ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಕೊಡಿ

By Kannadaprabha NewsFirst Published Aug 19, 2022, 8:37 AM IST
Highlights
  • ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಕೊಡಿ
  • ಮೇಯರ್‌ಗೆ ಗಣೇಶನ ಮೂರ್ತಿ ಕೊಟ್ಟು ಮನವಿ ಸಲ್ಲಿಕೆಗೆ ಯತ್ನ
  • ಪಿಒಪಿ ಗಣೇಶ ಮೂರ್ತಿ ತಂದಿದ್ದಕ್ಕೆ ತಿಳಿವಳಿಕೆಗೆ ಹೇಳಿದ ಮೇಯರ್‌

ಹುಬ್ಬಳ್ಳಿ (ಆ.19) :ನಗರದ ಚೆನ್ನಮ್ಮ ವೃತ್ತದ ಬಳಿಯಿರುವ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕು. ಇಲ್ಲವೇ ಮಹಾನಗರ ಪಾಲಿಕೆಯೇ ಮುಂದಾಳತ್ವ ವಹಿಸಿ ಆಚರಿಸಬೇಕು ಎಂದು ಶ್ರೀಗಜಾನನ ಮಹಾಮಂಡಳ ಗುರುವಾರವೂ ಪ್ರತಿಭಟನೆ ನಡೆಸಿದೆ. ಈ ವೇಳೆ ಪಿಒಪಿ ಗಣೇಶನ ಮೂರ್ತಿ ಕೊಡಲು ಮುಂದಾಗಿದ್ದಕ್ಕೆ ಮೇಯರ್‌ ಈರೇಶ ಅಂಚಟಗೇರಿ ತರಾಟೆ ತೆಗೆದುಕೊಂಡಿದ್ದು ನಡೆದಿದೆ.ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವಂತೆ ಹಲವು ಬಾರಿ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದು ಮಹಾಮಂಡಳದ ಪದಾಧಿಕಾರಿಗಳು ಆರೋಪಿಸಿದರು.

ಪಿಒಪಿ ಗಣಪತಿ ಸ್ಥಾಪಿಸಿದರೆ ದಂಡ, ಜೈಲು..!

ಮಂಡಳದ ಸಂಸ್ಥಾಪಕ ಅಧ್ಯಕ್ಷ ಡಿ. ಗೋವಿಂದರಾವ್‌ ಮಾತನಾಡಿ, ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು ಎಂಬುದು ಬಹುದಿನಗಳ ಬೇಡಿಕೆ. ಹಲವು ಬಾರಿ ಮನವಿ ಸಲ್ಲಿಸಿದರೂ ನಮ್ಮ ಬೇಡಿಕೆಯನ್ನು ಪಾಲಿಕೆ ಈಡೇರಿಸಿಲ್ಲ. ಈ ಬಾರಿಯಾದರೂ ಗಜಾನನ ಉತ್ಸವ ಆಚರಿಸಲು ಅನುಮತಿ ನೀಡಬೇಕು. ಇಲ್ಲವೇ ಸ್ವತಃ ಪಾಲಿಕೆಯೇ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಮೂರುದಿನದ ಹಬ್ಬ ಆಚರಿಸಬೇಕು ಎಂದು ಆಗ್ರಹಿಸಿದರು.

ಹಿಂದೂ-ಮುಸ್ಲಿಂ ಸಮುದಾಯ ಒಟ್ಟಾಗಿ ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಆಚರಣೆ ಮಾಡುವುದರಿಂದ ಸೌಹಾರ್ದ ಕಾಪಾಡಬಹುದು. ಕೂಡಲೇ ಈ ಬಗ್ಗೆ ಪಾಲಿಕೆಯೂ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಿಒಪಿ ಬಳಸಬೇಡಿ: ಪ್ರತಿಭಟನಾಕಾರರು ಮೇಯರ್‌ಗೆ ಮನವಿಯೊಂದಿಗೆ ಗಣೇಶನ ಮೂರ್ತಿ ಕೊಡಲು ಮುಂದಾದರು. ಮನವಿ ಸ್ವೀಕರಿಸಿದ ಮೇಯರ್‌ ಈರೇಶ ಅಂಚಟಗೇರಿ, ಈ ಬಗ್ಗೆ ಪಾಲಿಕೆ ಆಯುಕ್ತರು ನಿರ್ಧಾರ ಪ್ರಕಟಿಸುತ್ತಾರೆ. ಈ ಬಗ್ಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನಾಕಾರರು ನೀಡಿದ ಗಣೇಶ ಮೂರ್ತಿಯನ್ನು ಮೇಯರ್‌ ನೋಡಿದರು. ಅದು ಪಿಒಪಿಯಿಂದ ನಿರ್ಮಿಸಿದ ಮೂರ್ತಿಯಾಗಿತ್ತು. ಪಿಒಪಿ ಗಣೇಶ ಮೂರ್ತಿ ಬಳಸುವಂತಿಲ್ಲ. ಆದರೆ, ಗಣೇಶ ಮಂಡಳದವರೇ ಬಳಿಸಿದರೆ ಹೇಗೆ ಎಂದು ಮೇಯರ್‌ ಪ್ರಶ್ನಿಸಿದರು. ಈ ವೇಳೆ ಕೆಲವರು ಇದು ಪಿಒಪಿ ಅಲ್ಲವೆಂದು ಸಬೂಬು ನೀಡಿದರು. ಆಗ ಮೇಯರ್‌, ಇದು ಪಿಒಪಿ ಗಣೇಶನ ಮೂರ್ತಿ. ನೋಡಿದರೆ ಗೊತ್ತಾಗುತ್ತದೆ? ನಾನು ತೋರಿಸಲೇ ಎಂದು ಮರುಪ್ರಶ್ನಿಸಿದರು. ಈ ಮೂಲಕ ಪಿಒಪಿ ಗಣೇಶ ಮೂರ್ತಿ ಬಳಸಬಾರದು ಎಂದು ತಿಳಿವಳಿಕೆ ನೀಡಿ ಗಣೇಶನಿಗೆ ನಮಸ್ಕಾರ ಮಾಡಿ ಅವರಿಗೆ ಮರಳಿ ನೀಡಿದರು.

ಪಿಒಪಿ ಬದಲು ಮಣ್ಣಿನ ಗಣೇಶನ ಮೂರ್ತಿಯೇ ಶ್ರೇಷ್ಠ ಏಕೆ?

ಅದಕ್ಕೆ ಪ್ರತಿಭಟನಾಕಾರರು, ಆಯ್ತು ಪಿಒಪಿ ಗಣೇಶ ಮೂರ್ತಿ ಬಳಸುವುದಿಲ್ಲ ಎಂದು ಎಂದು ಹೇಳಿ ಅಲ್ಲಿಂದ ತೆರಳಿದರು. ಮನವಿ ಸಲ್ಲಿಕೆ ವೇಳೆ ಮಂಡಳದ ಉಪಾಧ್ಯಕ್ಷೆ ಸುಮಾ ಹಿರೇಮಠ, ಸಂಘಟನಾ ಕಾರ್ಯದರ್ಶಿ ಶಕುಂತಲಾ ಶೆಟ್ಟಿ, ಕಾರ್ಯದರ್ಶಿ ರತ್ನಾ ಗಂಗಣ್ಣವರ ಇದ್ದರು.

click me!