ಕಾಶ್ಮೀರದಲ್ಲಿ ಶೃಂಗೇರಿ ಶ್ರೀಗಳು
ಕಾಶ್ಮೀರಿ ಪಂಡಿತರ ಮನವಿಗೆ ಸ್ಪಂದಿಸಿ ಸಹಕಾರ
ಕಾಶ್ಮೀರದಲ್ಲಿ ಶಾರದಾ ದೇಗುಲ ಪುನರ್ ಪ್ರತಿಷ್ಠಾಪನೆ
ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬೆ ದೇಗುಲದ ಕಿರಿಯ ಜಗದ್ಗುರುಗಳಾದ ಶ್ರೀ ವಿಧುಶೇಖರ ಶ್ರೀಗಳು ಕಾಶ್ಮೀರದ ತಿತ್ವಾಲ್ ಗೆ ಭೇಟಿ ನೀಡಿದ್ದಾರೆ.
ಶತಮಾನಗಳ ಹಿಂದೆ ಶಂಕರಾಚಾರ್ಯರು ಕಾಶ್ಮೀರದ ತಿತ್ವಾಲ್ ನಲ್ಲಿ ಸ್ಥಾಪಿಸಿದ್ದ ಶಾರದಾಂಬೆ ದೇಗಲು 1948ರಲ್ಲಿ ಸಂಪೂರ್ಣ ಹಾಳಾಗಿತ್ತು. ಕಾಶ್ಮೀರಿ ಪಂಡಿತರು ಎರಡ್ಮೂರು ಬಾರಿ ಶೃಂಗೇರಿಗೆ ಭೇಟಿ ನೀಡಿ, ಕಾಶ್ಮೀರದ ದೇಗುಲವನ್ನು ಪುನರ್ ಪ್ರತಿಷ್ಠಾಪಿಸಲು ಸಹಕಾರ ನೀಡುವಂತೆ ಮನವಿ ಮಾಡಿದ್ದರು. ಕಾಶ್ಮೀರಿ ಪಂಡಿತರ ಮನವಿಯಂತೆ ಶೃಂಗೇರಿ ಜಗದ್ಗುರುಗಳು ತಿತ್ವಾಲ್ ನಲ್ಲಿ ಶೃಂಗೇರಿ ಶಾರದಾಂಬೆಯ ದೇಗುಲವನ್ನು ಪುನರ್ ಪ್ರತಿಷ್ಠಾಪಿಸಲು ಸಹಕಾರ ನೀಡಿದ್ದರು. ಅದರಂತೆ, ಶೃಂಗೇರಿಯಿಂದಲೇ ಪಂಚಲೋಹದ ಶಾರದಾಂಭೆ ಮೂರ್ತಿ ನಿರ್ಮಾಣಗೊಂಡು ಕಾಶ್ಮೀರ ತಲುಪಿದೆ. ಇದೇ ಜನವರಿ 24ರಂದು ಶೃಂಗೇರಿಯಿಂದ ಹೊರಟ ಶಾರದಾಂಬೆ ವಿಗ್ರಹದ ರಥಯಾತ್ರೆಗೆ ಗುರುವತ್ರಯರು ಚಾಲನೆ ನೀಡಿದ್ದರು. ನಾಲ್ಕು ಸಾವಿರ ಕಿಲೋಮೀಟರ್ ದೂರದ ತಿತ್ವಾಲ್ ನಲ್ಲಿನ ಶೃಂಗೇರಿ ಶಾರದಾಂಬೆಗೆ ಇಂದು ಶೃಂಗೇರಿಯ ಕಿರಿಯ ಶ್ರೀಗಳಾದ ವಿದುಶೇಖರ ಶ್ರೀಗಳು ಪೂಜೆ ಸಲ್ಲಿಸಲಿದ್ದಾರೆ.
ವಿಶೇಷ ವಿಮಾನದ ಮೂಲಕ ಪ್ರಯಾಣ
ವಿಶೇಷ ವಿಮಾನದ ಮೂಲಕ ಕಾಶ್ಮೀರಕ್ಕೆ ಭೇಟಿ ನೀಡಿರುವ ವಿಧುಶೇಖರ ಶ್ರೀಗಳು ಅಲ್ಲಿಂದ ಕಾರಿನ ಮೂಲಕ ತಿತ್ವಾಲ್ ನಲ್ಲಿನ ಶಾರದಾಂಬೆ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಇಂದು ವಿದುಶೇಖರ ಶ್ರೀಗಳು ಶಾರದಾಂಬೆ ಮೂರ್ತಿಗೆ ಪೂಜೆ ಸಲ್ಲಿಸಲಿದ್ದಾರೆ. ವಿಧುಶೇಖರ ಶ್ರೀಗಳನ್ನು ಕಾಶ್ಮೀರಿ ಪಂಡಿತರಾದ ರವೀಂದ್ರ ಪಂಡಿತ್, ಪುರೋಹಿತ ಮೋಕಾಶಿ, ರವೀಂದ್ರ ಟಿಕ್ಕು ಮೋತಿಲಾಲ್ ಪೂರ್ಣಕುಂಭದ ಮೂಲಕ ಬರ ಮಾಡಿಕೊಂಡರು.
ಶಾರದಾಂಬೆ ವಿಗ್ರಹದ ಪುನರ್ ಪ್ರತಿಷ್ಠಾಪನೆಗೆ ಶೃಂಗೇರಿ ಮಠದಿಂದಲೇ ಋತ್ವಿಜರ ತಂಡವನ್ನು ಕಳಿಸಲಾಗಿದೆ. ವಾಸ್ತುಹೋಮ, ಕಲಾ ಹೋಮ ಸೇರಿದಂತೆ ತಿತ್ವಾಲ್ ನ ಶಾರದಾಂಬೆ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ. ಇಂದು ಗಣಹೋಮ ದೊಂದಿಗೆ ಕಾರ್ಯಕ್ರಮ ಆರಂಭಗೊಂಡು ವಿಧುಶೇಖರ ಶ್ರೀಗಳ ಸಮ್ಮುಖದಲ್ಲಿ ಶಾರದಾಂಬೆ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಕುಂಭಾಭಿಷೇಕ ಹಾಗೂ ಕಲಶೋತ್ಸವ ಕಾರ್ಯಕ್ರಮ ನಡೆಯಲಿದೆ. ದೇಶದ ತುದಿ ಹಾಗೂ ಗಡಿಯಲ್ಲಿ 75 ವರ್ಷಗಳ ಬಳಿಕ ಶಾರದಾಂಬೆ ದೇಗುಲ ಪುನರ್ ಪ್ರತಿಷ್ಠಾಪನೆಯಾಗಿರುವುದು ಐತಿಹಾಸಿಕ ಘಟನೆ ಎಂದು ಶಾರದಾಂಬೆ ಭಕ್ತರು ಹಾಗೂ ಹಿಂದೂ ಸಮುದಾಯ ಅಭಿಪ್ರಾಯಪಟ್ಟಿದೆ.