ಮದುವೆ ಎಂದರೆ ಈಗಂತೂ ಮೆಹಂದಿ ಸೆರಮನಿಯೇ ಒಂದು ದಿನ ನಡೆಯುತ್ತದೆ. ವಧುವಿನ ಕೈ ಕಾಲು, ವರನ ಕೈಗೆ ಮದರಂಗಿ ಹಚ್ಚಲಾಗುತ್ತದೆ. ಹೀಗೆ ಮೆಹಂದಿ ಹಚ್ಚುವುದರ ಹಿಂದಿನ ಕಾರಣಗಳೇನು ಗೊತ್ತಾ?
ಭಾರತದಲ್ಲಿ ಬಹಳ ಹಿಂದಿನಿಂದಲೂ ವಿವಾಹವೆಂದರೆ ವಧುವಿನ ಕೈಗಳು, ಕಾಲುಗಳಿಗೆ ಮದರಂಗಿ ಹಚ್ಚುವ ಸಂಪ್ರದಾಯವಿದೆ. ಇದು ವಧುವಿನ ಸೌಂದರ್ಯ ಹೆಚ್ಚಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಮದರಂಗಿಯನ್ನು ಕೇವಲ ಸೌಂದರ್ಯಕ್ಕಾಗಿ ಹಚ್ಚುವುದಲ್ಲ. ವಿವಾಹದಲ್ಲಿ ಮದರಂಗಿಯ ಪಾತ್ರವೇನು? ಅದನ್ನು ಹಚ್ಚುವುದರಿಂದ ಪ್ರಯೋಜನಗಳೇನು, ಮದರಂಗಿಯ ಇತಿಹಾಸವೇನು ಎಲ್ಲದರ ವಿವರ ಇಲ್ಲಿದೆ.
ಹೆನ್ನಾ (ಮೆಹಂದಿ) ಎಂಬುದು ಲಾಸೋನಿಯಾ ಇನರ್ಮಿಸ್ ಎಂಬ ಸಸ್ಯದಿಂದ ತಯಾರಾದ ಬಣ್ಣವಾಗಿದೆ. ಇದನ್ನು ಹೆನ್ನಾ ಮರ, ಮದರಂಗಿ ಗಿಡ, ಮಿಗ್ನೊನೆಟ್ ಮರ ಮತ್ತು ಈಜಿಪ್ಟಿಯನ್ ಪ್ರೈವೆಟ್ ಎಂದೂ ಕರೆಯಲಾಗುತ್ತದೆ. ಹೆನ್ನಾ ಎಂಬ ಇಂಗ್ಲಿಷ್ ಹೆಸರು ಅರೇಬಿಕ್ ಭಾಷೆಯಿಂದ ಬಂದಿದೆ. ಇದನ್ನು ಭಾರತೀಯ ಉಪಖಂಡದಲ್ಲಿ ಮೆಹೆಂದಿ ಎನ್ನುತ್ತೇವೆ. ಇದು ಸಂಸ್ಕೃತ ಪದ 'ಮೆಂಧಿಕಾ' ದಿಂದ ಬಂದಿದೆ. ಮೆಹಂದಿಯು ದೇಹ ಕಲೆಯ ಅತ್ಯಂತ ಹಳೆಯ ರೂಪವಾಗಿದೆ. ಮೆಹಂದಿಯನ್ನು ಪ್ರಾಚೀನ ಕಾಲದಿಂದಲೂ ಚರ್ಮ, ಕೂದಲು ಮತ್ತು ಬೆರಳಿನ ಉಗುರುಗಳಿಗೆ ಬಣ್ಣ ಹಚ್ಚಲು ಬಳಸಲಾಗುತ್ತದೆ.
ಮದರಂಗಿಯ ಮೂಲ
ಭಾರತದ ಮರುಭೂಮಿಯಲ್ಲಿ ವಾಸಿಸುವ ಜನರು ಅಲ್ಲಿನ ಬಿಸಿಲಿನ ಧಗೆಗೆ ಬೇಯುತ್ತಿದ್ದಾಗ ಪರಿಹಾರ ಹುಡುಕುತ್ತಿದ್ದರು. ಆ ಸಂದರ್ಭದಲ್ಲಿ ಕೈಕಾಲುಗಳಿಗೆ ಮೆಹಂದಿ ಹಚ್ಚಿಕೊಂಡಾಗ ಅದರಿಂದ ದೇಹ ತಂಪಾಗಿರುವುದು ಕಂಡುಬಂತು. ಆಗ ಕೈ ತುಂಬಾ ಮೆತ್ತಿಕೊಳ್ಳಲಾಗುತ್ತಿತ್ತು. ನಿಧಾನವಾಗಿ ಇದರಲ್ಲೂ ಹಲ ವಿನ್ಯಾಸಗಳನ್ನು ಮಾಡುವುದನ್ನು ಕಂಡುಕೊಂಡರು. ಇದರಿಂದ ಒಂದೇ ಕೆಲಸದ ಎರಡು ಲಾಭ ಪಡೆಯಲು ಸಾಧ್ಯವಾಗುತ್ತಿತ್ತು. ಮೆಹಂದಿ ವಿನ್ಯಾಸಗಳು ಜನಪ್ರಿಯವಾಗುತ್ತಿದ್ದಂತೆಯೇ ಅವು ಮದುವೆಮನೆಯವರೆಗೂ ತಲುಪಿದವು.
ಮೆಹೆಂದಿಯ ತಯಾರಿಕೆ
ಮದರಂಗಿ ಎಲೆಗಳನ್ನು ಒಣಗಿಸಿ ಪುಡಿ ಮಾಡಬಹುದು. ಒಣಗಿಸದೆಯೂ ಮಿಕ್ಸಿಯಲ್ಲಿ ಪೇಸ್ಟ್ ಮಾಡಿ ಬಳಸಬಹುದು. ಹೀಗೆ ಮಾಡಿದಾಗ ಹಚ್ಚುವುದು ಕಷ್ಟವೆಂದ ಕಾರಣಕ್ಕೆ ಒಣಪುಡಿಯನ್ನು ತಯಾರಿಸಲಾಗುತ್ತದೆ. ಗೋರಂಟಿಯ ಜೊತೆಗೆ ನೀರು, ನಿಂಬೆ ರಸ, ಚಹಾ ಪುಡಿ ಮುಂತಾದವನ್ನು ಸೇರಿಸಿದಾಗ ಬಣ್ಣ ಚೆನ್ನಾಗಿ ಬರುತ್ತದೆ. ಅನೇಕ ಕಲಾವಿದರು ಪೇಸ್ಟ್‌ನಲ್ಲಿ ಸಕ್ಕರೆ ಬಳಸುತ್ತಾರೆ. ಇದರಿಂದ ಪೇಸ್ಟ್ ಕೈಗೆ ಚೆನ್ನಾಗಿ ಅಂಟುತ್ತದೆ.
ಆಹಾರದಲ್ಲಿ ಕೂದಲು ಸಿಕ್ಕಿದರೆ ನಿಮಗೀ ದೋಷವಿದೆ ಎಂದರ್ಥ! ಬೇಗ ಪರಿಹಾರ ಕೈಗೊಳ್ಳಿ..
ಮೆಹಂದಿ ಸಮಾರಂಭದ ಮಹತ್ವ
ಮದುವೆಯಲ್ಲಿ ಹಚ್ಚುವ ಮೆಹಂದಿ ಬಣ್ಣಕ್ಕೆ ವಿಶೇಷ ಅರ್ಥವಿದೆ. ವಧುವಿನ ಕೈಗೆ ಬಣ್ಣ ಗಾಢವಾಗಿ ಬಂದಷ್ಟೂ ಆಕೆಯನ್ನು ವಿವಾಹವಾಗುವ ಹುಡುಗ ಹೆಚ್ಚು ಪ್ರೀತಿಸುತ್ತಾನೆಂಬ ನಂಬಿಕೆ ಇದೆ. ಆದರೆ ದೇಹ ಉಷ್ಣ ಹೆಚ್ಚಾಗಿರುವವರಲ್ಲಿ ಬಣ್ಣ ಹೆಚ್ಚು ಬರುತ್ತದೆ ಎಂಬುದು ವಾಸ್ತವ. ಈಗಂತೂ ವಿವಾಹದಲ್ಲಿ ಮದರಂಗಿ ಇಡುವ ಸಂಭ್ರಮವೇ ಒಂದು ದಿನ ನಡೆಯುತ್ತದೆ. ಕೇವಲ ವಧುವಲ್ಲ, ಎಲ್ಲ ನೆಂಟರಿಷ್ಟರೂ ಕೈ ತುಂಬಾ ಮದರಂಗಿ ಇಟ್ಟುಕೊಂಡು ಸಂಭ್ರಮಿಸುತ್ತಾರೆ.
Chanakya Neeti: ಇಂಥ ಸಂಗಾತಿ ಇದ್ದರೆ ದುರದೃಷ್ಟವೂ ಅದೃಷ್ಟವಾಗುತ್ತೆ..
ವಧುವಿನ ಕೈಗೆ ಮೆಹಂದಿ ಹಚ್ಚುವ ಮುಖ್ಯ ಉದ್ದೇಶವೆಂದರೆ ಮೊದಲನೆಯದಾಗಿ ಆಕೆಯ ಸೌಂದರ್ಯ ಹೆಚ್ಚಿಸುವುದು. ಎರಡನೆಯದು, ಇದರಿಂದ ಒತ್ತಡದ ದಿನವಾದ ವಿವಾಹ ಸಮಾರಂಭದಲ್ಲಿ ಆಕೆಯ ದೇಹ ತಂಪಾಗಿರುತ್ತದೆ ಎಂಬ ಕಾರಣಕ್ಕೆ. ವಿವಾಹವೆಂದರೆ ಮೂರ್ನಾಲ್ಕು ದಿನದ ಬಿಡುವಿಲ್ಲದ ಆಚರಣೆ. ಅಷ್ಟಾಗಿ ಗಂಡನ ಮನೆಗೆ ವಧು ಕಾಲಿಡುವ ಹೊತ್ತಿಗಾಗಲೇ ತೆಪ್ಪಗೆ ಬಿದ್ದುಕೊಂಡರೆ ಸಾಕಪ್ಪಾ ಎನಿಸುವಂತಾಗಿರುತ್ತದೆ. ಆದರೆ, ಮೆಹಂದಿ ಹಚ್ಚುವುದರಿಂದ ಅದು ವಧುವಿನ ದೇಹ ಉಷ್ಣತೆಯನ್ನು, ಜೊತೆಗೆ ಮಾನಸಿಕ ಒತ್ತಡವನ್ನು ತಗ್ಗಿಸುತ್ತದೆ. ಕೈ ಕಾಲುಗಳಲ್ಲಿ ನರಗಳ ತುದಿಗಳು ಇರುವುದರಿಂದ ಅಲ್ಲಿ ಮೆಹಂದಿ ಹಚ್ಚಿದಾಗ ನರಗಳು ಉದ್ವಿಗ್ನಗೊಳ್ಳುವುದನ್ನು ತಡೆಯಬಹುದಾಗಿದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.