ಉಟಕನೂರು ಶಿವಯೋಗಿಗಳ ಅದ್ಧೂರಿ ಜಾತ್ರಾ ಮಹೋತ್ಸವ
ಶ್ರೀಮರಿಬಸಲಿಂಗ ಸ್ವಾಮೀಜಿಗಳ ಜಾತ್ರೆ ನಿಮಿತ್ತ ಭಕ್ತರಿಂದ ದೇಣಿಗೆ ಬಾಕ್ಸ್ ಕಾಣಿಕೆ
ಭಕ್ತರ ಪಾಲಿನ ನಡೆದಾಡುವ ದೇವರಾದ ಉಟಕನೂರು ತಾತಾ
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು (ಜ.16): ಭಕ್ತರಿಗೆ ಬೇಡಿದ ವರವನ್ನು ಕರುಣಿಸುವ ಉಟಕನೂರಿನ ಮರಿ ಬಸವಲಿಂಗ ಸ್ವಾಮೀಜಿಗಳ ಜಾತ್ರೆಯೂ ಅದ್ಧೂರಿಯಾಗಿ ನಡೆಯಿತು. ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಉಟಕನೂರು ಗ್ರಾಮದಲ್ಲಿ ನೆಲೆಸಿರುವ ಮರಿ ಬಸವಲಿಂಗ ದೇಶ ಕೇಂದ್ರ ಸ್ವಾಮೀಜಿಗಳು ಜಾತ್ರೆಯೂ ತುಂಬಾ ವಿಶೇಷತೆಯಿಂದ ಕೂಡಿದೆ. ಈ ಸ್ವಾಮೀಜಿಗಳು ಕಲಿಯುಗದ ನಡೆದಾಡುವ ದೇವರು ಎಂದು ಈ ಕಲ್ಯಾಣ ಕರ್ನಾಟಕ ಭಕ್ತರ ನಂಬಿಕೆ ಆಗಿದೆ. ಹೀಗಾಗಿ ವರ್ಷಕ್ಕೆ ಒಮ್ಮೆ ನಡೆಯುವ ಈ ಜಾತ್ರೆಗೆ ಆಂಧ್ರ, ತೆಲಂಗಾಣ ಮತ್ತು ರಾಜ್ಯದ ನಾನಾ ಜಿಲ್ಲೆಗಳ ನೂರಾರು ಭಕ್ತರು ಆಗಮಿಸಿ ಅದ್ದೂರಿ ಆಗಿ ಜಾತ್ರೆ ಆಚರಿಸುತ್ತಾರೆ.
ಕಲ್ಯಾಣ ಕರ್ನಾಟಕದಲ್ಲಿ ಮಠಗಳಿಗೆ ಏನು ಕಡಿಮೆ ಇಲ್ಲ. ಹಳ್ಳಿ - ಹಳ್ಳಿಯಲ್ಲಿ ಮಠಗಳು ನೋಡಲು ಸಿಗುತ್ತವೆ. ಅಂತಹ ಮಠಗಳಲ್ಲಿ ಒಂದಾಗಿರೋ ಉಟಕನೂರಿನ ಮಠವೂ ತುಂಬಾ ವಿಶೇಷತೆಯಿಂದ ಕೂಡಿದೆ. ಶ್ರೀಮಠಕ್ಕೆ ಬಂದು ಸ್ವಾಮೀಜಿಗಳ ದರ್ಶನ ಪಡೆದರೇ ಭಕ್ತರಿಗೆ ನೆಮ್ಮದಿ ಸಿಗುತ್ತೆ ಎಂಬ ಭಾವನೆ ಭಕ್ತರಲ್ಲಿ ಇದೆ. ಹೀಗಾಗಿ ನೂರಾರು ಭಕ್ತರು ಶ್ರೀಮಠಕ್ಕೆ ಬಂದು ಸಂಕಲ್ಪ ಮಾಡಿಕೊಂಡ ಹೋಗುತ್ತಾರೆ.
ಯಾದಗಿರಿಯಲ್ಲಿ ಮೈಲಾರಲಿಂಗನ ಜಾತ್ರಾ ವೈಭವ: ಭಂಡಾರದ ಒಡೆಯನಿಗೆ ಭಂಡಾರ ಅರ್ಪಿಸಿದ ಭಕ್ತರು
ಮರಿ ಬಸವಲಿಂಗ ಮಹಾ ಸ್ವಾಮೀಜಿಗಳು: ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಉಟಕನೂರಿನಲ್ಲಿ 1841ರಲ್ಲಿ ಮರಿಬಸವಲಿಂಗ ಶಿವಯೋಗಿಗಳು ಜನಿಸಿದರು. ಶ್ರೀಗಳು 1991, ಜ.7ರಂದು ಲಿಂಗೈಕ್ಯರಾದರು. ಶ್ರೀಗಳು ತಮ್ಮ ಜೀವನಪೂರ್ತಿ ಬಡ ಭಕ್ತರ ಪಾಲಿನ ಕಾಮಧೇನು ಆಗಿದ್ರು. ಕಷ್ಟ ಅಂತ ಶ್ರೀಮಠಕ್ಕೆ ಬರುವ ಭಕ್ತರಿಗೆ ತಮ್ಮ ಪವಾಡಗಳಿಂದ ಅವರ ಕಷ್ಟಗಳನ್ನು ದೂರು ಮಾಡಿ ಅವರ ಸಂಸಾರದಲ್ಲಿ ಸುಖ- ಶಾಂತಿ- ನೆಮ್ಮದಿ ನೆಲೆಸುವಂತೆ ಮಾಡುತ್ತಿದ್ರು. ಹೀಗಾಗಿ ಉಟಕನೂರು ಭಾಗದಲ್ಲಿ ಶ್ರೀಗಳು ನಡೆದಾಡುವ ದೇವರಾಗಿದ್ರು. ಸಾವಿರಾರು ಭಕ್ತರು ಮರಿಬಸವಲಿಂಗ ಸ್ವಾಮೀಜಿಗಳನ್ನ ದೇವರೆಂದು ಆರಾಧನೆ ಮಾಡಲು ಶುರು ಮಾಡಿದ್ರು. ಅದರ ಭಾಗವಾಗಿ ಈಗ ಪ್ರತಿ ವರ್ಷವೂ ಶ್ರೀಗಳ ನೆನಪಿಗಾಗಿ ಅದ್ಧೂರಿ ಜಾತ್ರೆ ನಡೆಯುತ್ತೆ.
ಉಟಕನೂರು ತಾತಾನ ಜಾತ್ರೆಯ ವಿಶೇಷತೆಗಳೇನು? : ಜಾತ್ರೆ ಅಂದ್ರೆ ಸಾಮಾನ್ಯವಾಗಿ ಜನ ಸೇರುವುದು. ಆದ್ರೆ ಕಲ್ಯಾಣ ಕರ್ನಾಟಕ ಭಾಗದ ನಡೆದಾಡುವ ದೇವರು ಎಂದು ಕರೆಸಿಕೊಂಡ ಉಟಕನೂರಿನ ಶ್ರೀಗಳ ಜಾತ್ರೆಯೂ ತುಂಬಾ ವಿಶೇಷತೆಯಿಂದ ಕೂಡಿದೆ. ಜಾತ್ರೆಗಾಗಿ ಶ್ರೀಮಠಕ್ಕೆ ಸುಣ್ಣಬಣ್ಣ ಹಚ್ಚಿ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕರಿಸುತ್ತಾರೆ. ಜಾತ್ರೆಗೆ ಬರುವ ಭಕ್ತರು ತಾವು ಸಂಕಲ್ಪ ಮಾಡಿಕೊಂಡು ಹೋಗಿ ಇಡೀ ವರ್ಷ ಪೂರ್ತಿ ಮರಿಬಸವಲಿಂಗ ಸ್ವಾಮೀಜಿಗಳ ಹೆಸರಿನಲ್ಲಿ ಕಾಣಿಕೆ ಹಾಕಿದ ಬಾಕ್ಸ್ ತೆಗೆದುಕೊಂಡು ಬಂದು ತಾತಾನಿಗೆ ಸಂಪರ್ಣೆ ಮಾಡುತ್ತಾರೆ.ಮತ್ತೊಂದು ವಿಶೇಷ ಅಂದ್ರೆ ಶ್ರೀಮಠದಲ್ಲಿ ಅಂಕಲಗಿ ಶ್ರೀ ಅಡವಿಸಿದ್ದೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ ನಡೆಯುವುದು.
Koppal Gavisiddeshwara jatre: ಮಹಾದಾಸೋಹಕ್ಕೆ 6 ಕ್ವಿಂಟಲ್ ಬುಂದಿ, 4 ಕ್ವಿಂಟಲ್ ಕರದಂಟು ನೀಡಿದ ಭಕ್ತರು!
ಅಲ್ಲದೆ ಶಿವಯೋಗಿಗಳ ಸಾನ್ನಿಧ್ಯದಲ್ಲಿ ಪತ್ರಿನಿತ್ಯ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ಕಲಾತಂಡಗಳಿಂದ ಅಹೋರಾತ್ರಿ ಭಜನಾ, ಶ್ರೀಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರಾರು ಬಿಲ್ವಾರ್ಚನೆ, ಮಹಾ ಮಂಗಳಾರತಿ ಪೂಜಾ ಕಾರ್ಯಕ್ರಮ, ಬೆಳಗ್ಗೆ ಹೂವಿನ ರಥದ ಕಳಸಾರೋಹಣ, ದಾಸೋಹ ಪ್ರಸಾದ ಪೂಜೆ, ಸಕಲ ವಾದ್ಯಗಳೊಂದಿಗೆ ಉಟಕನೂರು ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ಆ ನಂತರ ಹೂವಿನ ರಥೋತ್ಸವ ನಡೆಯುವುದು.
ರಥೋತ್ಸವ ವೇಳೆ ಕಾಣಿಸಿಕೊಳ್ಳುತ್ತಾರೆ ಸ್ವಾಮೀಜಿ: ಉಟಕನೂರಿನ ಶ್ರೀಮಠದ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಸೇರುತ್ತಾರೆ. ಆದ್ರೆ ಜಾತ್ರೆಯ ರಥೋತ್ಸವ ವೇಳೆ ಮರದಲ್ಲಿ ಮರಿಬಸವಲಿಂಗ ಮಹಾಸ್ವಾಮಿಗಳು ದರ್ಶನ ನೀಡುತ್ತಾರೆ. ಆ ಬಳಿಕವೇ ರಥೋತ್ಸವ ನಡೆಯುವುದು. ಇತ್ತೀಚಿನ ದಿನಗಳಲ್ಲಿ ಜಾತ್ರೆ ವೇಳೆ ತಾತಾ ಮರಿಬಸವಲಿಂಗ ಸ್ವಾಮೀಜಿ ಹಾವು ಅಥವಾ ಗಿಳಿ ರೂಪದಲ್ಲಿ ಬಂದು ಭಕ್ತರಿಗೆ ದರ್ಶನ ನೀಡುತ್ತಾರೆ ಎಂಬ ಪ್ರತೀತಿ ಈ ಜಾತ್ರೆಗೆ ಇದೆ. ಹೀಗಾಗಿ ಲಕ್ಷಾಂತರ ಭಕ್ತರು ರಥೋತ್ಸವ ವೇಳೆ ಶ್ರೀಮಠಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಮರಿಬಸವಲಿಂಗ ಸ್ವಾಮೀಜಿ ದರ್ಶನ ಪಡೆದು ಹೋಗುತ್ತಾರೆ.