ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿದ ರಾಜರಾಜೇಶ್ವರಿ ರಥೋತ್ಸವ

By Suvarna News  |  First Published May 7, 2024, 6:21 PM IST

ಅತ್ಯಂತ ಶಕ್ತಿಯುತ ಹಾಗೂ ಬೇಡಿದವರಿಗೆ ಎಲ್ಲವನ್ನೂ ಕರುಣಿಸುವ ದೇವರೆಂಬ ನಂಬಿಕೆ ಇರುವ ಮಡಿಕೇರಿ ತಾಲ್ಲೂಕಿನ ಉಕ್ಕುಡದಲ್ಲಿ ಇರುವ ರಾಜರಾಜೇಶ್ವರಿ ದೇವಾಲಯದ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.


ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಮೇ.7): ಅತ್ಯಂತ ಶಕ್ತಿಯುತ ಹಾಗೂ ಬೇಡಿದವರಿಗೆ ಎಲ್ಲವನ್ನೂ ಕರುಣಿಸುವ ದೇವರೆಂಬ ನಂಬಿಕೆ ಇರುವ ಮಡಿಕೇರಿ ತಾಲ್ಲೂಕಿನ ಉಕ್ಕುಡದಲ್ಲಿ ಇರುವ ರಾಜರಾಜೇಶ್ವರಿ ದೇವಾಲಯದ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಸುತ್ತಲೂ ಇರುವ ಬೆಟ್ಟಗುಡ್ಡ ಮಧ್ಯದ ತಪ್ಪಲಿನ ಪ್ರದೇಶದಲ್ಲಿ ಇರುವ ರಾಜರಾಜೇಶ್ವರಿ ದೇವಾಲಯದ ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದ ಕುಂಕುಮಾರ್ಚನೆ, ಪುಷ್ಪಾರ್ಚನೆ ಮತ್ತು ಅಭಿಷೇಕಗಳು ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.

Tap to resize

Latest Videos

 ಬೆಂಗಳೂರು, ರಾಮನಗರ ಸೇರಿದಂತೆ ಕೊಡಗಿನ ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ಅಲ್ಲದೆ ಹೊರ ರಾಜ್ಯಗಳಾದ ತಮಿಳುನಾಡು, ಆಂದ್ರಪ್ರದೇಶದಿಂದಲ್ಲೂ ರಾಜರಾಜೇಶ್ವರ ದೇವಿಯ ಭಕ್ತರು ಇದ್ದು ಅಲ್ಲಿಂದಲೂ ಜನರು ರಥೋತ್ಸವದಲ್ಲಿ ಭಾಗವಹಿಸಿದ್ದರು. ನೂರಾರು ಭಕ್ತರು ವಿವಿಧ ಪೂಜೆಗಳಲ್ಲಿ ಭಾಗವಹಿಸಿ ದೇವರ ಹರಕೆಗಳನ್ನು ತೀರಿಸಿದರು. 

ಕುಂಡ್ಯೋಳಂಡ ಕಪ್‌ ಹಾಕಿ: ಚೇಂದಂಡ 3ನೇ ಬಾರಿ ಚಾಂಪಿಯನ್

ರಥೋತ್ಸವದ ಹಿನ್ನೆಲೆಯಲ್ಲಿ ಇಡೀ ದೇವಾಲಯವನ್ನು ವಿದ್ಯುತ್ ದೀಪಗಳು, ತಳಿರು ತೋರಣ ಹಾಗೂ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ರಥೋತ್ಸವದ ಹಿನ್ನೆಲೆಯಲ್ಲಿ ರಥವನ್ನು ಅಲಂಕೃತಗೊಳಿಸಲಾಗಿತ್ತು. ದೇವಾಲಯದಲ್ಲಿ ವಿವಿಧ ಪೂಜೆಗಳ ಬಳಿಕ ಉತ್ಸವ ಮೂರ್ತಿಯನ್ನು ಹೊರಗೆ ತರಲಾಯಿತು. ನಂತರ ದೇವಾಲಯದ ಸುತ್ತಲೂ ಮೆರಣಿಗೆ ಮಾಡಲಾಯಿತು. ಚಂಡೆ ಹಾಗೂ ಮಂಗಳ ವಾದ್ಯಗಳೊಂದಿಗೆ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ನಂತರ ನೂರಾರು ಹೆಣ್ಣುಮಕ್ಕಳು ಪೂರ್ಣ ಕುಂಭ ಕಳಶ ಹೊತ್ತು ತಮ್ಮ ಹರಕೆಗಳನ್ನು ತೀರಿಸಿದರು. 

ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸುತ್ತಿದ್ದಂತೆ ಮುಂದೆ ನೂರಾರು ಬಾಲಕಿಯರು ಪೂರ್ಣಕುಂಭ ಕಳಶ ಹೊತ್ತು ಮೆರವಣಿಗೆಯಲ್ಲಿ ಸಾಗಿದಂತೆ ನೂರಾರು ಭಕ್ತರು ಗೋವಿಂದ, ಗೋವಿಂದ ಎಂದು ಘೋಷಣೆಗಳನ್ನು ಕೂಗುತ್ತಾ ರಥವನ್ನು ದೇವಾಲಯದ ಸುತ್ತಲೂ ಎಳೆದರು. ರಥೋತ್ಸವದ ಬಳಿಕ ಉತ್ಸವ ಮೂರ್ತಿಯನ್ನು ಪಲ್ಲಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಯಿತು. ಬಳಿಕ ರಥೋತ್ಸವದಲ್ಲಿ ಭಾಗವಹಿಸಿದ್ದ ನೂರಾರು ಭಕ್ತರಿಗೆ ಅನ್ನ ಸಂತರ್ಪಣೆಯೂ ನಡೆಯಿತು. 

ರಥೋತ್ಸವದಲ್ಲಿ ಭಾಗವಹಿಸಿದ್ದ ಬೆಂಗಳೂರಿನ ಭಕ್ತರೊಬ್ಬರು ಹಲವು ವರ್ಷಗಳಿಂದ ನಾವು ಈ ದೇವಿಯ ಭಕ್ತರಾಗಿದ್ದೇವೆ. ತುಂಬಾ ಶಕ್ತಿಶಾಲಿ ದೇವಿ ಇದಾಗಿದ್ದು, ತಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಹೊಸದಾಗಿ ಮದುವೆಯಾಗಿ ಎಷ್ಟು ವರ್ಷಗಳಾದರೂ ಮಕ್ಕಳಾಗದ ಮಹಿಳೆಯರು ಇಲ್ಲಿ ಹರಕೆ ಹೊತ್ತ ಮೇಲೆ ಮಕ್ಕಳು ಸಹ ಆಗಿವೆ. ಎಷ್ಟೋ ಹೆಣ್ಣು ಮಕ್ಕಳಿಗೆ ಹರಕೆಯ ಬಳಿಕ ವಿವಾಹ ನೆರವೇರಿವೆ. ಸ್ವತಃ ನಾನೂ ಸಹ ಈ ದೇವಿಗೆ ಹರಕೆ ಹೊತ್ತ ಬಳಿಕ ನನಗೂ ವಿವಾಹವಾಯಿತು. ಹೀಗಾಗಿ ಎಲ್ಲೆಡೆಯಿಂದಲೂ ಈ ದೇವಿಯ ರಥೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸುತ್ತಾರೆ ಎಂದಿದ್ದಾರೆ. 

ಕರ್ನಾಟಕದ ಮೊದಲ ಅತೀ ಎತ್ತರದ ಗಾಜಿನ ಸೇತುವೆ: ಕೊಡಗಿನ ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ..!

ದೇವಾಲಯದ ಧರ್ಮದರ್ಶಿ ಗೋವಿಂದಸ್ವಾಮಿ ಅವರು ಮಾತನಾಡಿ 75 ವರ್ಷಗಳಿಂದ ಈ ದೇವಿಯ ಆರಾಧನೆ ನಡೆಯುತ್ತಿದೆ. ನಮ್ಮ ತಂದೆ ಸಣ್ಣಪ್ಪ ಸ್ವಾಮಿ ಅವರು ದೇವಿಯನ್ನು ಪೂಜಿಸಲು ಆರಂಭಿಸಿದ್ದರು. ಇಂದಿಗೂ ಅಷ್ಟೇ ಶ್ರದ್ಧಾಭಕ್ತಿಯಿಂದ ಪೂಜಾ ವಿಧಿವಿಧಾನಗಳು ನೆರವೇರುತ್ತವೆ. ಪ್ರತೀ ವರ್ಷ ಮೇ ತಿಂಗಳ ಮೊದಲ ಮಂಗಳವಾರದಂದು ದೇವಿಯ ರಥೋತ್ಸವ ನೆರವೇರುತ್ತದೆ. ಹಾಗೆಯೇ ಈ ಬಾರಿಯೂ ವಿಜೃಂಭಣೆಯಿಂದ ರಥೋತ್ಸವ ನೆರವೇರಿದೆ. ಸಾಕಷ್ಟು ಭಕ್ತರು ಧನ, ಧಾನ್ಯಗಳನ್ನು ದೇವಿಗೆ ಹರಕೆಯಾಗಿ ನೀಡಿ ಅವರೇ ಜಾತ್ರಾ ಮಹೋತ್ಸವನ್ನು ನೆರವೇರಿಸುತ್ತಾರೆ ಎಂದಿದ್ದಾರೆ. ಆ ದೇವಿಯು ಎಲ್ಲಾ ಭಕ್ತರಿಗೆ ಸನ್ಮಂಗಳವನ್ನು ಉಂಟು ಮಾಡಲಿ ಎಂದು ಆಶಿಸಿದ್ದಾರೆ.

click me!