ರಾಶಿಯನುಸಾರ ಈ ರತ್ನ ಧರಿಸಿದರೆ ಅದೃಷ್ಟ ನಿಮ್ಮದು

By Suvarna News  |  First Published Jul 12, 2021, 1:00 PM IST

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರತ್ನಗಳ ಧರಿಸುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ರತ್ನಗಳನ್ನು ಧಾರಣೆಯು ಸುಖ-ಸಮೃದ್ಧಿ, ಆರ್ಥಿಕ ಲಾಭ, ಆರೋಗ್ಯ ಇತ್ಯಾದಿ ಅನೇಕ ಅಂಶಗಳಿಗೆ ಸಕಾರಾತ್ಮಕವಾಗಿ ಪುಷ್ಠಿ ನೀಡುತ್ತವೆ. ರತ್ನಗಳಲ್ಲಿ ಒಂದಾದ ನೀಲಮಣಿ ರತ್ನವನ್ನು ಶನಿ ಗ್ರಹದ ಶಾಂತಿಗಾಗಿ ಧರಿಸಲಾಗುತ್ತದೆ. ಹಾಗಾದರೆ ರಾಶಿಯನುಸಾರ ಯಾವ್ಯಾವ ರತ್ನವನ್ನು ಧರಿಸುವುದು ಉತ್ತಮವೆಂದು ತಿಳಿಯೋಣ..


ಜ್ಯೋತಿಷ್ಯ ಶಾಸ್ತ್ರದ ಅನುಸಾರ ಗ್ರಹಗಳ ಸ್ಥಿತಿ ಉತ್ತಮವಾಗಲು ಅನೇಕ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತೇವೆ. ಶಾಂತಿ, ಹೋಮ-ಹವನಗಳನ್ನು ಮಾಡಿಸುವುದಲ್ಲದೆ, ಸ್ತೋತ್ರಗಳ ಪಠಣ ಮಾಡುವುದರಿಂದ ಸಹ ಗ್ರಹಗಳಿಗೆ ಸ್ವಲ್ಪ ಮಟ್ಟಿನ ಬಲ ಬರುತ್ತದೆ. ಅಷ್ಟೇ ಅಲ್ಲದೆ ಮುಖ್ಯವಾಗಿ ರತ್ನಗಳನ್ನು ಧರಿಸುವುದರಿಂದ ಗ್ರಹಗಳು ಬಲವನ್ನು ಪಡೆದುಕೊಳ್ಳುತ್ತವೆ ಎಂದು ಹೇಳಲಾಗುತ್ತದೆ. 

ನೀಲಮಣಿ ರತ್ನ ಧಾರಣೆ ಬಹಳ ಶುಭದಾಯಕ ಎನ್ನಲಾಗಿದ್ದು, ಶನಿ ದೋಷದಿಂದ ಮುಕ್ತಿ ದೊರೆಯುವುದಲ್ಲದೆ, ಆರ್ಥಿಕ ಲಾಭ ಸಿಗುತ್ತದೆ ಎನ್ನಲಾಗಿದೆ. ಇದೊಂದು ಚಮತ್ಕಾರಿ ರತ್ನವಾಗಿದ್ದು, ಇದರ ಧಾರಣೆಯಿಂದ ಉದ್ಯೋಗ, ವ್ಯವಹಾರಗಳಲ್ಲಿ ಲಾಭವಾಗುವುದಲ್ಲದೆ, ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಹೀಗೆಯೇ ರಾಶಿಯನುಸಾರ ರತ್ನಗಳನ್ನು ಧರಿಸುವುದರಿಂದ ಅಭಿವೃದ್ಧಿಯನ್ನು ಕಾಣಬಹುದಾಗಿದೆ.

Latest Videos

ಅಷ್ಟೇ ಅಲ್ಲದೆ ರತ್ನವನ್ನು ಧರಿಸುವ ಮೊದಲು ಅದರ ಬಗ್ಗೆ ತಿಳಿದಿರುವ ಜ್ಯೋತಿಷ್ಯ ತಜ್ಞರನ್ನು ಸಂಪರ್ಕಿಸಿ, ಜಾತಕದ ಪ್ರಕಾರ ನಿರ್ದಿಷ್ಟ ರತ್ನವನ್ನು ಧರಿಸುವುದು ಉಚಿತವೇ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. ಇಲ್ಲದಿದ್ದಲ್ಲಿ ಅವುಗಳಿಂದ ನಕಾರಾತ್ಮಕ ಪ್ರಭಾವಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತವೆ.

ಅಷ್ಟೇ ಅಲ್ಲದೆ, ರತ್ನಗಳು ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ತಿಳಿದುಕೊಂಡು ಧರಿಸುವುದು ಸಹ ಅವಶ್ಯಕ. ಧರಿಸಿದ ರತ್ನ ನಕಲಿಯಾಗಿದ್ದರೆ, ಅವು ಯಾವುದೇ ಪರಿಣಾಮಗಳನ್ನು ಬೀರುವುದಿಲ್ಲ. ಹಾಗಾಗಿ ಧರಿಸುವ ರತ್ನದ ಅಸಲಿಯತ್ತಿನ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಹಾಗಾದರೆ ರಾಶಿಯನುಸಾರ ಯಾವ್ಯಾವ ರತ್ನಗಳನ್ನು ಧರಿಸುವುದು ಶುಭ ಎಂಬುದನ್ನು ತಿಳಿಯೋಣ...

ಮೇಷ ರಾಶಿ
ಮೇಷ ರಾಶಿಯ ವ್ಯಕ್ತಿಗಳು ಹವಳವನ್ನು ಧರಿಸುವುದು ಶುಭವೆಂದು ಹೇಳಲಾಗುತ್ತದೆ. ಈ ರಾಶಿಯ ಸ್ವಾಮಿ ಅಂದರೆ ಅಧಿಪತಿ ಗ್ರಹ ಮಂಗಳವಾಗಿದ್ದರಿಂದ ಕೆಂಪು ಶುಭವೆಂದು ಹೇಳಲಾಗುತ್ತದೆ. ಹಾಗಾಗಿ ಹವಳ ಧರಿಸುವುದರಿಂದ ಸಕಾರಾತ್ಮಕ ಶಕ್ತಿಯ ಜೊತೆಗೆ ಆರ್ಥಿಕ ಲಾಭವೂ ಆಗಲಿದೆ ಎಂದು ಹೇಳಲಾಗುತ್ತದೆ.

ಇದನ್ನು ಓದಿ : ಈ ರಾಶಿ- ನಕ್ಷತ್ರದಲ್ಲಿ ಜನಿಸಿದವರು ಮಾತಿಗೆ ಬದ್ಧ – ಎಲ್ಲದಕ್ಕೂ ಸಿದ್ಧ..!

ವೃಷಭ ರಾಶಿ
ವೃಷಭ ರಾಶಿಯ ವ್ಯಕ್ತಿಗಳು ವಜ್ರ ಮತ್ತು ಓಪಲ್ (ಕ್ಷೀರ ಸ್ಪಟಿಕ)ವನ್ನು ಧರಿಸುವುದು ಉತ್ತಮವೆಂದು ಹೇಳಲಾಗುತ್ತದೆ. ಈ ರಾಶಿಯ ಅಧಿಪತಿ ಗ್ರಹ ಶುಕ್ರ. ಹಾಗಾಗಿ ಶುಕ್ರ ಗ್ರಹವನ್ನು ಬಲ ಪಡಿಸಲು ವಜ್ರವನ್ನು ಧರಿಸುವುದರಿಂದ ಜೀವನದಲ್ಲಿ ಏಳಿಗೆಯನ್ನು ಕಾಣಬಹುದಾಗಿದೆ. 

ಮಿಥುನ ರಾಶಿ
ಮಿಥುನ ರಾಶಿಯ ಅಧಿಪತಿ ಬುಧ ಗ್ರಹವಾಗಿದೆ. ಈ ರಾಶಿಯ ವ್ಯಕ್ತಿಗಳು ಪಚ್ಚೆಯನ್ನು ಧರಿಸುವುದು ಶುಭವೆಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ನೆಮ್ಮದಿಯ ಜೊತೆಗೆ ಆರ್ಥಿಕವಾಗಿ ಸುಧಾರಣೆಯನ್ನು ಕಾಣಬಹುದಾಗಿದೆ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯ ವ್ಯಕ್ತಿಗಳು ಮುತ್ತು ಧರಿಸಬೇಕೆಂದು ಹೇಳಲಾಗುತ್ತದೆ. ಈ ರಾಶಿಯ ಅಧಿಪತಿ ಚಂದ್ರಗ್ರಹವಾಗಿದೆ. ಚಂದ್ರನು ಮನಸ್ಸಿನ ಕಾರಕ ಗ್ರಹವಾಗಿದ್ದಾನೆ, ಹಾಗಾಗಿ ಶ್ವೇತ ವರ್ಣದ ಮುತ್ತು ಅತ್ಯಂತ ಶುಭದಾಯಕವೆಂದು ಹೇಳಲಾಗುತ್ತದೆ.

ಇದನ್ನು ಓದಿ: ಈ ತಾರೀಖಿನಲ್ಲಿ ಜನಿಸಿದವರು ಆಸ್ತಿ-ಜಮೀನಿನ ವಿಷಯದಲ್ಲಿ ತುಂಬಾ ಲಕ್ಕಿ..! 

ಸಿಂಹ ರಾಶಿ
ಸಿಂಹ ರಾಶಿಯ ಅಧಿಪತಿ ಗ್ರಹ ಸೂರ್ಯ. ಸೂರ್ಯನ ತೇಜಸ್ಸಿಗೆ ಸಮನಾದ ಮಾಣಿಕ್ಯವನ್ನು ಧರಿಸುವುದು ಸಿಂಹ ರಾಶಿಯವರಿಗೆ ಅತ್ಯಂತ ಶುಭ ಫಲಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

ಕನ್ಯಾ ರಾಶಿ
ಕನ್ಯಾ ರಾಶಿಯ ವ್ಯಕ್ತಿಗಳು ಪಚ್ಚೆಯನ್ನು ಧರಿಸುವುದು ಶುಭವೆಂದು ಹೇಳಲಾಗುತ್ತದೆ. ಈ ರಾಶಿಯವರ ಅಧಿಪತಿ ಗ್ರಹ ಬುಧ ಗ್ರಹವಾಗಿದೆ. ಪಚ್ಚೆಯನ್ನು ಧರಿಸುವುದರಿಂದ ಆರೋಗ್ಯವು ಉತ್ತಮವಾಗುವುದಲ್ಲದೇ, ಆರ್ಥಿಕ ಲಾಭಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

ತುಲಾ ರಾಶಿ
ತುಲಾ ರಾಶಿಯ ವ್ಯಕ್ತಿಗಳು ವಜ್ರವನ್ನು ಅಥವಾ ಗೋಮೇಧಕವನ್ನು ಧರಿಸುವುದು ಉತ್ತಮವೆಂದು ಹೇಳಲಾಗುತ್ತದೆ. ಈ ರಾಶಿಯ ಅಧಿಪತಿ ಗ್ರಹ ಶುಕ್ರಗ್ರಹವಾಗಿದೆ. ವಜ್ರವು ಅತ್ಯಂತ ಹೆಚ್ಚಿನ ಬೆಲೆಯುಳ್ಳದ್ದಾಗಿದೆ, ಅದನ್ನು ಧರಿಸುವಷ್ಟು ಶಕ್ತಿಯಿಲ್ಲದವರು ಬದಲಾಗಿ ಗೋಮೇಧಕವನ್ನು ಧರಿಸಬಹುದೆಂದು ಹೇಳಲಾಗುತ್ತದೆ. ಇದರಿಂದ ಸಹ ಉತ್ತಮ ಪರಿಣಾಮಗಳನ್ನು ಕಾಣಬಹುದಾಗಿದೆ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಅಧಿಪತಿ ಗ್ರಹ ಮಂಗಳ. ಕೆಂಪು ಬಣ್ಣವನ್ನು ಪ್ರತಿನಿಧಿಸುವ ಮಂಗಳ ಗ್ರಹದ ಉಚ್ಛ ಸ್ಥಿತಿಗೆ ಈ ರಾಶಿಯವರು ಹವಳವನ್ನು ಧರಿಸುವುದು ಶುಭವೆಂದು ಹೇಳಲಾಗುತ್ತದೆ.

ಧನು ರಾಶಿ
ಧನು ರಾಶಿಯ ವ್ಯಕ್ತಿಗಳು ಪುಷ್ಯರಾಗವನ್ನು ಧರಿಸುವುದು ಶುಭವೆಂದು ಹೇಳಲಾಗುತ್ತದೆ. ಈ ರಾಶಿಯ ಅಧಿಪತ್ಯವು ಗುರು ಬೃಹಸ್ಪತಿಯಾದ್ದರಿಂದ, ಗುರುವಿನ ಕೃಪೆಗೆ ಪುಷ್ಯರಾಗವನ್ನು ಧರಿಸುವುದು ಉತ್ತಮವೆಂದು ಹೇಳಲಾಗುತ್ತದೆ.

ಮಕರ ರಾಶಿ
ಮಕರ ರಾಶಿಯ ಅಧಿಪತಿ ಗ್ರಹ ಶನಿದೇವ. ಶನಿಯ ಕೃಪೆಗಾಗಿ ನೀಲಮಣಿಯನ್ನು ಧರಿಸುವುದು ಉತ್ತಮವೆಂದು ಹೇಳಲಾಗುತ್ತದೆ.

ಇದನ್ನು ಓದಿ: ಮನೆಯಲ್ಲಿ ಮನಿಪ್ಲಾಂಟ್ ಇದ್ದರೆ ಈ ನಿಯಮ ಪಾಲಿಸಿ – ಅದೃಷ್ಟ ನಿಮ್ಮದಾಗಲಿದೆ..!! 

ಕುಂಭ ರಾಶಿ
ಕುಂಭ ರಾಶಿಯನ್ನು ಅಧಿಪತ್ಯವು ಸಹ ಶನಿಗ್ರಹದ್ದೇ ಆಗಿದೆ. ಹಾಗಾಗಿ ಈ ರಾಶಿಯವರು ನೀಲಮಣಿಯನ್ನು ಧರಿಸುವುದು ಉತ್ತಮವೆಂದು ಹೇಳಲಾಗುತ್ತದೆ.

ಮೀನ ರಾಶಿ
ಮೀನ ರಾಶಿಯ ವ್ಯಕ್ತಿಗಳು ಪುಷ್ಯರಾಗವನ್ನು ಧರಿಸುವುದು ಉತ್ತಮವೆಂದು ಹೇಳಲಾಗುತ್ತದೆ. ಈ ರಾಶಿಯ ಅಧಿಪತಿ ಗುರು ಗ್ರಹವಾಗಿದೆ.

click me!