರಬೇಕೆಂದ್ರೆ ನೀವು ಈ ಸಿಂಪಲ್ ಕೆಲಸ ಮಾಡ್ಬೇಕು.
ಕಾಶಿಗೆ ಹೋದ್ಮೇಲೆ ಗಂಗೆ ತರದೆ ಬರಲು ಸಾಧ್ಯವಿಲ್ಲ. ಪವಿತ್ರ ಗಂಗಾಜಲವನ್ನು ತಂದು, ದೇವರ ಮನೆಯಲ್ಲಿ ಸ್ಥಾಪನೆ ಮಾಡಿ ಪೂಜೆ ಮಾಡಲಾಗುತ್ತದೆ. ಸಂಬಂಧಿಕರು, ಸ್ನೇಹಿತರನ್ನು ಕರೆದು, ಅವರಿಗೆ ಗಂಗಾಜಲ ಹಂಚಿ ಪುಣ್ಯ ಪಡೆಯುತ್ತಾರೆ. ಗಂಗೆ, ಶಿವನ ಜಡೆಯಿಂದ ಬಂದವಳು. ಆಕೆಗೆ ವಿಶೇಷ ಸ್ಥಾನವಿದೆ. ಗಂಗಾ ನದಿಯಲ್ಲಿ ಸ್ನಾನ ಮಾಡಿದ್ರೆ ಎಲ್ಲ ಪಾಪ ತೊಳದಂತೆ ಎಂದು ನಂಬಲಾಗುತ್ತದೆ. ಹಾಗೆಯೇ ಮನೆ, ಮನಸ್ಸಿನ ಶುದ್ದಿಗೂ ಗಂಗಾಜಲವನ್ನು ಬಳಕೆ ಮಾಡಲಾಗುತ್ತದೆ.
ಬಹುತೇಕ ಎಲ್ಲ ಹಿಂದು (Hindu) ಗಳ ದೇವರ ಮನೆಯಲ್ಲಿ ಗಂಗೆಯಿರುತ್ತಾಳೆ. ಒಂದ್ವೇಳೆ ಮನೆಯಲ್ಲಿ ಗಂಗಾಜಲ (Gangajal) ಇಲ್ಲ ಎಂದಾಗ ಏನು ಮಾಡ್ಬೇಕು? ಗಂಗೆಯ ಪೂಜೆ ಮಾಡದೆ ಉಳಿದ ದೇವರ ಪೂಜೆ ಮಾಡಿದ್ರೆ ಪೂಜೆ ಫಲ ಪ್ರಾಪ್ತಿಯಾಗೋದಿಲ್ಲವಾ? ಗಂಗಾಜಲ ಬಿಟ್ಟು ಮತ್ತ್ಯಾವುದರಿಂದ ಮನೆಯನ್ನು ಶುದ್ಧಗೊಳಿಸಬಹುದು ಎಂಬೆಲ್ಲ ಪ್ರಶ್ನೆ ನಮ್ಮನ್ನು ಕಾಡೋದು ಸಹಜ. ವಿದೇಶದಲ್ಲಿರುವ ಹಿಂದುಗಳ ಮನೆಯಲ್ಲಿ ಗಂಗೆಯನ್ನಿಡೋದು ಕಷ್ಟ. ಹಾಗಾಗಿಯೇ ನಾವಿಂದು ಗಂಗಾ ಜಲವಲ್ಲದೆ ಮನೆ ಶುದ್ಧಿ ಹೇಗೆ ಎಂಬುದನ್ನು ನಿಮಗೆ ಹೇಳ್ತೇವೆ.
ಇಲ್ಲಿವೆ ಶನಿ ಸಾಡೇಸಾತಿಗೆ ಪರಿಣಾಮಕಾರಿ ಪರಿಹಾರ..
ತುಳಸಿ ನೀರಿನ ಬಳಕೆ ಮಾಡಿ : ಗಂಗಾಜಲ ಲಭ್ಯವಿಲ್ಲದಿದ್ದರೆ, ತಾಮ್ರದ ಪಾತ್ರೆಗೆ ತುಳಸಿ ಎಲೆಗಳನ್ನು ಹಾಕಿ ಮತ್ತು ನೀರನ್ನು ಅದರ ಮೇಲೆ ಹಾಕಿ. ಪಾತ್ರೆಯನ್ನು ಮುಚ್ಚಿ ಒಂದು ರಾತ್ರಿ ಹಾಗೆಯೇ ಇಡಿ. ಮರುದಿನ ತುಳಸಿ ಎಲೆಗಳ ನೀರು ಗಂಗಾನದಿಯ ನೀರಿನಂತೆ ಪರಿಶುದ್ಧವಾಗುತ್ತದೆ. ಮನೆಯಲ್ಲಿ ಯಾವುದೇ ಸ್ಥಳವನ್ನು ಶುದ್ಧೀಕರಿಸಲು ಈ ನೀರನ್ನು ಬಳಸಬಹುದು. ದೇವಾಲಯವನ್ನು ಶುದ್ಧಗೊಳಿಸಲೂ ನೀವು ಈ ನೀರನ್ನು ಬಳಸಬಹುದು. ವಿಷ್ಣು ಪೂಜೆಯಲ್ಲಿ ತುಳಸಿ ನೀರಿನ ಬಳಕೆಯನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ. ದೇವರ ಮನೆ, ಮನೆ, ದೇವಸ್ಥಾನವನ್ನು ನೀವು ಈ ನೀರಿನಿಂದ ಶುದ್ಧಗೊಳಿಸಬಹುದು. ಆದ್ರೆ ಅಪ್ಪಿತಪ್ಪಿಯೂ ಶಿವನಿಗೆ ತುಳಸಿ ನೀರನ್ನು ಹಾಕಿ ಅಭಿಷೇಕ ಮಾಡಬೇಡಿ. ವಿದೇಶದಲ್ಲಿ ಅಥವಾ ನೀವು ಭಾರತದ ಯಾವುದೇ ಮೂಲೆಯಲ್ಲಿದ್ದರೂ ನಿಮಗೆ ತುಳಸಿ ಸಿಗುತ್ತದೆ. ಅದನ್ನು ನೀವು ಶುದ್ಧೀಕರಣಕ್ಕೆ ಬಳಸಬಹುದು.
ವಿಷ್ಣುವಿನ ಪಾದದ ನೀರು : ವಿದೇಶದಲ್ಲಿ ನೀವಿದ್ದು ಗಂಗಾಜಲ ಸಿಗದಿದ್ದರೆ ಅಥವಾ ನಿಮ್ಮ ಮನೆಯಲ್ಲಿ ಗಂಗಾಜಲ ಖಾಲಿಯಾಗಿದ್ದರೆ ಆಗ ನೀವು ವಿಷ್ಣುವಿನ ಪಾದದ ನೀರನ್ನು ಬಳಕೆ ಮಾಡಬಹುದು. ಮನೆಯಲ್ಲಿ ವಿಷ್ಣುವಿನ ಮೂರ್ತಿ ಅಥವಾ ಸಾಲಿಗ್ರಾಮವಿರುತ್ತದೆ. ದೇವರ ಪೂಜೆ ವೇಳೆ ಸಾಲಿಗ್ರಾಮ ಅಥವಾ ವಿಷ್ಣುವಿನ ಪಾದವನ್ನು ಸ್ವಚ್ಛಗೊಳಿಸಲಾಗುತ್ತದೆ. ಶುದ್ಧ ನೀರಿನಿಂದ ಸಾಲಿಗ್ರಾಮಕ್ಕೆ ಅಭಿಷೇಕ ಮಾಡಿ ಆ ನೀರನ್ನು ಸಂಗ್ರಹಿಸಿ. ನಂತ್ರ ಈ ನೀರನ್ನು ಮನೆಯ ಮೂಲೆ ಮೂಲೆಗೆ ಹಾಕಿ. ಹೀಗೆ ಮಾಡಿದ್ರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ನಾಶವಾಗಿ, ಸಕಾರಾತ್ಮಕ ಶಕ್ತಿ ನೆಲೆಸುತ್ತದೆ.
ಶಿವಲಿಂಗದ ನೀರು : ಶಿವಲಿಂಗದ ನೀರನ್ನು ಕೂಡ ನೀವು ಮನೆಯ ಶುದ್ಧೀಕರಣಕ್ಕೆ ಬಳಕೆ ಮಾಡಬಹುದು. ಶಿವನ ಪೂಜೆ ವೇಳೆ ಶಿವಲಿಂಗಕ್ಕೆ ಅಭಿಷೇಕ ಮಾಡಬೇಕಾಗುತ್ತದೆ. ಶುದ್ಧ ನೀರಿನಿಂದ ಅಭಿಷೇಕ ಮಾಡಿ ಆ ನೀರನ್ನು ನೀವು ಹಿಡಿದಿಟ್ಟು ಅದನ್ನು ಮನೆಯ ಎಲ್ಲ ಕಡೆ ಚಿಮುಕಿಸಬೇಕು. ಮುಖ್ಯ ದ್ವಾರದ ಮುಂದೆಯೂ ನೀವು ಈ ನೀರನ್ನು ಹಾಕ್ಬೇಕು. ಇದ್ರಿಂದ ನಕಾರಾತ್ಮಕ ಶಕ್ತಿ ನಿಮ್ಮ ಮನೆ ಪ್ರವೇಶಿಸುವುದಿಲ್ಲ. ಮನೆಯಲ್ಲಿ ಸದಾ ಸುಖ, ಸಮೃದ್ಧಿ ನೆಲೆಸುತ್ತದೆ. ಶಿವನ ಜಡೆಯಿಂದ ಹೊರಬಂದವಳು ಗಂಗೆ. ನೀವು ಶಿವಲಿಂಗದ ಮೇಲೆ ನೀರು ಹಾಕಿ ಅದನ್ನು ಬಳಸಿದ್ರೆ ಅದು ಗಂಗೆಯಷ್ಟೆ ಶುದ್ಧವಾಗಿರುತ್ತದೆ.
ಕರ್ಪೂರ ಹಾಗೂ ಧೂಪದ ಬಳಕೆ : ಇದ್ಯಾವುದೂ ಸಾಧ್ಯವಿಲ್ಲ ಎನ್ನುವವರು ಮತ್ತಷ್ಟು ಸುಲಭವಾದ ಕರ್ಪೂರ ಹಾಗೂ ಧೂಪವನ್ನು ಮನೆ ಶುದ್ಧತೆಗೆ ಬಳಸಬಹುದು. ನಿಯಮಿತವಾಗಿ ಮನೆಯಲ್ಲಿ ಕರ್ಪೂರ ಹಾಗೂ ಧೂಪವನ್ನು ಹಚ್ಚಬೇಕು. ಇದು ಮನೆಯ ನಕಾರಾತ್ಮಕ ಶಕ್ತಿ ನಾಶ ಮಾಡಿ, ಮನೆಯನ್ನು ಶುದ್ಧಗೊಳಿಸುತ್ತದೆ.