ಈ ರಾಶಿಯವರಿಗೆ ಸಂಬಂಧದಲ್ಲಿ ಅಭದ್ರತೆ ಹೆಚ್ಚು, ನಿಮ್ಮ ರಾಶಿ ಇದೆಯಾ?

By Suvarna News  |  First Published Jul 28, 2020, 6:53 PM IST

ಮನುಷ್ಯ ಸಂಘ ಜೀವಿ, ಹುಟ್ಟಿನಲ್ಲಿ ಅಪ್ಪ-ಅಮ್ಮ, ಸಹೋದರ, ಸಹೋದರಿ, ಬೆಳೆಯುತ್ತಾ ಸ್ನೇಹಿತರು, ಬಳಿಕ ಸಂಗಾತಿ ಹೀಗೆ ಜೊತೆಗಾರರು ಇರಲೇಬೇಕು. ಸಂಗಾತಿಗಳಾದ ಮೇಲಂತೂ ಪರಸ್ಪರ ಸಾಮರಸ್ಯ ಇರಲೇಬೇಕು. ಆದರೆ, ಕೆಲವೊಮ್ಮೆ ಎಷ್ಟೇ ಸಾಮರಸ್ಯವಾಗಿದ್ದರೂ ಅಭದ್ರತಾ ಭಾವ ಕಾಡುತ್ತಲೇ ಇರುತ್ತದೆ. ಇದಕ್ಕೆ ರಾಶಿ ಚಕ್ರದ ಪ್ರಭಾವವೂ ಇರುತ್ತದೆ. ಒಂದೊಂದು ರಾಶಿಯವರಿಗೆ ಒಂದೊಂದು ರೀತಿಯ ಅಭದ್ರತಾ ಭಾವ ಇರುತ್ತದೆ. ಹಾಗಾಗಿ ನಿಮ್ಮ ರಾಶಿಗನುಗುಣವಾಗಿ ಯಾವ ರೀತಿ ಅಭದ್ರತೆ ಕಾಡುತ್ತದೆ ಎಂಬುದನ್ನು ನೋಡೋಣ ಬನ್ನಿ…


ಸಂಬಂಧಗಳೇ ಹಾಗೆ, ಮೊದ ಮೊದಲು ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಪರಸ್ಪರ ಮಾತುಕತೆ, ಸಂತೋಷಗಳ ವಿನಿಮಯ, ಪ್ರೀತಿಯ ಸಂಕೋಲೆ, ಆನಂದ ಕ್ಷಣಗಳು, ಸಾಮರಸ್ಯ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ, ಸಮಯದ ಚಕ್ರಗಳು ಬದಲಾದಂತೆ ಸಂಬಂಧಗಳಲ್ಲಿನ ಕೆಲವು ಆಪ್ಯಾಯತೆಯೂ ದೂರಾಗಿ ಪರಸ್ಪರರಲ್ಲಿ ಒಬ್ಬರಿಗೆ ಅಭದ್ರತೆ ಪ್ರಾರಂಭವಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ನಿಮ್ಮ ರಾಶಿ ಚಕ್ರವೂ ಕಾರಣ ಎಂಬ ವಿಷಯ ಗೊತ್ತೇ?



ಇಲ್ಲಿ ನಿಮಗನ್ನಿಸಬಹುದು, ನಾವೆಷ್ಟು ಬಾಂಧವ್ಯವನ್ನು ಹೊಂದಿದ್ದೇವೆ. ಆದರೂ, ನನಗ್ಯಾಕೆ ಹೀಗೆ ಅಭದ್ರತೆ ಭಾವ ಕಾಡುತ್ತಿದೆ? ಎಲ್ಲವೂ ಚೆನ್ನಾಗಿಯೇ ನಡೆಯುತ್ತಿರಬೇಕಾದರೆ ಹೀಗ್ಯಾಕೆ ಅನ್ನಿಸುತ್ತಿದೆ? ಎಂಬ ಚಿಂತೆ ಸಹ ಕಾಡಿರಬಹುದು. ಇದಕ್ಕೆ ಇಬ್ಬರಲ್ಲಿ ನಡೆಯುವ ಸಂವಹನ ಕೊರತೆಯೂ ಇರಬಹುದು. ಜೊತೆಗೆ ರಾಶಿಯ ಗುಣ ಸ್ವಭಾವದ ಮೇಲೂ ಇಂತಹ ಭಾವನೆ ಮೂಡುತ್ತಿರಬಹುದು. ಅಂದರೆ, ಅದಕ್ಕನುಗುಣವಾಗಿ ಗ್ರಹಗತಿಗಳು ನಿಮ್ಮನ್ನು ಈ ರೀತಿಯ ಅಭದ್ರತೆಗೆ ತಳ್ಳಬಹುದು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. 

ಇದನ್ನು ಓದಿ: ಈ ಐದು ರಾಶಿಯವರು ಸಖತ್ ಸೋಮಾರಿಗಳು…! ನಿಮ್ಮ ರಾಶಿಯೂ ಇದ್ಯಾ? 

ಹಾಗಾದರೆ, ಯಾವ ರಾಶಿಯವರಿಗೆ ಯಾವ ಯಾವ ರೀತಿಯ ಅಭದ್ರತೆ ಇರುತ್ತದೆ? ನಿಮ್ಮ ರಾಶಿಗೆ ಯಾವ ರೀತಿ ಇದೆ ಎಂಬ ಬಗ್ಗೆ ನೋಡೋಣ ಬನ್ನಿ…

ಮೇಷ ರಾಶಿ
ಈ ರಾಶಿಯವರು ಇತರರಿಗಿಂತ ಭಿನ್ನವಾಗಿರುತ್ತಾರೆ. ಸಂಬಂಧಗಳಲ್ಲಿ ಉತ್ಸಾಹಿ ಪ್ರವೃತ್ತಿಯವರಾಗಿದ್ದು, ಹೆಚ್ಚು ಹೆಚ್ಚು ರೋಮಾಂಚಕ ಮಾದರಿಯಲ್ಲಿ ಸಂತೋಷಗಳನ್ನು ಕೊಡಲು ಇಚ್ಛಿಸುವವರು. ಆದರೆ, ಸಂಬಂಧದಲ್ಲಿ ಉತ್ಸಾಹ, ಖುಷಿ ಕಡಿಮೆಯಾಗುತ್ತಿದೆ ಎಂಬ ಭಾವನೆ ಬಂದಾಗ ಅಭದ್ರತಾ ಭಾವ ಉಂಟಾಗುತ್ತದೆ. 

ವೃಷಭ ರಾಶಿ
ಈ ರಾಶಿಯವರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ಹೊಂದಿರುತ್ತಾರೆ. ತಾವು ಹೀಗೆಯೇ ಕಾಣಿಸಿಕೊಳ್ಳಬೇಕೆಂದು ಇಚ್ಛೆ ಪಡುತ್ತಾರೆ. ಇಲ್ಲಿ ಇವರ ಸಂಗಾತಿಯು ಇನ್ನೊಬ್ಬರ ಸೌಂದರ್ಯವನ್ನು ನೋಡಿದರೆ ಇಲ್ಲವೇ ಹೊಗಳಿದರೆ ಇವರಿಗೆ ಅಸೂಯೆ ಜೊತೆಗೆ ತಮ್ಮ ಸೌಂದರ್ಯದ ಬಗ್ಗೆ ಅಭದ್ರತೆ ಉಂಟಾಗಲು ಪ್ರಾರಂಭವಾಗುತ್ತದೆ.

ಮಿಥುನ ರಾಶಿ
ಈ ರಾಶಿಯವರು ಹೆಚ್ಚಾಗಿ ಕಾಳಜಿರಹಿತ ಸ್ವಭಾವದವರು. ಇವರು ತಮ್ಮ ನೈಜ ಸ್ವಭಾವವನ್ನು ತೋರ್ಪಡಿಸುವುದಕ್ಕಿಂತ ಹೆಚ್ಚು, ಹಾಸ್ಯ ಪ್ರವೃತ್ತಿಯನ್ನು ತೋರಿಸಿಕೊಳ್ಳುತ್ತಾರೆ. ಇನ್ನು ಸಂಗಾತಿ ವಿಷಯಕ್ಕೆ ಬಂದಾಗ ತಮ್ಮ ಬಗ್ಗೆ ಇರುವ ಎಲ್ಲ ಭಾವನಾತ್ಮಕ ವಿಷಯಗಳನ್ನು ಹೇಳಿಕೊಂಡಾಗ ಆ ಬಗ್ಗೆ ಅಭದ್ರತೆ ಪ್ರಾರಂಭವಾಗುತ್ತದೆ. ಬಳಿಕ, ತಮ್ಮ ಬಗ್ಗೆಯ ಸತ್ಯ ಸಂಗತಿ ತಿಳಿದ ಮೇಲೆ ಆ ಸ್ವಭಾವವನ್ನು ಸಂಗಾತಿ ಒಪ್ಪಿಕೊಳ್ಳುತ್ತಾರೆಯೇ ಎಂಬ ಬಗ್ಗೆ ಸ್ವತಃ ಕೇಳಿಕೊಳ್ಳುವ ಅಭದ್ರತೆಯ ಭಾವನೆ ಕಾಡುತ್ತದೆ. 

ಕರ್ಕಾಟಕ ರಾಶಿ
ಈ ರಾಶಿಯವರಿಗೆ ಅಭದ್ರತೆ ಈಗಾಗಲೇ ಕಾಡುತ್ತಿದೆ ಎಂದಾದರೆ, ಅವರಿಗೆ ಅವರ ಸಂಗಾತಿಯಿಂದ ಸಂಬಂಧದಲ್ಲಿ ಸಿಗಬೇಕಾದ ಗಮನ ಸಿಗುತ್ತಿಲ್ಲ ಎಂಬ ಅಂಶ ಕಾರಣವಾಗಿರುತ್ತದೆ. ಅವರು ನಿಮ್ಮಿಂದ ಭಾವನಾತ್ಮಕವಾಗಿ ದೂರಾಗುತ್ತಿದ್ದಾರೆಂದು ಅನ್ನಿಸುವುದಲ್ಲದೆ, ಇದು ಹೆಚ್ಚು ಆತಂಕವನ್ನು ತಂದೊಡ್ಡುತ್ತದೆ. 

ಸಿಂಹ ರಾಶಿ
ಈ ರಾಶಿಯವರು ನೀವಾಗಿದ್ದರೆ ಹೆಚ್ಚು ಗಮನವನ್ನು ನಿಮ್ಮತ್ತ ಸೆಳೆಯಲು ಪ್ರಯತ್ನಿಸುವ ಗುಣವನ್ನು ಹೊಂದಿರುತ್ತೀರಿ. ಜಗತ್ತೇ ನಿಮ್ಮ ಕೈಯೊಳಗಿದ್ದರೂ ಸಹ ನಿಮ್ಮ ಸಂಗಾತಿ ಬೇರೆ ಮಾರ್ಗದಲ್ಲಿದ್ದು, ನಿಮ್ಮ ಬಗ್ಗೆ ನಿರ್ಲಕ್ಷ್ಯ ತಾಳುತ್ತಿದ್ದಾರೆ ಎಂಬ ಭಾವನೆ ನಿಮ್ಮಲ್ಲಿ ಮೂಡಿದರೆ ಅಭದ್ರತಾ ಮನೋಭಾವ ಪ್ರಾರಂಭವಾಗುತ್ತದೆ. 

ಕನ್ಯಾ ರಾಶಿ
ನೀವು ಸಂಬಂಧದಲ್ಲಿದ್ದಾಗ ನಿಮ್ಮ ಸಂಗಾತಿಯಿಂದ ಹೆಚ್ಚಿನ ನಿರೀಕ್ಷೆಯನ್ನು ಹೊಂದಿರುವುದಲ್ಲದೆ, ಎಲ್ಲವೂ ಉತ್ತಮ ಹಾಗೂ ನಿಖರತೆಯಿಂದ ಕೂಡಿರಬೇಕು ಎಂದು ಬಯಸುತ್ತೀರಿ. ಆದರೆ, ಇದರಲ್ಲಿ ಏನಾದರೂ ವ್ಯತ್ಯಾಸವಾದರೆ ಅಭದ್ರತೆ ಕಾಡಲು ಪ್ರಾರಂಭವಾಗುತ್ತದೆ.

ಇದನ್ನು ಓದಿ: ಬೆಕ್ಕಷ್ಟೇ ಅಲ್ಲ, ಈ ಪ್ರಾಣಿಗಳು ಅಡ್ಡಬಂದರೂ ಅಪಶಕುನ! 

ತುಲಾ ರಾಶಿ
ಈ ರಾಶಿಯವರು ಸಂಬಂಧಗಳ ವಿಚಾರ ಬಂದಾಗ ಸ್ವಲ್ಪ ನಿರಾಶಾವಾದಿಗಳು. ಒಂದು ವೇಳೆ ಸಂಗಾತಿ ತಮ್ಮಿಂದ ದೂರವಾಗುತ್ತಿದ್ದಾರೆಂಬ ಭಾವನೆ ಬಂದರೆ ಇವರ ತಲೆಯಲ್ಲಿ ಕಪೋಲಕಲ್ಪಿತ ಕಥೆಗಳು ಹುಟ್ಟಿಕೊಂಡು ಅವುಗಳನ್ನೇ ನಿಜವೆಂದು ಭಾವಿಸುತ್ತಾ ಅಭದ್ರತೆಗೆ ಜಾರುತ್ತಾರೆ.

ವೃಶ್ಚಿಕ ರಾಶಿ
ಈ ರಾಶಿಯವರು ಸಂಗಾತಿಯೊಂದಿಗೆ ಸ್ವಲ್ಪ ಮೇಲುಗೈ ಸಾಧಿಸುವ ಸ್ವಭಾವದವರು. ಹೀಗಾಗಿ ಇದೇ ಇವರಿಗೆ ಸಮಸ್ಯೆಯಾಗಿ ಸಂಗಾತಿ ಪ್ರತಿಕ್ರಿಯೆಯು ಬೇರೆ ರೀತಿಯ ಅರ್ಥವನ್ನು ಕಲ್ಪಿಸಿಕೊಳ್ಳಲು ದಾರಿ ಮಾಡಿ ಅಭದ್ರತೆಗೆ ತಳ್ಳುತ್ತದೆ. 

ಧನು ರಾಶಿ
ಈ ರಾಶಿಯವರು ಸಂಬಂಧದಲ್ಲಿ ರಾಜಿ ಮಾಡಿಕೊಳ್ಳುವವರಲ್ಲ. ಇವರದ್ದು ಸಾಹಸಮಯ ಪ್ರವೃತ್ತಿಯಾಗಿದ್ದು, ಸಂಬಂಧದಲ್ಲಿ ಸಂಗಾತಿಯಿಂದ ಹಿಡಿದಲ್ಲಿಟ್ಟುಕೊಳ್ಳುತ್ತಿದ್ದಾರೆಂಬ ಭಾವನೆ ಬರುವುದು ಹೆಚ್ಚು. ಹೀಗಾದಲ್ಲಿ ಮನಸ್ಸಿನಲ್ಲಿ ಗೊಂದಲ ಉಂಟಾಗಿ ಅಭದ್ರತೆ ಮನೋಭಾವ ಮೂಡುತ್ತದೆ. 

ಮಕರ ರಾಶಿ
ಇವರಲ್ಲಿ ರೊಮ್ಯಾಂಟಿಕ್ ಸಂಬಂಧ ಇದ್ದರೂ ಸಹ ಹೃದಯದಿಂದ ಯೋಚಿಸುವ ಬದಲು, ಮೆದುಳಿನಿಂದಲೇ ಯೋಚನೆ ಮಾಡುತ್ತಾರೆ. ಆದರೆ, ತಮ್ಮ ಸಂಗಾತಿಯ ಆರ್ಥಿಕ ಸ್ಥಿರತೆ ಇವರನ್ನು ಅಭದ್ರತೆಗೆ ತಳ್ಳುತ್ತದೆ. 

ಕುಂಭ ರಾಶಿ
ಈ ರಾಶಿಯವರು ಸ್ವತಂತ್ರರಾಗಿರಲು ಬಯಸುವರು. ಯಾರಾದರೂ ನಿಮ್ಮನ್ನು ಸಂಬಂಧದಲ್ಲಿ ಕಟ್ಟಿಹಾಕಲು ಪ್ರಯತ್ನಪಟ್ಟರೆ ನಿಮ್ಮಿಂದ ತೀವ್ರ ವಿರೋಧ ಮಾಡಿದಲ್ಲಿ ಅದಕ್ಕೆ ನಿಮ್ಮ ಮನಸ್ಸು ಸುತಾರಾಂ ಒಪ್ಪದು. ಇಲ್ಲಿ ನೀವು ನಿಮ್ಮದೇ ಆದ ಸಮಯವನ್ನು ಬಯಸುತ್ತಿರುವ ಸಂದರ್ಭದಲ್ಲಿ ಸಂಗಾತಿಯು ಅದಕ್ಕೆ ಅಡ್ಡಿಯುಂಟುಪಡಿಸಿದಾಗ ನಿಮಗೆ ಅನಿವಾರ್ಯವಾಗಿ ಅಭದ್ರತಾ ಭಾವನೆ ಉಂಟಾಗಿ ಆತಂಕವನ್ನು ತಂದೊಡ್ಡುತ್ತದೆ. 

ಇದನ್ನು ಓದಿ: ಪರಶಿವನ ಕೃಪೆ ಪಡೆವ ಶ್ರಾವಣ ಮಾಸ ಮಹತ್ವ, ಆಚರಣೆ! 

ಮೀನ ರಾಶಿ
ಈ ರಾಶಿಯವರು ತುಂಬಾ ರೋಮ್ಯಾಂಟಿಕ್ ಆಗಿದ್ದರೂ ಹತಾಶ ಮನೋಭಾವದವರಾಗಿರುತ್ತಾರೆ. ಸಂಗಾತಿಯನ್ನು ಪ್ರೀತಿಸಿದರೂ ಸಹ ಅವರ ದೃಢತೆ ಬಗ್ಗೆ ಸದಾ ಅನುಮಾನದ ಪಿಶಾಚಿ ನಿಮ್ಮನ್ನು ಕಾಡುತ್ತಿರುತ್ತದೆ. ಇದು ಕೊನೆಗೆ ಅಭದ್ರತೆಗೆ ದೂಡುತ್ತದೆ.

Tap to resize

Latest Videos

click me!