
ತಿರುಪತಿ (ಸೆ.12) ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಪ್ರತಿ ದಿನ ಸಾವಿರಾರು ಮಂದಿ ಆಗಮಿಸುತ್ತಾರೆ. ವಿಶೇಷ ದಿನ, ರಜಾ ದಿನಗಳಲ್ಲಿ ಲಕ್ಷಾಂತರ ಭಕ್ತರು ಆಗಮಿಸಿ ದರ್ಶನ, ವಿಶೇಷ ಪೂಜೆ ಸಲ್ಲಿಸುತ್ತಾರೆ. ಇದೀಗ ಒಂದೇ ದಿನ ತಿರುಪತಿ ಹುಂಡಿಯಲ್ಲಿ ದಾಖಲೆ ನಿರ್ಮಾಣವಾಗಿದೆ. ಒಂದೇ ದಿನ 6.93 ಕೋಟಿ ರೂ ಕಾಣಿಕೆ ಸಂಗ್ರವಾಗುವ ಮೂಲಕ ದಾಖಲೆ ನಿರ್ಮಾಣವಾಗಿದೆ. ಗುರುವಾರ ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿ ಬರೋಬ್ಬರಿ 6.93 ಕೋಟಿ ರೂಪಾಯಿ ಕಾಣಿಕೆ ಸಂಗ್ರವಾಗಿದೆ. ಇದು ತಿರುಮಲ ತಿರುಪತಿ ದೇವಸ್ಥಾನ ಇತಿಹಾಸದಲ್ಲೇ 2ನೇ ಗರಿಷ್ಠ ಸಂಗ್ರಹ ಅನ್ನೋ ದಾಖಲೆ ಬರೆದಿದೆ.
ವಿಶೇಷ ದಿನಗಳ ಹಿನ್ನೆಲೆಯಲ್ಲಿ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ತಿರುಪತಿ ತಿರುಮಲದ ಇತಿಹಾಸದಲ್ಲಿ ಒಂದೇ ದಿನ 7.68 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗುವ ಮೂಲಕ ಅತ್ಯಂತ ಗರಿಷ್ಠ ದಾಖಲೆ ಬರೆದಿದೆ. ಇದೀಗ 6.93 ಕೋಟಿ ರೂಪಾಯಿ ಮೂಲಕ 2ನೇ ಗರಿಷ್ಠ ದಾಖಲೆ ಕಾಣಿಕೆ ಸಂಗ್ರಹ ನಿರ್ಮಾಣವಾಗಿದೆ. 7ನೇ ಬಾರಿ ಒಂದೇ ದಿನ 6 ಕೋಟಿ ರೂಪಾಯಿಗಿಂತ ಹೆಚ್ಚು ಕಾಣಿಕೆ ಸಂಗ್ರಹಗಿದೆ. ಸುದೀರ್ಘ ವಾರಾಂತ್ಯದ ಹಿನ್ನೆಲೆಯಲ್ಲಿ ಭಕ್ತ ಭೇಟಿ ಹೆಚ್ಚಿದ್ದು ಇದಕ್ಕೆ ಕಾರಣ.
ಈ ಹಿಂದೆ 2023ರ ಜ.2ರ ವೈಕುಂಠ ಏಕಾದಶಿಯಂದು ಸಂಗ್ರಹವಾಗಿದ್ದ 7.68 ಕೋಟಿ ರು. ಈವರೆಗಿನ ಗರಿಷ್ಠವಾಗಿದೆ. ಇದನ್ನು ಹೊರತುಪಡಿಸಿ 2018ರ ಏ.1ರಂದು 6.45 ಕೋಟಿ ರು., 2022ರ ಅ.23ರಂದು 6.31 ಕೋಟಿ ರು., 2018ರ ಜು.26ರಂದು 6.28 ಕೋಟಿ ರು., 2022ರ ಜು.4ರಂದು 6.18 ಕೋಟಿ ರು., 2026ರ ಆ.18ರಂದು 6.12 ಕೋಟಿ ರು. ಸಂಗ್ರಹವಾಗಿತ್ತು.
ಇತ್ತೀಚೆಗೆ ತಿರುಪತಿ ತಿರುಮಲ ಭಕ್ತರಿಗೆ ನೀಡುವ ವಿಮೆ ಸೌಲಭ್ಯವನ್ನು ವಿಸ್ತರಿಲಾಗಿದೆ. 3 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ತಿರುಪತಿ ತಿರುಮಲ ದರ್ಶನಕ್ಕೆ ಆಗಮಿಸುವ ಭಕ್ತರು ಆಕಸ್ಮಿಕವಾಗಿ ಮೃತಪಟ್ಟರೆ ಕುಟುಂಬಕ್ಕೆ 10 ಲಕ್ಷ ರೂಪಾಯಿ ವಿಮೆ ಸೌಲಭ್ಯ ನೀಡಲಾಗುತ್ತಿದೆ. ಇನ್ನು ತಿರುಪತಿ ಭಕ್ತರು ಸಹಜ ಸಾವು ಸಂಭವಿಸಿದಲ್ಲಿ 2 ಲಕ್ಷ ರೂಪಾಯಿ ವಿಮೆ ಸೌಲಭ್ಯ ನೀಡಲಾಗುತ್ತದೆ. ಅಪಘಾತ ವಿಮೆ ಜೊತೆ ಸಹಜ ಸಾವಿಗೂ ವಿಮೆ ಕಲ್ಪಿಸುವ ಮೂಲಕ ತಿರುಪತಿ ಭಕ್ತರಿಗೆ ಸಂಪೂರ್ಣ ವಿಮಾ ಕವಚ ನೀಡಲು ಮುಂದಾಗಿದೆ.