Mysuru: ದಸರಾ ಆನೆಗಳಿಗೆ ಚೌತಿ ಅಂಗವಾಗಿ ವಿಶೇಷ ಪೂಜೆ

Published : Sep 03, 2022, 01:33 AM IST
Mysuru: ದಸರಾ ಆನೆಗಳಿಗೆ ಚೌತಿ ಅಂಗವಾಗಿ ವಿಶೇಷ ಪೂಜೆ

ಸಾರಾಂಶ

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಕ್ಯಾಫ್ಟನ್‌ ಅಭಿಮನ್ಯು ನೇತೃತ್ವದ ದಸರಾ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು. ಡಿಸಿಎಫ್‌ ಡಾ.ವಿ. ಕರಿಕಾಳನ್‌ ನೇತೃತ್ವದಲ್ಲಿ ಅರಣ್ಯ ಇಲಾಖೆ ಹಾಗೂ ಅರಮನೆ ಮಂಡಳಿ ಅಧಿಕಾರಿಗಳು, ಮಾವುತರು, ಕಾವಾಡಿಗಳು ಹಾಗೂ ಸಿಬ್ಬಂದಿ ಆನೆಗಳಿಗೆ ಪೂಜೆ ಸಲ್ಲಿಸಿದರು.

ಮೈಸೂರು (ಸೆ.03): ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಕ್ಯಾಫ್ಟನ್‌ ಅಭಿಮನ್ಯು ನೇತೃತ್ವದ ದಸರಾ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು. ಡಿಸಿಎಫ್‌ ಡಾ.ವಿ. ಕರಿಕಾಳನ್‌ ನೇತೃತ್ವದಲ್ಲಿ ಅರಣ್ಯ ಇಲಾಖೆ ಹಾಗೂ ಅರಮನೆ ಮಂಡಳಿ ಅಧಿಕಾರಿಗಳು, ಮಾವುತರು, ಕಾವಾಡಿಗಳು ಹಾಗೂ ಸಿಬ್ಬಂದಿ ಆನೆಗಳಿಗೆ ಪೂಜೆ ಸಲ್ಲಿಸಿದರು. ಅರಮನೆ ಅರ್ಚಕ ಪ್ರಹ್ಲಾದರಾವ್‌ ಆನೆಗಳಿಗೆ ಪಂಚಫಲ, ಕೋಡುಬಳೆ ಒಬ್ಬಟ್ಟು, ರವೆ ಉಂಡೆ, ಸಿಹಿಗಡುಬು, ಕರ್ಜಿಕಾಯಿ, ಲಾಡು, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಬೆಲ್ಲ, ಕಬ್ಬು, ಕಲ್ಲು ಸಕ್ಕರೆ, ಮೋದಕ ಮೊದಲಾದ ತಿನಿಸುಗಳನ್ನು ಕೊಟ್ಟು ಸತ್ಕರಿಸಿದರು.

ಆನೆಗಳಿಗೆ ಗಂಧಾಕ್ಷತೆ, ಅರಿಸಿನ, ಕುಂಕುಮವಿಟ್ಟು, ಸೇವಂತಿಗೆ ಹೂ ಮುಡಿಸಿ ಅಲಂಕರಿಸಲಾಗಿತ್ತು. ಜೊತೆಗೆ ಆನೆಗಳಿಗೆ ಚಾಮರ ಬೀಸಲಾಯಿತು. ಪಂಚಫಲ- ತಿನಿಸುಗಳನ್ನು ನೈವೇದ್ಯ ನೀಡಿ ಶೋಡಷೋಪಚಾರ ನೆರವೇರಿಸಲಾಯಿತು. ಆನೆಗಳಿಗೆ ಬಿಲ್ವಪತ್ರೆ, ಪುಷ್ಪ ನಮನ ಸಲ್ಲಿಸುತ್ತಿದ್ದಂತೆ ನೆರೆದಿದ್ದ ಎಲ್ಲರೂ ಹೂ ಮಳೆಗರೆದರು. ಡಿಸಿಎಫ್‌ ಕರಿಕಾಳನ್‌ ಆನೆಗಳಿಗೆ ಆರತಿ ಬೆಳಗಿದರು. ಸಿಹಿ ತಿಂಡಿಗಳೊಂದಿಗೆ ಕಬ್ಬು, ಬೆಲ್ಲ, ಪಂಚಫಲಗಳನ್ನು ಆನೆಗಳಿಗೆ ತಿನ್ನಿಸಲಾಯಿತು. ಬಳಿಕ ಮಾತನಾಡಿದ ಡಿಸಿಎಫ್‌ ವಿ. ಕರಿಕಾಳನ್‌, ಗಣೇಶ ಹಬ್ಬದಂದು ಸಾಂಪ್ರದಾಯಿಕವಾಗಿ ಆನೆಗಳಿಗೆ ಗಜಪೂಜೆ ನೆರವೇರಿಸಿದರು. 

ಮತದಾರರ ಗುರುತಿನ ಚೀಟಿಗೆ ಆಧಾರ್‌ ಜೋಡಣೆ ಅಸಮರ್ಪಕ: ಎಚ್‌.ಸಿ.ಮಹದೇವಪ್ಪ

ಎಲ್ಲಾ ಆನೆಗಳೂ ಆರೋಗ್ಯವಾಗಿದ್ದು, ನಡಿಗೆ ಹಾಗೂ ಭಾರ ಹೊರುವ ತಾಲೀಮನ್ನು ಆರಾಮಾಗಿ ನಿರ್ವಹಿಸುತ್ತಿವೆ ಎಂದರು. ಮೂರನೇ ಸುತ್ತಿನ ಭಾರ ಹೊರಿಸುವ ತಾಲೀಮು ಆರಂಭವಾಗಿದೆ. ಅಂಬಾರಿ ಆನೆ ಅಭಿಮನ್ಯು 750 ಕೆ.ಜಿ ಮರಳು ಮೂಟೆಯೊಂದಿಗೆ ನಮ್ದಾ ಗಾದಿ, ಹಗ್ಗ, ತೊಟ್ಟಿಲು ಸೇರಿ 1050 ಕೆ.ಜಿ. ತೂಕ ಹೊತ್ತಿದ್ದಾನೆ ಎಂದು ಮಾಹಿತಿ ನೀಡಿದರು. ಎರಡನೇ ಹಾಗೂ ಮೂರನೇ ದಿನ ಗೋಪಾಲಸ್ವಾಮಿ ಹಾಗೂ ಧನಂಜಯ ಕ್ರಮವಾಗಿ 900 ಕೆ.ಜಿ ಭಾರ ಹೊತ್ತು ಬನ್ನಿಮಂಟಪಕ್ಕೆ ಹೋಗಿ ಬಂದಿವೆ. ಮಹೇಂದ್ರ ಹಾಗೂ ಭೀಮ ಇಬ್ಬರೂ 500 ಕೆ.ಜಿ ಭಾರ ಹೊತ್ತಿದ್ದಾರೆ ಎಂದರು.

ಭೀಮ, ಮಹೇಂದ್ರ ಭರವಸೆಯ ಬೆಳಕು: 2017ರ ದಸರೆಗೆ ಬಂದಿದ್ದ ಭೀಮ ಹಾಗೂ ಇದೇ ಮೊದಲ ಬಾರಿ ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಮಹೇಂದ್ರ ಭಾರ ಹೊರುವ ತಾಲೀಮನ್ನು ಆರಾಮದಾಯಕವಾಗಿ ಮುಗಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಸಂತಸ ಮೂಡಿಸಿದೆ. ಡಿಸಿಎಫ್‌ ವಿ. ಕರಿಕಾಳನ್‌ ಎರಡೂ ಆನೆಗಳ ಬಗ್ಗೆ ಭರವಸೆಯ ಮಾತುಗಳನ್ನಾಡಿರುವುದು ಅಭಿಮನ್ಯು ನಂತರ ಅಂಬಾರಿ ಹೊರುವ ಜವಾಬ್ದಾರಿಯನ್ನು ಈ ಆನೆಗಳು ನಿರ್ವಹಿಸಲಿವೆ. ಗೋಪಾಲಸ್ವಾಮಿ, ಧನಂಜಯ ಆನೆಗಳ ನಂತರ ಮೂರನೇ ಸಾಲಿನ ಆನೆಗಳಾಗಿ ಹೊರಹೊಮ್ಮಿವೆ. ಸಾಮಾನ್ಯವಾಗಿ ಮೊದಲ ಬಾರಿ ಬಂದ ಆನೆಗಳಿಗೆ ಮರಳು ಮೂಟೆ ತಾಲೀಮು ನೀಡುವುದಿಲ್ಲ. ಭೀಮ, ಮಹೇಂದ್ರ 500 ಕೆ.ಜಿ. ಮರಳು ಮೂಟೆ ತಾಲೀಮಿನಲ್ಲಿ ಪಾಲ್ಗೊಂಡಿವೆ. ಹಿರಿಯ ಆನೆಗಳಾದ ಅರ್ಜುನ, ಅಭಿಮನ್ಯು ಅನುಭವದಲ್ಲಿ ತಾಲೀಮು ನಡೆಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ನೇಹಿತನೊಂದಿಗೆ ಲಾಡ್ಜ್‌ಗೆ ಹೋಗಿದ್ದ ಮೈಸೂರಿನ ಬಿಸಿಎ ವಿದ್ಯಾರ್ಥಿನಿ ದುರಂತ ಅಂತ್ಯ

7ಕ್ಕೆ ಎರಡನೇ ತಂಡ: ಸೆ. 7ರಂದು ಗಜಪಡೆಯ ಎರಡನೇ ತಂಡ ನಗರಕ್ಕೆ ಆಗಮಿಸಲಿದೆ. ಶ್ರೀರಾಮ, ಪಾರ್ಥಸಾರಥಿ, ಗೋಪಿ, ವಿಜಯಾ, ವಿಕ್ರಮ ಆನೆಗಳು ಈ ತಂಡದಲ್ಲಿವೆ. ಹೊಸ ಆನೆಗಳೊಂದಿಗೆ ಮೊದಲ ತಂಡದ ಆನೆಗಳ ತೂಕ ಪರೀಕ್ಷೆ ನಡೆಯಲಿದೆ. 5 ರಂದು ಮರದ ಅಂಬಾರಿಗೆ ಪೂಜೆ ಸಲ್ಲಿಸಿ ತಾಲೀಮು ನೀಡಲಾಗುವುದು. ಸೆ. 8 ಅಥವಾ 9ರಂದು ಆನೆಗಳಿಗೆ ಕುಶಾಲ ತೋಪು ಅಭ್ಯಾಸ ನಡೆಸಲಾಗುವುದು. ಜಂಬೂಸವಾರಿಗೂ ಮುನ್ನ ಆನೆಗಳ ಎದುರು ಮೂರು ಬಾರಿ ಸಿಡಿಮದ್ದಿನ ಸಿಡಿಸಿ. ಬೆದರದಂತೆ ಅಭ್ಯಾಸವನ್ನು ನೀಡಲಾಗುವುದು ಎಂದು ಕರಿಕಾಳನ್‌ ವಿವರಿಸಿದರು.

PREV
Read more Articles on
click me!

Recommended Stories

ನಾಳೆ ಡಿಸೆಂಬರ್ 7 ಅಪರೂಪದ ಚತುರ್ಗ್ರಹಿ ಯೋಗ, ಐದು ರಾಶಿಗೆ ಅದೃಷ್ಟ, ಹೆಚ್ಚಿನ ಲಾಭ
ಈ ರಾಶಿ ಜನರು ಹೊಸ ವರ್ಷ 2026 ರಲ್ಲಿ ಲಕ್ಷಾಧಿಪತಿಗಳಾಗುತ್ತಾರೆ, ಬಂಪರ್ ಯಶಸ್ಸು, ಸಂತೋಷ ಮತ್ತು ಸಮೃದ್ಧಿ