ಈ ಸಂವತ್ಸರದ ಹೆಸರಿನಲ್ಲೇ ಶುಭದಾಯಕ ಸೂಚನೆ ಇರುವುದರಿಂದ ಪ್ರಜೆಗಳು ಶುಭವನ್ನು ಹೆಚ್ಚಾಗಿ ನಿರೀಕ್ಷಿಸಬಹುದು. ಈ ವರ್ಷದ ಅಧಿಪತಿ ಯಾರು? ಗ್ರಹಗಳ ರಾಜಾದಯ ಫಲ ಏನಿದೆ?
ಶ್ರೀಕಂಠ ಶಾಸ್ತ್ರಿಗಳು, ಜ್ಯೋತಿಷಿ, ಸುವರ್ಣ ನ್ಯೂಸ್
ಶೋಭಕೃತ್- ಇದು ಹೊಸ ಸಂವತ್ಸರದ ಹೆಸರು. ಶೋಭತ ಇತಿ ಶೋಭಾ. ಹಾಗಂದರೆ ಪ್ರಕಾಶತೆ. ಕಾಂತಿ ಅಂತ. ಅಲ್ಲದೆ ಶುಭ ಅಂತಲೂ ಅರ್ಥೈಸಲಾಗುತ್ತದೆ. ಇನ್ನು ಕೃತ್ ಎಂದರೆ ಮಾಡುವುದು. ಒಟ್ಟಾರೆಯಾಗಿ ಒಳ್ಳೆಯದನ್ನು ಮಾಡು, ಶುಭವನ್ನು ಮಾಡು ಎಂದು ಅರ್ಥೈಸಬಹುದು. ಈ ಸಂವತ್ಸರದಲ್ಲಿ ಎಲ್ಲರೂ ಶುಭಕಾರ್ಯಗಳನ್ನು ಮಂಗಳಕಾರ್ಯಗಳನ್ನು ಮಾಡುವಂತಾಗಲಿ ಎಂಬ ಆಶಯದಲ್ಲಿ ಸಂವತ್ಸರ ಫಲವನ್ನು ಚಿಂತಿಸೋಣ.
ಶೋಭಕೃತ್ ಸಂವತ್ಸರದಲ್ಲಿ ಭೂಮಿಯಲ್ಲಿ ಸಸ್ಯ ಸಮೃದ್ಧತೆ ಉಂಟಾಗುತ್ತದೆ. ರಾಜರಲ್ಲಿ ವೈರತ್ವ ಕಡಿಮೆಯಾಗಲಿದೆ. ಪ್ರಜೆಗಳಲ್ಲಿ ಅನ್ಯೋನ್ಯ ಸ್ನೇಹ ಭಾವ ವೃದ್ಧಿಯಾಗಲಿದೆ ಎಂಬುದು ಶಾಸ್ತ್ರ ವಚನ. ಈ ಸಂವತ್ಸರದ ಹೆಸರಿನಲ್ಲೇ ಶುಭದಾಯಕ ಸೂಚನೆ ಇರುವುದರಿಂದ ಪ್ರಜೆಗಳು ಶುಭವನ್ನು ಹೆಚ್ಚಾಗಿ ನಿರೀಕ್ಷಿಸಬಹುದು.
ಶೋಭಕೃನ್ನಾಮ ಸಂವತ್ಸರ ಪ್ರಾರಂಭವಾಗುತ್ತಿರುವುದು ಬುಧವಾರ. ಯಾವ ವಾರದಂದು ಸಂವತ್ಸರ ಪ್ರಾರಂಭವಾಗುತ್ತದೆಯೋ ಅದೇ ವಾರದ ಅಧಿಪತಿ ಆ ವರ್ಷದ ರಾಜನಾಗಿರುತ್ತಾನೆ. ಹೀಗಾಗಿ ಈ ವರ್ಷದ ರಾಜ ಬುಧ.
ಸೌರ ಸಂಕ್ರಮಣವು ಯಾವ ವಾರವಿರುವುದೋ ಆ ವಾರದ ಅಧಿಪತಿ ಮಂತ್ರಿಯಾಗಿರುತ್ತಾನೆ. ಹೀಗಾಗಿ ಈ ವರ್ಷದಲ್ಲಿ ಶುಕ್ರವಾರದಂದು ಸೌರ ಸಂಕ್ರಮಣವಾಗುವುದರಿಂದ ಈ ವರ್ಷದ ಮಂತ್ರಿ ಶುಕ್ರನಾಗಿದ್ದಾನೆ. ರಾಜ-ಮಂತ್ರಿಗಳೇ ಸಾಮಾನ್ಯವಾಗಿ ಆ ವರ್ಷದ ಫಲಾಫಲ ನಿರ್ಣಯಿಸಿಬಿಡುತ್ತಾರೆ. ಈ ವರ್ಷ ರಾಜ-ಮಂತ್ರಿಗಳೀರ್ವರೂ ಶುಭ ಗ್ರಹರೇ ಆಗಿರುವುದರಿಂದ ಶುಭಫಲ ಅಧಿಕವಾಗಿರುತ್ತದೆ. ಇವರ ಜೊತೆ ಸಹಕಾರ ಕೊಡುವವರು ಉಳಿದ ಗ್ರಹಗಳು. ಎಲ್ಲ ಗ್ರಹರ ಸಹಕಾರದಿಂದ ವರ್ಷ ಫಲ ನಿರ್ಮಾಣವಾಗುತ್ತದೆ. ಆ ಫಲಾಫಲಗಳು ಹೇಗಿವೆ..?
Ugadiಯಿಂದ ಗುಡಿ ಪಾಡ್ವಾವರೆಗೆ; ಎಲ್ಲೆಲ್ಲಿ ಹೇಗಿದೆ ಆಚರಣೆ?
ಗ್ರಹಗಳ ರಾಜಾದಯಫಲ :
ರಾಜ - ಬುಧ
ಬುಧ ಭೂ ತತ್ವದ ಅಧಿಪತಿ. ಹೀಗಾಗಿ ಭೂಮಿಯಲ್ಲಿ ಸಮೃದ್ಧತೆ ಹೆಚ್ಚಾಗಲಿದೆ. ಸಸ್ಯ ಸಂಪತ್ತು ಹೆಚ್ಚಲಿದೆ. ಬುದ್ಧಿವಂತರ ಸಂಖ್ಯೆ ಹೆಚ್ಚಾಗಲಿದೆ. ಸ್ವಲ್ಪ ಮಟ್ಟಿಗೆ ರಾಜಕೋಪ ಇರಲಿದೆ. ಅಂದರೆ ಇನ್ಕಮ್ ಟ್ಯಾಕ್ಸ್ ರೇಡ್ ಗಳು ಅಧಿಕವಾಗಬುದು. ಟ್ಯಾಕ್ಸ್ ಕಟ್ಟಿ. ಲಿಪಿ-ಗಣಿತ-ವ್ಯಾಕರಣ ಇತ್ಯಾದಿ ಶಾಸ್ತ್ರ ಸಂಬಂಧಿ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಅನುಕೂಲವಿದೆ.
ಮಂತ್ರಿ - ಶುಕ್ರ
ಶುಕ್ರನು ಮಂತ್ರಿಯಾಗಿರುವುದರಿಂದ ಸ್ತ್ರೀಯರಿಗೆ ಹೆಚ್ಚು ಬಲವಿರಲಿದೆ. ಸ್ತ್ರೀಯರು ಮುಖ್ಯ ರಂಗಕ್ಕೆ ಬರುತ್ತಾರೆ. ಸ್ತ್ರೀಯರ ಹಿಡಿತದಲ್ಲಿ ಸರ್ಕಾರಗಳು ನಡೆಯಲಿವೆ. ಸ್ತ್ರೀ-ಪುರುಷರಲ್ಲಿ ಅನ್ಯೋನ್ಯ ಬಾಂಧವ್ಯ ವೃದ್ಧಿಯಾಗುತ್ತದೆ. ಹಾಲು-ಹೈನುಗಾರಿಗೆ ಸಮೃದ್ಧ ಫಲವಿದೆ.
ಸೇನಾಧಿಪತಿ - ಗುರು
ಗುರುವು ಸೇನಾಧಿಪತಿಯಾಗಿರುವುದರಿಂದ ರಕ್ಷಣಾತ್ಮಕವಾಗಿ ಹೆಚ್ಚು ಬಲವಿದೆ. ಬುದ್ಧಿಬಲದಿಂದ ರಕ್ಷಣಾ ವ್ಯವಸ್ಥೆ ನಡೆಯುತ್ತದೆ. ಆಧ್ಯಾತ್ಮದ ಆಸಕ್ತಿ ಹೆಚ್ಚಾಗಲಿದೆ. ದೇವಪೂಜೆ-ಉತ್ಸವಗಳಲ್ಲಿ ಶ್ರದ್ಧೆ ಹೆಚ್ಚಾಗಲಿದೆ. ಪ್ರಜೆಗಳಿಗೆ ಸಂತೋಷವಿದೆ.
ಸಸ್ಯಾಧಿಪತಿ - ಚಂದ್ರ
ನೀರಿನ ಅಧಿಪತಿಯಾದ ಚಂದ್ರನೇ ಸಸ್ಯಾಧಿಪತಿಯಾದ್ದರಿಂದ ಸಸ್ಯ ಸಮೃದ್ಧತೆ ಉಂಟಾಗಲಿದೆ. ಭೂಮಿಯಲ್ಲಿ ಬೆಳೆಯುವ ಬೆಳೆಗಳು ಚಂದ್ರಕಿರಣಗಳಿಂದ ಸಮೃದ್ಧ ಫಲವನ್ನು ಕೊಡಲಿವೆ. ಪಶುಗಳಿಗೆ ಸೌಖ್ಯವಿದೆ.
Ugadi 2023: ಹಿಂದೂ ಹೊಸ ವರ್ಷದಂದೇ ಗಜಕೇಸರಿ ರಾಜಯೋಗ, 3 ರಾಶಿಗಳಿಗೆ ವರ್ಷಪೂರ್ತಿ ಶುಭ ಫಲ
ಧಾನ್ಯಾಧಿಪತಿ - ಶನೈಶ್ಚರ
ಧಾನ್ಯಾಧಿಪತಿ ಶನಿಯಾದ್ದರಿಂದ ಸ್ವಲ್ಪ ದುರ್ಭಿಕ್ಷೆ ಉಂಟಾಗಲಿದೆ. ಪದಾರ್ಥಗಳು ಒಣಗಿ ಹೋಗಲಿವೆ. ಕಾಲದಲ್ಲಿ ಸಿಗಬೇಕಾದ ಬೆಳೆ ಕೈ ಸೇರದೆ ಹೋಗಬಹುದು. ಕಪ್ಪು ಧಾನ್ಯಗಳು ಸಮೃದ್ಧವಾಗಲಿವೆ.
ಅರ್ಘಾಧಿಪತಿ - ಗುರು
ಅರ್ಘಾಧಿಪತ್ಯವೆಂದರೆ ಪದಾರ್ಥಗಳಿಗೆ ಉಂಟಾಗುವ ಬೆಲೆ. ಗುರುವಿನ ಸಾರಥ್ಯದಲ್ಲಿ ಮಂಗಲ ಕಾರ್ಯಗಳು ನಡೆಯಲಿವೆ. ಸಿಹಿ ಪದಾರ್ಥಗಳ ಬೆಲೆ ಸೌಖ್ಯವೆನಿಸಲಿದೆ. ಪದಾರ್ಥಗಳ ಮೌಲ್ಯಗಳಿಗೆ ತಕ್ಕ ಬೆಲೆ ನಿರ್ಮಾಣವಾಗಲಿದೆ.
ಮೇಘಾಧಿಪತಿ - ಗುರು
ಗುರುವು ಮೇಘಾಧಿಪತಿಯಾದ್ದರಿಂದ ಸಮೃದ್ಧ ಮಳೆ ಉಂಟಾಗಲಿದೆ. ಧಾನ್ಯ ಸಮೃದ್ಧಿ ಉಂಟಾಗಲಿದೆ. ಜನರು ಸುಭಿಕ್ಷದಿಂದಿರುತ್ತಾರೆ.
ರಸಾಧಿಪತಿ- ಬುಧ
ಚಂದನ, ಕರ್ಪೂರ, ಸಕ್ಕರೆ, ಉಪ್ಪು ಈರುಳ್ಳಿ, ಶುಂಠಿ ಇಂಥ ಪದಾರ್ಥಗಳ ಸಮೃದ್ಧತೆ ಉಂಟಾಗಲಿವೆ. ತುಪ್ಪದಂಥ ಪದಾರ್ಥಗಳು ಯಥೇಚ್ಚವಾಗಿ ಸಿಗಲಿವೆ.
ನಿರಸಾಧಿಪತಿ - ಚಂದ್ರ
ಬಿಳಿ ವರ್ಣದ ಬಟ್ಟೆ, ವಸ್ತು, ಬೆಳ್ಳಿ ಮುಂತಾದುವು ಸಮೃದ್ಧವಾಗುತ್ತವೆ. ಇವುಗಳ ಬೆಲೆಯೂ ಹೆಚ್ಚಾಗುತ್ತದೆ.
ಪಶುನಾಯಕ - ಬಲರಾಮ
ಬಲರಾಮನ ಪಶುನಾಯಕತ್ವದಲ್ಲಿ ಸುವೃಷ್ಟಿ, ಪಶುಗಳ ಸಮೃದ್ಧಿ, ರೋಗರಹಿತ ಗೋವುಗಳು ಸುಭಿಕ್ಷವಾಗಿರುತ್ತವೆ. ಹಾಲು-ಹೈನುಗಾರರು ಸಂತೋಷದಿಂದಿರುತ್ತಾರೆ.
ಗ್ರಹಣ ವಿಚಾರ :
28-10-2023 - ಶನಿವಾರ
ಸಂಭವಿಸುವ ಗ್ರಹಣ - ಖಂಡಗ್ರಾಸ ಚಂದ್ರ ಗ್ರಹಣ
ಗ್ರಹಣ ಆಚರಣೆ ಉಂಟು.
(ಗ್ರಹಣ ಕಾಲದಲ್ಲಿ ಮೇಷ-ವೃಷಭ-ಕನ್ಯಾ-ವೃಶ್ಚಿಕ ರಾಶಿಗಳವರು ಎಚ್ಚರವಾಗಿರಬೇಕು.)