ಮೇ 10ರಂದು ಅಕ್ಷಯ ತೃತೀಯ: ಚಿನ್ನ ಕೊಳ್ಳುವುದು ತಪ್ಪಲ್ಲ, ಅಕ್ಷಯ ತೃತೀಯಕ್ಕೆ ಸಂಬಂಧವಿಲ್ಲ

Published : May 06, 2024, 05:42 PM ISTUpdated : May 06, 2024, 05:43 PM IST
ಮೇ 10ರಂದು ಅಕ್ಷಯ ತೃತೀಯ: ಚಿನ್ನ ಕೊಳ್ಳುವುದು ತಪ್ಪಲ್ಲ, ಅಕ್ಷಯ ತೃತೀಯಕ್ಕೆ ಸಂಬಂಧವಿಲ್ಲ

ಸಾರಾಂಶ

ಅಕ್ಷಯ ತೃತೀಯ ವಿಶೇಷವೆಂದರೆ ಮಹಾ ಮುಹೂರ್ತವೆಂದು ಪ್ರಸಿದ್ಧವಾಗಿದೆ. ಖ್ಯಾತ ಜ್ಯೋತಿಷಿ ಹರೀಶ್ ಕಶ್ಯಪ್ ಅಕ್ಷಯ ತೃತೀಯದ ಮಹತ್ವದ ಬಗ್ಗೆ ಹೇಳಿದ್ದಾರೆ. 

ಅಕ್ಷಯ ತೃತೀಯ ವಿಶೇಷವೆಂದರೆ ಮಹಾ ಮುಹೂರ್ತವೆಂದು ಪ್ರಸಿದ್ಧವಾಗಿದೆ ಸಂವತ್ಸರ ಯುಗಾದಿ, ಅಕ್ಷಯ ತೃತೀಯ, ಆಶ್ವೀಜ ವಿಜಯದಶಮಿ ಮತ್ತು ಕಾರ್ತೀಕ ಶುದ್ಧ ಪ್ರತಿಪದ ಇದು ಮೂರೂವರೆ ಮುಹೂರ್ತ ವಿಶೇಷ ದಿನಗಳು ಜ್ಯೋತಿಷ್ಯ ಧರ್ಮಶಾಸ್ತ್ರಗಳಲ್ಲಿ ಬಹು ಪ್ರಾಧಾನ್ಯತೆ ಹೊಂದಿದೆ. ಈ ದಿನಗಳಂದು ಅಹಃಕಾಲ- ಮಧ್ಯಾಹ್ನ 12:45 ಒಳಗೆ ಯಾವುದೇ ಶುಭಕಾರ್ಯ, ಸತ್ಕರ್ಮಗಳಿಗೆ ಅನಂತ ಫಲವಿದೆ ಎಂದು ಸ್ಕಂದಪುರಾಣದಲ್ಲಿ ಹೇಳಲಾಗಿದೆ.

ತ್ರೇತಾಯುಗದ ಆರಂಭವೇ ವೈಶಾಖ ತೃತೀಯವು. ಅದೇ ಯುಗದಲ್ಲಿ ಶ್ರೀಹರಿಯು ಜಮದಗ್ನಿ-ರೇಣುಕೆಯರ ಮಗನಾಗಿ ಅವತಾರ ಎತ್ತಿದನು. ಅದಕ್ಕೂ ಹಿಂದಿನ ಯುಗಗಳಲ್ಲಿ ಬಲೀಂದ್ರನ ಗೆಲ್ಲುವುದಕ್ಕಾಗಿ ದೇವಗುರು ಬೃಹಸ್ಪತಿಯು ದೇವೇಂದ್ರನಿಂದ ಮಹಾಯಾಗ-ವ್ರತವನ್ನು ಮಾಡಿಸಿದರಂತೆ- ಇದರಿಂದ ಅಸುರರ ಕಾಟ ತಪ್ಪಿ ದೇವೇಂದ್ರನು ಪುನಃ ತನ್ನ ವೈಭವವನ್ನು ಶ್ರೀಹರಿಯ ಅನುಗ್ರಹದಿಂದ ಪಡೆದನು. ಮುಂದೆ ಇದೇ ಪರಶುರಾಮನು ದುಷ್ಟ ಕ್ಷಾತ್ರರ ಸದೆ ಬಡಿದು ಜಂಬೂದ್ವೀಪದ ದಕ್ಷಿಣ ಕಾನನವಾಗಿದ್ದ ನಮ್ಮ ಕಡಲ ತೀರಕ್ಕೆ ಬಂದನು. ಅಲ್ಲಿ ಹರಡಿದ್ದ ಮಹಾ ಸಮುದ್ರವನ್ನು ಭೂಮಿ ಅಂಚಿಗೆ ಭಾಗ ಮಾಡಿ ನಾನಾ ರಾಕ್ಷಸರನ್ನು ಕೊಂದು, ನಾನಾ ಗೋತ್ರದ ಬ್ರಾಹ್ಮಣ, ಕ್ಷತ್ರಿಯರಿಗೆ ವಾಸಿಸಲು ಭೂಮಿ ದಾನ ಮಾಡಿದನು. ಅದೇ ಸಂಕಲ್ಪದಲ್ಲಿ  ‘ಆ ದಾನ’ ಮಹಿಮೆಯಿಂದಲೇ ಇಂದಿಗೂ ಈ ಕಲಿಯುಗದಲ್ಲೂ ನಾವು ಈ ದಕ್ಷಿಣ ಭಾಗವನ್ನು ಪರಶುರಾಮ ಕ್ಷೇತ್ರವೆಂದು ನಿತ್ಯ ಮಹಾಸಂಕಲ್ಪಗಳಲ್ಲಿ ಬಳಸುತ್ತೇವೆ.

ಅಕ್ಷಯ ತೃತೀಯವು ಇಷ್ಟು ಪುರಾತನವಾದ ಸನಾತನಧರ್ಮದ ಆಚರಣೆಯಾಗಿದ್ದು, ಇದರ ಮಹತ್ವವೇ ದಾನ ವಿಶೇಷವೆನಿಸಿದೆ. ಆಧುನಿಕ ಕೊಳ್ಳುಬಾಕ ದುಷ್ಟತನದಿಂದ ಈ ಪರಮ ಮಂಗಲಕರ ದಿನವನ್ನು ‘ಚಿನ್ನ’ ಕೊಳ್ಳುವ ದಿನದಂತೆ ಅಪಚಾರ ಮಾಡುತ್ತಿರುವುದು ಶೋಚನೀಯ. ಸ್ನಾನ (ನದಿ, ತೀರ್ಥತಟಾಕ-ಸಮುದ್ರ), ಜಪ, ಯಜ್ಞ, ಶ್ರೀಗಂಧ, ಗೋಧಿ(ಯವಾನ್), ಜಲ,ಕಂಚಿನ ಪಾತ್ರೆ (ಕುಂಭ), ಯಥೇಷ್ಟ ಪಾಕ ಪರಮಾನ್ನ ದಾನ, ಗೋವು ಬ್ರಾಹ್ಮಣ ಪೂಜನಗಳು ಅಕ್ಷಯ ತೃತೀಯದ ಶಾಸ್ತ್ರೀಯ ಆಚರಣಾ ವಿಶೇಷ. ‘ಏಷ ಧರ್ಮಘಟೋ ದತ್ತೋ ಬಹ್ಮವಿಷ್ಣು ಶಿವಾತ್ಮಕ:, ಅಸ್ಯ ಪ್ರದಾನಾತ್ ತಷ್ಯಂತು ಪಿತರೋಥ ಪಿತಾಮಹಾಃ ಎಂದೇ ಭವಿಷ ಪುರಾಣ ವಾಕ್ಯವು.

ಅದು ಅಕ್ಷಯ ಫಲವು ಯಾಕೆ ಅಂದರೆ, ಉಚ್ಚದಲ್ಲಿ ರವಿ/ ದಿಗ್​ಬಲದ ವೃಷಭದ ರವಿ, ಉಚ್ಚಚಂದ್ರರು ಈ ದಿನ ತಮ್ಮ ಸ್ವನಕ್ಷತ್ರವಾದ ಕೃತ್ತಿಕೆ, ರೋಹಿಣಿಯಲ್ಲಿ ತಮ್ಮದೇ ಅಧಿಪತ್ಯದ ಕಿರಣಗಳನ್ನು ಜಗತ್ತಿಗೆ ಬೀರುವರು. ಅದರ ಅಮೃತ ಪರಿಣಾಮ ದಿನವೆಲ್ಲಾ ಇದ್ದು, ಸತ್ಕರ್ಮ ಧರ್ಮಗಳಿಗೆ ವಿಶೇಷ ಫಲವಿರುತ್ತದೆ.ತಾಮ್ರ, ಕಂಚು, ಬೆಳ್ಳಿ, ಚಿನ್ನ ಇವುಗಳನ್ನು(ಅಲ್ಪವಾದರೂ) ಕುಲದೇವರು ಗುರುಗಳ ಪೂಜಿಸಿ ದಾನ ಮಾಡುವುದು. ವೈಶಾಖವಾದ್ದರಿಂದ ಕೊಡಪಾನ, ಜಲ, ಶ್ರೀಗಂಧ, ಬೆಲ್ಲ, ಗೋಧಿ, ಅಕ್ಕಿ, ಬೀಸಣಿಗೆ, ಬಿಳಿ, ಹಳದಿ, ಕೋಮಲ ವಸ್ತ್ರ, ಪಾದರಕ್ಷೆ ಮೊದಲಾದ ಋತು ಮಾಸ ಅವಶ್ಯಕ ವಸ್ತುಗಳನ್ನು ದಾನ ಮಾಡಬೇಕು. ಮಹಾವತಾರೀ, ಚಿರಂಜೀವಿಯಾದ ಪ್ರಭು ಶ್ರೀಪರಶುರಾಮನಿಗೆ ಶಂಖದಿಂದ ತುಳಸಿ ಜಲವನ್ನು ಅರ್ಪಿಸಿ ನಮಿಸಬೇಕು.
ಚಿನ್ನ ಕೊಳ್ಳುವುದು ತಪ್ಪಲ್ಲ, ಆದರೆ ಅಕ್ಷಯ ತೃತೀಯಕ್ಕೂ ಅದಕ್ಕೂ ಯಾವ ಸಂಬಂಧವೂ ಇಲ್ಲ
 

PREV
Read more Articles on
click me!

Recommended Stories

ವೃಶ್ಚಿಕ ರಾಶಿಯಲ್ಲಿ ಲಕ್ಷ್ಮಿ ಯೋಗ ಆರಂಭ, ಅದೃಷ್ಟ ಈ 6 ರಾಶಿಗೆ
ಹೊಸ ವರ್ಷದಲ್ಲಿ ಕೇತು 3 ರಾಶಿಗೆ ದಯೆ, ಗೌರವ ಮತ್ತು ಪ್ರತಿಷ್ಠೆ 3 ಪಟ್ಟು ಜಾಸ್ತಿ