ದಿನಕ್ಕೆರಡು ಬಾರಿ ಅದೃಶ್ಯವಾಗಿ ಪ್ರತ್ಯಕ್ಷವಾಗುವ ಶಿವ ದೇವಾಲಯ!

By Suvarna News  |  First Published Feb 22, 2023, 10:30 AM IST

ಈಗ ಕಣ್ಣೆದುರು ಇರುವ ಈ ಶಿವ ದೇವಾಲಯ ಇನ್ನೆರಡು ಗಂಟೆ ಬಿಟ್ಟು ನೋಡಿದರೆ ಅಲ್ಲಿರುವುದಿಲ್ಲ, ಮತ್ತೆ ಕೆಲ ಸಮಯದ ಬಳಿಕ ಪ್ರತ್ಯಕ್ಷವಾಗುತ್ತದೆ. ಏನಪ್ಪಾ ಇದು ಅಚ್ಚರಿ? ಯಾವುದೀ ದೇವಾಲಯ?


ನಾವು ಆಸ್ತಿಕರೇ ಇರಬಹುದು, ಅಥವಾ ನಾಸ್ತಿಕರಿರಬಹುದು- ಆದರೆ ಕೆಲವೊಮ್ಮೆ ನಮ್ಮನ್ನು ದೇವಸ್ಥಾನಕ್ಕೆ ಕರೆದೊಯ್ಯುವುದು ಭಕ್ತಿ ಮಾತ್ರವಲ್ಲ. ಕೆಲವು ವಿಶಿಷ್ಟ ಘಟನೆಗಳು ಅಥವಾ ದೇವಾಲಯದ ವೈಶಿಷ್ಠ್ಯತೆ 
ನಮ್ಮನ್ನು ಅದರತ್ತ ಸೆಳೆಯುತ್ತದೆ. ಇಂದೂ ಕೂಡಾ ಅಂಥದೊಂದು ಅಪರೂಪದ ವೈಶಿಷ್ಠ್ಯತೆ ಹೊಂದಿರುವ ದೇವಾಲಯದ ಬಗ್ಗೆ ತಿಳಿಸುತ್ತಿದ್ದೇವೆ. ಈ ದೇವಾಲಯ ದಿನಕ್ಕೆರಡು ಬಾರಿ ಕಣ್ಮರೆಯಾಗುತ್ತದೆ. ಮತ್ತೆ ಪ್ರತ್ಯಕ್ಷವಾಗುತ್ತದೆ.

ಅರೆ, ತಮಾಷೆಯಲ್ಲ, ನೀವು ಈ ದೇವಾಲಯವಿರುವ ಸ್ಥಳದ ಬಳಿ ತೆರಳಿ ನೋಡಿ- ಈಗ ಕಣ್ಣೆದುರು ಇರುವ ದೇವಾಲಯ ಸಂಜೆಯ ಹೊತ್ತಿಗೆ ಇರುವುದಿಲ್ಲ. ಮತ್ತೆಷ್ಟೊ ಹೊತ್ತಿಗೆ ಪ್ರತ್ಯಕ್ಷವಾಗುತ್ತದೆ. ಇದು ಹೇಗೆ ಸಾಧ್ಯ, ಯಾವುದು ಈ ದೇವಾಲಯ ಎಂದು ಆಶ್ಚರ್ಯವಾಗ್ತಿದೆಯಾ?

Tap to resize

Latest Videos

ಗುಜರಾತ್‌ನ ವಡೋದರಾದಿಂದ ಸುಮಾರು 40 ಮೈಲುಗಳಷ್ಟು ದೂರದಲ್ಲಿರುವ ಸ್ತಂಭೇಶ್ವರ ಮಹಾದೇವ ದೇವಸ್ಥಾನವೇ ಈ ಅಚ್ಚರಿಯ ಬೀಡು. ಇಷ್ಟಕ್ಕೂ ಈ ದೇವಾಲಯ ಮಾಯವಾಗೋದು ಹೇಗೆ ಎಂದಿರಾ? ಇದಿರುವುದು ಸಮುದ್ರದ ಕೊಲ್ಲಿಯಲ್ಲಿ. ಗುಜರಾತ್‌ನ ಕವಿ ಕಾಂಬೋಯಿ ಎಂಬ ಸಣ್ಣ ಪಟ್ಟಣದ ಅರೇಬಿಯನ್ ಸಮುದ್ರದ ಮಧ್ಯದಲ್ಲಿರುವ ದೇವಾಲಯವು ಸಮುದ್ರದ ಏರಿಳಿತಕ್ಕನುಗುಣವಾಗಿ ನೀರಿನೊಳಗೆ ಮುಳುಗಿ ಹೋಗುತ್ತದೆ. ಮತ್ತೆ ಉಬ್ಬರ ಕಡಿಮೆಯಾದಾಗ ಪ್ರತ್ಯಕ್ಷವಾಗುತ್ತದೆ. ಈ ಅದ್ಭುತ ದೃಶ್ಯವನ್ನು ವೀಕ್ಷಿಸಲು ದೇಶಾದ್ಯಂತ ಜನರು ಇಲ್ಲಿಗೆ ಬರುತ್ತಾರೆ. ಹೌದು, ಸ್ತಂಭೇಶ್ವರ ಮಹಾದೇವ ದೇವಾಲಯವು ಭಾರತದಲ್ಲಿ ಕಣ್ಮರೆಯಾಗುವ ಶಿವ ದೇವಾಲಯ ಎಂದು ಪ್ರಸಿದ್ಧವಾಗಿದೆ.

Mythology: ಸ್ತ್ರೀಗೇ ರತಿ ಸುಖ ಹೆಚ್ಚೆಂದು ಹೆಣ್ಣಾಗೇ ಇರಲು ಇಷ್ಟ ಪಟ್ಟ ರಾಜ! ಏನಿವನ ಕತೆ?

ಸ್ತಂಭೇಶ್ವರ ಮಹಾದೇವನ ಕಥೆ
ಪ್ರಕೃತಿಯ ಈ ವಿಜೃಂಭಣೆಯನ್ನು ನೋಡಬೇಕೆಂದರೆ ಈ ಸ್ಥಳಕ್ಕೆ ಭೇಟಿ ನೀಡಬೇಕು. ಈ ಶಿವನ ದೇವಾಲಯವು ಸುಮಾರು 150 ವರ್ಷಗಳ ಹಿಂದೆ ಕಂಡುಬಂದಿದೆ. ತಾರಕಾಸುರನನ್ನು ಕೊಂದ ನಂತರ ಭಗವಾನ್ ಕಾರ್ತಿಕನು ಈ ದೇವಾಲಯ ಸ್ಥಾಪಿಸಿದ ಎಂಬ ಕತೆ ಸ್ಕಂದ ಪುರಾಣದಲ್ಲಿದೆ. ಒಮ್ಮೆ ಭಗವಾನ್ ಕಾರ್ತಿಕೇಯ (ಶಿವನ ಮಗ) ರಾಕ್ಷಸ ತಾರಕಾಸುರನನ್ನು ಕೊಂದ ನಂತರ ರಾಕ್ಷಸನು ಶಿವನ ಭಕ್ತನಾಗಿದ್ದ ಕಾರಣ ಬಹಳ ತಪ್ಪಿತಸ್ಥ ಭಾವನೆ ಅನುಭವಿಸುತ್ತಾನೆ. ಹಾಗಾಗಿ ಜನಸಾಮಾನ್ಯರಿಗೆ ತೊಂದರೆ ಕೊಡುತ್ತಾ ಬದುಕುತ್ತಿದ್ದ ರಾಕ್ಷಸನನ್ನು ಕೊಂದದ್ದು ತಪ್ಪಲ್ಲ ಎಂದು ವಿಷ್ಣು ಅವನಿಗೆ ಸಾಂತ್ವನ ಹೇಳುತ್ತಾನೆ. ಆದಾಗ್ಯೂ, ಭಗವಾನ್ ಕಾರ್ತಿಕೇಯನು ಶಿವನ ಮಹಾನ್ ಭಕ್ತನನ್ನು ಕೊಂದ ಪಾಪವನ್ನು ಪರಿಹರಿಸಲು ಬಯಸುತ್ತಾನೆ. ಆದ್ದರಿಂದ, ವಿಷ್ಣುವು ಶಿವಲಿಂಗಗಳನ್ನು ಸ್ಥಾಪಿಸಲು ಮತ್ತು ಕ್ಷಮೆಗಾಗಿ ಪ್ರಾರ್ಥಿಸಲು ಸಲಹೆ ನೀಡುತ್ತಾನೆ. ಅದರಂತೆ ಕಾರ್ತಿಕೇಯ ಇಲ್ಲಿ ಶಿವಲಿಂಗ ಪ್ರತಿಷ್ಠಾಪಿಸುತ್ತಾನೆ. 

ಕವಿ ಕಂಬೋಯಿ ತಲುಪುವುದು ಹೇಗೆ?
ಕವಿ ಕಂಬೋಯಿ ಗುಜರಾತ್‌ನ ವಡೋದರಾದಿಂದ ಸುಮಾರು 75 ಕಿಮೀ ದೂರದಲ್ಲಿದೆ. ಕವಿ ಕಾಂಬೋಯ್ ವಡೋದರಾ, ಭರೂಚ್ ಮತ್ತು ಭಾವನಗರದಂತಹ ಸ್ಥಳಗಳಿಂದ ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ವಡೋದರಾದಿಂದ ಸ್ತಂಭೇಶ್ವರ ಮಹಾದೇವ್‌ಗೆ ಪ್ರಯಾಣಿಸಲು ಖಾಸಗಿ ಕ್ಯಾಬ್‌ಗಳು ಅಥವಾ ವಾಹನಗಳನ್ನು ಬಳಸುವುದು ಉತ್ತಮ. ರೈಲಿನ ಮೂಲಕ: ವಡೋದರಾ ರೈಲು ನಿಲ್ದಾಣವು ಕವಿ ಕಾಂಬೋಯ್‌ಗೆ ಹತ್ತಿರದ ರೈಲು ನಿಲ್ದಾಣವಾಗಿದೆ.

Shani Uday 2023: ಮಾರ್ಚ್‌ನಲ್ಲಿ ಈ 4 ರಾಶಿಗಳಿಗೆ ಶನಿಯ ದಯೆಯಿಂದ ಲಾಭ, ಸಂತೋಷ, ಅದೃಷ್ಟ..

ದೇವಾಲಯದ ವೆಬ್‌ಸೈಟ್ www.stambeshwarmahadev.com ಸ್ತಂಭೇಶ್ವರ ಮಹಾದೇವ ದೇವಾಲಯದ ತೆರೆಯುವ ಸಮಯವನ್ನು ಉಲ್ಲೇಖಿಸುತ್ತದೆ. ಆದರೂ, ದೇವಾಲಯವು ಸಮುದ್ರದಲ್ಲಿ ಮುಳುಗಿ ಮತ್ತೆ ಅದರ ಮೂಲ ಸ್ಥಿತಿಗೆ ಬರುವುದನ್ನು ವೀಕ್ಷಿಸಲು ಇಡೀ ದಿನವನ್ನು ಇಲ್ಲಿ ಕಳೆಯುವುದು ಉತ್ತಮ. ಗುಜರಾತ್‌ಗೆ ಹೋದಾಗ ಈ ಆಸಕ್ತಿದಾಯಕ ಸ್ಥಳಕ್ಕೆ ಭೇಟಿ ನೀಡುವುದನ್ನು ತಪ್ಪಿಸಿಕೊಳ್ಳಬೇಡಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!