ಗಣೇಶೋತ್ಸವ ಆರಂಭದ ಕಥೆ ಹೇಳ್ತಾನೆ ಈ ಗಣಪ! ಮನೆ-ಮನೆಗೆ ಸೀಮಿತವಾಗಿದ್ದ ಗಣೇಶ ಚತುರ್ಥಿ ಸಾರ್ವಜನಿಕವಾಗಿದ್ದು ಏಕೆ? ಕಾರಣವೇನು?
ಶಿವಾನಂದ ಗೊಂಬಿ
ಹುಬ್ಬಳ್ಳಿ (ಸೆ.3) ಗಣೇಶೋತ್ಸವಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಮನೆ-ಮನೆಗೆ ಸೀಮಿತವಾಗಿದ್ದ ಈ ಗಣೇಶ ಚತುರ್ಥಿಯನ್ನು ಸಾರ್ವಜನಿಕ ಉತ್ಸವವಾಗಿದ್ದು ಯಾವಾಗ? ಮತ್ತೆ ಏಕೆ? ಇದರಿಂದ ನಮಗೆ ಅಂದರೆ ಭಾರತೀಯರಿಗೆ ಆಗಿರುವ ಅನುಕೂಲಗಳೇನು? ಈ ಎಲ್ಲ ಮಾಹಿತಿಗಳು ನಿಮಗೆ ಬೇಕೆ? ಹಾಗಾದರೆ ಹುಬ್ಬಳ್ಳಿಯ ಹಿರೇಪೇಟೆ, ಭೂಸಪೇಟೆ ಹಾಗೂ ಕೆಂಚಗಾರ ಗಲ್ಲಿ ಗಣೇಶೋತ್ಸವ ಮಂಡಳಿ ಪ್ರತಿಷ್ಠಾಪಿಸಿರುವ ಗಣೇಶನ ಪ್ರತಿಮೆಯನ್ನು ವೀಕ್ಷಿಸಲೇಬೇಕು.
undefined
Hubballi : ಈದ್ಗಾ ಮೈದಾನದಲ್ಲಿ ವೈಭವದ ಗಣೇಶೋತ್ಸವ
ಮನೆ-ಮನೆಗೆ ಸೀಮಿತವಾಗಿದ್ದ ಗಣೇಶನ ಹಬ್ಬವನ್ನು ಬಾಲಗಂಗಾಧರ ತಿಲಕರು ಸಾರ್ವಜನಿಕ ಉತ್ಸವವನ್ನಾಗಿ ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಅದು ಕೂಡ ಬ್ರಿಟಿಷರ ವಿರುದ್ಧ ಜನರನ್ನು ಸಂಘಟಿಸಲು ಎಂಬುದು ಮಾತ್ರ ಗೊತ್ತು. ಆದರೆ ಆಗ ಬ್ರಿಟಿಷ್ ಸರ್ಕಾರ ಯಾವ ನಿಯಮ ಜಾರಿಗೊಳಿಸಿತ್ತು. ಅದನ್ನು ಧಿಕ್ಕರಿಸಲು ಗಣೇಶೋತ್ಸವ ಯಾವ ರೀತಿ ನೆರವು ನೀಡಿತು ಎಂಬುದು ಇಲ್ಲಿನ ಗಣೇಶೋತ್ಸವ ಮಂಡಳಿ ದೃಶ್ಯ ರೂಪಕದ ಮೂಲಕ ಸ್ವಾತಂತ್ರ್ಯ ಚಳವಳಿ ಹಾಗೂ ಗಣೇಶೋತ್ಸವ ಯಾವ ರೀತಿ ಕೆಲಸ ಮಾಡಿತು ಎಂಬ ಕಥೆಯನ್ನು ವಿವರಿಸುತ್ತಿದೆ.
ಏನಿದೆ ಇಲ್ಲಿ?
ಹಾಗಂತ ಗಣೇಶನೇ ಇಲ್ಲಿ ಎಲ್ಲ ಕಥೆಯನ್ನು ವಿವರಿಸುವುದಿಲ್ಲ. ಬೃಹದಾಕಾರದ ಗಣೇಶನ ಮೂರ್ತಿ ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಅದರ ಪಕ್ಕದಲ್ಲಿ ಬಾಲಗಂಗಾಧರ ತಿಲಕರು ಇದ್ದಾರೆ. ಅವರ ಪಕ್ಕದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಬ್ಬರು ಇದ್ದಾರೆ. ಇನ್ನೊಂದು ಬದಿಯಲ್ಲಿ ಬ್ರಿಟಿಷ್ ಅಧಿಕಾರಿಗಳ ತಂಡ ಇದೆ. ಬ್ರಿಟಿಷ ಅಧಿಕಾರಿಗಳ ತಂಡವೂ ಇನ್ಮುಂದೆ ಭಾರತೀಯರು ಯಾವುದೇ ಸಭೆ, ಸಮಾರಂಭ ಮಾಡುವಂತಿಲ್ಲ. ಇವೆಲ್ಲದಕ್ಕೂ ಬ್ರಿಟಿಷ ಸರ್ಕಾರ ನಿಬಂರ್‍ಧ ಹೇರಿದೆ. ಒಂದು ವೇಳೆ ಸಭೆ ಸಮಾರಂಭ ಮಾಡಿದ್ದೇ ಆದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬ್ರಿಟಿಷ್ ಸರ್ಕಾರ ಜಾರಿಗೊಳಿಸಿದ್ದ ಕಾನೂನನ್ನು ವಿವರಿಸುತ್ತಾರೆ.
ಅದಕ್ಕೆ ಸ್ವಾತಂತ್ರ್ಯ ಹೋರಾಟಗಾರರು ತಲ್ಲಣಗೊಂಡು ತಿಲಕರ ಬಳಿ ತೆರಳುತ್ತಾರೆ. ಆಗ ತಿಲಕರು ಭಾರತೀಯರೆಲ್ಲರನ್ನು ಒಟ್ಟುಗೂಡಿಸಲು ಗಣೇಶೋತ್ಸವವನ್ನು ಸಾರ್ವಜನಿಕಗೊಳಿಸುವುದು. ಈ ಮೂಲಕ ಜನರೆಲ್ಲರೂ ಒಟ್ಟಾಗಿ ಜಾತಿ, ಮತ, ಪಂಥ ಮರೆತು ಹಬ್ಬ ಆಚರಿಸುವುದು. ಜತೆಗೆ ಬ್ರಿಟಿಷರ ವಿರುದ್ಧ ಸಂಘಟಿಸಿದಂತೆಯೂ ಆಗುತ್ತದೆ ಎಂದು ಸ್ವಾತಂತ್ರ್ಯಹೋರಾಟಗಾರರಿಗೆ ತಿಳಿಸಿ ಹೇಳುತ್ತಾರೆ. ಆಗಿನಿಂದ ಸಾರ್ವಜನಿಕ ಗಣೇಶೋತ್ಸವ ಆಚರಣೆ ಶುರುವಾಗುತ್ತದೆ. ಈ ದೃಶ್ಯ ರೂಪಕವನ್ನು ಈ ಗಣೇಶೋತ್ಸವ ಮಂಡಳಿ ಮಾಡಿದ್ದು ವಿಶೇಷವೆನಿಸಿದೆ.
ಪ್ರತಿ ಪ್ರದರ್ಶನವೂ 8.30 ನಿಮಿಷದ್ದಾಗಿದೆ. ಬಾಲಗಂಗಾಧರ ತಿಲಕರು, ಸ್ವಾತಂತ್ರ್ಯ ಹೋರಾಟಗಾರರು, ಬ್ರಿಟಿಷ ಅಧಿಕಾರಿಗಳ ಪ್ರತ್ಯೇಕ ಮೂರ್ತಿಗಳು ಇಲ್ಲಿ ಅಳವಡಿಸಲಾಗಿದೆ. ರೂಪಕಕ್ಕೆ ತಕ್ಕಂತೆ ಸಂಗೀತ, ಧ್ವನಿ ಸಂಭಾಷಣೆ ಭಕ್ತರ ಗಮನ ಸೆಳೆಯುತ್ತಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ವೇಳೆಯಲ್ಲಿ ಈ ರೂಪಕ ಮಾಡಿರುವುದು ವಿಶೇಷವಾಗಿದ್ದು, ಭಕ್ತರು ತಂಡೋಪ ತಂಡವಾಗಿ ಆಗಮಿಸಿ ಗಣೇಶನ ವೀಕ್ಷಣೆ ಮಾಡಿ, ರೂಪಕ ನೋಡುತ್ತಿದ್ದಾರೆ. ಹೊರಗೆ ದೆಹಲಿಯ ಕೆಂಪುಕೋಟೆಯಂತೆ ಅಲಂಕರಿಸಿರುವುದು ವಿಶೇಷ ಎನಿಸಿದೆ.
ADGP ಅಲೋಕ್‌ಕುಮಾರ್ ವಿರುದ್ಧ ಶಾಸಕ ಅಭಯ್ ಪಾಟೀಲ್, ಪ್ರಮೋದ್ ಮುತಾಲಿಕ್ ಗರಂ!
ಈ ಗಣೇಶೋತ್ಸವ ಮಂಡಳಿ ಕಳೆದ 49 ವರ್ಷದಿಂದ ಇಲ್ಲಿ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದೆ. ಪ್ರತಿಸಲವೂ ಒಂದಿಲ್ಲೊಂದು ವಿಶೇಷತೆಯ ಗಣೇಶನನ್ನು ಪ್ರತಿಷ್ಠಾಪಿಸುತ್ತದೆ. ಈ ವರ್ಷ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಪಡೆಯಲು ಗಣೇಶೋತ್ಸವ ಯಾವ ರೀತಿ ಸಹಕಾರಿಯಾಗಿದೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ ಅಷ್ಟೇ ಎಂಬುದು ಮಂಡಳಿಯ ಅಂಬೋಣ.
ಗಣೇಶೋತ್ಸವ ಆಚರಣೆ ಬಗ್ಗೆ ಜನರಿಗೆ ಗೊತ್ತಿಲ್ಲ ಅಂತೇನೂ ಇಲ್ಲ. ಆದರೆ ಈಗಿನ ಪೀಳಿಗೆಗೆ ಈ ಬಗ್ಗೆ ಅಷ್ಟೊಂದು ಅರಿವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರಯತ್ನ ಮಾಡಿದ್ದೇವೆ. ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಅಷ್ಟೇ.
ಮಲ್ಲಿಕಾರ್ಜುನ ಶಿರಗುಪ್ಪಿ, ಮಾಜಿ ಅಧ್ಯಕ್ಷರು, ಹಿರೇಪೇಟೆ, ಭೂಸಪೇಟೆ, ಕೆಂಚಗಾರರಲ್ಲಿ ಗಣೇಶೋತ್ಸವ ಮಂಡಳಿ