ಈ ವರ್ಷ ಪ್ರಧಾನವಾಗಿ ಗುರು ಗ್ರಹ ಹಾಗೂ ರಾಹು - ಕೇತು ಗ್ರಹಗಳ ಸಂಕ್ರಮಣ ಉಂಟಾಗಲಿದೆ. ದೀರ್ಘ ಕಾಲದಲ್ಲಿ ಸಂಚರಿಸುವ ಈ ಮೂರು ಗ್ರಹಗಳು ಹನ್ನೆರಡೂ ರಾಶಿಗಳ ಮೇಲೆ ಪ್ರಭಾವ-ಪರಿಣಾಮ ಬೀರಲಿವೆ. ಶನೈಶ್ಚರ ಮಾತ್ರ ವರ್ಷಪೂರ್ತಿ ತನ್ನ ಮೂಲ ತ್ರಿಕೋಣ ಹಾಗೂ ಸ್ವಸ್ಥಾನದಲ್ಲೇ ಸಂಚರಿಸಲಿದ್ದಾನೆ. ಇತರೆ ಗ್ರಹಗಳು ಸ್ವಲ್ಪ ವೇಗದ ಗತಿಯಲ್ಲಿ ರಾಶಿ ಸಂಕ್ರಮಣ ಮಾಡುವುದರಿಂದ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ರಾಶಿ ಫಲವನ್ನು ತಿಳಿಸಲಾಗಿದೆ.
ಶ್ರೀಕಂಠ ಶಾಸ್ತ್ರಿ, ಜ್ಯೋತಿಷಿಗಳು, ಸುವರ್ಣ ನ್ಯೂಸ್
ಮೇಷ (Aries)
ಈ ಹೊಸ ವರ್ಷ ನಿಮ್ಮ ಪಾಲಿಗೆ ಬೇವು-ಬೆಲ್ಲ ಮಿಶ್ರಣದಂಥ ಫಲವನ್ನೇ ತರಲಿದೆ. ಇದೇ ಏಪ್ರಿಲ್ 21ರಿಂದ ಜನ್ಮರಾಶಿಗೆ ಗುರು ಗ್ರಹ ಪ್ರವೇಶ ಮಾಡಲಿದ್ದು ಸ್ವಲ್ಪ ಅಸಮಧಾನದ ಫಲಗಳನ್ನು ಅನುಭವಿಸಬೇಕಾಗುತ್ತದೆ. ಜನ್ಮಗುರು ಸ್ವಲ್ಪ ಆರೋಗ್ಯದಲ್ಲಿ ವ್ಯತ್ಯಾಸ ಮಾಡುತ್ತಾನೆ. ಆದರೆ ಗುರುವು ನಿಮ್ಮ ರಾಶಿಗೆ ಭಾಗ್ಯಾಧಿಪತಿಯೂ ಹೌದು. ಹೀಗಾಗಿ ‘ತೇಜೋದಾರಗುಣಾನ್ವಿತ: ಸುರುಗುರೌ ಖ್ಯಾತ: ಪುಮಾನ್ ಕೌಜಭೇ’ ಎಂಬ ಶಾಸ್ತ್ರ ವಚನದಂತೆ ಉದಾರತೆಯೂ, ಖ್ಯಾತಿಯೂ, ತೇಜಸ್ವಿಯೂ, ಪ್ರಸಿದ್ಧತೆಯೂ ಉಂಟಾಗಲಿದೆ. ಅಲ್ಲದೆ ಲಾಭದ ಶನೈಶ್ಚರ ಹೆಚ್ಚಿನ ಆಯಸ್ಸನ್ನೂ ಸ್ಥಿರವಾದ ಸಂಪತ್ತನ್ನೂ ವೃತ್ತಿಯಲ್ಲಿ ಬಲವನ್ನೂ ತಂದು ಕೊಡಲಿದ್ದಾನೆ. ಆತಂಕ ಬೇಡ. ಉಳಿದ ಗ್ರಹಗಳು ಸ್ವಕ್ಷೇತ್ರ ಹಾಗೂ ಶುಭ ಕ್ಷೇತ್ರಗಳಲ್ಲಿ ಸಂಚರಿಸುವಾಗ ಹೆಚ್ಚಿನ ಶುಭಫಲವನ್ನು ಕಾಣುತ್ತೀರಿ. ಸಿವಿಲ್ ಕ್ಷೇತ್ರ, ಕಬ್ಬಿಣ, ಮರಳು, ಇಟ್ಟಿಗೆ, ಮಣ್ಣು ಇಂಥ ಕ್ಷೇತ್ರಗಳವರಿಗೆ ಹೆಚ್ಚಿನ ಆದಾಯವಿದೆ. ಸದ್ಯದ ಮಟ್ಟಿಗೆ ದಾಂಪತ್ಯದಲ್ಲಿ ಹಾಗೂ ನಿಮ್ಮ ವ್ಯವಹಾರ ವಹಿವಾಟುಗಳಲ್ಲಿ ಜಾಗ್ರತೆಯಿಂದ ಇರಿ. ಗುರು-ರಾಹು ಯುತಿಯಿಂದ ಧರ್ಮ ವಿರೋಧಿ ಚಟುವಟಿಕೆಗಳಲ್ಲಿ ಪ್ರೇರಣೆಯಾಗುವ ಸಾಧ್ಯತೆ ಹೆಚ್ಚು. ನಿಮ್ಮ ಆಲೋಚನೆಗಳೇ ನಿಮಗೆ ಮುಳುವಾಗಿ ಬಿಡುವ ಸಾಧ್ಯತೆ ಇದೆ. ಅಕ್ಟೋಬರ್ 30ರಂದು ರಾಹು-ಕೇತುಗಳ ಪರಿವರ್ತನೆ ಇದೆ. ನಿಮ್ಮ ರಾಶಿಯಿಂದ ವ್ಯಯ ಸ್ಥಾನಕ್ಕೆ ಬರುವ ರಾಹು ಹಾಗೂ ಷಷ್ಠಸ್ಥಾನಕ್ಕೆ ಬರುವ ಕೇತುವಿನಿಂದ ಸ್ವಲ್ಪ ವ್ಯಯ ಹಾಗೂ ಆರೋಗ್ಯದಲ್ಲಿ ತೊಡಕು. ಅನಗತ್ಯ ಕಾರ್ಯಗಳಲ್ಲಿ ಧನಹಾನಿಯಂಥ ಫಲಗಳಿವೆ. ಆದರೆ ಕೇತುವಿನಿಂದ ಸ್ವಲ್ಪ ಉದಾರತೆ. ಧೈರ್ಯ, ಶತ್ರುಗಳಿಂದ ಜಯದಂಥ ಫಲಗಳೂ ಇದ್ದಾವೆ. ವಿದ್ಯಾರ್ಥಿಗಳು ಸಹವಾಸದಿಂದ ಹಾಳಾಗುವ ಸಾಧ್ಯತೆ ಇರಲಿದೆ. ದುಷ್ಕಾರ್ಯಗಳಲ್ಲಿ ಸಮಯ ವ್ಯರ್ಥ ಮಾಡುವ ಸಾಧ್ಯತೆ ಹೆಚ್ಚು. ಹೀಗಾಗಿ ನಿಮಗೇ ನೀವೇ ಒಂದು ಚೌಕಟ್ಟು ಹಾಕಿಕೊಳ್ಳಬೇಕು. ಮುಂದಿನ ಫೆಬ್ರುವರಿ ವೇಳೆಗೆ ಹೆಚ್ಚಿನ ಬಲವನ್ನೂ, ಶುಭಫಲವನ್ನೂ ಕಾಣುವ ಸಾಧ್ಯತೆ ಇದೆ.
ವಿಶೇಷ ಸೂಚನೆ :
ಮೇ-ಜೂನ್ ತಿಂಗಳಲ್ಲಿ ಪ್ರಯಾಣದಲ್ಲಿ ಎಚ್ಚರ ವಹಿಸಿ.
ಅಕ್ಟೋಬರ್ - ನವೆಂಬರ್ ನಲ್ಲಿ ಹಣಕಾಸಿನ ತೊಂದರೆ ಸಾಧ್ಯತೆ ಇದೆ.
ಫೆಬ್ರುವರಿ-ಮಾರ್ಚ್ ನಲ್ಲಿ ಶುಭಫಲ ಸಾಧ್ಯತೆ ಇದೆ.
ಪರಿಹಾರ - ಸುಬ್ರಹ್ಮಣ್ಯ ಪ್ರಾರ್ಥನೆ, ಗುರು ಚರಿತ್ರೆ ಪಾರಾಯಣ ಮಾಡಿ
ಶುಭ ರತ್ನ - ಹವಳ
ಶುಭ ಸಂಖ್ಯೆ - 10
ಶುಭ ವರ್ಣ - ಕೆಂಪು-ಹಳದಿ
--
ವೃಷಭ (Taurus)
ವ್ಯಯಸ್ಥಾನಕ್ಕೆ ಪ್ರವೇಶಿಸುವ ಗುರು ಇದೇ ಏಪ್ರಿಲ್ 21ರಿಂದ ಸ್ವಲ್ಪ ಅಸಮಧಾನದ ಫಲಗಳನ್ನು ತರಲಿದ್ದಾನೆ. ಲಾಭಾಧಿಪತಿಯೂ ಅಷ್ಟಮಾಧಿಪತಿಯೂ ಆದ ಗುರು ಹೆಚ್ಚಿನ ವ್ಯಯವನ್ನುಂಟು ಮಾಡುತ್ತಾನೆ. ಸೇವಕರು-ಸಹಾಯಕರಲ್ಲಿ ನಂಬಿಕೆ ಕ್ಷೀಣವಾಗುತ್ತದೆ. ಇದರ ಹೊರತಾಗಿ ನಿಮ್ಮ ರಾಶಿಗೆ ಹೆಚ್ಚಿನ ಶುಭವನ್ನುಂಟು ಮಾಡುವಾತ ಶನೈಶ್ಚರ. ವರ್ಷವಿಡೀ ಕರ್ಮ ಸ್ಥಾನದಲ್ಲಿ ಸಂಚರಿಸುವ ಶನೈಶ್ಚರ ಹೆಚ್ಚಿನ ಶ್ರಮದಾಯಕ ಕೆಲಸಗಳನ್ನು ತರಲಿದ್ದಾನೆ. ಅಲ್ಲದೆ ಸ್ಥಾನ ಮಾನ ಗೌರವಗಳನ್ನೂ ಹೆಚ್ಚಿಸುತ್ತಾನೆ. ವಿಳಂಬವಾದರೂ ಕಾರ್ಯಗಳು ಪೂರ್ಣಗೊಳ್ಳುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಸಿವಿಲ್ ಕ್ಷೇತ್ರದವರಿಗೆ ಹೆಚ್ಚಿನ ಆದ್ಯತೆಗಳುಂಟಾಗಲಿವೆ. ರಾಜಕಾರಣಿಗಳಿಗೆ ಜಯವಿದೆ. ಅಕ್ಟೋಬರ್ ನಂತರದಲ್ಲಿ ರಾಹು-ಕೇತುಗಳಿಂದ ಅಧಿಕ ಲಾಭ ಗಳಿಸುತ್ತೀರಿ. ವಿದೇಶ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಬರಲಿದೆ. ವಿದೇಶ ವರಮಾನಕ್ಕೆ ಹೊಸ ಅವಕಾಶಗಳು ಉಂಟಾಗಲಿವೆ. ಹಣಕಾಸಿನ ಸ್ಥಿತಿ ಉತ್ತಮವಾಗಲಿದೆ. ಸ್ವಲ್ಪ ಕಣ್ಣಿನ ಸಮಸ್ಯೆಗಳು ಹಾಗೂ ಉದರ ಸಂಬಂಧಿ ತೊಂದರೆಗಳು ಉಂಟಾಗಬಹುದು ಎಚ್ಚರ ವಹಿಸಿ. ಉನ್ನತ ಶಿಕ್ಷಣದವರು ಹೆಚ್ಚಿನ ಜಾಗ್ರತೆ ವಹಿಸಿ. ಸಹವಾಸ ದೋಷದಿಂದ ನಿಮ್ಮ ಅಧ್ಯಯನ ಹಾಳಾಗುವ ಸಾಧ್ಯತೆ ಇದೆ. ಸಭೆಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ಮುನ್ನ ಹಿರಿಯರ ಸಲಹೆ ಪಡೆಯಿರಿ.
ವಿಶೇಷ ಸೂಚನೆ :
ಮೇ-ಜೂನ್ ತಿಂಗಳಲ್ಲಿ ಸ್ತ್ರೀ-ಪುರುಷರ ವಿಚಾರಗಳಲ್ಲಿ ಭಿನ್ನಾಭಿಪ್ರಾಯ, ಮನಸ್ತಾಪಗಳಾಗಬಹದು. ಎಚ್ಚರ ವಹಿಸಿ.
ಅಕ್ಟೋಬರ್ - ನವೆಂಬರ್ ನಲ್ಲಿ ಆರೋಗ್ಯದಲ್ಲಿ ಎಚ್ಚರ ವಹಿಸಿ. ಸ್ತ್ರೀಯರ ಆರೋಗ್ಯದಲ್ಲಿ ಎಚ್ಚರ ಬೇಕು.
ಫೆಬ್ರುವರಿ-ಮಾರ್ಚ್ ವಾಹನ-ವಸ್ತ್ರ-ಗೃಹ ಸಂಬಂಧಿ ಲಾಭವಿದೆ.
ಪರಿಹಾರ - ಲಲಿತಾ ಸಹಸ್ರನಾಮ ಪಠಿಸಿ ಹಾಗೂ ಗುರು ಚರಿತ್ರ ಪಠಿಸಿ
ಶುಭ ರತ್ನ - ಮರಕತ-ನೀಲ
ಶುಭ ಸಂಖ್ಯೆ - 9
ಶುಭ ವರ್ಣ - ಬಿಳಿ-ನೀಲಿ
Ugadi Yearly Horoscope; ಶುಭ ಫಲ ತರುವುದೇ ಶೋಭಾಕೃತ ಸಂವತ್ಸರ?
ಮಿಥುನ (Gemini)
ಹೊಸ ವರ್ಷ ನಿಮ್ಮ ಪಾಲಿಗೆ ಬೆಲ್ಲದಂಥ ಫಲವನ್ನು ತರಲಿದೆ. ವರ್ಷದ ಆದಿಯಲ್ಲೇ ಗುರುಬಲ ಪ್ರಾರಂಭವಾಗುವುದರಿಂದ ಅತ್ಯಂತ ಶುಭಫಲವನ್ನು ಹೊಂದುತ್ತೀರಿ. ಆಯಸ್ಥೇ ಧನಿಕ: ಅಭಯ: ಎಂಬ ಮಾತಿನಂತೆ ಧನವಂತರಾಗುತ್ತೀರಿ. ಭಯ ನಿವಾರಣೆಯಾಗುತ್ತದೆ. ಗುರುಬಲದಿಂದ ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ವಿವಾಹ-ಉಪನಯನದಂಥ ಕಾರ್ಯಗಳಿಂದ ಮನಸ್ಸು ನಿರಾಳವಾಗಲಿದೆ. ಭಾಗ್ಯದ ಶನೈಶ್ಚರನಿಂದಲೂ ಶುಭ ಫಲಗಳಿದ್ದಾವೆ. ವೃತ್ತಿಯಲ್ಲಿ ಬಡ್ತಿ ಹೊಂದುತ್ತೀರಿ. ಹೊಸ ಅವಕಾಶಗಳು ಅರಸಿ ಬರಲಿವೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ. ಉನ್ನತ ಶಿಕ್ಷಣದವರಿಗೆ ವಿಶೇಷ ಮಾರ್ಗದರ್ಶನ ಸಿಗಲಿದೆ. ಸಹೋದರರ ಸಹಕಾರ. ಸೇವಕರು ಸಹಾಯಕರಿಂದ ವಿಶೇಷ ಅನುಕೂಲಗಳು ಸಿಗಲಿವೆ. ಅಕ್ಟೋಬರ್ ನಂತರ ವೃತ್ತಿಯಲ್ಲಿ ಸ್ವಲ್ಪ ಶ್ರಮ ಹೆಚ್ಚಾಗಲಿದೆ. ಬೇರೆಯವರ ಕೆಲಸಗಳಿಂದ ನಿಮ್ಮ ಸಮಯ ವ್ಯರ್ಥವಾಗಲಿದೆ. ವಿದೇಶ ಕಾರ್ಯಗಳಲ್ಲಿ ಹೆಚ್ಚಿನ ಆದಾಯ ಬರಲಿದೆ. ಆದರೆ ಪ್ರಯಾಣದಲ್ಲಿ ಎಚ್ಚರವಹಿಸಿ. ಬಂಧು-ಮಿತ್ರರಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ. ಗೃಹ ನಿರ್ಮಾಣ, ನಿವೇಶನ ವಿಚಾರಗಳಲ್ಲಿ ಹಾಗೂ ಕಡತಪತ್ರಗಳು-ಲೆಕ್ಕ ಪತ್ರಗಳ ವಿಚಾರದಲ್ಲಿ ಎಚ್ಚರವಹಿಸಿ. ಕೋರ್ಟು ಕಚೇರಿ ವಿಚಾರದಲ್ಲಿ ಅಲೆದಾಟ ಇರಲಿದೆ.
ವಿಶೇಷ ಸೂಚನೆ :
ಮೇ-ಜೂನ್ ತಿಂಗಳಲ್ಲಿ ಹೆಚ್ಚಿನ ವ್ಯಯ ಉಂಟಾಗಬಹುದು. ಗೃಹ ಕಲಹಗಳಿಂದ ತೊಂದರೆಯಾಗಬಹುದು.
ಅಕ್ಟೋಬರ್ - ನವೆಂಬರ್ ವ್ಯಯ ಹೆಚ್ಚಾಗಲಿದೆ. ಮಕ್ಕಳ ವಿಚಾರದಲ್ಲಿ ಸ್ವಲ್ಪ ಅಸಮಧಾನಗಳುಂಟಾಗಲಿವೆ.
ಫೆಬ್ರುವರಿ-ಮಾರ್ಚ್ ವೇಳೆಗೆ ಸ್ವಲ್ಪ ಆರೋಗ್ಯದ ಕಡೆ ಗಮನ ವಹಿಸಿ.
ಪರಿಹಾರ - ವಿಷ್ಣು ಸಹಸ್ರನಾಮ ಪಠಿಸಿ
ಶುಭ ರತ್ನ - ಪಚ್ಚೆ
ಶುಭ ಸಂಖ್ಯೆ - 05
ಶುಭ ವರ್ಣ - ಹಸಿರು, ನೀಲಿ, ಬಿಳಿ
ಕರ್ಕಾಟಕ(Cancer)
ವರ್ಷದ ಪ್ರಾರಂಭದಲ್ಲಿ ಕರ್ಮ ಸ್ಥಾನವನ್ನು ಪ್ರವೇಶಿಸುವ ಗುರುವಿನಿಂದ ವೃತ್ತಿಯಲ್ಲಿ ಬಲವನ್ನು ಹೊಂದುತ್ತಿರಿ. 'ಅತಿ ಧನೀ ಮಹೀಶ ಪ್ರಿಯ:’ ಎಂಬ ಮಾತಿನಂತೆ ಧನವಂತರೂ ರಾಜ ಪ್ರಿಯರೂ ಆಗುತ್ತಾರೆ. ನಿಮ್ಮ ಕಾರ್ಯಗಳಲ್ಲಿ ಸಾಧನೆ ಮಾಡುವ ಕಾಲವಿದು. ಆದರೆ ರಾಹುವೂ ಕರ್ಮ ಸ್ಥಾನದಲ್ಲಿರುವುದರಿಂದ ನೀವು ಧರ್ಮವಿರೋಧಿ ಚಟುವಟಿಕೆಗಳಿಗೆ ತುತ್ತಾಗುವ ಸಾಧ್ಯತೆ ಇದೆ. ನಿಮ್ಮ ಕಾರ್ಯಗಳಲ್ಲಿ ಕಾಣದ ಕೈಗಳಿಂದ ಅಡೆತಡೆಗಳೂ ಉಂಟಾಗಬಹುದು. ಕೆಲವೊಮ್ಮೆ ನೀವು ಮಾಡಿದ ಕೆಲಸ ನಿಮಗೇ ತೊಡಕಾಗಲೂಬಹುದು. ಎಚ್ಚರವಾಗಿರಿ. ಉಳಿದಂದೆ ಅಷ್ಟಮದ ಶನೈಶ್ಚರ ಆರೋಗ್ಯದಲ್ಲಿ ವ್ಯತ್ಯಾಸ ಮಾಡಲಿದ್ದಾನೆ. ಮತ್ತೊಬ್ಬರ ವಿಚಾರದಲ್ಲಿ ಹೆಚ್ಚು ತಲೆಕೆಡಿಸಿಕೊಂಡು ಬಳಲುತ್ತೀರಿ. ಅಕ್ಟೋಬರ್ ನಂತರ ನಿಮಗೆ ಧರ್ಮ ಕಾರ್ಯಗಳಲ್ಲಿ ಅಡೆತಡೆ ಉಂಟಾಗಲಿದೆ. ನಿಮ್ಮ ಹೆಸರು ಹಾಳಾಗಬಹುದು. ತಂದೆ-ಮಕ್ಕಳಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಬರಬಹುದು. ಹುಂಬತನ ಬೇಡ. ಸಾಹಸ ಕಾರ್ಯಗಳಲ್ಲಿ ಜಯ ಸಿಗಲಿದೆ.
ವಿಶೇಷ ಸೂಚನೆ :
ಮೇ-ಜೂನ್ ತಿಂಗಳಲ್ಲಿ ಮನಸ್ಸು ಚಂಚಲವಾಗಬಹುದು. ಸ್ತ್ರೀ-ಪುರುಷರಲ್ಲಿ ಪರಸ್ಪರ ಅನುರಕ್ತತೆ ಉಂಟಾಗಲಿದೆ.
ಅಕ್ಟೋಬರ್ - ನವೆಂಬರ್ ವ್ಯಯ ಹೆಚ್ಚಾಗಲಿದೆ. ಹಣಕಾಸಿನ ವಿಚಾರದಲ್ಲಿ ಕಂಗಾಲಾಗುತ್ತೀರಿ.
ಫೆಬ್ರುವರಿ-ಮಾರ್ಚ್ಉದ್ಯೋಗ-ಹಣಕಾಸಿನ ವಿಚಾರದಲ್ಲಿ ಲಾಭವಿದೆ.
ಪರಿಹಾರ - ಶನೈಶ್ಚರ ಪ್ರಾರ್ಥನೆ. ಎಳ್ಳುದಾನ ಮಾಡಿ
ಶುಭ ರತ್ನ - ಮುತ್ತು, ಪುಷ್ಯರಾಗ
ಶುಭ ಸಂಖ್ಯೆ - 7
ಶುಭ ವರ್ಣ - ಬಿಳಿ, ಕೆಂಪು
ಭೂತಾದಿ ಅಮವಾಸ್ಯೆ 2023 ದಿನಾಂಕ, ವಿಶೇಷತೆ, ಹೆಸರಿನ ಹಿನ್ನೆಲೆ
ಸಿಂಹ(Leo)
ಯುಗಾದಿ ಹಬ್ಬ ನಿಮ್ಮ ಪಾಲಿಗೆ ಮಹಾ ಸಂತೋಷ ಸಂಭ್ರಮದ ಫಲಗಳನ್ನು ತರಲಿದೆ. ಭಾಗ್ಯ ರಾಶಿಯನ್ನು ಪ್ರವೇಶಿಸುತ್ತಿರುವ ಗುರು ನಿಮ್ಮ ಬದುಕಿಗೆ ನಿರೀಕ್ಷಿಸಿರದ ಸಂತಸದ ಫವನ್ನು ಕೊಡಲಿದ್ದಾನೆ. ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ತಂದೆ-ಮಕ್ಕಳ ನಡುವಿನ ಬಾಂದವ್ಯ ಹಿತವಾಗಲಿದೆ. ಧರ್ಮಕಾರ್ಯಗಳಲ್ಲಿ ತೊಡಗುತ್ತೀರಿ. ಸಾಧು-ಸಂತರ ಭೇಟಿಯಾಗಲಿದೆ. ಆದರೆ ಗುರುವಿನ ಜೊತೆ ರಾಹುವೂ ಇರುವುದರಿಂದ ಸ್ವಲ್ಪ ಎಚ್ಚರಿಕೆಯೂ ಬೇಕು. ಧರ್ಮ ಕಾರ್ಯಗಳಲ್ಲಿ ವಿರೋಧಗಳೂ ಹಾಗೂ ಅನ್ಯ ಕಾರ್ಯದಲ್ಲಿ ಅಚಾನಕ್ಕಾದ ಬದಲಾವಣೆಗಳೂ ಆಗುವ ಸಾಧ್ಯತೆ ಇದೆ. ರಾಹು-ಗುರು ಯುತಿ ನಿಮ್ಮನ್ನು ಹಾದಿ ತಪ್ಪಿಸುತ್ತದೆ. ಹೀಗಾಗಿ ಒಂದು ಎಚ್ಚರವಿರಲಿ. ಉಳಿದಂತೆ ಸಪ್ತಮದ ಶನೈಶ್ಚರ ವ್ಯಾಪಾರ ವಹಿವಾಟಿನಲ್ಲಿ ಗೆಲುವನ್ನು ತರಲಿದ್ದಾನೆ. ಆದರೆ ದಾಂಪತ್ಯದಲ್ಲಿ ಸ್ವಲ್ಪ ಅಸಮಧಾನದ ಹೊಗೆ ನಿಮ್ಮ ಸಮಾಧಾನವನ್ನು ಹಾಳು ಮಾಡುತ್ತದೆ. ತಾಳ್ಮೆ ಇರಲಿ. ಅಕ್ಟೋಬರ್ ನಂತರ ನಿಮ್ಮ ಬದುಕಿನ ಹಾದಿ ಸ್ವಲ್ಪ ಕಠಿಣವಾಗಲಿದೆ. ಅಷ್ಟಮ ಸ್ಥಾನ ಪ್ರವೇಶಿಸುವ ರಾಹು ನಿಮ್ಮ ಆರೋಗ್ಯದಲ್ಲಿ ಏರುಪೇರು ಮಾಡುತ್ತಾನೆ. ಗುಹ್ಯ ಪ್ರದೇಶದಲ್ಲಿ ಸಮಸ್ಯೆಗಳಾಗಬಹುದು. ನರ ದೌರ್ಬಲ್ಯಗಳುಂಟಾಗಬಹುದು. ಆರ್ಥಿಕವಾಗಿ ಸ್ವಲ್ಪ ಅತಂತ್ರರಾಗುತ್ತೀರಿ. ಹಾಗಾಗಿ ಆ ಸಮಯದಲ್ಲಿ ಎಚ್ಚರವಹಿಸಿ.
ವಿಶೇಷ ಸೂಚನೆ :
ಮೇ-ಜೂನ್ ತಿಂಗಳಲ್ಲಿ ಹೆಚ್ಚಿನ ವ್ಯಯ ಉಂಟಾಗಬಹುದು. ವೃತ್ತಿಯಲ್ಲಿ ನಷ್ಟಫಲ ಇರಲಿದೆ.
ಅಕ್ಟೋಬರ್ - ನವೆಂಬರ್ ತಿಂಗಳಲ್ಲಿ ಆರೋಗ್ಯ ಹಾಗೂ ಸಹೋದರರ ಬಾಂಧವ್ಯದಲ್ಲಿ ಏರುಪೇರಾಗಲಿದೆ.
ಫೆಬ್ರುವರಿ-ಮಾರ್ಚ್ ವೇಳೆಗೆ ವೃತ್ತಿಯಲ್ಲಿ ಬಡ್ತಿ. ಮನೆಯಲ್ಲಿ ಮಂಗಳಕಾರ್ಯಗಳ ಚಾಲನೆ.
ಪರಿಹಾರ – ಶಿವ ಸಹಸ್ರನಾಮ ಪಠಿಸಿ. ನಾಗ ಪ್ರಾರ್ಥನೆ ಮಾಡಿ
ಶುಭ ರತ್ನ - ಮಾಣಿಕ್ಯ, ಹವಳ
ಶುಭ ಸಂಖ್ಯೆ - 04
ಕನ್ಯಾ(Virgo)
ಯಗಾದಿ ಹಬ್ಬ ನಿಮ್ಮ ಪಾಲಿಗೆ ಸ್ವಲ್ಪ ಕಹಿಯಾಗಿರಲಿದೆ. ಈ ಬಾರಿ ಬೆಲ್ಲಕ್ಕಿಂತ ಬೇವು ಹೆಚ್ಚಾಗಿರಲಿದೆ. ಗುರುಬಲ ಕಳೆದು ಹೋಗಲಿದೆ. ಗುರು-ರಾಹು ಯುತಿ ನಿಮ್ಮ ಆರೋಗ್ಯವನ್ನು ಹದಗೆಡಿಸಲಿದೆ. ಅಷ್ಟಲ್ಲದೆ ಗುರುಹಿರಿಯರ ಬಾಂಧವ್ಯ ಸ್ವಲ್ಪ ಹಾಳಾಗಲಿದೆ. ಅಚಾನಕ್ಕಾಗಿ ಮುಖ್ಯ ವಸ್ತುಗಳು ಕಾಣೆಯಾಗುತ್ತವೆ. ವೃಥಾ ಸೋಲನ್ನು ಅನುಭವಿಸಬೇಕಾಗುತ್ತದೆ. ಅಪಮಾನಗಳನ್ನು ಎದುರಿಸಬೇಕಾಗುತ್ತದೆ. ಆದಷ್ಟು ಎಚ್ಚರವಾಗಿರಿ. ಷಷ್ಠ ಸ್ಥಾನದ ಶನೈಶ್ಚರ ಸ್ವಲ್ಪ ಧೈರ್ಯವನ್ನು ಕೊಡುತ್ತಾನೆ. ಶತ್ರುಗಳನ್ನೂ ಹಿಮ್ಮೆಟ್ಟಿಸುವ ಶಕ್ತಿ ಕೊಡುತ್ತಾನೆ. ಆದರೂ ಪ್ರತಿ ಹಂತದಲ್ಲೂ ಎಚ್ಚರಿಕೆ ಬೇಕು. ಅಕ್ಟೋಬರ್ ನಂತರ ಸಪ್ತಮ ಸ್ಥಾನಕ್ಕೆ ಬರುವ ರಾಹು ಹಾಗೂ ಜನ್ಮ ಸ್ಥಾನಕ್ಕೆ ಬರುವ ಕೇತು ನಿಮ್ಮ ದಾಂಪತ್ಯ ಹಾಗೂ ಆರೋಗ್ಯದಲ್ಲಿ ವ್ಯತ್ಯಾಸ ಉಂಟು ಮಾಡುತ್ತಾನೆ. ಜನರೊಂದಿಗಿನ ಒಡನಾಟ ಹಾಳಾಗಲಿದೆ. ಅನ್ಯ ಸಂಬಂಧಗಳು ನಿಮ್ಮನ್ನು ಅತಂತ್ರರನ್ನಾಗಿಸುತ್ತವೆ. ಬುಧ-ಶುಕ್ರರು ಶುಭ ಸ್ಥಾನಗಳಲ್ಲಿ ಸಂಚರಿಸುವ ಕಾಲದಲ್ಲಿ ನಿಶ್ಚಯವಾಗಿ ನಿಮಗೆ ಹಣ-ಅಧಿಕಾರ-ಗೆಲುವಿನ ಫಲಗಳಿದ್ದಾವೆ. ಹೆದರುವ ಅಗತ್ಯವಿಲ್ಲ. ದೇವತಾ ಪ್ರಾರ್ಥನೆ, ದಾನ ಇತ್ಯಾದಿ ಧರ್ಮಕಾರ್ಯಗಳಿಂದ ನಿಮ್ಮ ಬಲ ಹೆಚ್ಚಲಿದೆ. ವಿದ್ಯಾರ್ಥಿಗಳು ಸಹನೆಯಿಂದ ಇರಬೇಕು. ಅನಗತ್ಯ ಚಟುವಟಿಕೆಗಳಲ್ಲಿ ಭಾಗಿಯಾಗಬೇಡಿ. ವ್ಯಾಪಾರಿಗಳೂ ಕೂಡ ತುಂಬ ಎಚ್ಚರವಾಗಿರಿ. ನೀವು ಯಾವುದೇ ಪ್ರಮುಖ ಕಾರ್ಯಗಳನ್ನು ಮಾಡಿದರೂ ಅಕ್ಟೋಬರ್ ಒಳಗೆ ಮುಗಿಸಿಕೊಳ್ಳಿ. ಇಲ್ಲ ಮಾರ್ಚ್ ನಂತರ ಮಾಡಿ.
ವಿಶೇಷ ಸೂಚನೆ :
ಮೇ-ಜೂನ್ ತಿಂಗಳಲ್ಲಿ ಶುಭ ಫಲ ಕಾಣಬಹುದು.
ಅಕ್ಟೋಬರ್ - ನವೆಂಬರ್ ಸ್ವಲ್ಪ ಆರೋಗ್ಯ-ಹಣಕಾಸಿನ ತೊಂದರೆ
ಫೆಬ್ರುವರಿ-ಮಾರ್ಚ್ ವೇಳೆಗೆ ಮತ್ತೆ ಜೀವನ ಸುಸ್ಥಿತಿಗೆ ಬರಲಿದೆ.
ಪರಿಹಾರ - ದುರ್ಗಾ ಕವಚ ಪಠಿಸಿ, ವಿಷ್ಣು ಸಹಸ್ರನಾಮ ಪಠಿಸಿ
ಶುಭ ರತ್ನ - ಪಚ್ಚೆ, ಮಾಣಿಕ್ಯ
ಶುಭ ಸಂಖ್ಯೆ - 5
ಶುಭ ವರ್ಣ - ಹಸಿರು-ಬಿಳಿ-ನೀಲಿ
Ramadan 2023: ತಿಂಗಳ ಕಾಲ ಉಪವಾಸ ಮಾಡುವುದರ ಪ್ರಾಮುಖ್ಯತೆ ಏನು?
ತುಲಾ (Libra)
ಯುಗಾದಿಯ ಪ್ರಾರಂಭದ ದಿನಗಳಲ್ಲೇ ನಿಮಗೆ ಬೆಲ್ಲದಂಥ ಫಲಗಳು ಸಿಗಲಿವೆ. ಗುರುಬಲ ನಿಮ್ಮ ಆತ್ಮಬಲವನ್ನೂ, ಜನಬಲವನ್ನೂ ಹೆಚ್ಚಿಸಲಿದೆ. ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ನಿಮ್ಮ ದುಃಖಗಳು ಕೊನೆಗೊಂಡು ಸಂತೋಷದ ದಿನಗಳು ಶುರುವಾಗಲಿವೆ. ಆದರೆ ಗುರುವಿನ ಜೊತೆ ರಾಹುವೂ ಇರುವುದರಿಂದ ಸ್ವಲ್ಪ ಎಚ್ಚರಿಕೆಯೂ ಬೇಕು. ನಿಮ್ಮ ವ್ಯವಹಾರಗಳಲ್ಲಿ ನಂಬಿಕೆ ದ್ರೋಹಗಳುಂಟಾಗುವ ಸಾಧ್ಯತೆ ಹೆಚ್ಚು. ದಾಂಪತ್ಯದಲ್ಲೂ ಸ್ವಲ್ಪ ಮನಸ್ತಾಪಗಳು ಸಂಭವಿಸಬಹುದು. ಪಂಚಮ ಶನಿ ಸ್ವಲ್ಪ ಮಕ್ಕಳ ಬಾಂಧವ್ಯವನ್ನು ಹದಗೆಡಿಸುತ್ತಾನೆ. ಆದರೆ ನಿಮ್ಮ ಬುದ್ಧಿಬಲದ ಮೇಲೆ ಎಲ್ಲವೂ ತಿಳಿಯಾಗಲಿದೆ. ಅಕ್ಟೋಬರ್ ನಂತರ ಸ್ವಲ್ಪ ಆರೋಗ್ಯದಲ್ಲಿ ವ್ಯತ್ಯಾಸಗಳುಂಟಾಗಬಹುದು. ತಂದೆಯ ಬಂಧುಗಳ ಜೊತೆ ಸ್ವಲ್ಪ ವಿರೋಧಗಳುಂಟಾಗಬಹುದು. ವ್ಯಯ ಹೆಚ್ಚಾಗಲಿದೆ. ಆಪ್ತರು ಸ್ವಲ್ಪ ದೂರಾಗುತ್ತಾರೆ. ಉದರ ಸಂಬಂಧಿ ತೊಂದರೆಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಉನ್ನತ ಶಿಕ್ಷಣದವರಿಗೆ ಹೆಚ್ಚು ಶ್ರದ್ಧೆ ಬೇಕು. ಒಟ್ಟಾರೆಯಾಗಿ ಶುಭಾಶುಭ ಮಿಶ್ರಫಲವಿದೆ ಈ ಸಂವತ್ಸರದಲ್ಲಿ.
ವಿಶೇಷ ಸೂಚನೆ :
ಮೇ-ಜೂನ್ ತಿಂಗಳಲ್ಲಿ ವೃತ್ತಿ ಸ್ಥಳದಲ್ಲಿ ಅನ್ಯರ ಆಕರ್ಷಣೆಗೆ ಒಳಗಾಗುತ್ತೀರಿ.
ಅಕ್ಟೋಬರ್ - ನವೆಂಬರ್ ಸ್ವಲ್ಪ ಆರೋಗ್ಯ-ಹಣಕಾಸಿನ ತೊಂದರೆ ಬಾಧಿಸಲಿದೆ
ಫೆಬ್ರುವರಿ-ಮಾರ್ಚ್ ವೇಳೆಗೆ ಮತ್ತೆ ಶುಕ್ರನ ಬಲದಿಂದ ಜೀವನ ಸುಸ್ಥಿತಿಗೆ ಬರಲಿದೆ.
ಪರಿಹಾರ - ಲಲಿತಾ ಸಹಸ್ರನಾಮ ಪಠಿಸಿ. ದುರ್ಗಾ ಕವಚ ಪಠಿಸಿ
ಶುಭ ರತ್ನ - ವಜ್ರ-ನೀಲ
ಶುಭ ಸಂಖ್ಯೆ - 09
ಶುಭ ವರ್ಣ - ಬಿಳಿ-ನೀಲಿ
ವೃಶ್ಚಿಕ (Scorpio)
ಈ ಹೊಸ ವರ್ಷ ನಿಮ್ಮ ಪಾಲಿಗೆ ಸ್ವಲ್ಪ ಮಧ್ಯಮ ಫಲವನ್ನು ತರಲಿದೆ. ನಿಮ್ಮ ಬಂಧುಗಳ ಜೊತೆಗಿನ ಬಾಂಧವ್ಯ ಹಾಳಾಗಲಿದೆ. ಆರೋಗ್ಯವೂ ಸ್ವಲ್ಪ ಹದಗೆಡಲಿದೆ. ತಂದೆಯ ಬಂಧುಗಳ ಜೊತೆಗಿನ ಬಾಂಧವ್ಯವೂ ಹದಗೆಡಲಿದೆ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಹಿನ್ನಡೆ. ಸಾಲದ ಬಾಧೆಗಳಿಂದ ಬಳಲುವ ಸಾಧ್ಯತೆ ಇದೆ. ಶುಗರ್ - ಬಿಪಿ ಇರುವವರು ಹೆಚ್ಚು ಜಾಗ್ರತೆಯಿಂದ ಇರಿ. ಕರುಳಿಗೆ ಸಂಬಂಧಿಸಿದ ತೊಂದರೆಗಳು ಸಂಭವಿಸುವ ಸಾಧ್ಯತೆ ಇದೆ. ಇದರ ಹೊರತಾಗಿ ನಿಮ್ಮ ಬಂಧು-ಮಿತ್ರರ ವಿಚಾರದಲ್ಲಿ ಸ್ವಲ್ಪ ಎಚ್ಚರದ ನಿರ್ಧಾಗಳನ್ನು ತೆಗೆದುಕೊಳ್ಳಿ. ಶನೈಶ್ಚರನ ಬಲದ ಮೇಲೆ ವಾಹನ-ಗೃಹ ಸೌಖ್ಯಾದಿಗಳು ಇರಲಿವೆ. ಅಕ್ಟೋಬರ್ ನಂತರ ನಿಮ್ಮ ಆಲೋಚನೆಗಳು ನಿಮ್ಮ ನಿರ್ಧಾರಗಳು ನಿಮಗೆ ಮುಳುವಾಗಬಹುದು. ಉನ್ನತ ಶಿಕ್ಷಣದವರಿಗೆ ಮನಸ್ಸು ಚಂಚಲವಾಗುತ್ತದೆ. ಅನ್ಯ ಆಸಕ್ತಿಗಳಿಂದ ವ್ಯಕ್ತಿತ್ವ ಹಾಳಾಗುವ ಸಾಧ್ಯತೆ ಹೆಚ್ಚು. ಈ ವರ್ಷ ನಿಮ್ಮ ಗುರುಹಿರಿಯರ ಮಾರ್ಗದರ್ಶನ ನಿಮ್ಮನ್ನು ರಕ್ಷಿಸಲಿದೆ. ಗುರು ಪ್ರಾರ್ಥನೆ ಮಾಡಿ.
ವಿಶೇಷ ಸೂಚನೆ :
ಮೇ-ಜೂನ್ ತಿಂಗಳಲ್ಲಿ ಸ್ವಲ್ಪ ಮಟ್ಟಿಗೆ ಶುಭಫಲವಿದೆ.
ಅಕ್ಟೋಬರ್ - ನವೆಂಬರ್ ನಲ್ಲಿ ನಿಮ್ಮ ಆರೋಗ್ಯದ ಕಡೆ ಗಮನ ತೆಗೆದುಕೊಳ್ಳಿ. ಮಾನಸಿಕವಾಗಿ ಕುಸಿಯುವ ಸಾಧ್ಯತೆ ಇದೆ.
ಫೆಬ್ರುವರಿ-ಮಾರ್ಚ್ ವೇಳೆಗೆ ಕುಜನ ಬಲದ ಮೇಲೆ ಜೀವನದ ಕಷ್ಟಗಳನ್ನು ಹಿಮ್ಮೆಟ್ಟಿಸುವ ಶಕ್ತಿ ಬರಲಿದೆ.
ಪರಿಹಾರ - ಸುಬ್ರಹ್ಮಣ್ಯ ಕ್ಷೇತ್ರ ದರ್ಶನ ಮಾಡಿ, ಗುರು ಚರಿತ್ರ ಪಾರಾಯಣ ಮಾಡಿ
ಶುಭ ರತ್ನ - ಹವಳ-ಮಾಣಿಕ್ಯ
ಶುಭ ಸಂಖ್ಯೆ - 10
ಶುಭ ವರ್ಣ - ಕೆಂಪು-ಹಳದಿ
Ugadiಯಿಂದ ಗುಡಿ ಪಾಡ್ವಾವರೆಗೆ; ಎಲ್ಲೆಲ್ಲಿ ಹೇಗಿದೆ ಆಚರಣೆ?
ಧನಸ್ಸು(Sagittarius)
ಯುಗಾದಿ ಹಬ್ಬ ನಮ್ಮ ಪಾಲಿಗೆ ಮಹಾ ಮಂಗಳಫಲವನ್ನು ತರಲಿದೆ. ಏಪ್ರಿಲ್ ನಲ್ಲಿ ಬರುವ ಗುರುಬಲದಿಂದ ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಲಿವೆ. ಉನ್ನತ ಶಿಕ್ಷಣದವರಿಗೆ ಹೆಚ್ಚಿನ ಅನುಕೂಲವಿದೆ. ಮನಸ್ಸು ಚಂಚಲವಾಗುವ ಲಕ್ಷಣವೂ ಇದೆ. ಗುರುವಿನ ಜೊತೆಯಲ್ಲಿರುವ ರಾಹು ನಿಮ್ಮ ಹಾದಿಯನ್ನು ತಪ್ಪಿಸಬಹುದು. ನಿಮ್ಮ ನಿರ್ಧಾರಗಳು ನಿಮಗೆ ಮುಳುವಾಗಲೂಬಹುದು ಎಚ್ಚರಿಕೆ ಇರಲಿ. ಪ್ರತ್ಯಕ್ಷವಾಗಿ ಕಂಡರೂ ಪರಾಂಬರಿಸಿ ನಡೆಯಬೇಕಾಗುತ್ತದೆ. ಉದರ ಬಾಧೆಗಳು ಸ್ವಲ್ಪ ಬಾಧಿಸಲಿವೆ. ಉಳಿದಂತೆ ಶನೈಶ್ಚರನಿಂದ ಧೈರ್ಯ ಸಾಹಸ ಕಾರ್ಯಗಳಲ್ಲಿ ಗೆಲುವು. ಸಹೋದರರಲ್ಲಿ ಸಮಾಧಾನದ ಫಲಗಳನ್ನು ಕಾಣುತ್ತೀರಿ. ಸೇವಕರು ಸಹಾಯಕರು ನಿಮ್ಮ ನೆರವಿಗೆ ಬರುತ್ತಾರೆ. ಅಕ್ಟೋಬರ್ ನಂತರ ರಾಹು-ಕೇತುಗಳ ಪರಿವರ್ತನೆಯಿಂದ ನಿಮ್ಮ ಜೀವನದಲ್ಲಿ ಸ್ವಲ್ಪ ಅಸಮಧಾನದ ಫಲಗಳುಂಟಾಗುತ್ತವೆ. ವಾಹನ ಅವಘಡ, ಗೃಹ ಸಂಬಂಧಿ ಕಲಹಗಳುಂಟಾಗುವ ಸಾಧ್ಯತೆ ಇದೆ. ಎಚ್ಚರವಾಗಿರಿ. ಪ್ರಯಾಣ ವಿಚಾರದಲ್ಲಿ ಹೆಚ್ಚು ಎಚ್ಚರವಿರಲಿ. ನಿಮ್ಮ ಮಿತ್ರರ ವಿಚಾರದಲ್ಲಿ ಜಾಗ್ರತೆ ಇರಲಿ. ತಾಯಿಯ ಬಂಧುಗಳ ಜೊತೆ ಸ್ವಲ್ಪ ಬಾಂಧವ್ಯ ಹಾಳಾಗಲಿದೆ. ಆದರೆ ನಿಮ್ಮ ಬುದ್ಧಿಬಲದಿಂದ ಎಲ್ಲ ಸಂಕಷ್ಟಗಳಿಂದ ಪಾರಾಗುವ ಶಕ್ತಿಯೂ ಇದೆ. ಅಕ್ಟೋಬರ್ ನಂತರ ಗುರುವಿನ ಸಂಪೂರ್ಣ ಅನುಗ್ರಹ ಉಂಟಾಗಿ ನಿಮ್ಮ ಮನಸ್ಸಿನಲ್ಲಿ ಅಸಾಮಾನ್ಯ ಧೈರ್ಯ ಉತ್ಸಾಹಗಳು ಮೂಡಲಿವೆ. ಉಳಿದ ಗ್ರಹಗಳ ಬಲವೂ ಇರುವುದರಿಂದ ಹೆಚ್ಚಿನ ಆತಂಕವಿಲ್ಲ.
ವಿಶೇಷ ಸೂಚನೆ :
ಮೇ-ಜೂನ್ ತಿಂಗಳಲ್ಲಿ ಸಭೆಗಳಲ್ಲಿ ಶ್ಯೂರಿಟಿ ವಿಚಾರದಲ್ಲಿ ಎಚ್ಚರವಿರಲಿ
ಅಕ್ಟೋಬರ್ - ನವೆಂಬರ್ ತಿಂಗಳಲ್ಲಿ ವೃತ್ತಿ-ಲಾಭ ವಿಚಾರಗಳಲ್ಲಿ ಅಸಮಧಾನ ಇರಲಿದೆ.
ಫೆಬ್ರುವರಿ-ಮಾರ್ಚ್ ವೇಳೆಗೆ ಹೆಚ್ಚಿನ ಶುಭಫಲವನ್ನು ಹೊಂದುತ್ತೀರಿ.
ಪರಿಹಾರ - ದುರ್ಗಾ ಪ್ರಾರ್ಥನೆ, ದತ್ತಾತ್ರೇಯ ಪ್ರಾರ್ಥನೆ ಮಾಡಿ.
ಶುಭ ರತ್ನ - ಪುಷ್ಯರಾಗ, ಮಾಣಿಕ್ಯ
ಶುಭ ಸಂಖ್ಯೆ - 09
ಶುಭ ವರ್ಣ - ಹಳದಿ-ಕೇಸರಿ
ಮಕರ(Capricorn)
ಈ ಹೊಸವರ್ಷ ನಿಮ್ಮ ಪಾಲಿಗೆ ಮಿಶ್ರಫಲವನ್ನು ತರಲಿದೆ. ನಿಮ್ಮ ರಾಶಿಯಿಂದ ನಾಲ್ಕನೇ ಮೆನೆಗೆ ಪ್ರವೇಶಿಸುವ ಗುರು ನಿಮ್ಮ ವಾಹನ, ವಸ್ತ್ರ, ಗೃಹ ನಿರ್ಮಾಣದಂಥ ಕನಸುಗಳನ್ನು ನನಸು ಮಾಡುತ್ತಾನೆ. ಆದರೆ ಮಿತ್ರರು ಬಂಧುಗಳ ಜೊತೆ ಸ್ವಲ್ಪ ಎಚ್ಚರವಾಗಿರಿ. ವಿದ್ಯಾರ್ಥಿಗಳೂ ಕೂಡ ಎಚ್ಚರವಾಗಿರಬೇಕು. ಸಹವಾಸ ದೋಷ ನಿಮ್ಮನ್ನು ಹಾದಿ ತಪ್ಪಿಸಲಿದೆ. ಪ್ರಯಾಣದಲ್ಲಿ ತುಂಬ ಜಾಗ್ರತೆ ವಹಿಸಿ. ಧನ ಸ್ಥಾನದಲ್ಲಿರುವ ಶನೈಶ್ಚರನಿಂದ ಸ್ವಲ್ಪ ಕುಟುಂಬದ ಮನಸ್ತಾಪಗಳಿರುತ್ತವೆ. ಆದರೆ ಹೆಚ್ಚು ಪ್ರಮಾದವಿಲ್ಲ. ಹಣಕಾಸಿನ ಅನುಕೂಲ ಇರಲಿದೆ. ಸಾಡೇಸಾತ್ ಪ್ರಭಾವ ಇದ್ದೇ ಇದೆ ಎಂಬುದನ್ನು ಮರೆಯಬೇಡಿ. ಜನ್ಮ ಜಾತಕದಲ್ಲಿ ಶನಿ ದುರ್ಬಲನಾಗಿದ್ದರೆ ನಿಮ್ಮ ಮಾತು-ಹಣಕಾಸಿನ ವಿಚಾರದಲ್ಲಿ ಎಚ್ಚರವಹಿಸಿ. ಬ್ಯಾಂಕ್ ಗಳಲ್ಲಿ ಕೆಲಸ ಮಾಡುವವರು ಎಚ್ಚರವಾಗಿರಿ. ಅಕ್ಟೋಬರ್ ನಂತರ ತೃತೀಯ ಸ್ಥಾನಕ್ಕೆ ಬರುವ ರಾಹು ನಿಮ್ಮ ಧೈರ್ಯ-ಸಾಹಸವನ್ನು ಹೆಚ್ಚಿಸುತ್ತಾನೆ. ಭಾಗ್ಯ ಸ್ಥಾನಕ್ಕೆ ಹೋಗುವ ಕೇತು ತಂದೆ-ಮಕ್ಕಳಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಮೂಡಿಸುತ್ತಾನೆ. ಅಶ್ರದ್ಧೆಗಳು ನಿಮ್ಮ ವ್ಯಕ್ತಿತ್ವಕ್ಕೆ ತೊಡಕಾಗಬಹುದು. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಭಂಗವಾಗುತ್ತದೆ. ಉಳಿದಂತೆ ಶುಕ್ರ-ಬುಧ ಇತ್ಯಾದಿ ಗ್ರಹಗಳ ಶುಭ ಸಂಚಾರ ಕಾಲದಲ್ಲಿ ವೃತ್ತಿಯಲ್ಲಿ ಅನುಕೂಲ. ಬಡ್ತಿ ಇತ್ಯಾದಿ ಶುಭಫಲಗಳು ಇದ್ದೇ ಇವೆ.
ವಿಶೇಷ ಸೂಚನೆ :
ಮೇ-ಜೂನ್ ತಿಂಗಳಲ್ಲಿ ಸ್ತ್ರೀ-ಪುರುಷರಲ್ಲಿ ಪರಸ್ಪರ ಆಕರ್ಷಣೆ ಹಾಗೂ ಅತಿಯಾದ ಬಯಕೆಗಳಿಂದ ತೊಡಕು ಸಂಭವಿಸಬಹುದು. ಎಚ್ಚರವಿರಲಿ.
ಅಕ್ಟೋಬರ್ - ನವೆಂಬರ್ ವೇಳಗೆ ವೃತ್ತಿಯಲ್ಲಿ ಸ್ವಲ್ಪ ಅತಂತ್ರತೆ ಕಾಡಬಹುದು.
ಫೆಬ್ರುವರಿ-ಮಾರ್ಚ್ ವೇಳೆಗೆ ಮತ್ತೆ ಅಂದುಕೊಂಡದ್ದನ್ನು ಸಾಧಿಸುವ ಛಯ-ಬಲ ಬರಲಿದೆ.
ಪರಿಹಾರ - ಈಶ್ವರ ಪ್ರಾರ್ಥನೆ, ಶನೈಶ್ಚರ ಪ್ರಾರ್ಥನೆ ಮಾಡಿ
ಶುಭ ರತ್ನ - ನೀಲ-ಪಚ್ಚೆ
ಶುಭ ಸಂಖ್ಯೆ - 1
ಶುಭ ವರ್ಣ - ನೀಲಿ, ಹಳದಿ, ಹಸಿರು
Ugadi 2023: ಹಿಂದೂ ಹೊಸ ವರ್ಷದಂದೇ ಗಜಕೇಸರಿ ರಾಜಯೋಗ, 3 ರಾಶಿಗಳಿಗೆ ವರ್ಷಪೂರ್ತಿ ಶುಭ ಫಲ
ಕುಂಭ(Aquarius)
ಯುಗಾದಿ ನಿಮ್ಮ ಪಾಲಿಗೆ ಬೇವು-ಬೆಲ್ಲದ ಮಿಶ್ರಣದಂತೆಯೇ ಇರಲಿದೆ. ಅರ್ಧ ಸಿಹಿ ಅರ್ಧ ಕಹಿ. ಏಪ್ರಿಲ್ ತಿಂಗಳಲ್ಲಿ ಕಳೆದು ಹೋಗುವ ಗುರುಬಲ ನಿಮಗೆ ಸ್ವಲ್ಪ ಅತಂತ್ರತೆಯನ್ನು ಉಂಟು ಮಾಡಲಿದೆ. ಗುರು-ರಾಹು ಯುತಿ ನಿಮ್ಮನ್ನು ಸಂದಿಗ್ಧ ಪರಿಸ್ಥಿತಿಗೆ ದೂಡಲಿದೆ. ಭಯದ ವಾತಾವರಣ ನಿರ್ಮಾಣವಾಗಲಿದೆ. ಗುರು-ಹಿರಿಯರ ಸಂಬಂಧಗಳು ನಷ್ಟವಾಗಲಿವೆ. ಹಣಕಾಸಿನ ವಿಚಾರದಲ್ಲಿ ಅಸಮಾಧಾನ. ಸಂಪಾದಿಸಿದ ಹಣ ಸಂಪೂರ್ಣ ಸಮಾಧಾನ ಕೊಡಲಾರದು. ಅನ್ಯರ ಕಾರ್ಯಗಳಿಗಾಗಿ ಹೆಚ್ಚು ಬಳಲುತ್ತೀರಿ. ನಿಮ್ಮ ಸಂತೋಷವನ್ನು ಬಲಿ ಕೊಡಬೇಕಾಗುತ್ತದೆ. ಸಹೋದರರು-ಸೇವಕರ ಬಾಂಧವ್ಯಗಳು ಬಾಡಿ ಹೋಗಲಿವೆ. ಇದರ ಜೊತೆಗೆ ಜನ್ಮ ಶನಿಯಿಂದ ಆರೋಗ್ಯದಲ್ಲಿ ಏರುಪೇರು ಮಾಡುತ್ತಾನೆ. ಕಾಲು, ಕೈಗಳು, ಸ್ನಾಯುಗಳ ತೊಂದರೆ ಉಂಟು ಮಾಡುತ್ತಾನೆ. ಊತ-ಬಾವು ನೋವುಗಳು ಬಾಧಿಸಲಿವೆ. ಆದರೆ ಶನೈಶ್ಚರನಿಗೆ ಬಲವಿರುವ ಕಾರಣ ಎಲ್ಲವನ್ನೂ ಎದುರಿಸಿಕೊಂಡು ಸಾಗುವ ಶಕ್ತಿ ನಿಮ್ಮಲ್ಲಿದೆ. ಶನಿಯಿಂದ ಏರ್ಪಾಡಾಗಿರುವ ಶಶಯೋಗವನ್ನು ಮರೆಯುವಂತಿಲ್ಲ. ಆ ಯೋಗಫಲದಂತೆ ಶಕ್ತಿಯನ್ನು ಕೊಡುತ್ತಾನೆ. ಬಲವನ್ನು ಕೊಡುತ್ತಾನೆ. ಎಂಥ ಕಷ್ಟವನ್ನೂ ಎದುರಿಸುವ ಧೈರ್ಯವನ್ನು ಕೊಡುತ್ತಾನೆ. ಸೇವಕರು-ಸಹಾಯಕರಿಂದಲೇ ಎಲ್ಲ ಕೆಲಸಗಳನ್ನೂ ಪೂರ್ಣಗೊಳಿಸುವ ಛಾತಿ ನಿಮ್ಮದಾಗಲಿದೆ. ಅಕ್ಟೋಬರ್ ನಂತರ ನಿಮ್ಮ ಬದುಕಲ್ಲಿ ಹೊಸ ಉತ್ಸಾಹ ಮೂಡಲಿದೆ. ಧೈರ್ಯ-ಸಾಹಸ ಇಮ್ಮಡಿಗೊಳ್ಳಲಿದೆ. ಆದರೆ ಹಣಕಾಸಿನ ಪರಿಸ್ಥಿತಿ ಮಾತ್ರ ಅಸಮಾಧಾನವಾಗಿರಲಿದೆ. ದುಡ್ಡು ಕೊಟ್ಟು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಹುಷಾರಾಗಿರಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿರುವವರು ಎಚ್ಚರವಾಗಿರಿ. ವಿದ್ಯಾರ್ಥಿಗಳಿಗೆ ಸ್ವಲ್ಪ ತೊಡಕಿನ ದಿನಗಳಿದ್ದಾವೆ. ವಿದ್ಯಾಸಕ್ತಿ ಕಳೆದು ಹೋಗಲಿದೆ. ಶುಕ್ರ-ಬುಧ ಹಾಗೂ ಇತರೆ ಗ್ರಹಗಳ ಸುಸ್ಥಾನ ಸಂಚಾರದ ವೇಳೆ ಮತ್ತಷ್ಟು ಶುಭಫಲವಿದ್ದೇ ಇದೆ.
ವಿಶೇಷ ಸೂಚನೆ :
ಮೇ-ಜೂನ್ ತಿಂಗಳಲ್ಲಿ ಸ್ತ್ರೀ-ಪುರುಷರ ನಡುವೆ ಭಿನ್ನಾಭಿಪ್ರಾಯಗಳು ಹಾಗೂ ವೃತ್ತಿಯಲ್ಲಿ ಹೆಚ್ಚಿನ ತೊಡಕುಗಳು, ಒತ್ತಡಗಳ ಸಾಧ್ಯತೆ ಇದೆ.
ಅಕ್ಟೋಬರ್ - ನವೆಂಬರ್ ಸ್ವಲ್ಪ ಆರೋಗ್ಯ-ಹಣಕಾಸಿನ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಫೆಬ್ರುವರಿ-ಮಾರ್ಚ್ ವೇಳೆಗೆ ಮತ್ತೆ ಜೀವನ ಸುಸ್ಥಿತಿಗೆ ಬರಲಿದೆ. ದೈವಾನುಕೂಲದಿಂದ ಮತ್ತೆ ಜೀವನ ಚೇತರಿಸಿಕೊಳ್ಳುತ್ತದೆ.
ಪರಿಹಾರ - ಶನೈಶ್ಚರ ಪ್ರಾರ್ಥನೆ ಹಾಗೂ ದುರ್ಗಾ ದರ್ಶನ ಮಾಡಿ
ಶುಭ ರತ್ನ - ನೀಲ-ಪಚ್ಚೆ
ಶುಭ ಸಂಖ್ಯೆ - 1
ಶುಭ ವರ್ಣ - ನೀಲಿ, ಹಳದಿ, ಹಸಿರು
ಮೀನ (Pisces)
ಯುಗಾದಿ ಹಬ್ಬ ನಿಮಗೆ ಬೆಲ್ಲದ ಹೂರಣದಂಥ ಫಲವನ್ನು ತರಲಿದೆ. ಏಪ್ರಿಲ್ ನಲ್ಲಿ ಬರುವ ಗುರುಬಲ ನಿಮ್ಮ ಸಂತೋಷವನ್ನು ಹೆಚ್ಚಿಸುತ್ತದೆ. ಕುಟುಂಬದಲ್ಲಿ ಸಂಭ್ರವನ್ನುಂಟು ಮಾಡಲಿದೆ. ಮನೆಯಲ್ಲಿ ಮಂಗಳಕಾರ್ಯಗಳು ನಡೆಯಲಿವೆ. ಪೆಂಡಿಂಗ್ ಇದ್ದ ಎಲ್ಲ ಕೆಲಸಗಳೂ ಪೂರ್ಣಗೊಳ್ಳಲಿವೆ. ನಿಮ್ಮ ಆರ್ಥಿಕ ಪರಿಸ್ಥಿತಿ ನಿಶ್ಚಯವಾಗಿ ಸುಧಾರಿಸಲಿದೆ. ವೃತ್ತಿಯಲ್ಲಿ ಬಡ್ತಿ ಇದೆ. ಹೊಸ ಅವಕಾಶ ಸಾಧ್ಯತೆ ಇದೆ. ಕುಟುಂಬದವರ ಬೆಂಬಲ ಸಿಗಲಿದೆ. ನಿಮ್ಮ ಮಾತು-ವಿದ್ಯೆ ನಿಮ್ಮ ಗೌರವವನ್ನು ಹೆಚ್ಚಿಸಲಿದೆ. ಆದರೆ ರಾಹುವೂ ದ್ವಿತೀಯ ಸ್ಥಾನದಲ್ಲಿರುವುದರಿಂದ ಎಚ್ಚರ ತಪ್ಪಬಾರದು. ವಿದ್ಯಾರ್ಥಿಗಳು ಎಚ್ಚರವಹಿಸಿ. ಒಂದು ಚೌಕಟ್ಟಿನಲ್ಲಿ ವ್ಯವಹರಿಸುವುದು ಶುಭ. ಅತಿಯಾದಲ್ಲಿ ಎಲ್ಲವೂ ವಿಷವಾಗುತ್ತದೆ. ವ್ಯಯದ ಶನೈಶ್ಚರನಿಂದ ನಷ್ಟ ಫಲವೂ ಇದೆ. ಸಾಡೇಸಾತ್ ಪ್ರಭಾವದಲ್ಲಿ ಆಪ್ತರನ್ನು ಕಳೆದುಕೊಳ್ಳುತ್ತೀರಿ. ಕಾಲಿನ ಬಾಧೆಗಳುಂಟಾಗಲಿವೆ. ಆರೋಗ್ಯದ ಬಗ್ಗೆ ಎಚ್ಚರವಹಿಸಿ. ಅಕ್ಟೋಬರ್ ನಂತರ ಶಿರೋಭಾಗದಲ್ಲಿ ತೊಂದರೆಗಳುಂಟಾಗಬಹುದು. ಬೇಡದ ಆಲೋಚನೆಗಳಿಂದ ನಿಮ್ಮ ಮನಸ್ಸು ಅಸ್ವಸ್ಥವಾಗಲಿದೆ. ದಾಂಪತ್ಯ ಜೀವನದಲ್ಲೂ ಸ್ವಲ್ಪ ಕಹಿ ಅನುಭವಗಳುಂಟಾಗಲಿವೆ. ವ್ಯಾಪಾರಿಗಳು ತಲ್ಲಣಗೊಳ್ಳುವ ಸಾಧ್ಯತೆ ಇದೆ. ಮತ್ತೊಬ್ಬರನ್ನು ನಂಬದೆ ಸ್ವಂತವಾಗಿ ವಿಚಾರ ಮಾಡಿ. ಕಾರ್ಯಗಳನ್ನು ಮಾಡಿ. ಇನ್ನೊಬ್ಬರ ಮೇಲೆ ಅವಲಂಬಿಸುವುದರಿಂದ ತೊಂದರೆಯೇ ಹೆಚ್ಚು.
ವಿಶೇಷ ಸೂಚನೆ :
ಮೇ-ಜೂನ್ ತಿಂಗಳಲ್ಲಿ ಮಾತು-ಮನಸ್ಸು ಸ್ವಲ್ಪ ಚಂಚಲವಾಗುತ್ತದೆ. ಮಕ್ಕಳ ವಿಚಾರದಲ್ಲಿ ಹೆಚ್ಚು ಅಸಮಧಾನ ಇರಲಿದೆ.
ಅಕ್ಟೋಬರ್ - ನವೆಂಬರ್ ತಿಂಗಳಲ್ಲಿ ಆರೋಗ್ಯ ವಿಚಾರದಲ್ಲಿ ಹೆಚ್ಚು ಜಾಗ್ರತೆವಹಿಸಿ.
ಫೆಬ್ರುವರಿ-ಮಾರ್ಚ್ ವೇಳೆಗೆ ವೃತ್ತಿ ಹಾಗೂ ಆರ್ಥಿಕ ಪರಿಸ್ಥಿತಿ ಹೆಚ್ಚು ಸುಧಾರಿಸುತ್ತದೆ.
ಪರಿಹಾರ - ಕಡಲೆ ಧಾನ್ಯ ದಾನ, ದತ್ತ ಕ್ಷೇತ್ರ ದರ್ಶನ ಮಾಡಿ
ಶುಭ ರತ್ನ - ಮಾಣಿಕ್ಯ, ಪುಷ್ಯರಾಗ
ಶುಭ ಸಂಖ್ಯೆ - 09
ಶುಭ ವರ್ಣ - ಕೆಂಪು-ಹಳದಿ
===============
ಗಮನಿಸಲೇ ಬೇಕಾದ ಅಂಶ :
ಯದ್ಭಾವಗೋ ಗೋಚರತೋ ವಿಲಗ್ನಾದ್ದಶೇಶ್ವರ: ಸ್ವೋಚ್ಚಸುಹ್ಯದ್ಗೃಹಸ್ಥ: |
ತದ್ಭಾವಪುಷ್ಟಿಂ ಕುರುತೇ ತದಾನೀಂ ಬಲಾನ್ವಿತಶ್ಚೇಜ್ಜನನೇ ಪಿತಸ್ಯ ||
ಎಂಬ ಶಾಸ್ತ್ರಾಧಾರದಂತೆ ನಿಮ್ಮ ಜಾತಕದ ಗ್ರಹಸ್ಥಿತಿ ಬಹಳ ಮುಖ್ಯ. ಜೊತೆಗೆ ಜಾತಕಗಳಲ್ಲಿ ದಶಾಧಿಪತಿ-ಭುಕ್ತಿನಾಥರು ಬಲಿಷ್ಠರಾಗಿ(ಉಚ್ಚ, ಸ್ವಕ್ಷೇತ್ರ, ಮೂಲತ್ರಿಕೋಣ, ಮಿತ್ರಸ್ಥಾನ ಗಳಲ್ಲಿದ್ದರೆ ) ಲಗ್ನಾದಿ ಯಾವ ಭಾವಗಳಲ್ಲಿ ಗೋಚಾರದಲ್ಲಿ ಸಂಚರಿಸುವರೋ ಆ ಭಾವದ ಫಲಗಳನ್ನು ವೃದ್ಧಿಸುತ್ತಾರೆ. ಹೀಗಾಗಿ ರಾಶಿಫಲ ನೋಡಿ ಆತಂಕಕ್ಕೆ ಒಳಗಾಗಬೇಕಿಲ್ಲ. ಹತ್ತಿರದ ಬಲ್ಲ ಜ್ಯೋತಿಷಿಗಳಿಂದ ಜಾತಕ ಪರಾಮರ್ಶಿಸಿಕೊಳ್ಳಿ. ಎಷ್ಟೋ ಜನಕ್ಕೆ ಸಾಡೇಸಾತಿ ಭಯವಿದೆ. ನಿಮ್ಮ ಜಾತಕದಲ್ಲಿ ಶನೈಶ್ಚರ ಬಲಿಷ್ಠನಾಗಿದ್ದರೆ ಈಗ ಅಷ್ಟೇನೂ ಸಂಕಷ್ಟಕ್ಕೆ ಒಳಗಾಗುವುದಿಲ್ಲ. ಹನ್ನೆರಡೂ ರಾಶಿಗಳವರು ನವಗ್ರಹ ಕವಚ ಹಾಗೂ ನವಗ್ರಹ ಸ್ತೋತ್ರಗಳನ್ನು ಪಠಿಸಿ.