ದಕ್ಷಿಣ ಕನ್ನಡ ಜಿಲ್ಲೆ ಮುಲ್ಕಿ ತಾಲೂಕಿನ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆಯಲ್ಲಿ ಈ ಬಾರಿ ಮುಸ್ಲಿಂ ವ್ಯಾಫಾರಿಗಳಿಗೆ ನಿಷೇಧಿಸುವ ಮೂಲಕ ಧರ್ಮ ದಂಗಲ್ ಆಚರಣೆ ಮುನ್ನೆಲೆಗೆ ತರಲಾಗಿದೆ.
ದಕ್ಷಿಣ ಕನ್ನಡ (ಏ.08): ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆಯಲ್ಲಿ ಈ ಬಾರಿ ಮುಸ್ಲಿಂ ವ್ಯಾಫಾರಿಗಳಿಗೆ ನಿಷೇಧಿಸುವ ಮೂಲಕ ಧರ್ಮ ದಂಗಲ್ ಆಚರಣೆಯನ್ನು ಮತ್ತೆ ಮುನ್ನೆಲೆಗೆ ತರಲಾಗಿದೆ.
ಕಳೆದ ವರ್ಷ ತೀವ್ರ ಮುನ್ನೆಲೆಗೆ ಬಂದಿದ್ದ ಧರ್ಮ ದಂಗಲ್ ಆಚರಣೆ ಕರಾವಳಿ ತೀರ ಪ್ರದೇಶಗಳಲ್ಲಿ ಹೆಚ್ಚು ಆಚರಣೆಯಲ್ಲಿತ್ತು. ಬಹುತೇಕ ಹಿಂದೂ ದೇವರ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ನಿಷೇಧ ಮಾಡಲಾಗಿತ್ತು. ಆದರೆ, ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳ ಜಾತ್ರೆಗಳಲ್ಲಿ ಧರ್ಮದಂಗಲ್ ಆಚರಣೆಗೆ ಅವಕಾಶ ಇರಲಿಲ್ಲ. ಆದರೆ, ಖಾಸಗಿಯ ಪ್ರತ್ಯೇಕ ಆಡಳಿತ ಮಂಡಳಿ ಇರುವಂತಹ ದೇವಾಲಯಗಳ ಜಾತ್ರೆಯಲ್ಲಿ ಮುಸ್ಲಿಮರ ವ್ಯಾಪಾರವನ್ನು ಕೆಲವೆಡೆ ಭಾಗಶಃ ನಿಷೇಧ ಹೇರಲಾಗಿತ್ತು.
ಕೋಲಾರದಲ್ಲಿ ಧರ್ಮದಂಗಲ್: ಕುರಿಗಾಹಿ ಹಿಂದೂ ಮಹಿಳೆಯರ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ
ಕಳೆದ ವರ್ಷ ಮುಸ್ಲಿಂಮರೇ ವ್ಯಾಪಾರಕ್ಕೆ ಬಂದಿರಲಿಲ್ಲ: ಇನ್ನು ಕಳೆದ ವರ್ಷ ನಡೆದ ಶ್ರೀ ದುರ್ಗಾ ಪರಮೇಶ್ವರಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳ ವ್ಯಾಪಾರಕ್ಕೆ ಆಡಳಿತ ಮಂಡಳಿ ಯಾವುದೇ ನಿರ್ಬಂಧ ವಿಧಿಸಿರಲಿಲ್ಲ. ಇನ್ನು ಈ ವರ್ಷ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಹಿಂದುತ್ವ ಸಂಘಟನೆಗಳಿಂದ ದೇವಾಲಯದ ಆಡಳಿತ ಮಂಡಳಿ ಮುಖ್ಯಸ್ಥರು ಮತ್ತು ಅನುವಂಶಿಕ ಮುಖ್ಯಸ್ಥರಿಗೆ ಮನವಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ವಿಧಿಸುವಂತೆ ಮನವಿ ಮಾಡಿದ್ದಾರೆ. ಧಾರ್ಮಿಕ ದತ್ತಿ ಕಾನೂನಿನ ಪ್ರಕಾರ ಅನ್ಯ ಮತೀಯರಿಗೆ ಅವಕಾಶ ಕೊಡದಂತೆ ಮನವಿ ಸಲ್ಲಿಸಿದ್ದಾರೆ.
ಜಾತ್ರೆಗೆ ಬಂದಿದ್ದ ಮುಸ್ಲಿಂ ವ್ಯಾಪಾರಿಗಳು ವಾಪಸ್: ಹಿಂದೂ ಸಘಂಟನೆಗಳ ಮನವಿಯಂತೆ ಈ ಬಾರಿ ಮುಸ್ಲಿಂ ವ್ಯಾಪಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಮುಸ್ಲಿಮರ ವ್ಯಾಪಾರಕ್ಕೆ ಅವಕಾಶ ನಿರಾಕರಿಸಿರುವ ಹಿನ್ನೆಲೆಯಲ್ಲಿ ಜಾತ್ರೆಗೆ ವ್ಯಾಪಾರಕ್ಕೆ ಅನುಮತಿ ಕೇಳಿಕೊಂಡು ಬಂದಿದ್ದ ಮುಸ್ಲಿಂ ವ್ಯಾಪಾರಿಗಳನ್ನು ದೇವಾಲಯದ ಆಡಳಿತ ಮಂಡಳಿ ವಾಪಾಸ್ ಕಳುಹಿಸಿದೆ. ಈ ಮೂಲಕ ಈ ಬಾರಿಯ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ಜಾತ್ರೆಯಲ್ಲಿ ಅಧಿಕೃತವಾಗಿ ಮುಸ್ಲಿಂ ವ್ಯಾಪಾರಿಗಳನ್ನು ಯಾವುದೇ ವ್ಯಾಪಾರ ವಹಿವಾಟು ನಡೆಸದಂತೆ ನಿರ್ಬಂಧ ವಿಧಿಸಲಾಗಿದೆ.
ಮುಸ್ಲಿಮರಿಂದಲೇ ನಿರ್ಮಾಣವಾದ ದೇಗುಲ: ಸುಮಾರು 800 ವರ್ಷಗಳ ಹಿಂದೆ ಮುಸ್ಲಿಂ ವ್ಯಕ್ತಿಯಿಂದ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯ ನಿರ್ಮಾಣವಾಗಿದೆ ಎಂದ ಪ್ರತೀತಿ ಇದೆ. ಬಪ್ಪಬ್ಯಾರಿ ಎಂಬ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಶ್ರೀ ದುರ್ಗಾಪರಮೇಶ್ವರಿ ದೇವಿ ಒಲಿದಿದ್ದರು. ಆ ಬಳಿಕ ದೇವಿಯ ಸೂಚನೆಯಂತೆ ಬಪ್ಪಬ್ಯಾರಿ ದೇವಸ್ಥಾನ ನಿರ್ಮಿಸಿದರು ಎಂಬುದು ಹಿಂದಿನಿಂದ ನಂಬಿಕೊಂಡು ಬಂದಿರುವ ಇತಿಹಾಸವಾಗಿದೆ. ಆದರೆ, ಕಳೆದ ಬಾರಿಯೇ ಬಪ್ಪನಾಡಿನಲ್ಲಿ ಹುಟ್ಟಿಕೊಂಡಿದ್ದ ವ್ಯಾಪಾರಿ ಧರ್ಮದಂಗಲ್ ನಿಂದಾಗಿ ಮುಸ್ಲಿಂ ವ್ಯಾಪಾರಿಗಳು ಜಾತ್ರೆಯಲ್ಲಿ ವ್ಯಾಪಾರಕ್ಕೆ ಬಂದಿರಲಿಲ್ಲ.
Chitradurga: ಭಾವೈಕ್ಯತೆ ಸಾರುವ ವದ್ದಿಕೆರೆ ಸಿದ್ದಪ್ಪನ ಅದ್ದೂರಿ ರಥೋತ್ಸವ ಆಚರಣೆ: ಕಣ್ತುಂಬಿಕೊಂಡ ಭಕ್ತಗಣ
ಹಿಂದೂ ಸಂಘಟನೆ ಮನವಿ ತಿರಸ್ಕಾರ: ಇನ್ನು ರಾಜ್ಯಾದ್ಯಂತ ಕಳೆದ ವರ್ಷ ಧರ್ಮ ದಂಗಲ್ ಆಚರಣೆಯ ಕಾವು ಜೋರಾಗಿತ್ತು. ಪ್ರತಿಯೊಂದು ದೊಡ್ಡ ಜಾತ್ರೆಗಳಲ್ಲಿ ಹಬ್ಬ ಹರಿದಿನಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಹಿಂದೂ ಸಂಘಟನೆಗಳಿಂದ ಜಿಲ್ಲಾಡಳಿತ ಹಾಗೂ ದೇವಾಲಯಗಳ ಆಡಳಿತ ಮಂಡಳಿಗೆ ಮನವಿ ಪತ್ರಗಳನ್ನು ಸಲ್ಲಿಕೆ ಮಾಡಲಾಗುತ್ತಿತ್ತು. ಇದೇ ರೀತಿ ಕಳೆದ ವರ್ಷವೂ ಬಪ್ಪನಾಡು ದುರ್ಗಾಪರಮೇಶ್ವರಿ ಜಾತ್ರೆಗೂ ಮುಸ್ಲಿಂ ವ್ಯಾಪಾರಕ್ಕೆ ನಿಷೇಧಿಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಇದನ್ನು ನಿರಾಕರಿಸಿದ್ದ ಆಡಳಿತ ಮಂಡಳಿ ಮುಸ್ಲಿಮರ ವ್ಯಾಪಾರಕ್ಕೆ ಅನುಮತಿ ಕೊಟ್ಟಿತ್ತು. ಆದರೆ, ಅನಮತಿ ನೀಡಿದ್ದರೂ ಮುಸ್ಲಿಂ ವ್ಯಾಪಾರಿಗಳು ಜಾತ್ರೆಯಲ್ಲಿ ಯಾವುದೇ ವ್ಯಾಪಾರ ಮಾಡಲು ಬಂದಿರಲಿಲ್ಲ.
ವ್ಯಾಪಾರ ಮಾಡದಂತೆ ವಾಪಸ್ ಕಳಿಸಿದ ಆಡಳಿತ ಮಂಡಳಿ: ಆದರೆ ಈ ಬಾರಿ ಧಾರ್ಮಿಕ ದತ್ತಿ ಕಾನೂನಿನ ನೆಪದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅಧಿಕೃತವಾಗಿ ನಿರ್ಬಂಧ ಹೇರಲಾಗಿದೆ. ಏಪ್ರಿಲ್ 5 ರಂದು ಬಪ್ಪನಾಡು ಜಾತ್ರಾ ಮಹೋತ್ಸವಕ್ಕೆ ಧ್ವಜಾರೋಹಣ ನಡೆದು ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ. ಇನ್ನೂ ಒಂದು ವಾರಗಳ ಕಾಲ ಜಾತ್ರೆ ನಡೆಯಲಿದೆ. ಆದರೆ, ಮುಸ್ಲಿಂಮರ ವ್ಯಾಪಾರಕ್ಕೆ ನಿಷೇಧ ವಿಧಿಸಿದ್ದರಿಂದ ವ್ಯಾಪಾರಕ್ಕೆ ಬಂದ ಕೆಲವು ಮುಸ್ಲಿಂ ವ್ಯಾಪಾರಿಗಳನ್ನು ಕೂಡ ಜಾತ್ರೆಯಲ್ಲಿ ಭಾಗವಹಿಸದಂತೆ ದೇವಾಲಯ ಆಡಳಿತ ಮಂಡಳಿ ವಾಪಸ್ ಕಳುಹಿಸಿದೆ.