Hanuman Jayanti 2022: ಹನುಮಂತನ ಬಗೆಗಿನ ಈ ವಿಷಯಗಳು ನಿಮಗೆ ಗೊತ್ತೇ?

By Suvarna News  |  First Published Apr 15, 2022, 3:27 PM IST

ಆಂಜನೇಯನ ಕುರಿತ ಬಹಳಷ್ಟು ಆಸಕ್ತಿಕರ ವಿಷಯಗಳು ಹೆಚ್ಚಿನವರಿಗೆ ತಿಳಿದಿಲ್ಲ. ಅವುಗಳ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ. 


ವಾಯುವಿನ ಆಧ್ಯಾತ್ಮಿಕ ಪುತ್ರ ಹನುಮ(Hanuman) ಎಂದರೆ ಹಿಂದೂಗಳಿಗೆ ವಿಶೇಷ ಅಕ್ಕರೆ. ವಾನರ ಸಮುದಾಯದ ಕೇಸರಿ ಹಾಗೂ ಅಂಜನಾಗೆ ಜನಿಸಿದ ಆಂಜನೇಯನು ಶ್ರೀರಾಮ(Lord Ram)ನಿಗೆ ರಾವಣ ಸಂಹಾರಕ್ಕೆ ಬೃಹತ್ ಕೊಡುಗೆ ನೀಡಿದ್ದಾನೆ. ರಾಮನ ಕುರಿತಾದ ಹನುಮನ ಭಕ್ತಿಗೆ ಸರಿಸಮಾನವಾದ ಉದಾಹರಣೆ ಮತ್ತೊಂದು ಸಿಗುವುದಿಲ್ಲ. 

ಹಿಂದೂ ಪುರಾಣಗಳಲ್ಲಿ ಹನುಮಾನ್ ಎಂದರೆ ಶಿವ(Lord Shiva)ನ ಸ್ವರೂಪ ಎಂದು ಹೇಳಲಾಗಿದೆ. ವಿಷ್ಣುವು ರಾಮನ ಅವತಾರ ತಳೆದಾಗ ಆತನಿಗೆ ಸಹಾಯ ಮಾಡಲು ಶಿವನು ಹನುಮನ ಅವತಾರ ತಳೆದ ಎನ್ನಲಾಗುತ್ತದೆ. ಅವನಲ್ಲಿ ಮಿತಿಯಿಲ್ಲದಷ್ಟು ಶಕ್ತಿ ಹಾಗೂ ಧೈರ್ಯವಿತ್ತು. ನಾಲ್ಕು ವೇದಗಳನ್ನು, ಆರು ಶಾಸ್ತ್ರಗಳನ್ನು ಕಲಿತ ಆತ ಒಬ್ಬ ಮಹಾನ್ ಪಂಡಿತನಾಗಿದ್ದ. ಅಷ್ಟ ಚಿರಂಜೀವಿಗಳಲ್ಲಿ ಒಬ್ಬನಾಗಿರುವ ಆಂಜನೇಯನು ಸದಾ ವಿನಮ್ರತೆಯಿಂದಿರುತ್ತಾನೆ. ಇಂಥ ಅಸಾಧಾರಣ ಆಂಜನೇಯನ ಕುರಿತ ಆಸಕ್ತಿಕರ ಸಂಗತಿಗಳು ಇಲ್ಲಿವೆ. 

Tap to resize

Latest Videos

ವಾನರನಾಗಿ ಹನುಮ
ಅಂಜನ ಇಂದ್ರ ಲೋಕದ ಅಪ್ಸರೆಯಾಗಿದ್ದಳು. ಒಮ್ಮೆ ಆಕೆ ಭೂಲೋಕ ಪ್ರವಾಸದಲ್ಲಿದ್ದಾಗ ಕಾಡೊಂದರಲ್ಲಿ ಮಂಗವು ಧ್ಯಾನ ಮಾಡುವುದನ್ನು ನೋಡಿ ಜೋರಾಗಿ ನಕ್ಕು ಅಪಮಾನಿಸಿದಳು. ಇದಕ್ಕೆ ಆ ಮಂಗ ಸೊಪ್ಪು ಹಾಕದೆ ಧ್ಯಾನ ಮುಂದುವರಿಸಿತು. ಆಗ ಅಂಜನಾ ಅದರತ್ತ ಕಲ್ಲುಗಳನ್ನೆಸೆದು ಕೆಣಕಿದಳು. ಆಗ ತಾಳ್ಮೆ ಕಳೆದುಕೊಂಡ ಮಂಗವು ಅಂಜನಳಿಗೆ ಮಂಗವಾಗುವಂತೆ ಶಾಪವಿಟ್ಟಿದ್ದಲ್ಲದೆ, ಆಕೆ ಪರಿಪರಿಯಾಗಿ ಬೇಡಿದ ಮೇಲೆ ಶಿವನ ಅವತಾರಕ್ಕೆ ಜನ್ಮ ನೀಡಿದರೆ ಆಕೆಗೆ ಮುಂಚಿನ ರೂಪ ದೊರೆಯುವುದಾಗಿ ಹೇಳಿತು. 
ನಂತರ ಮಂಗವಾದ ಅಂಜನಾ ವಾನರ ಲೋಕದ ರಾಜ ಕೇಸರಿಯನ್ನು ವಿವಾಹವಾದಳು. ತನ್ನ ಹೊಟ್ಟೆಯಲ್ಲಿ ಜನಿಸುವಂತೆ ಶಿವನಲ್ಲಿ ಪರಿಪರಿಯಾಗಿ ಬೇಡಿಕೊಂಡಳು. ಅಗ್ನಿಯು ದಶರಥನಿಗೆ ಪತ್ನಿಯರಿಗೆ ನೀಡಲು ಹೇಳಿದ್ದ ಸಿಹಿಯನ್ನು ಹಕ್ಕಿಯೊಂದು ಕಚ್ಚಿಕೊಂಡು ಬಂದು ಅಂಜನಾ ಎದುರಿಟ್ಟಿತು. ಅದನ್ನು ತಿಂದ ಅಂಜನಾ ಹೊಟ್ಟೆಯಲ್ಲಿ ಶಿವನು ಹನುಮನಾಗಿ ಜನಿಸಿದನು. ಇದರಿಂದ ಶಾಪಮುಕ್ತಳಾದ ಅಂಜನಾ, ತನ್ನ ಮಗನಿಗೆ ಆತ ಚಿರಂಜೀವಿಯಾಗಿರುವ ವಿಷಯ ತಿಳಿಸಿ ಸ್ವರ್ಗಕ್ಕೆ ಹಿಂದಿರುಗಿದಳು. 

ಐವರು ಸಹೋದರರು(five brothers)
ಹನುಮಂತನಿಗೆ ಐವರು ನಿಜವಾದ ಸಹೋದರರೂ ಇದ್ದರು. ವಿವಿಧ ಪುರಾಣಗಳಲ್ಲಿ, ಕೇಸರಿಯ ಆರು ಪುತ್ರರ ಉಲ್ಲೇಖವಿದೆ ಮತ್ತು ಇದರಲ್ಲಿ ಹನುಮಂತನು ಹಿರಿಯನಾಗಿದ್ದನು. ಹನುಮ ಬ್ರಹ್ಮಚಾರಿಯಾಗಿ ಉಳಿದನು. ಇತರ ಐದು ಸಹೋದರರು ವಿವಾಹವಾದರು. ಹನುಮಂತನ ಐದು ಸಹೋದರರು ಮತಿಮಾನ್, ಶ್ರುತಿಮಾನ್, ಕೇತುಮಾನ್, ಗತಿಮಾನ್ ಮತ್ತು ಧೃತಿಮಾನ್. ಆಂಜನೇಯನ ಸಹೋದರರ ವಂಶಾವಳಿಯು ಇನ್ನೂ ಮುಂದುವರೆದಿದೆ.

Hanuman Jayanti 2022: ನಿಮ್ಮ ನೆಂಟರಿಷ್ಟರಿಗೆ ಹೀಗೆ ಶುಭಾಶಯ ಹೇಳಿ..
 
ಆಂಜನೇಯ ಮತ್ತು ಸಿಂಧೂರ(Hanuman and Vermilion)
ದಂತಕಥೆಯ ಪ್ರಕಾರ, ಸೀತೆ ಸಿಂಧೂರ ಇಡುತ್ತಿದ್ದುದನ್ನು ನೋಡಿದ ಹನುಮಂತನು ಕಾರಣ ಕೇಳಿದನು. ಇದಕ್ಕೆ ಪ್ರತಿಕ್ರಿಯೆಯಾಗಿ, ಈ ರೀತಿ ಮಾಡುವುದರಿಂದ ತನ್ನ ಪತಿ ಶ್ರೀರಾಮನಿಗೆ ದೀರ್ಘಾಯುಷ್ಯ ಉಂಟಾಗುವುದು ಎಂದಳು ಸೀತೆ. ಇದನ್ನು ಕೇಳಿ ರಾಮನ ಅಮರತ್ವವನ್ನು ಕೋರಿ ಹನುಮಂತನು ತನ್ನ ಸಂಪೂರ್ಣ ದೇಹವನ್ನು ಸಿಂಧೂರದಿಂದ ಅಲಂಕರಿಸಿಕೊಂಡನು. ರಾಮನು ಹನುಮನ ಈ ಮುಗ್ಧ ಭಕ್ತಿಯಿಂದ ನಿಜವಾಗಿಯೂ ಪ್ರಭಾವಿತನಾದನು ಮತ್ತು ಹನುಮಂತನನ್ನು ಸಿಂಧೂರದಿಂದ ಪೂಜಿಸುವವರಿಗೆ ತಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತವೆ ಎಂದು ವರವನ್ನು ನೀಡಿದನು. ಸಿಂಧೂರವನ್ನು ಭಜರಂಗ ಎಂದೂ ಕರೆಯುವುದರಿಂದ, ಅವನಿಗೆ ಭಜರಂಗಬಲಿ ಎಂದು ಕರೆಯಲಾಯಿತು.

ಶನಿವಾರ ಬಂದ Hanuman Jayanti; ಇಂದು ಹೀಗೆ ಮಾಡಿ ಶನಿ, ರಾಹು ಕಾಟದಿಂದ ತಪ್ಪಿಸಿಕೊಳ್ಳಿ

ಹನುಮಾನ್ ಮತ್ತು ಅವನ ಮಗ
ಹನುಮ ಬ್ರಹ್ಮಚಾರಿಯಾಗಿದ್ದರೂ ಅವನಿಗೊಬ್ಬ ಮಗನಿದ್ದನು. ಅವನೇ ಮಕರಧ್ವಜ(Makardhwaja). ಹನುಮಂತನು ತನ್ನ ಬಾಲದಿಂದ ಇಡೀ ಲಂಕೆಯನ್ನು ಸುಟ್ಟು ನಂತರ ತನ್ನ ದೇಹವನ್ನು ತಂಪಾಗಿಸಲು ಸಮುದ್ರಕ್ಕೆ ಧುಮುಕಿದಾಗ ಆತನ ಬೆವರನ್ನು ಕುಡಿದ ಮೀನಿಗೆ ಹನುಮಂತನ ಮಗ ಮಕರಧ್ವಜ ಜನಿಸಿದನು. 

ಶ್ರೀರಾಮನಿಂದ ಹನುಮಂತನಿಗೆ ಮರಣದಂಡನೆ
ಒಂದು ದಂತಕಥೆಯ ಪ್ರಕಾರ, ನಾರದ ಮುನಿಯ ಕೋರಿಕೆಯ ಮೇರೆಗೆ ಹನುಮಂತನು ವಿಶ್ವಾಮಿತ್ರರನ್ನು ಹೊರತುಪಡಿಸಿ ಎಲ್ಲ ಸಂತರನ್ನು ಕಾರ್ಯಕ್ರಮವೊಂದಕ್ಕೆ ಸ್ವಾಗತಿಸಿದನು. ಇದನ್ನು ಕಂಡು ಕೋಪಗೊಂಡ ವಿಶ್ವಾಮಿತ್ರರು ಹನುಮಂತನಿಗೆ ಮರಣದಂಡನೆ ವಿಧಿಸುವಂತೆ ರಾಮನನ್ನು ಕೇಳಿದರು. ವಿಶ್ವಾಮಿತ್ರನು ಭಗವಾನ್ ರಾಮನ ಗುರು ಆಗಿದ್ದರು. ಆದ್ದರಿಂದ ರಾಮನು ವಿಶ್ವಾಮಿತ್ರನ ಆಜ್ಞೆಯನ್ನು ಕಡೆಗಣಿಸಲಾಗಲಿಲ್ಲ. ರಾಮನು ಯಾವುದೇ ಅಸ್ತ್ರವನ್ನು ಹನುಮನ ಮೇಲೆ ಪ್ರಯೋಗಿಸಿದರೂ ಅದು ಧ್ಯಾನಸ್ಥ ಹನುಮಂತನನ್ನು ಪ್ರದಕ್ಷಿಣೆ ಮಾಡುತ್ತಾ ಹಿಂದಿರುಗಿತು. ಇದಾದ ನಂತರ ವಿಶ್ವಾಮಿತ್ರರೂ ಭಗವಂತನ ಮುಂದೆ ನಮಸ್ಕರಿಸಿದರು.

click me!