ಮದುವೆ ಮೆರವಣಿಗೆಯನ್ನು ಟೊಮ್ಯಾಟೋದೊಂದಿಗೆ ಸ್ವಾಗತಿಸುವ ಸಂಪ್ರದಾಯ ಗೊತ್ತಾ? ಅಥವಾ ವಧುವರನಿಗೆ ಮೇಕಪ್ ಬದಲು ಮುಖಕ್ಕೆ ಮಸಿ ಬಳಿವ ಆಚರಣೆ ಬಗ್ಗೆ ಕೇಳಿದ್ದೀರಾ? ಇದು ಮಾತ್ರವಲ್ಲ, ಇನ್ನೂ ಹಲವು ಚಿತ್ರ ವಿಚಿತ್ರ ಮದುವೆಯ ಪದ್ಧತಿಗಳು ಜಗತ್ತಿನಾದ್ಯಂತ ಇವೆ.
ಯಾವುದೇ ಧರ್ಮದ ಮದುವೆ ಸಮಾರಂಭ ಎಂದರೆ ತುಂಬಾ ಸಂತೋಷದ, ಸಂಭ್ರಮಾಚರಣೆಯ ಸಮಯ. ಚೆನ್ನಾಗಿ ರೆಡಿಯಾದ ಸಂತೋಷದಿಂದ ಕೂಡಿದ ಯುವ ಜೋಡಿಗಳನ್ನು ನೋಡಲು, ವಿಭಿನ್ನ ಸಂಪ್ರದಾಯಗಳನ್ನು ಕಣ್ತುಂಬಿಕೊಳ್ಳಲು ಎಲ್ಲರಿಗೂ ಸಂತೋಷವಾಗುತ್ತದೆ.
ಮದುವೆಗೆ ಸಂಬಂಧಿಸಿದಂತೆ ಪ್ರತಿಯೊಂದು ಪ್ರದೇಶ, ಜಾತಿ, ಧರ್ಮದ ಸಂಪ್ರದಾಯಗಳು ವಿಭಿನ್ನವಾಗಿರುತ್ತವೆ. ಹಲವರನ್ನು ನೋಡಿದಾಗ ನಮಗೆ ಸಂತೋಷವಾಗುತ್ತದೆ ಮತ್ತು ಹಲವರನ್ನು ನೋಡಿದ ನಂತರ ಈ ಪದ್ಧತಿಗಳನ್ನು ಏಕೆ ಅನುಸರಿಸಲಾಗುತ್ತಿದೆ ಎಂಬ ಪ್ರಶ್ನೆ ಮನಸ್ಸಿನಲ್ಲೇಳುತ್ತದೆ. ಜಗತ್ತಿನಾದ್ಯಂತ ಕೆಲ ವಿಚಿತ್ರ ಸಂಪ್ರದಾಯಗಳನ್ನು ಹೊಂದಿದ ಮದುವೆ ಪದ್ಧತಿಗಳ ಬಗ್ಗೆ ಇಲ್ಲಿ ನೀಡಿದ್ದೇವೆ.
1. ವಧು ವರನಿಗೆ ಕಿರುಕುಳ
ಇದು ಫ್ರಾನ್ಸ್‌ನ ಸಂಪ್ರದಾಯವಾಗಿದ್ದು, ನವ ದಂಪತಿಗಳ ಸ್ನೇಹಿತರು ಮತ್ತು ಸಂಬಂಧಿಕರು ರಾತ್ರಿಯಲ್ಲಿ ಅವರ ಕೋಣೆ ಮತ್ತು ಮನೆಯ ಹೊರಗೆ ಬಂದು ಗಲಾಟೆ ಮಾಡಲು ಪ್ರಾರಂಭಿಸುತ್ತಾರೆ. ಅದರೊಂದಿಗೆ ಹಾಡುತ್ತಾರೆ, ಸಂಗೀತ ನುಡಿಸುತ್ತಾರೆ, ಡ್ರಮ್‌ಗಳನ್ನು ಸಹ ಜೋರಾಗಿ ನುಡಿಸುತ್ತಾರೆ. ನವ ವಧು-ವರರು ಮನೆಯಿಂದ ಹೊರಗೆ ಬಂದು ಅವರಿಗೆ ಊಟ-ತಿಂಡಿ, ಹಲವು ಸಂದರ್ಭಗಳಲ್ಲಿ ಹಣವನ್ನೂ ನೀಡಬೇಕು. ಅಷ್ಟೇ ಅಲ್ಲ, ಕೆಲವೊಮ್ಮೆ ವಧು-ವರರು ಇವರನ್ನು ನಿರ್ಲಕ್ಷಿಸಿದರೆ, ಕೆಲವೊಮ್ಮೆ ಈ ಜನರು ಮನೆಗೆ ನುಗ್ಗಿ ವರನನ್ನು ಎತ್ತಿಕೊಂಡು ಹೋಗುತ್ತಾರೆ! ನಮ್ಮಲ್ಲಿ ಕೂಡಾ ಫಸ್ಟ್ ನೈಟ್‌ಗೆ ಜೋಡಿಗೆ ಕಿರುಕುಳ ನೀಡುವ ಮಜವಾದ ಆಟಗಳಿರುವುದನ್ನು ಇದಕ್ಕೆ ಕೊಂಚ ಹೋಲಿಸಬಹುದಲ್ಲವೇ?
2. ದಪ್ಪ ವಧು ಉತ್ತಮ!
ಹುಡುಗಿ ದಪ್ಪಗಿದ್ದಷ್ಟೂ ಉತ್ತಮ ಎಂಬುದು ಮಾರಿಟಾನಿಯದ ಸಂಪ್ರದಾಯ. ಅದಕ್ಕಾಗಿಯೇ ಕೆಲವೊಮ್ಮೆ ಪೋಷಕರು ತಮ್ಮ ಹೆಣ್ಣುಮಕ್ಕಳನ್ನು 'ಕೊಬ್ಬಿನ ಶಿಬಿರ'ಗಳಿಗೆ ಕಳುಹಿಸುತ್ತಾರೆ. ಇದರಿಂದ ಅವರು ತೂಕವನ್ನು ಹೆಚ್ಚಿಸಲು ತರಬೇತಿ ನೀಡಲಾಗುತ್ತದೆ. ಈ ಸಂಪ್ರದಾಯವನ್ನು Leblouh ಎಂದು ಕರೆಯಲಾಗುತ್ತದೆ. ಇಲ್ಲಿ ಅನೇಕ ಹುಡುಗಿಯರಿಗೆ ಬಲವಂತವಾಗಿ ಆಹಾರವನ್ನು ತಿನ್ನುವಂತೆ ಮಾಡಲಾಗುತ್ತದೆ. ಇದರಿಂದಾಗಿ ಅವರು ತೂಕವನ್ನು ಹೆಚ್ಚಿಸಬಹುದು. ಇದರಿಂದ ಹೆಣ್ಣುಮಕ್ಕಳು ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ ಈಗಲೂ ಇದು ಈ ದೇಶದ ಪದ್ಧತಿ.
ಇಂದ್ರನ ಶಾಪದಿಂದ ಮುಟ್ಟು ಹೆಣ್ಣಿಗಂಟಿತೇ? ಪೀರಿಯಡ್ಸ್ ಶುರುವಾದದ್ದು ಹೀಗೆ..
3. ವಧು ಮತ್ತು ವರನಿಗೆ ಮಸಿ ಬಳಿಯಲಾಗುತ್ತದೆ!
ನಮ್ಮಲ್ಲಿ ದುಷ್ಟ ಕಣ್ಣನ್ನು ತಡೆಗಟ್ಟಲು ಕಪ್ಪು ಚುಕ್ಕಿಯನ್ನು ವಧು ವರರಿಗೆ ಇಡುತ್ತಾರೆ. ಉಳಿದಂತೆ ಆದಷ್ಟು ಚೆಂದ ಕಾಣುವಂತೆ ಮೇಕಪ್ ಮಾಡಲಾಗಿರುತ್ತದೆ. ಆದರೆ ಸ್ಕಾಟ್ಲೆಂಡ್ನಲ್ಲಿ, ವಧು ಮತ್ತು ವರರಿಗೆ ಮಸಿ ಬಳಿಯಲಾಗುತ್ತದೆ. ಮದುವೆಯ ನಂತರದ ಬದುಕಿನಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸಲು ಸಹಾಯವಾಗಲಿ ಎಂದು, ವಿವಾಹ ಬಳಿಕ ಜೀವನ ಚೆನ್ನಾಗಿರಲಿ ಎಂಬ ಉದ್ದೇಶದಿಂದ ಮದುವೆಯ ಈ ಸಂಪ್ರದಾಯವನ್ನು ಮಾಡಲಾಗುತ್ತದೆ. ಇದನ್ನು ಹೆಚ್ಚಾಗಿ ಸ್ಕಾಟ್ಲೆಂಡ್‌ನ ಗ್ರಾಮೀಣ ಪ್ರದೇಶಗಳಲ್ಲಿ ಮಾಡಲಾಗುತ್ತದೆ.
4. ವಧು ಮತ್ತು ವರರು 3 ದಿನಗಳವರೆಗೆ ಬಾತ್ರೂಮ್ಗೆ ಹೋಗುವಂತಿಲ್ಲ!
ಇದು ಬೋರ್ನಿಯೊದ ಟಿಡಾಂಗ್ ಜಾತಿಯ ಜನರ ಪದ್ಧತಿಯಾಗಿದೆ. ಅಲ್ಲಿ ವಧು ವರರಿಗೆ ಮೂರು ದಿನಗಳ ಕಾಲ ಸ್ನಾನಗೃಹಕ್ಕೆ ಹೋಗಲು ಅನುಮತಿಸಲಾಗುವುದಿಲ್ಲ. ಇದಕ್ಕಾಗಿ ಅವರಿಗೆ ಸ್ವಲ್ಪವೇ ಆಹಾರ ಮತ್ತು ಪಾನೀಯವನ್ನು ನೀಡಲಾಗುತ್ತದೆ. ಈ ಜನರು ಮದುವೆಯಾದ ತಕ್ಷಣ ಸ್ನಾನಗೃಹಕ್ಕೆ ಹೋದರೆ, ಅವರು ಬಹಳಷ್ಟು ದುರದೃಷ್ಟವನ್ನು ಎದುರಿಸುತ್ತಾರೆ ಎಂದು ನಂಬಲಾಗಿದೆ.
5. ಮಣ್ಣಿನ ಮಡಕೆಯನ್ನು ತಲೆಯ ಮೇಲೆ ಇಟ್ಟು ಪಾದಗಳನ್ನು ಸ್ಪರ್ಶಿಸಬೇಕು..
ಇದು ಬಿಹಾರದ ಹಲವು ಪ್ರದೇಶಗಳ ವಾಡಿಕೆ. ಮದುವೆಯ ನಂತರ ಅತ್ತೆಯು ಸೊಸೆಯ ತಲೆಯ ಮೇಲೆ ಮಣ್ಣಿನ ಮಡಕೆಗಳನ್ನು ಇಡುತ್ತಾರೆ ಮತ್ತು ವಧು ಅದನ್ನು ತಲೆಯ ಮೇಲೆ ಹೊತ್ತುಕೊಂಡು ಮನೆಯ ಹಿರಿಯರ ಪಾದಗಳನ್ನು ಮುಟ್ಟಬೇಕು. ವಧು ತನ್ನ ತಲೆಯ ಮೇಲಿನ ಮಡಕೆಗಳನ್ನು ಇರಿಸಿ ಪ್ರತಿಯೊಬ್ಬರ ಪಾದಗಳನ್ನು ಮುಟ್ಟಿದರೆ, ಅವಳು ಮನೆಯಲ್ಲಿ ಉತ್ತಮವಾಗಿ ನೆಲೆಗೊಳ್ಳುತ್ತಾಳೆ ಎಂದು ನಂಬಲಾಗಿದೆ.
Ramayan Katha: ಸೀತೆಯ ಕೈಯ್ಯಲ್ಲಿ ಹುಲ್ಲನ್ನು ನೋಡಿ ತರ ತರ ನಡುಗುತ್ತಿದ್ದ ರಾವಣ!
6. ಮೆರವಣಿಗೆಯನ್ನು ಟೊಮೆಟೊಗಳೊಂದಿಗೆ ಸ್ವಾಗತಿಸಲಾಗುತ್ತದೆ!
ನಮ್ಮಲ್ಲಿ ಮದುವೆ ಮೆರವಣಿಗೆಯನ್ನು ಹೂವು, ಅಕ್ಷತೆ ಆರತಿ ತಟ್ಟೆಯಿಂದ ಸ್ವಾಗತಿಸಿದರೆ, ಉತ್ತರ ಪ್ರದೇಶದ ಈ ಬುಡಕಟ್ಟು ಜನಾಂಗದಲ್ಲಿ ಟೊಮ್ಯಾಟೊವನ್ನು ವರನಿಗೆ ಎಸೆದು ಸ್ವಾಗತಿಸಲಾಗುತ್ತದೆ. ದುಷ್ಟತನದಿಂದ ಪ್ರಾರಂಭವಾಗುವ ಸಂಬಂಧವು ಪ್ರೀತಿಯಲ್ಲಿ ಕೊನೆಗೊಳ್ಳುತ್ತದೆ, ಆದ್ದರಿಂದ ಇದು ಅವಶ್ಯಕವಾಗಿದೆ ಎಂಬ ನಂಬಿಕೆ ಇವರದು.