ಮೇಲುಕೋಟೆ: ಇಂದು ವೈರಮುಡಿ ಕಿರೀಟಧಾರಣ ಮಹೋತ್ಸವ

By Girish GoudarFirst Published Apr 1, 2023, 9:02 AM IST
Highlights

ವೈರಮುಡಿ ಬ್ರಹ್ಮೋತ್ಸವ ಏ.8ರವರೆಗೆ ನಡೆಯಲಿದೆ. ಶನಿವಾರದ ನಡೆಯುವ ವೈರಮುಡಿಗೆ 3 ಲಕ್ಷ ಭಕ್ತರು ಬರುವ ನಿರೀಕ್ಷೆ ಇದೆ. ಒಟ್ಟಾರೆ ಸುಮಾರು 5 ಲಕ್ಷಕ್ಕೂ ಹೆಚ್ಚು ಭಕ್ತರ ಆಗಮನದ ನಿರೀಕ್ಷೆಯಿಟ್ಟುಕೊಂಡು ಹತ್ತು ದಿನಗಳ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ಮಾಡಲಾಗಿದೆ. ಈಗಾಗಲೇ ರಾಜ್ಯ ಮತ್ತು ಹೊರ ರಾಜ್ಯಗಳಿಂದಲೂ ಭಕ್ತಸಾಗರವೇ ಮೇಲುಕೋಟೆಯತ್ತ ಹರಿದು ಬರುತ್ತಿದೆ.

ಮೇಲುಕೋಟೆ(ಏ.01):  ಮೇಲುಕೋಟೆಯಲ್ಲಿ ಇಂದು(ಏ.1ರ) ರಾತ್ರಿ 8.30ಕ್ಕೆ ನಡೆಯುವ ಶ್ರೀಚೆಲುವನಾರಾಯಣಸ್ವಾಮಿ ಪ್ರಖ್ಯಾತ ವೈರಮುಡಿ ಕಿರೀಟಧಾರಣ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ವೈರಮುಡಿ ಬ್ರಹ್ಮೋತ್ಸವಕ್ಕೆ ಮೇಲುಕೋಟೆ ನವ ವಧುವಿನಂತೆ ಸಿಂಗಾರಗೊಂಡಿದೆ. ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ ಮತ್ತು ಅಪರ ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ನಾಗರಾಜು ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ ಭಕ್ತರಿಗೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.

ವೈರಮುಡಿ ಬ್ರಹ್ಮೋತ್ಸವ ಏ.8ರವರೆಗೆ ನಡೆಯಲಿದೆ. ಶನಿವಾರದ ನಡೆಯುವ ವೈರಮುಡಿಗೆ 3 ಲಕ್ಷ ಭಕ್ತರು ಬರುವ ನಿರೀಕ್ಷೆ ಇದೆ. ಒಟ್ಟಾರೆ ಸುಮಾರು 5 ಲಕ್ಷಕ್ಕೂ ಹೆಚ್ಚು ಭಕ್ತರ ಆಗಮನದ ನಿರೀಕ್ಷೆಯಿಟ್ಟುಕೊಂಡು ಹತ್ತು ದಿನಗಳ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ಮಾಡಲಾಗಿದೆ. ಈಗಾಗಲೇ ರಾಜ್ಯ ಮತ್ತು ಹೊರ ರಾಜ್ಯಗಳಿಂದಲೂ ಭಕ್ತಸಾಗರವೇ ಮೇಲುಕೋಟೆಯತ್ತ ಹರಿದು ಬರುತ್ತಿದೆ.

ತುಮಕೂರು: ಇಂದು ಲಿಂ.ಶಿವಕುಮಾರಸ್ವಾಮಿಗಳ 116ನೇ ಜನ್ಮದಿನೋತ್ಸವ, ಮಠದಲ್ಲಿ ವಿಶೇಷ ಪೂಜೆ

ವೈರಮುಡಿ ಉತ್ಸವದಲ್ಲಿ ವಿಶೇಷವಾಗಿ ದೀಪಾಲಂಕಾಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ವಿದ್ಯುತ್‌ ದೀಪಗಳಿಂದ ದೇಗುಲ ಹಾಗೂ ಗ್ರಾಮವನ್ನು ಅಲಂಕಾರ ಮಾಡಲಾಗಿದೆ. ಯೋಗನರಸಿಂಹಸ್ವಾಮಿ ಬೆಟ್ಟ, ದೇವಾಲಯಗಳು, ಕಲ್ಯಾಣಿ ಸಮುಚ್ಚಯ, ಸ್ಮಾರಕಗಳಿಗೆ ಆಕರ್ಷಕ ದೀಪಾಲಂಕಾರ ಮಾಡಲಾಗಿದ್ದು ನವ ವಧುವಿನಂತೆ ಸಿಂಗಾರಗೊಂಡು ಭಕ್ತರನ್ನು ಕೈಬೀಸಿ ಕರೆಯುತ್ತಿದೆ.

ಭಕ್ತರಿಗೆ ಕುಡಿಯುವ ನೀರು, ನಿರಂತರ ಸ್ವಚ್ಛತೆ, ವಿದ್ಯುತ್‌ ಪೂರೈಕೆಗೆ ಒತ್ತು ನೀಡಲಾಗಿದೆ. ಯಾವುದೇ ಅಹಿತರ ಘಟನೆ ನಡೆಯದಂತೆ ಪೊಲೀಸ್‌ ಭದ್ರತೆ ಮಾಡಲಾಗಿದೆ. ಇದರ ಜೊತೆಗೆ ಆಯಾಯ ಇಲಾಖೆಯವರಿಗೆ ವಹಿಸಿದ ಕೆಲಸವನ್ನು ಅಧಿಕಾರಿಗಳು ನಿರ್ವಹಿಸುವಂತೆ ಸೂಚಿಸಲಾಗಿದೆ.

ಭಕ್ತರಿಗೆ ಅಗತ್ಯ ವ್ಯವಸ್ಥೆ:

ವೈರಮುಡಿ ಉತ್ಸವದ ಅಂಗವಾಗಿ ಭಕ್ತರ ಸುರಕ್ಷತೆಗಾಗಿ 1500 ಮಂದಿ ಪೊಲೀಸರಿಂದ ಭದ್ರತೆ, 6 ಆ್ಯಂಬುಲೆನ್ಸ್‌ ಜೊತೆಗೆ ವೈದ್ಯಕೀಯ ತಂಡ ನಿಯೋಜನೆ, ನಿರಂತರ ವಿದ್ಯುತ್‌, ಬೆಂಗಳೂರು, ಮಂಡ್ಯ, ನಾಗಮಂಗಲ, ಕೆ.ಆರ್‌.ಪೇಟೆ, ಮೈಸೂರು, ಹಾಸನದಿಂದ 150 ವಿಶೇಷ ಬಸ್‌ ಸೌಕರ್ಯ, ಭಕ್ತರ ವಾಹನಗಳಿಗೆ 5 ಕಡೆ ವ್ಯವಸ್ಥಿತ ಪಾರ್ಕಿಂಗ್‌, 45 ಸಿಸಿ ಟಿವಿಯೊಂದಿಗೆ ಪೊಲೀಸರ ಕಣ್ಗಾವಲು, ಉತ್ಸವ ಬೀದಿಗಳಲ್ಲಿ 8 ಕಡೆ ಬೃಹತ್‌ ಎಲ…ಇಡಿ ಪರದೆಗಳ ಅಳವಡಿಕೆ ಕಲ್ಪಿಸಲಾಗಿದೆ.

14 ದಿನಗಳ ಕಾಲ ಉತ್ಸವಗಳಿಗೆ ವಾದ್ಯತಂಡಗಳ ನಿಯೋಜನೆ, ದೇಶಾದ್ಯಂತ ಭಕ್ತರು ವೈರಮುಡಿ ಉತ್ಸವ ವೀಕ್ಷಿಸಲು ನೇರಪ್ರಸಾರ, ಭಕ್ತರಿಗೆ ಅನ್ನದಾನ ಸೇವೆ, ಉತ್ಸವದಂದು ಬಸ್‌ ನಿಲ್ದಾಣದಿಂದ ವೃದ್ಧರು ಅಸಕ್ತರು ದೇಗುಲಕ್ಕೆ ಹೋಗಲು ಬ್ಯಾಟರಿ ವಾಹನ ವ್ಯವಸ್ಥೆ ಮಾಡಲಾಗಿದೆ.

ಪ್ರಮುಖ ಉತ್ಸವಗಳು

ಬ್ರಹ್ಮೋತ್ಸವದ ನಂತರ ಏ.8ರವರೆಗೆ ಪ್ರಮುಖ ಉತ್ಸವಗಳು ಜರುಗಲಿವೆ. ಏ.4 ರಂದು ಬೆಳಗ್ಗೆ 10ಕ್ಕೆ ಮಹಾರಥೋತ್ಸವ, ಏ.5 ರಂದು ರಾತ್ರಿ 7 ಗಂಟೆಗೆ ತೆಪ್ಪೋತ್ಸವ, ಏ.6 ರಂದು ಬೆಳಗ್ಗೆ ಅವಭೃತ, ಸಂಜೆ 5 ಗಂಟೆಗೆ ಪಟ್ಟಾಭಿಷೇಕ, ಏ.7 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ಮಹಾಭಿಷೇಕ ಜರುಗಲಿದೆ.

ರಾತ್ರಿ 8.30ಕ್ಕೆ ವೈರಮುಡಿ ಉತ್ಸವ

ಏ.1ರ ರಾತ್ರಿ 8 ಗಂಟೆಗೆ ಶ್ರೀ ದೇವಿಭೂದೇವಿ ಸಮೇತ ಗರುಢಾರೂಢನಾದ ಚೆಲುವನಾರಾಯಣನಿಗೆ ಅಪೂರ್ವ ನಾಗಮಣಿ ಇರುವ ವೈರಮುಡಿ ಕಿರೀಟಧಾರಣೆ ನಡೆಯಲಿದೆ. ನಂತರ ಮಹಾಮಂಗಳಾರತಿ ನೆರವೇರಿಸಿ ದೇವಾಲಯದಿಂದ ರಾತ್ರಿ 8.30ಕ್ಕೆ ಆರಂಭವಾಗುವ ವೈರಮುಡಿ ಉತ್ಸವ ಬೆಳಗಿನ ಜಾವ 3.30ರ ಸುಮಾರಿಗೆ ವಾಹನೋತ್ಸವ ಮಂಟಪದಲ್ಲಿ ಮುಕ್ತಾಯವಾಗಲಿದೆ. ನಂತರ ವಜ್ರಖಚಿತ ರಾಜಮುಡಿ ಧರಿಸಲಾಗುತ್ತದೆ.

ಇದಕ್ಕೂ ಮುನ್ನ ಮಂಡ್ಯ ಜಿಲ್ಲಾ ಖಜಾನೆಯಲ್ಲಿರುವ ವೈರಮುಡಿ ರಾಜಮುಡಿ ತಿರುವಾಭರಣ ಪೆಟ್ಟಿಗೆಗಳನ್ನು ಮೇಲುಕೋಟೆಗೆ ತಂದು ಇಲ್ಲಿನ ವೀರಾಂಜನೇಯಸ್ವಾಮಿ ಸನ್ನಿಧಿಯಲ್ಲಿ ಪೂಜೆ ಮಾಡಿ ನಂತರ ಚಿನ್ನದ ಪಲ್ಲಕ್ಕಿಯಲ್ಲಿ ಮೆರವಣಿಗೆಯ ಮೂಲಕ ದೇಗುಲಕ್ಕೆ ತರಲಾಗುತ್ತದೆ.

ವೈರಮುಡಿ ಪೆಟ್ಟಿಗೆಗೆ ಮಂಡ್ಯದ ಲಕ್ಷ್ಮೀಜನಾರ್ಧನಸ್ವಾಮಿ ಸನ್ನಿಧಿಯಲ್ಲಿ ಪ್ರಥಮ ಪೂಜೆ ನಡೆದರೆ, ದೇವಾಲಯದ ಮುಂಭಾಗ ಯತಿರಾಜದಾಸರ್‌ ಗುರುಪೀಠದಿಂದ ಕೊನೆಯ ಪೂಜೆ ನಡೆಯಲಿದೆ. ನಂತರ ಸ್ಥಾನೀಕರು, ಅರ್ಚಕ, ಪರಿಚಾರಕರಿಗೆ ಪಾರ್ಕಾವಣೆ ಮಾಡಿ ಹಸ್ತಾಂತರ ಮಾಡಲಾಗುತ್ತದೆ.

ಯಾದಗಿರಿ: ಲೋಕ ಕಲ್ಯಾಣಕ್ಕಾಗಿ ಸ್ವಾಮೀಜಿ 43 ತಿಂಗಳು ಕಠೋರ ಮೌನ: ಬರೋಬ್ಬರಿ ಮೂರುವರೆ ವರ್ಷದ ಬಳಿಕ ಇಂದು ಭಕ್ತರಿಗೆ

ಖಜಾನೆಯಿಂದ ಹೊರ ಬಂದ ವಜ್ರ ಖಚಿತ ಕಿರೀಟ: 

ವಿಶೇಷ ಪೂಜೆ ಸಲ್ಲಿಸಿ ಕಿರೀಟ ಹಾಗೂ ಅಭರಣಗಳನ್ನು ಡಿಸಿ ಹಾಗೂ ಎಸ್ಪಿ ಹಸ್ತಾಂತರ ಮಾಡಿದ್ದಾರೆ. ಮಂಡ್ಯ ಖಜಾನೆಯಿಂದ ಬಿಗಿ ಭದ್ರತೆಯೊಂದಿಗೆ ಮೇಲುಕೋಟೆಗೆ ಕಿರೀಟ ಮತ್ತು ಒಡವೆಗಳ ರವಾನೆ ಮಾಡಲಾಗಿದೆ. ವಜ್ರ ಖಚಿತ ಕಿರೀಟ ಸಾಗುವ ಮಾರ್ಗಮಧ್ಯೆ ಜಾನಪದ ಕಲಾ ತಂಡಳಿಂದ ಮತ್ತಷ್ಟು ಮೆರಗು ತರಲಿದೆ. ಊರೂರು ಸುತ್ತಿಕೊಂಡು ಭಕ್ತರಿಗೆ ಚೆಲುವನಾರಯಣನ ವೈರಮುಡಿ ಕಿರೀಟ ದರ್ಶನ ನೀಡಲಿದೆ.  ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ, ಮೇಲುಕೋಟೆ ರಸ್ತೆಯ ಮೂಲಕ ಸಂಚಾರ ನಡೆಯಲಿದೆ. ಸಂಜೆ 6 ಗಂಟೆ ವೇಳೆಗೆ ಕಿರೀಟ ಚೆಲುವನಾರಾಯಣಸ್ವಾಮಿ ದೇಗುಲ ತಲುಪಲಿದೆ. 

ಮಂಡ್ಯದ ನಗರದಲ್ಲಿರುವ ಲಕ್ಷ್ಮಿ ಜನಾರ್ಧನ ಸ್ವಾಮಿ ದೇಗುಲಕ್ಕೆ ವಜ್ರಖಚಿತ ಕಿರೀಟ ಆಗಮಿಸಿದೆ. ಲಕ್ಷ್ಮಿ ಜನಾರ್ಧನ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಬಳಿಕ ವೈರಮುಡಿ ಆಭರಣ ಹೊತ್ತ ವಾಹನದ ಮೆರವಣಿಗೆ ನಡೆಯಲಿದೆ. ಚೆಲುವನಾರಾಯಣನ ಆಭರಣ ಹೊತ್ತ ವಾಹನ ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರದ ಮೂಲಕ ಮೇಲುಕೋಟೆ ತಲುಪಲಿದೆ. ಸಂಜೆ 6 ಗಂಟೆಗೆ ವಜ್ರ ಖಚಿತ ಕಿರೀಟ ಮೇಲಕೋಟೆ ತಲುಪಲಿದೆ. 

click me!