Latest Videos

ಅಶೋಕ ವಾಟಿಕಾ ಸ್ಥಳದಲ್ಲಿರುವ ಸೀತಾಮಾತೆಯ ದೇಗುಲಕ್ಕೆ ಕುಂಭಾಭಿಷೇಕ ನೆರವೇರಿಸಿದ ಶ್ರೀ ರವಿಶಂಕರ ಗುರೂಜಿ!

By Suvarna NewsFirst Published May 22, 2024, 4:31 PM IST
Highlights

ಶ್ರೀಲಂಕಾದ ಸೀತಾ ಏಲಿಯ ಎಂಬ ಗ್ರಾಮದಲ್ಲಿರುವ ಅಶೋಕ ವಾಟಿಕಾ ಸ್ಥಳದಲ್ಲಿ ಸೀತಾಮಾತೆಯ ಐತಿಹಾಸಿಕ ಕುಂಭಾಭಿಷೇಕವು ನಡೆಯಿತು. ಇದನ್ನು, ಶ್ರೀಲಂಕಾ ಸರ್ಕಾರದ ಆಹ್ವಾನದ ಮೇರೆಗೆ, ಜಾಗತಿಕ ಶಾಂತಿದೂತರೂ ಹಾಗೂ ಮಾನವತಾವಾದಿಗಳೂ ಆಗಿರುವ ಗುರುದೇವ ಶ್ರೀ ಶ್ರೀ ರವಿಶಂಕರರು ನೆರವೇರಿಸಿದರು. 
 

ಬೆಂಗಳೂರು (ಮೇ.22): ಶ್ರೀಲಂಕಾದ ಸೀತಾ ಏಲಿಯ ಎಂಬ ಗ್ರಾಮದಲ್ಲಿರುವ ಅಶೋಕ ವಾಟಿಕಾ ಸ್ಥಳದಲ್ಲಿ ಸೀತಾಮಾತೆಯ ಐತಿಹಾಸಿಕ ಕುಂಭಾಭಿಷೇಕವು ನಡೆಯಿತು. ಇದನ್ನು, ಶ್ರೀಲಂಕಾ ಸರ್ಕಾರದ ಆಹ್ವಾನದ ಮೇರೆಗೆ, ಜಾಗತಿಕ ಶಾಂತಿದೂತರೂ ಹಾಗೂ ಮಾನವತಾವಾದಿಗಳೂ ಆಗಿರುವ ಗುರುದೇವ ಶ್ರೀ ಶ್ರೀ ರವಿಶಂಕರರು ನೆರವೇರಿಸಿದರು. ಈ ಬೃಹತ್ ಸಮಾವೇಶವು ಭಾರತ ಹಾಗೂ ಶ್ರೀಲಂಕಾದ ನಡುವಿನ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಸಂಬಂಧವನ್ನು ದೃಢೀಕರಿಸುವತ್ತ ಮಹತ್ವದ ಹೆಜ್ಜೆಯಾಗಿದೆ. ಭಾರತ, ಶ್ರೀಲಂಕಾ ಹಾಗೂ ನೇಪಾಳದ ಹಲವಾರು ಭಕ್ತರು ಈ ಕುಂಭಾಭಿಷೇಕದಲ್ಲಿ ಭಾಗವಹಿಸಿದ್ದರು. 

ಪೂಜ್ಯ ಗುರುದೇವರು ಮಾತನಾಡಿ, "ಸೀತಾಮಾತೆಯು ಕರುಣೆ, ಮಾತೃತ್ವ ಹಾಗೂ ಸಹಿಷ್ಣುತೆ ಗುಣಗಳ ಸಾಕಾರ ರೂಪ" ಎಂದರು.  ಈ ಸಂದರ್ಭದಲ್ಲಿ ಅಯೋಧ್ಯೆಯಿಂದ ಸರಯು ನದಿಯ ಪವಿತ್ರ ನೀರನ್ನು ಕಳುಹಿಸಿಕೊಡಲಾಗಿತ್ತು. ಇದೇ ಸ್ಥಳದಲ್ಲಿಯೇ ಹನುಮಂತನು ಸೀತಾ ಮಾತೆಯ ಮೊದಲ ದರ್ಶನವನ್ನು ಪಡೆದು, ಸೀತಾ ಮಾತೆಯು ಮತ್ತೆ ಶ್ರೀ ರಾಮನೊಡನೆ ಮಿಲನವಾಗುವ ಆಶೆಯು ಹುಟ್ಟಿತು. ಸೀತಾಮಾತೆಯ ಜನ್ಮಸ್ಥಳವಾದ ನೇಪಾಳದ ಜನಕಪುರಿಯಿಂದ, ಭಗವಾನ್ ರಾಮನ ಜನ್ಮಸ್ಥಾನವಾದ ಅಯೋಧ್ಯೆಯಿಂದ ಮತ್ತು ಹನುಮಂತನ ಜನ್ಮಸ್ಥಾನವಾದ ಕರ್ನಾಟಕದ ಕಿಷ್ಕಿಂಧೆಯಿಂದ ಬಂದಿದ್ದ ಉಡುಗೊರೆಗಳನ್ನು ಹಾಗೂ ಆಶೀರ್ವಾದಗಳನ್ನು ಗುರುದೇವರು ನೀಡಿದರು.

ಅಯೋಧ್ಯೆ ಶಾಂತವಾಗಿರಲು ಈ ದೇವಿಯೇ ಕಾರಣ… ರವಿಶಂಕರ್ ಗುರೂಜಿ ಹೇಳಿದ್ದೇನು?

ಈ ಸಂದರ್ಭದಲ್ಲಿ ಗುರುದೇವರು ಮಾತನಾಡುತ್ತಾ, "ನಮ್ಮ ಪ್ರಾಚೀನ ನಾಗರಿಕತೆಗಳ ಸಂಬಂಧವನ್ನು ಇದು ದೃಢೀಕರಿಸುತ್ತದೆ. ಈಗ ನಶಿಸಿ ಹೋಗುತ್ತಿರುವ ಆ ಮೌಲ್ಯಗಳನ್ನೆಲ್ಲಾ ಮತ್ತೆ ತರಬೇಕಾಗಿದೆ. ರಾಮರಾಜ್ಯವೆಂದರೆ ಪ್ರಕೃತಿಗೆ ಅನುಗುಣವಾಗಿ ನಾವು ಜೀವಿಸುವ ಜೀವನ, ಸಾಮರಸ್ಯ, ಸಮೃದ್ಧಿ ಮತ್ತು ಸಂತೋಷದಿಂದ ನಡೆಸುವಂತಹ ಜೀವನ. ಈ ಸ್ಥಳವು  ಜಗತ್ತಿನಾದ್ಯಂತದ ಮಹಿಳೆಯರಿಗೆ ಸಂಕಷ್ಟಗಳಿಂದ ಮುಕ್ತವಾಗುವಂತಹ ಜೀವನದ ಆಶಾಕಿರಣವನ್ನು ಮೂಡಿಸಲಿ, ನ್ಯಾಯಯುತವಾದ ಹಾಗೂ ಸಮೃದ್ಧ ಸಮಾಜದ ಆಶಾಕಿರಣವನ್ನು ಮೂಡಿಸಲಿ" ಎಂದರು.

ಗುರುದೇವರಿಗೆ ಅಂಬ್ಯಾಸಡರ್ಸ್ ಫೋರಂನ ವತಿಯಿಂದ ಜೀವಮಾನಸಾಧನೆಯ ಪ್ರಶಸ್ತಿಯನ್ನು ನೀಡಲಾಯಿತು. "ವಿಶ್ವಶಾಂತಿ ಹಾಗೂ ಮಾನವತೆಯ ಉದ್ಧಾರಕ್ಕಾಗಿ ನಿಮ್ಮ ಇಡೀ ಜೀವನವನ್ನೇ ಬದ್ಧರಾಗಿರಿಸಿದ್ದೀರಿ. ಶ್ರೀಲಂಕಾ ಜನತೆಯು ಎದುರಿಸುತ್ತಿರುವ ಸವಾಲುಮಯವಾದ ಸಮಯವನ್ನು ದಾಟುವ ಧೈರ್ಯ ಹಾಗೂ ಬಲ ನಿಮ್ಮ ಭೇಟಿಯಿಂದ ದೊರೆತಂತಾಗಿದೆ" ಎಂದು ಪ್ರಶಸ್ತಿಯಲ್ಲಿ ಬರೆಯಲಾಗಿದೆ. ಮೇ 18ರಂದು ಬಂಢಾರನಾಯಿಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಶ್ರೀಲಂಕಾದ ರಾಜ್ಯಮಂತ್ರಿಗಳಾದ ಶ್ರೀ ಪ್ರೇಮಿತ ಬಂಡಾರ ತೆನ್ನಕೂನ್ ರವರು ಗುರುದೇವರನ್ನು ಆದರದಿಂದ ಬರಮಾಡಿಕೊಂಡರು. 

ಶ್ರೀಲಂಕಾ ಪ್ರಧಾನಮಂತ್ರಿಗಳಾದ ಶ್ರೀ ದಿನೇಶ್ ಗುಣವರ್ಧನೆಯವರ ಸ್ನೇಹದ ಆಹ್ವಾನದ ಮೇರೆಗೆ ಗುರುದೇವರು ಶ್ರೀಲಂಕಾದ ರಾಜ್ಯ ಪ್ರವಾಸವನ್ನು ಕೈಗೊಂಡಿದ್ದರು. ಶ್ರೀಲಂಕಾದಾದ್ಯಂತ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 12 ಕುಶಲತಾ ಅಭಿವೃದ್ಧಿ ಕೇಂದ್ರಗಳನ್ನು ಉದ್ಘಾಟಿಸಿದರು. ಈ ಕೇಂದ್ರಗಳಲ್ಲಿ  5000 ಯುವಕರಿಗೆ ಕುಶಲತೆಗಳಲ್ಲಿ ತರಬೇತಿ ನೀಡಿ, ಅವರಿಗೆ ಉದ್ಯೋಗವನ್ನು ಪಡೆಯುವ  ಅರ್ಹತೆಯನ್ನು ಕಲ್ಪಿಸಿಕೊಡಲಾಗುತ್ತದೆ. ಆರ್ಟ್ ಆಫ್ ಲಿವಿಂಗ್ ಮತ್ತು ಶ್ರೀಲಂಕಾದ ತಾಂತ್ರಿಕ ಶಿಕ್ಷಣ ಇಲಾಖೆಯು ಪರಸ್ಪರ ಒಡಂಬಡಿಕೆಯನ್ನು ಮಾಡಿಕೊಂಡವು. 

ರವಿಶಂಕರ್ ಗುರೂಜಿ ಬಾಲ್ಯ, ಓದು, ಆಶ್ರಮ.. ನೀವು ತಿಳಿಯಬೇಕಾದ ಎಲ್ಲವೂ ಇಲ್ಲಿದೆ

ಇದರಲ್ಲಿ ವಿದ್ಯಾರ್ಥಿಗಳಿಗೆ ಸ್ವ ಉದ್ದಿಮೆತನ ಹಾಗೂ ನಾಯಕತ್ವದಲ್ಲಿ ತರಬೇತಿಯನ್ನು ನೀಡಲು ಮತ್ತು ಶಿಕ್ಷಕರಿಗೂ ತರಬೇತಿಯನ್ನು ನೀಡವ ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ಇದರೊಡನೆ ಶ್ರೀ ಶ್ರೀ ಆಯುರ್ವೇದ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಸಂಶೋಧನಾ ಕೇಂದ್ರವು, ಗಂಫಹ ವಿಕ್ರಮಮಾರಚ್ಚಿ ವಿಶ್ವವಿದ್ಯಾಲಯದೊಡನೆ ಪರಸ್ಪರ ಒಡಂಬಡಿಕೆಯನ್ನು ಮಾಡಿಕೊಳ್ಳಲಾಯಿತು. ಸಂಶೋಧನೆ ಹಾಗೂ ನವೀನ ಆವಿಷ್ಕಾರದ ಕ್ಷೇತ್ರದಲ್ಲಿ ಜಂಟಿಯಾಗಿ ಕೆಲಸ ಮಾಡುವ ಒಡಂಬಡಿಕೆ ಇದಾಗಿದ್ದು, ಈ ವಿಶ್ವವಿದ್ಯಾಲಯವು ಶ್ರೀಲಂಕಾದಲ್ಲಿ ಯೋಗದ ಪದವಿಯನ್ನು ನೀಡುತ್ತಿರುವ ಏಕೈಕ ವಿಶ್ಶವಿದ್ಯಾಲಯವಾಗಿದೆ.

click me!