ಈ 4 ರಾಶಿಯವರು ಸೋಲೊಪ್ಪೋದು ವಿರಳ: ನಿಮ್ಮದು ಇದೇ ರಾಶಿನಾ?

By Suvarna NewsFirst Published Jul 13, 2021, 4:38 PM IST
Highlights

ರಾಶಿ ಚಕ್ರದಲ್ಲಿರುವ ಎಲ್ಲ ರಾಶಿಗಳಿಗೂ ವಿಶೇಷ ಗುಣಗಳಿವೆ. ಅವು ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆ. ಮೇಷ ರಾಶಿಯವರು ಛಲಗಾರರಾದರೆ, ಸಿಂಹ ರಾಶಿಯವರು ಶಕ್ತಿಶಾಲಿಗಳೆಂದು ಹೇಳಲಾಗುತ್ತದೆ. ಹಾಗೆಯೇ ಈ ನಾಲ್ಕು ರಾಶಿಯವರು ಇತರರ ಮೇಲೆ ತಮ್ಮ ಪ್ರಾಬಲ್ಯವನ್ನು ತೋರುವುದಲ್ಲದೆ, ಸೋಲನ್ನು ಒಪ್ಪಿಕೊಳ್ಳದವರು. ಅಷ್ಟೇ ಅಲ್ಲದೆ ಗೆಲುವನ್ನುಸಾಧಿಸುವುದಕ್ಕಾಗಿ ಸತತ ಪ್ರಯತ್ನಿಸುವ ಈ ರಾಶಿಯ ವ್ಯಕ್ತಿಗಳ ಬಗ್ಗೆ ತಿಳಿಯೋಣ....

ರಾಶಿ ಚಕ್ರಗಳು ಹನ್ನೆರಡು. ಅವುಗಳ ಗುಣ ಸ್ವಭಾವಗಳು ಒಂದಕ್ಕಿಂದ ಒಂದು ಭಿನ್ನ ಮತ್ತು ಎಲ್ಲ ರಾಶಿಗಳಿಗೂ ಅವುಗಳದ್ದೇ ಆದ ವಿಶೇಷ ಸ್ವಭಾವಗಳಿರುತ್ತವೆ. ಇಲ್ಲಿ ನಾವು ಚತುರರು, ಬಲಶಾಲಿಗಳು ಮತ್ತು ಸೋಲೊಪ್ಪಿಕೊಳ್ಳದ ಅಥವಾ ಸೋಲದೇ ಇರುವ ನಾಲ್ಕು ರಾಶಿಗಳಿವೆ.

ರಾಶಿಗಳ ಗುಣ ಸ್ವಭಾವಗಳು ಆ ರಾಶಿಯ ವ್ಯಕ್ತಿಯ ಮೇಲೆ ಪ್ರಭಾವವನ್ನು ಬೀರಿರುತ್ತವೆ. ಹಾಗೆಯೇ ಈ ನಾಲ್ಕು ರಾಶಿಯವರು ಅವರವರ ರಾಶಿಗಳ ಗುಣ ಸ್ವಭಾವಗಳ ಪ್ರಭಾವಕ್ಕೊಳಪಟ್ಟಿರುತ್ತಾರೆ.

ಸದಾ ಮುಂದಿರಬೇಕೆಂಬ ಹಂಬಲ, ಸೋತು ಇತರರಿಗೆ ದಾರಿ ಮಾಡಿಕೊಡುವ ವ್ಯಕ್ತಿತ್ವ ಇವರದ್ದಲ್ಲ. ತಾವೇ ಮುಂದೆ ಬಂದು ತೋರಿಸುವ ಛಲ ಇವರಲ್ಲಿರುತ್ತದೆ. ಹೆಚ್ಚು ಪ್ರಾಬಲ್ಯವನ್ನು ತೋರುವ ವ್ಯಕ್ತಿತ್ವ ಇವರದ್ದು. ಯಾವ ವ್ಯಕ್ತಿ ಇವರ ಆಲೋಚನೆಯ ಪ್ರಕಾರ ನಡೆಯುತ್ತಾರೆ ಮತ್ತು ಇವರು ಹೇಳಿದಂತೆ ಕೆಲಸ ಮಾಡುತ್ತಾರೆ. ಅಂಥವರ ಜೊತೆ ಇರುವುದನ್ನು ಇಷ್ಟಪಡುತ್ತಾರೆ. ಅಷ್ಟೇ ಬಲಶಾಲಿಯಾಗಿರುವ ಈ ರಾಶಿಯವರ ಎದುರು ಗೆಲುವನ್ನು ಸಾಧಿಸುವುದು ಕಷ್ಟಸಾಧ್ಯವೆಂದು ಹೇಳಲಾಗುತ್ತದೆ. ಹಾಗಾದರೆ ಆ ನಾಲ್ಕು ರಾಶಿಯವರ ಬಗ್ಗೆ ತಿಳಿಯೋಣ.

ಇದನ್ನು ಓದಿ: ರಾಶಿಯನುಸಾರ ಈ ರತ್ನ ಧರಿಸಿದರೆ ಅದೃಷ್ಟ ನಿಮ್ಮದು

ಮೇಷ ರಾಶಿ
ಈ ರಾಶಿಯ ವ್ಯಕ್ತಿಗಳು ಪ್ರಭಾವಶಾಲಿ, ಶಕ್ತಿವಂತರು ಮತ್ತು ಕ್ರಿಯಾಶೀಲರು ಆಗಿರುತ್ತಾರೆ. ಮೇಷ ರಾಶಿಯವರಿಗೆ ಅವರ ಕಾರ್ಯಕ್ಷಮತೆಯ ಬಗ್ಗೆ ಪೂರ್ಣ ಭರವಸೆ ಇರುತ್ತದೆ. ಹಾಗಾಗಿಯೇ ಈ ವ್ಯಕ್ತಿಗಳು ಇತರರನ್ನು ಬೇಗ ನಂಬುವುದಿಲ್ಲ. ಅಷ್ಟೇ ಅಲ್ಲದೆ ಇತರರ ಮಾತಿನಿಂದ ಬೇಗ ಪ್ರಭಾವಿತರೂ ಆಗುವುದಿಲ್ಲ. ಈ ರಾಶಿಯ ವ್ಯಕ್ತಿಗಳು ಬೇರೆಯವರ ಮೇಲೆ ಅಲಂಬಿತರಾಗಿರಲು ಇಷ್ಟಪಡುವುದಿಲ್ಲ. ಈ ರಾಶಿಯ ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿಗೆ ಇರಬೇಕಾದ ಎಲ್ಲ ಉತ್ತಮ ಅಂಶಗಳು ಇರುತ್ತವೆ. ಮೇಷ ರಾಶಿಯವರು ತಮ್ಮ ಲಕ್ಷ್ಯವನ್ನು ತಾವೇ ನಿರ್ಧರಿಸಿಕೊಂಡು ಮುಂದೆ ಸಾಗುತ್ತಾರೆ. ಪ್ರಾಬಲ್ಯವನ್ನು ತೋರುವ ಸ್ವಭಾವವನ್ನು ಹೊಂದಿರುವ ಈ ರಾಶಿಯವರು ತಮ್ಮ ಮಾತನ್ನು ಕೇಳದವರನ್ನು ಕಡೆಗಣಿಸುತ್ತಾರೆ. ಇಲ್ಲವೇ, ಅವರಿಂದ ದೂರವಿರುತ್ತಾರೆ.

ವೃಶ್ಚಿಕ ರಾಶಿ
ಈ ರಾಶಿಯವರು ಪ್ರಾಮಾಣಿಕರಾಗಿರುತ್ತಾರೆ. ವೃಶ್ಚಿಕ ರಾಶಿಯವರ ಸಿಟ್ಟು ಅತ್ಯಂತ ಹೆಚ್ಚಾಗಿರುತ್ತದೆ. ಇತರರ ಕಾರ್ಯಕ್ಕೆ ತಕ್ಕಂತೆ ಇವರ ಸ್ವಭಾವವಿರುತ್ತದೆ. ಇವರ ಜೊತೆ ಉತ್ತಮವಾಗಿದ್ದವರ ಜೊತೆ ಚೆನ್ನಾಗಿರುತ್ತಾರೆ. ಒಂದು ವೇಳೆ ವಿರೋಧಿಸಲು ಪ್ರಯತ್ನಿಸಿದರೆ ಅಥವಾ ಅದರ ಸೂಚನೆ ಅವರಿಗೆ ಸಿಕ್ಕರೆ ಆಕ್ರೋಶಗೊಳ್ಳುತ್ತಾರೆ. ಈ ರಾಶಿಯವರಿಗಿರುವ ಧೈರ್ಯ ಇತರರಲ್ಲಿ ಕಡಿಮೆ. ಒಮ್ಮೆ ಸೋತರೂ ಕಾರ್ಯವನ್ನು ಮುಂದುವರೆಸುತ್ತಾ, ಗೆಲುವು ಸಿಗುವವರೆಗೆ ಬಿಡದೇ ಇರುವ ವ್ಯಕ್ತಿತ್ವ ಇವರದ್ದಾಗಿರುತ್ತದೆ. ಈ ಗುಣವೇ ಇವರನ್ನು ಬಲಶಾಲಿಗಳನ್ನಾಗಿ ಮಾಡುತ್ತದೆ. ಭವಿಷ್ಯದ ಸ್ಥಿತಿಯನ್ನು ಗ್ರಹಿಸುವ ಕ್ಷಮತೆ ಇವರಲ್ಲಿರುತ್ತದೆ.

ಇದನ್ನು ಓದಿ : ಈ ರಾಶಿ- ನಕ್ಷತ್ರದಲ್ಲಿ ಜನಿಸಿದವರು ಮಾತಿಗೆ ಬದ್ಧ – ಎಲ್ಲದಕ್ಕೂ ಸಿದ್ಧ..!

ಕುಂಭ ರಾಶಿ
ಕುಂಭ ರಾಶಿಯ ವ್ಯಕ್ತಿಗಳು ಬಹಳ ಪ್ರಾಕ್ಟಿಕಲ್ ಆಗಿರುತ್ತಾರೆ. ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಪ್ರತಿಯೊಂದನ್ನು ಆಲೋಚಿಸಿ ನಂತರ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಈ ರಾಶಿಯ ವ್ಯಕ್ತಿಗಳು ತುಂಬಾ ಹಠವಾದಿಗಳಾಗಿರುತ್ತಾರೆ. ತಮ್ಮ ಮಾತನ್ನು ಇತರರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನದಲ್ಲಿ ಸೋಲುವುದಿಲ್ಲ. ಅಂದುಕೊಂಡಿರುವ ಕಾರ್ಯವನ್ನು ಪೂರ್ಣಗೊಳಿಸದೇ ಇವರಿಗೆ ನೆಮ್ಮದಿ ಇರುವುದಿಲ್ಲ. ಹಾಗಾಗಿ ಹಿಡಿದ ಕೆಲಸವನ್ನು ಬೇಗ ಮುಗಿಸಿ ಕೂರುವುದು ಈ ವ್ಯಕ್ತಿಗಳ ಸ್ವಭಾವ.

ಇದನ್ನು ಓದಿ: ಈ ತಾರೀಖಿನಲ್ಲಿ ಜನಿಸಿದವರು ಆಸ್ತಿ-ಜಮೀನಿನ ವಿಷಯದಲ್ಲಿ ತುಂಬಾ ಲಕ್ಕಿ..! 

ಮಕರ ರಾಶಿ
ಈ ರಾಶಿಯ ವ್ಯಕ್ತಿಗಳ ಆಲೋಚನೆ ಮತ್ತು ವಿಚಾರಗಳನ್ನು ಅರ್ಥೈಸಿಕೊಳ್ಳುವ ಕ್ಷಮತೆ ಚೆನ್ನಾಗಿರುತ್ತದೆ. ಮಕರ ರಾಶಿಯವರಿಗೆ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳುವ ಶಕ್ತಿ ಉತ್ತಮವಾಗಿರುತ್ತದೆ. ಈ ವ್ಯಕ್ತಿಗಳು ರೂಢಿಸಿಕೊಂಡ ಅಭ್ಯಾಸಗಳನ್ನು ಯಾವುದನ್ನಾದರೂ ಬಿಡಬೇಕೆಂದು ಕೊಂಡರೆ ಅದರ ಕಡೆ ತಿರುಗಿ ಸಹ ನೋಡುವುದಿಲ್ಲ. ಮಕರ ರಾಶಿಯವರ ವಿರುದ್ಧವಾಗಿ ಯಾರಾದರೂ ನಡೆದುಕೊಂಡರೆ ಅಂಥವರನ್ನು ಈ ರಾಶಿಯವರು ಇಷ್ಟಪಡುವುದಿಲ್ಲ.

click me!