ಉಡುಪಿ: ಕೃಷ್ಣನ ನಗರಿಯಲ್ಲೂ ಸಂಭ್ರಮದ ದಸರಾ, ಗೊಂಬೆಗೆ ವಿಶೇಷ ಪೂಜೆ

By Girish GoudarFirst Published Oct 17, 2023, 9:18 PM IST
Highlights

ಹಿರಿಯರು ನಡೆಸಿಕೊಂಡು ಬಂದಿರುವ ಸಂಪ್ರದಾಯವನ್ನು ಸಾಧ್ಯವಾದಷ್ಟು ಪಾಲಿಸಿ, ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಉಡುಪಿಯಲ್ಲಿ ಇದು ವಿಶೇಷವಾಗಿರುವುದರಿಂದ ಸ್ನೇಹಿತರು, ನೆರೆಹೊರೆಯವರನ್ನು ಆಹ್ವಾನಿಸುತ್ತೇವೆ. 9 ದಿನಗಳು ಅನೇಕರು ಆಗಮಿಸಿ, ಗೊಂಬೆಗಳನ್ನು ವೀಕ್ಷಿಸಿ ತೆರಳುತ್ತಾರೆ ಎಂದು ಮನೆ ಮಾಲಿಕ ಎಮ್.ರಾಜೇಂದ್ರ ತಿಳಿಸಿದ್ದಾರೆ.

ಉಡುಪಿ(ಅ.17):  ದಸರಾ ಹಬ್ಬದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಕಾಣ ಸಿಗುವ ಗೊಂಬೆಗಳ ಆಕರ್ಷಣೆಯೂ, ಇತ್ತೀಚಿನ ವರ್ಷಗಳಲ್ಲಿ ಕೃಷ್ಣನಗರಿ ಉಡುಪಿಯಲ್ಲೂ ಪ್ರಚಲಿತಕ್ಕೆ ಬರುತ್ತಿದೆ. ನಗರದಲ್ಲಿ ಬೆರಳೆಣಿಕೆಯ ಮನೆಗಳಲ್ಲಿ ದಸರಾ ಗೊಂಬೆ ಜೋಡಣೆ ಮತ್ತು ಆರಾಧನೆಯೂ ನಡೆಯುತ್ತದೆ.

ಮೂಲತಃ ಮೈಸೂರಿನವರೇ ಆಗಿರುವ ಎಮ್. ರಾಜೇಂದ್ರ, ಕಾರ್ಪೊರೇಶನ್ ಬ್ಯಾಂಕ್ ಉದ್ಯೋಗಿಯಾಗಿದ್ದು, ಕೆಲವು ತಿಂಗಳ ನಿವೃತ್ತರಾಗಿದ್ದಾರೆ. ಅವರು ತಮ್ಮ ಪತ್ನಿ ಬೃಂದಾ ರಾಜೇಂದ್ರ, ಮಗಳು ಅತಿಥಿ ಹಾಗು ಮಗ ಅಭಿಷೇಕ್ ರೊಂದಿಗೆ ಉಡುಪಿಯ ಕಿನ್ನಿಮೂಲ್ಕಿಯಲ್ಲಿ ವಾಸವಿದ್ದಾರೆ. ಕಳೆದ ಏಳು ವರ್ಷಗಳಿಂದ ದಸರಾ ಗೊಂಬೆ ಪ್ರತಿಷ್ಠಾಪಿಸುತ್ತಿದ್ದಾರೆ. ಪಾಡ್ಯದಿಂದ ವಿಜಯದಶಮಿವರೆಗೆ ಪೂಜಿಸುತ್ತಾರೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವಿಶೇಷ ಪೂಜೆಯನ್ನು ನಡೆಸುತ್ತಾರೆ. 

ಉಡುಪಿಯಲ್ಲಿ ಮಹಿಷಾ ದಸರಾ ಬದಲಿಗೆ ಮಹಿಶೋತ್ಸವ ಆಚರಣೆ: ಜಯನ್ ಮಲ್ಪೆ

ವಂಶಪಾರಂಪರ್ಯವಾಗಿ ಬಂದಿರುವ ಗೊಂಬೆಗಳನ್ನು ಪೂಜಿಸುತ್ತಿರುವ ಇವರು, ಪ್ರತಿ ವರ್ಷ ದಸರಾಕ್ಕೆ ಒಂದೊಂದು ಗೊಂಬೆಯನ್ನು ಸೇರ್ಪಡೆಗೊಳಿಸುತ್ತಾರೆ. ಹೊರ ರಾಜ್ಯ, ಜಿಲ್ಲೆ, ವಿದೇಶ ಪ್ರವಾಸ ಸಂದರ್ಭದಲ್ಲಿ ಇಷ್ಟ ಪಟ್ಟ ಗೊಂಬೆಯನ್ನು ಖರೀದಿಸಿ, ದಸರಾದ 10 ದಿನ ಪೂಜಿಸುತ್ತಾರೆ. 

ಸುಮಾರು 250 ವರ್ಷ ಹಳೆದ ರಕ್ತ ಚಂದನದಿಂದ ಮಾಡಲ್ಪಟ್ಟ ಪಟ್ಟದ ರಾಜ ಮತ್ತು ರಾಣಿ ಗೊಂಬೆಯೂ ಪ್ರಮುಖ ಆಕರ್ಷಣೆಯಾಗಿದ್ದು,  ರಾಜೇಂದ್ರ ಅವರ ತಾಯಿ, ಮನೆಯಲ್ಲಿ ನವರಾತ್ರಿಗೆ ಇದೇ ವಿಗ್ರಹವನ್ನು ಪೂಜಿಸುತ್ತಿದ್ದರು. ಅದು ಅವರ  ಅಜ್ಜಿಯಿಂದ ಬಳುವಳಿಯಾಗಿ ಬಂದಿದ್ದು, ಈಗ ರಾಜೇಂದ್ರ, ಸಂಪ್ರದಾಯ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಜೊತೆಗೆ ದಶಾವತಾರ ಗೊಂಬೆಗಳು, ಪಶ್ಚಿಮ ಬಂಗಾಲದ ದುರ್ಗೆ, ಒಡಿಶಾದ ಪುರಿಯಿಂದ ತಂದಿರುವ ಬಲರಾಮ, ಕೃಷ್ಣ, ಸುಭದ್ರೆಯ ಗೊಂಬೆಗಳು, ಜಟಾಧಾರಿ ಶಿವ, ದೀಪದ ಮಲ್ಲಿ, ರಾಜಸ್ತಾನದ ವಾದ್ಯದ ಗೊಂಬೆ, ಕಂಚಿನ ಮೂರ್ತಿಗಳ ಸಹಿತ 200 ಕ್ಕೂ ಅಧಿಕ ಗೊಂಬೆಗಳನ್ನು ಜೋಡಿಸಲಾಗಿದೆ. 

ಕುಮಾರಸ್ವಾಮಿ ವಿಪಕ್ಷ ನಾಯಕರಾಗ್ತಾರಾ?: ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಿಷ್ಟು

ಹಿರಿಯರು ನಡೆಸಿಕೊಂಡು ಬಂದಿರುವ ಸಂಪ್ರದಾಯವನ್ನು ಸಾಧ್ಯವಾದಷ್ಟು ಪಾಲಿಸಿ, ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಉಡುಪಿಯಲ್ಲಿ ಇದು ವಿಶೇಷವಾಗಿರುವುದರಿಂದ ಸ್ನೇಹಿತರು, ನೆರೆಹೊರೆಯವರನ್ನು ಆಹ್ವಾನಿಸುತ್ತೇವೆ. 9 ದಿನಗಳು ಅನೇಕರು ಆಗಮಿಸಿ, ಗೊಂಬೆಗಳನ್ನು ವೀಕ್ಷಿಸಿ ತೆರಳುತ್ತಾರೆ ಎಂದು ಮನೆ ಮಾಲಿಕ ಎಮ್.ರಾಜೇಂದ್ರ ತಿಳಿಸಿದ್ದಾರೆ.

ಉಡುಪಿಯಲ್ಲಿ ಗೊಂಬೆಗಳನ್ನು ಜೋಡಿಸಿ, ಪೂಜಿಸುವುದು ಬಹಳ ವಿರಳ. ಸಿನೆಮಾಗಳಲ್ಲಿ ಗೊಂಬೆ ಜೋಡಣೆ, ಪೂಜೆಗಳನ್ನು ನೋಡಿದ್ದೇವೆ. ಪ್ರತ್ಯಕ್ಷವಾಗಿ ನೋಡಬೇಕೆಂಬ ಆಸೆಯಿತ್ತು.  ರಾಜೇಂದ್ರ ಅವರ ಮನೆಯಲ್ಲಿ ಗೊಂಬೆಗಳ ಆರಾಧನೆಯನ್ನು ನೋಡಿ ಬಹಳ ಸಂತೋಷವಾಯಿತು ಸ್ಥಳೀಯರು ಹೇಳಿದ್ದಾರೆ. 

click me!