ವಡಗಾವಿ ಗ್ರಾಮದೇವತೆ ಮಂಗಾಯಿದೇವಿ ಅದ್ಧೂರಿ ಜಾತ್ರೆ..!
ದೇವಸ್ಥಾನ ಮೇಲೆ ಕೋಳಿ ಮರಿ ಹಾರಿಸಿ ಭಕ್ತರ ಹರಕೆ..!
ವಡಗಾವಿ, ಶಹಾಪುರದಲ್ಲಿ ಕೋಳಿ, ಕುರಿ ಮಾಂಸ ಮಾರಾಟ ಶುರು..!
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿಯ ವಡಗಾವಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮದೇವತೆ ಮಂಗಾಯಿದೇವಿ ಜಾತ್ರೆ ಅದ್ಧೂರಿಯಾಗಿ ನೆರವೇರಿತು. ಮಂಗಾಯಿದೇವಿ ದೇವಸ್ಥಾನದ ಮೇಲೆ ಕೋಳಿ ಮರಿಗಳನ್ನು ಹಾರಿಸಿ ಸಹಸ್ರಾರು ಭಕ್ತರು ಹರಕೆ ತೀರಿಸಿದರು. ಪ್ರತಿ ವರ್ಷ ಆಷಾಢ ಮಾಸದ ಕೊನೆಯ ಮಂಗಳವಾರದಂದು ಮಂಗಾಯಿದೇವಿ ಜಾತ್ರೆ ನಡೆಯುತ್ತದೆ.
ಮಂಗಾಯಿ ದೇವಿ ಜಾತ್ರೆ ರೈತರ ಜಾತ್ರೆ ಅಂತಾನೇ ಫೇಮಸ್. ಮಂಗಾಯಿದೇವಿಗೆ ಪೂಜೆ ಮಾಡಿದ್ರೆ ಮಳೆ ಬೆಳೆ ಚೆನ್ನಾಗಿ ಆಗುತ್ತೆ, ಕೃಷಿ ಚಟುವಟಿಕೆಗಳು ಸುಸೂತ್ರವಾಗಿ ನಡೆಯಲಿ ಎಂದು ಹರಕೆ ಹೊತ್ತು ಹಲವು ವರ್ಷಗಳಿಂದ ಜಾತ್ರೆ ಮಾಡಿಕೊಂಡು ಬಂದಿದ್ದಾರೆ.
ಈ ಮೊದಲು ಮಂಗಾಯಿದೇವಿ ಜಾತ್ರೆಯಲ್ಲಿ ಕೋಳಿ, ಕುರಿ ಬಲಿ ಕೊಟ್ಟು ಜಾತ್ರೆ ಮಾಡಲಾಗುತ್ತಿತ್ತು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಪ್ರಾಣಿಬಲಿ ನಿಷೇಧ ಹಿನ್ನೆಲೆ ಭಕ್ತರು ಆಷಾಢ ಮಾಸದ ಕೊನೆಯ ಮಂಗಳವಾರದಂದು ಮನೆಯಲ್ಲಿಯೇ ಕೋಳಿ, ಕುರಿ ಮಾಂಸ ತಂದು ಅಡುಗೆ ಮಾಡಿ ಸಂಬಂಧಿಕರೆಲ್ಲರನ್ನೂ ಕರೆಯಿಸಿ ಊಟ ಹಾಕಿಸುವ ಪದ್ಧತಿ ಇದೆ. ಹೀಗಾಗಿ ಹಳೆಯ ಬೆಳಗಾವಿ ಭಾಗ, ವಡಗಾವಿ, ಶಹಾಪುರದಲ್ಲಿ ಮಂಗಾಯಿದೇವಿ ಜಾತ್ರೆ ದಿನ ಅತಿ ಹೆಚ್ಚು ಕೋಳಿ, ಕುರಿ ಮಾಂಸ ಮಾರಾಟ ಆಗುತ್ತೆ. ಇನ್ನು ದಿನದ 24 ಗಂಟೆಯೂ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯುತ್ತೆ.
Bheemana Amavasya: ಪತಿಗೆ ಪೂಜೆ ಮಾಡೋದೇಕೆ? ಹಬ್ಬದ ಹಿನ್ನೆಲೆ ಏನು?
ಮಂಗಾಯಿದೇವಿ ಜಾತ್ರೆ ಬಗ್ಗೆ ಭಕ್ತರು ಹೇಳಿದ್ದಿಷ್ಟು..!
1. ಕಳೆದ ಕೆಲ ವರ್ಷಗಳಿಂದ ಕೋವಿಡ್ ಹಿನ್ನೆಲೆ ಉತ್ಸಾಹದಿಂದ ಮಂಗಾಯಿದೇವಿ ಜಾತ್ರೆ ಮಾಡಲಾಗಿರಲಿಲ್ಲ. ಆದ್ರೆ ಈಗ ಕೋವಿಡ್ ಕಡಿಮೆ ಆದ ಹಿನ್ನೆಲೆ ವಿಜೃಂಭಣೆಯಿಂದ ಆಚರಿಸಲಾಯಿತು. ಮಂಗಾಯಿದೇವಿ ಜಾಗೃತ ದೇವಸ್ಥಾನ. ಕರ್ನಾಟಕ ಮಹಾರಾಷ್ಟ್ರ, ಗೋವಾದಿಂದ ಭಕ್ತರು ಆಗಮಿಸುತ್ತಾರೆ. ದೇವಿ ಬಳಿ ಬೇಡಿಕೊಂಡ ಎಲ್ಲಾ ಇಷ್ಟಾರ್ಥ ಈಡೇರುತ್ತೆ. ಇಷ್ಟಾರ್ಥ ಈಡೇರಿಕೆ ಬಳಿಕ ಕೋಳಿ ಮರಿಗಳನ್ನು ಹಾರಿಸಿ ತಮ್ಮ ಹರಕೆ ತೀರಿಸುತ್ತಾರೆ. ಮನೆಗೆ ಎಲ್ಲ ಸಂಬಂಧಿಕರ ಕರೆಯಿಸಿ ಮಾಂಸಾಹಾರ ಊಟದ ವ್ಯವಸ್ಥೆ ಮಾಡುತ್ತಾರೆ.
- ದೀಪಾಲಿ ಟೋಪಗಿ, ಬೆಳಗಾವಿ ನಿವಾಸಿ
2. ವಡಗಾವಿ ಗ್ರಾಮದೇವತೆ ಮಂಗಾಯಿದೇವಿ. ಭಕ್ತರ ಇಷ್ಟಾರ್ಥ ಈಡೇರಿದ ಮೇಲೆ ಕೋಳಿ ಮರಿಗಳನ್ನು ಹಾರಿಸಿ ಬೇಡಿಕೆ ಈಡೇರಿಸುತ್ತಾರೆ. ಮಧ್ಯರಾತ್ರಿ 12 ಗಂಟೆಗೆ ಅಭಿಷೇಕ ಮಾಡಿ ಉಡಿ ತುಂಬುವ ಕಾರ್ಯಕ್ರಮ ನಡೆಯುತ್ತೆ.
- ಸಂತೋಷ, ಬೆಳಗಾವಿ ನಿವಾಸಿ
ಜುಲೈ 29ರಿಂದ 5 ತಿಂಗಳು ಗುರು ವಕ್ರಿ; ಈ ಐದು ರಾಶಿಗಳು ಕೈ ಇಟ್ಟಿದ್ದೆಲ್ಲ ಚಿನ್ನ
3. ನಾಲ್ಕು ದಿನಗಳ ಕಾಲ ನಡೆಯುವ ಮಂಗಾಯಿದೇವಿ ಜಾತ್ರೆಗೆ ಸಹಸ್ರಾರು ಜನರು ಆಗಮಿಸುತ್ತಾರೆ. 18ನೇ ಶತಮಾನದಿಂದ ರೈತರು ಮಂಗಾಯಿದೇವಿ ಜಾತ್ರೆ ಆಚರಿಸುತ್ತಾ ಬಂದಿದ್ದಾರೆ. ಮಳೆ ಬೆಳೆ ಚೆನ್ನಾಗಿ ಬರಲಿ ಕೃಷಿ ಚಟುವಟಿಕೆ ಸುಸೂತ್ರವಾಗಿ ನಡೆಯಲಿ ಅಂತ ಬೇಡಿಕೊಳ್ಳುತ್ತಾರೆ.
- ವಿನಾಯಕ ಪಾಟೀಲ್, ವಡಗಾವಿ