ಪಿತೃಪಕ್ಷದ 16 ದಿನಗಳಲ್ಲಿ ಶುಭ ಕಾರ್ಯ ಏಕೆ ಮಾಡಬಾರದು? ಇದರ ಹಿಂದಿದೆ ಧಾರ್ಮಿಕ ಕಾರಣ

Published : Sep 11, 2026, 05:07 PM IST
pitru paksha

ಸಾರಾಂಶ

Pitru Paksha rules: ಹಿಂದೂ ಧರ್ಮದಲ್ಲಿ ಪಿತೃಪಕ್ಷಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಈ ಸಮಯದಲ್ಲಿ ಮದುವೆ, ಹೊಸ ಕಾರ್ಯ ಮಾಡುವುದು, ಹೊಸ ಮನೆ, ಆಸ್ತಿ ಖರೀದಿಸುವುದು ಹೀಗೆ ಎಲ್ಲಾ ಕಾರ್ಯವನ್ನು ನಿಷೇಧಿಸಲಾಗಿದೆ. ಯಾಕೆ ಈ ರೀತಿಯಾದ ಆಚರಣೆ ನಂಬಿಕೆ ಇದೆ ಅನ್ನೋದು ನಿಮಗೆ ಗೊತ್ತಾ? ಇಲ್ಲಿದೆ ಆ ಕುರಿತು ಮಹತ್ವದ ಮಾಹಿತಿ.

ಪಿತೃಪಕ್ಷದಲ್ಲಿ ಮಂಗಳ ಕಾರ್ಯ ಯಾಕೆ ಮಾಡಲ್ಲ

ಸನಾತನ ಧರ್ಮದಲ್ಲಿ ಪಿತೃಪಕ್ಷಕ್ಕೆ ವಿಶೇಷ ಮಹತ್ವವಿದೆ; ಈ ವರ್ಷ ಇದು ಸೆಪ್ಟೆಂಬರ್ 26 ರಂದು ಪೂರ್ಣಿಮಾ ಶ್ರಾದ್ಧದೊಂದಿಗೆ ಪ್ರಾರಂಭವಾಗಿ ಅಕ್ಟೋಬರ್ 10 ರವರೆಗೆ ಮುಂದುವರಿಯುತ್ತದೆ. ಹಿಂದೂ ಪಂಚಾಂಗದ ಪ್ರಕಾರ, ಈ 16 ದಿನಗಳು ಪೂರ್ವಜರ ಬಗ್ಗೆ ಗೌರವವನ್ನು ವ್ಯಕ್ತಪಡಿಸಲು ಮತ್ತು ಅವರ ಆತ್ಮದ ಶಾಂತಿಗಾಗಿ ಪ್ರಾರ್ಥಿಸಲು 'ತರ್ಪಣ' ಹಾಗೂ 'ಪಿಂಡದಾನ'ವನ್ನು ನೆರವೇರಿಸಲು ಮೀಸಲಾದ ಅವಧಿಯಾಗಿದೆ. ಇದನ್ನು 'ಮಹಾಲಯ ಪಕ್ಷ' ಎಂದೂ ಕರೆಯಲಾಗುತ್ತದೆ. ಪಿತೃಪಕ್ಷವು ಪ್ರತಿವರ್ಷ ಆಶ್ವಯುಜ ಮಾಸದ ಆರಂಭದಲ್ಲಿ (ಭಾದ್ರಪದ ಪೂರ್ಣಿಮೆಯ ನಂತರ) ಪ್ರಾರಂಭವಾಗಿ ಸರ್ವಪಿತೃ ಅಮಾವಾಸ್ಯೆಯಂದು ಕೊನೆಗೊಳ್ಳುತ್ತದೆ. ಈ ಅವಧಿಯಲ್ಲಿ ನಿಗದಿತ ವಿಧಿವಿಧಾನಗಳ ಪ್ರಕಾರ ಪ್ರತಿದಿನ ಪೂರ್ವಜರಿಗೆ ಪಿಂಡದಾನ ಮತ್ತು ತರ್ಪಣವನ್ನು ಮಾಡುವುದರಿಂದ ವ್ಯಕ್ತಿಗಳು 'ಪಿತೃದೋಷ' ಮತ್ತು ಪಿತೃಋಣದಿಂದ ಮುಕ್ತರಾಗುತ್ತಾರೆ ಎನ್ನುವ ನಂಬಿಕೆ ಇದೆ.

ಪಿತೃಪಕ್ಷದಲ್ಲಿ ಹೊಸ ಕೆಲಸ ಆರಂಭಿಸ ಬಾರದು ಯಾಕೆ ಗೊತ್ತ?

ಪಿತೃಪಕ್ಷದ ಸಮಯದಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದು ಮುಖ್ಯ ಎಂದು ಧಾರ್ಮಿಕ ನಂಬಿಕೆ ಹೇಳುತ್ತದೆ. ಈ ಅವಧಿಯಲ್ಲಿ ಹೊಸ ಕೆಲಸ ಆರಂಭಿಸುವುದು ಅಥವಾ ಶುಭ ಹಾಗೂ ಮಂಗಳಕರ ಕಾರ್ಯಕ್ರಮಗಳನ್ನು ನಡೆಸುವುದನ್ನು ಸಾಮಾನ್ಯವಾಗಿ ತಪ್ಪಿಸಲಾಗುತ್ತದೆ.

16 ದಿನ ಶುಭ ಕಾರ್ಯಗಳಿಗೆ ವಿರಾಮ ಏಕೆ?

ಪಿತೃಪಕ್ಷವನ್ನು ಮುಖ್ಯವಾಗಿ ಪೂರ್ವಜರಿಗೆ ಸಮರ್ಪಿತವಾದ ಅವಧಿ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಅವರ ಆತ್ಮಶಾಂತಿಗಾಗಿ ತರ್ಪಣ, ಪಿಂಡಪ್ರದಾನ ಮತ್ತು ಶ್ರಾದ್ಧ ಮಾಡುವ ಮೂಲಕ ಗೌರವ ಹಾಗೂ ಕೃತಜ್ಞತೆ ಸಲ್ಲಿಸಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ಮದುವೆ, ಗೃಹಪ್ರವೇಶ, ನಿಶ್ಚಿತಾರ್ಥ, ಉಪನಯನ, ಹೊಸ ಆಸ್ತಿ ಅಥವಾ ವಾಹನ ಖರೀದಿ ಸೇರಿದಂತೆ ಹಲವು ಮಂಗಳಕರ ಕಾರ್ಯಗಳನ್ನು ಮಾಡದಿರುವುದು ಧಾರ್ಮಿಕ ಆಚರಣೆಯಾಗಿದೆ. ಈ ದಿನಗಳಲ್ಲಿ ಕುಟುಂಬದ ಗಮನ ಮತ್ತು ಶಕ್ತಿ ಪೂರ್ವಜರ ಸ್ಮರಣೆ ಹಾಗೂ ಅವರಿಗಾಗಿ ನಡೆಯುವ ಧಾರ್ಮಿಕ ವಿಧಿವಿಧಾನಗಳತ್ತ ಕೇಂದ್ರೀಕೃತವಾಗಿರಬೇಕು ಎಂಬುದು ಇದರ ಹಿಂದಿನ ನಂಬಿಕೆಯಾಗಿದೆ.

ಪಿತೃಗಳ ಪೂಜೆಯಲ್ಲಿ ನಿಯಮ ಪಾಲನೆ ಮುಖ್ಯ

ಧಾರ್ಮಿಕ ಗ್ರಂಥಗಳ ಪ್ರಕಾರ, ಪೂರ್ವಜರ ಆರಾಧನೆಯಲ್ಲಿ ವಿಧಿ-ವಿಧಾನಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ದೇವರ ಪೂಜೆಯಲ್ಲಿ ಭಕ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಪಿತೃಪಕ್ಷದಲ್ಲಿ ಪೂರ್ವಜರಿಗೆ ನಿಯಮಾನುಸಾರ ಪೂಜೆ ಮತ್ತು ಶ್ರಾದ್ಧ ಮಾಡುವುದಕ್ಕೆ ಒತ್ತು ನೀಡಲಾಗುತ್ತದೆ. ಈ ಕಾರಣದಿಂದಲೂ ಹೊಸ ಆರಂಭ ಹಾಗೂ ಮಂಗಳಕರ ಕಾರ್ಯಗಳನ್ನು ಮುಂದೂಡಲಾಗುತ್ತದೆ.

ಪಿತೃಪಕ್ಷ ಮತ್ತು ಚಾತುರ್ಮಾಸಕ್ಕೂ ಸಂಬಂಧವಿದೆಯೇ?

ಪಿತೃಪಕ್ಷದಲ್ಲಿ ಶುಭ ಕಾರ್ಯಗಳನ್ನು ತಪ್ಪಿಸಲು ಮತ್ತೊಂದು ಧಾರ್ಮಿಕ ಕಾರಣವೂ ಇದೆ. ಈ ಅವಧಿ ಚಾತುರ್ಮಾಸದ ಸಮಯದಲ್ಲೇ ಬರುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ, ದೇವಶಯನಿ ಏಕಾದಶಿಯಿಂದ ದೇವಉತ್ಥಾನ ಏಕಾದಶಿವರೆಗೆ ಸುಮಾರು ನಾಲ್ಕು ತಿಂಗಳ ಕಾಲ ಶ್ರೀವಿಷ್ಣು ಯೋಗನಿದ್ರೆಯಲ್ಲಿರುತ್ತಾರೆ. ಹೀಗಾಗಿ ಈ ಅವಧಿಯಲ್ಲಿಯೂ ಹೊಸ ಕೆಲಸಗಳು ಮತ್ತು ಮಂಗಳಕರ ಕಾರ್ಯಕ್ರಮಗಳನ್ನು ಆರಂಭಿಸಬಾರದು.

PREV
Read more Articles on
click me!

Recommended Stories

2027 ಈ 4 ರಾಶಿಗಳಿಗೆ ಅದೃಷ್ಟದ ಬಾಗಿಲು ಓಪನ್, ಮುಂದಿನ ವರ್ಷ ಹಣ, ಉದ್ಯೋಗ, ಯಶಸ್ಸು ಪಕ್ಕಾ
ಈ ಲಕ್ಷಣಗಳಿದ್ದರೆ ಜೀವನದ ಮೇಲೆ ಸರ್ಪ ಗ್ರಹ ಸ್ಥಾನ ಪರಿಣಾಮ ಬೀರುತ್ತಿದೆ ಎಂದರ್ಥ, ಪರಿಹಾರವೇನು?