ಅಯೋಧ್ಯೆಯಿಂದ ಸರಯು ನದಿಯಿಂದ ಕಳುಹಿಸಿಕೊಡಲಾಗಿದ್ದ ಪವಿತ್ರ ನೀರು, ಸೀತಾಮಾತೆಯ ಜನ್ಮಸ್ಥಳವಾದ ನೇಪಾಳದ ಜನಕಪುರಿ, ಶ್ರೀ ರಾಮನ ಜನ್ಮಸ್ಥಳ ಅಯೋಧ್ಯೆ ಮತ್ತು ಹನುಮಂತನ ಜನ್ಮಸ್ಥಾನವಾದ ಕರ್ನಾಟಕದ ಕಿಷ್ಕಿಂಧೆಯಿಂದ ಬಂದಿದ್ದ ಉಡುಗೊರೆಗಳನ್ನು ಅಶೋಕ ವಾಟಿಕಾದಲ್ಲಿರುವ ಸೀತಾದೇವಿ ದೇವಸ್ಥಾನಕ್ಕೆ ನೀಡಿದ ಶ್ರೀ ರವಿಶಂಕರ ಗುರೂಜಿ.
ಬೆಂಗಳೂರು(ಮೇ.23): ಶ್ರೀಲಂಕಾದ ಸೀತಾ ಏಲಿಯ ಗ್ರಾಮದಲ್ಲಿರುವ ಅಶೋಕ ವಾಟಿಕಾ ಸ್ಥಳದಲ್ಲಿ ಸೀತಾಮಾತೆಯ ಐತಿಹಾಸಿಕ ಕುಂಭಾಭಿಷೇಕವನ್ನು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ ಗುರೂಜಿ ಅವರು ನೆರವೇರಿಸಿದರು. ಕುಂಭಾಭಿಷೇಕದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಶ್ರೀ ರವಿಶಂಕರ ಗುರೂಜಿ ಅವರನ್ನು ಬಂಡಾರನಾಯಿಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶ್ರೀಲಂಕಾದ ಪ್ರಧಾನಮಂತ್ರಿ ದಿನೇಶ್ ಗುಣವರ್ಧನೆ, ರಾಜ್ಯಮಂತ್ರಿ ಪ್ರೇಮಿತ ಬಂಡಾರ ತೆನ್ನಕೂನ್ ಅವರು ಬರಮಾಡಿಕೊಂಡರು.
ಶ್ರೀ ರವಿಶಂಕರ ಗುರೂಜಿ ಅವರು, ಅಯೋಧ್ಯೆಯಿಂದ ಸರಯು ನದಿಯಿಂದ ಕಳುಹಿಸಿಕೊಡಲಾಗಿದ್ದ ಪವಿತ್ರ ನೀರು, ಸೀತಾಮಾತೆಯ ಜನ್ಮಸ್ಥಳವಾದ ನೇಪಾಳದ ಜನಕಪುರಿ, ಶ್ರೀ ರಾಮನ ಜನ್ಮಸ್ಥಳ ಅಯೋಧ್ಯೆ ಮತ್ತು ಹನುಮಂತನ ಜನ್ಮಸ್ಥಾನವಾದ ಕರ್ನಾಟಕದ ಕಿಷ್ಕಿಂಧೆಯಿಂದ ಬಂದಿದ್ದ ಉಡುಗೊರೆಗಳನ್ನು ಅಶೋಕ ವಾಟಿಕಾದಲ್ಲಿರುವ ಸೀತಾದೇವಿ ದೇವಸ್ಥಾನಕ್ಕೆ ನೀಡಿದರು.
ಆರ್ಟ್ ಆಫ್ ಲಿವಿಂಗ್ ನ ಗ್ಲೋಬಲ್ ಹ್ಯಾಪಿನೆಸ್ ಕಾರ್ಯಕ್ರಮದಲ್ಲಿ 87 ದೇಶಗಳು ಭಾಗಿ
ಬಳಿಕ ಮಾತನಾಡಿದ ಶ್ರೀ ರವಿಶಂಕರ ಗುರೂಜಿ ಅವರು, ಈ ಸಮಾವೇಶವು ನಮ್ಮ ಪ್ರಾಚೀನ ನಾಗರಿಕತೆಯ ಸಂಬಂಧವನ್ನು ದೃಢೀಕರಿಸುತ್ತದೆ. ಈಗ ನಶಿಸಿ ಹೋಗುತ್ತಿರುವ ಆ ಮೌಲ್ಯಗಳನ್ನೆಲ್ಲಾ ಮತ್ತೆ ಪುನಶ್ಚೇತನಗೊಳಿಸಬೇಕಿದೆ. ರಾಮರಾಜ್ಯವೆಂದರೆ ಪ್ರಕೃತಿಗೆ ಅನುಗುಣವಾಗಿ ನಾವು ಜೀವಿಸುವ ಜೀವನ, ಸಾಮರಸ್ಯ, ಸಮೃದ್ಧಿ ಮತ್ತು ಸಂತೋಷದಿಂದ ನಡೆಸುವಂತಹ ಜೀವನ. ಈ ಸ್ಥಳವು ಜಗತ್ತಿನಾದ್ಯಂತದ ಮಹಿಳೆಯರಿಗೆ ಸಂಕಷ್ಟಗಳಿಂದ ಮುಕ್ತವಾಗುವಂತಹ ಜೀವನದ ಆಶಾಕಿರಣ ಎಂದು ಹೇಳಿದರು.
ಶ್ರೀಲಂಕಾದ ಈ ಐತಿಹಾಸಿಕ ಕುಂಭಾಭಿಷೇಕದಲ್ಲಿ ಭಾರತ, ಶ್ರೀಲಂಕಾ ಹಾಗೂ ನೇಪಾಳದ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಜೀವಮಾನ ಸಾಧನೆ ಪ್ರಶಸ್ತಿ
ಅಂಬಾಸಿಡರ್ಸ್ ಫೋರಂ ವತಿಯಿಂದ ಗುರುದೇವ ಶ್ರೀ ರವಿಶಂಕರ್ ಗುರೂಜಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆ ನಂತರ ಶ್ರೀಲಂಕಾದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 12 ಕುಶಲತಾ ಅಭಿವೃದ್ಧಿ ಕೇಂದ್ರಗಳನ್ನು ರವಿಶಂಕರ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಗುರೂಜಿ ಅವರು ಪ್ರಧಾನಿ ದಿನೇಶ್‌ಗುಣವರ್ಧನೆ ಅವರೊಂದಿಗೆ ಶ್ರೀಲಂಕಾದ ಪ್ರವಾಸ ಕೈಗೊಂಡರು.