ಬಸ್ತಿ ಗೊಮ್ಮಟನಿಗೆ ವಿಶೇಷ ಮಸ್ತಕಾಭಿಷೇಕ; ಗುಜರಾತ್‌ನ ಯತಿಗಳು ಭೇಟಿ

By Kannadaprabha NewsFirst Published Jun 24, 2023, 8:49 PM IST
Highlights

ಗುಜರಾತ್‌ ರಾಜ್ಯದಿಂದ ಆಗಮಿಸಿದ್ದ ಯುಗಳ ಜೈನ ಯತಿಗಳಾದ ಅಮೋಘ ಕೀರ್ತಿ ಮಹಾರಾಜ ಯತಿಗಳು ಮತ್ತು ಅಮರ ಕೀರ್ತಿ ಮಹಾರಾಜ ಯತಿಗಳು ತಾಲೂಕಿನ ಬಸ್ತಿ ಹೊಸಕೋಟೆಗೆ ಆಗಮಿಸಿ ಬಸ್ತಿ ಗೊಮ್ಮಟನಿಗೆ ವಿಶೇಷ ಮಸ್ತಕಾಭಿಷೇಕ ನೆರವೇರಿಸಿ ಭಕ್ತಾಧಿಗಳಿಗೆ ದರ್ಶನ ನೀಡಿದರು.

ಕೆ.ಆರ್‌.ಪೇಟೆ (ಜೂ.24) ಗುಜರಾತ್‌ ರಾಜ್ಯದಿಂದ ಆಗಮಿಸಿದ್ದ ಯುಗಳ ಜೈನ ಯತಿಗಳಾದ ಅಮೋಘ ಕೀರ್ತಿ ಮಹಾರಾಜ ಯತಿಗಳು ಮತ್ತು ಅಮರ ಕೀರ್ತಿ ಮಹಾರಾಜ ಯತಿಗಳು ತಾಲೂಕಿನ ಬಸ್ತಿ ಹೊಸಕೋಟೆಗೆ ಆಗಮಿಸಿ ಬಸ್ತಿ ಗೊಮ್ಮಟನಿಗೆ ವಿಶೇಷ ಮಸ್ತಕಾಭಿಷೇಕ ನೆರವೇರಿಸಿ ಭಕ್ತಾಧಿಗಳಿಗೆ ದರ್ಶನ ನೀಡಿದರು.

ಚಾರ್ತುಮಾಸದ ಅಂಗವಾಗಿ ಪವಿತ್ರ ಜೈನ ಕ್ಷೇತ್ರ ಹಾಸನದ ಶ್ರವಣಬೆಳಗೊಳಕ್ಕೆ ತೆರಳುವ ವೇಳೆ ಜೈನ ಯತಿಗಳು ತಾಲೂಕಿನ ಬೂಕನಕೆರೆ ಹೋಬಳಿಯ ಬಸ್ತಿ ಹೊಸಕೋಟೆ ಗ್ರಾಮದಲ್ಲಿ ಕೃಷ್ಣರಾಜ ಸಾಗರ ಜಲಾಶಯದ ಹಿನ್ನೀರಿಗೆ ಹೊಂದಿಕೊಂಡಂತೆ ಇರುವ 18 ಅಡಿ ಎತ್ತರದ ಗೊಮ್ಮಟ ವಿಗ್ರಹಕ್ಕೆ ಮಸ್ತಕಾಭಿಷೇಕ ನೆರವೇರಿಸಿದರು.

Latest Videos

ಬಸ್ತಿ ಕ್ಷೇತ್ರಕ್ಕೆ ಆಗಮಿಸಿದ ಶ್ರೀಅಮೋಘ ಕೀರ್ತಿ ಮಹಾರಾಜ ಯತಿಗಳು ಮತ್ತು ಶ್ರೀಅಮರ ಕೀರ್ತಿ ಮಹಾರಾಜ ಯತಿಗಳು ಎರಡು ದಿನಗಳ ಕಾಲ ಬಸ್ತಿ ಗೊಮ್ಮಟನ ಸನ್ನಿಧಿಯಲ್ಲಿಯೇ ವಾಸ್ತವ್ಯ ಮಾಡಿ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿ ಅಗತ್ಯ ಸಲಹೆ ಸೂಚನೆ ನೀಡಿದರು

ಕರ್ನಾಟಕದ ಏಳು ಅದ್ಭುತಗಳ ಪಟ್ಟಿಯಲ್ಲಿ ಶ್ರವಣಬೆಳಗೊಳದ ಗೊಮ್ಮಟೇಶ್ವರ...

ಈ ವೇಳೆ ಮೈಸೂರು, ಬೆಂಗಳೂರು ಮುಂತಾದ ಅನೇಕ ಕಡೆಯಿಂದ ಜಿನ ಭಕ್ತರು ಆಗಮಿಸಿ ಯತಿಗಳ ದರ್ಶನ ಪಡೆದು ಯತಿಗಳ ಪಾದಪೂಜೆ ನೆರವೇರಿಸಿ ಕೃತಾರ್ಥರಾದರು. ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ನೆಲೆಸಿದ್ದ ಜಿನ ಯತಿಗಳು ಬಸ್ತಿ ಗೊಮ್ಮಟನಿಗೆ ಅರಿಶಿನ, ಕುಂಕುಮ, ಎಳನೀರು, ಶ್ರೀಗಂಧ ಸೇರಿದಂತೆ ಅನೇಕ ರೀತಿಯ ಜಲಾಭಿಷೇಕದ ಮೂಲಕ ಮಸ್ತಕಾಭಿಷೇಕ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿದರು.

ಬಿಜಿಎಸ್‌ ಶಿಕ್ಷಣ ಸಂಸ್ಥೆಗೆ ಭೇಟಿ:

ಬಸ್ತಿ ಹೊಸಕೋಟೆಯಿಂದ ನಿರ್ಗಮಿಸಿ ಚಾತುರ್ಮಾಸ ವಾಸ್ತವ್ಯಕ್ಕಾಗಿ ಶ್ರವಣ ಬೆಳಗೊಳಕ್ಕೆ ಸಾಗುವ ಮಾರ್ಗದಲ್ಲಿ ಜಿನ ಪೂಜ್ಯರಾದ ಅಮೋಘ ಕೀರ್ತಿ ಮಹಾರಾಜ ಯತಿಗಳು ಮತ್ತು ಅಮರ ಕೀರ್ತಿ ಮಹಾರಾಜ ಯತಿಗಳು ಪಟ್ಟಣದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್‌ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದರು.

ಸಂಸ್ಥೆಗೆ ಆಗಮಿಸಿದ ಯತಿಗಳನ್ನು ಕಾರ್ಯದರ್ಶಿ ಡಾ.ಜೆ.ಎನ್‌.ರಾಮಕೃಷ್ಣೇಗೌಡ ಸ್ವಾಗತಿಸಿದರು. ಯತಿಗಳ ಆಗಮನದ ಸುದ್ದಿ ತಿಳಿದು ಶಾಸಕ ಎಚ್‌.ಟಿ.ಮಂಜು ಮತ್ತು ತಾಲೂಕು ಜೆಡಿಎಸ್‌ ಅಧ್ಯಕ್ಷ ಎ.ಎನ್‌.ಜಾನಕೀರಾ ಕೂಡ ಸಂಸ್ಥೆಗೆ ಆಗಮಿಸಿ ಯತಿಗಳ ಆರ್ಶೀವಾದ ಪಡೆದರು.

ಸಂಸ್ಥೆ ಆವರಣದಲ್ಲಿ ಭಕ್ತರಿಂದ ಯತಿಗಳ ಪಾದಪೂಜೆ ಕಾರ್ಯಕ್ರಮಗಳು ನಡೆದವು. ಬಿಜಿಎಸ… ಶಿಕ್ಷಣ ಸಂಸ್ಥೆ ಮತ್ತು ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಬಗ್ಗೆ ತಿಳಿದುಕೊಂಡ ಯತಿಗಳು ಶಿಕ್ಷಣ, ಆರೋಗ್ಯ, ಅನ್ನ ದಾಸೋಹದ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಪುನರುತ್ಥಾನಕ್ಕೆ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ ಕೊಡುಗೆಗಳನ್ನು ಸ್ಮರಿಸಿದರು. ಚುಂಚನಗಿರಿ ಕ್ಷೇತ್ರದ ಪೀಠಾಧಿಪತಿ ಡಾ.ನಿರ್ಮಲಾನಂಧನಾಥರ ಭೇಟಿ ಬಯಕೆಯನ್ನು ವ್ಯಕ್ತಪಡಿಸಿದರು.

ಗುಜರಾತಿನವರಾದರೂ ಕನ್ನಡವನ್ನು ಸಮರ್ಥವಾಗಿ ಕಲಿತಿರುವ ಯತಿಗಳು ಕೆಲವರ ಭಾಷಾ ದೋಷಗಳನ್ನು ತಿದ್ದುವ ಮೂಲಕ ತಮಗಿರುವ ಕನ್ನಡ ವ್ಯಾಕರಣ ಜ್ಞಾನವನ್ನು ಪ್ರಚರುಪಡಿಸಿ ಎಲ್ಲರನ್ನೂ ಬೆರಗುಗೊಳಿಸಿದರು.

ಚಾರ್ತುಮಾಸದ ಅವಧಿಯಲ್ಲಿ ನಾಲ್ಕು ತಿಂಗಳ ಕಾಲ ನಾವು ಪುಣ್ಯ ಕ್ಷೇತ್ರ ಶ್ರವಣಬೆಳಗೊಳದಲ್ಲಿ ತಂಗಲಿದ್ದೇವೆ. ಜೂನ್‌ 26 ರಿಂದ ಜುಲೈ 7 ರವರೆಗೆ ಶ್ರವಣಬೆಳಗೊಳದಲ್ಲಿ ಬೃಹತ್‌ ಸಿದ್ಧಚಕ್ರ ವಿಧಾನ ಕಾರ್ಯಕ್ರಮ ನಡೆಯಲಿವೆ. ಜುಲೈ 2ರ ಚಾರ್ತುಮಾಸ ಕಲಶ ಪ್ರತಿಷ್ಠಾಪನೆ ನಡೆಯಲಿದೆ. ಶ್ರೀ ಕ್ಷೇತ್ರದಲ್ಲಿ 14 ಜನ ತ್ಯಾಗಿಗಳು ವಾಸ್ತಯ ಚಾರ್ತುಮಾಸ ವ್ರತಾಚರಣೆ ನಡೆಸಲಿದ್ದಾರೆ ಎಂದು ಸ್ಥಳೀಯ ಜೈನ ಸಮುದಾಯದ ಮುಖಂಡ ವಜ್ರಪ್ರಸಾದ್‌ ತಿಳಿಸಿದರು.

Gommatagiri: ವೈರಾಗ್ಯಮೂರ್ತಿಗೆ ಬಣ್ಣಬಣ್ಣದ ಮಹಾಮಸ್ತಕಾಭಿಷೇಕ

12ನೇ ಶತಮಾನದಲ್ಲಿ ಹೊಯ್ಸಳ ಬಿಟ್ಟಿದೇವನ ಮಂತ್ರಿಯಾಗಿದ್ದ ಪುಣಿಸಮಯ್ಯ ಗೊಮ್ಮಟ ವಿಗ್ರಹವನ್ನು ಪ್ರತಿಷ್ಠಾಪಿಸದನೆಂದು ಇಲ್ಲಿನ ಶಾಸನಗಳು ತಿಳಿಸುತ್ತಿವೆ. ಕೆಆರ್‌ಎಸ್‌ ಅಣೆಕಟ್ಟೆಯ ಒಡಲಿನಲ್ಲಿ ಬಸ್ತಿ ಹೊಸಕೋಟೆ ಗ್ರಾಮ ಮುಳುಗಡೆಯಾದ ನಂತರ ಇಲ್ಲಿನ ಬಸ್ತಿ ಗೊಮ್ಮಟ ಅನಾಥನಾಗಿದ್ದಾನೆ. ಇತ್ತೀಚೆಗೆ ಕೆಲ ಜೈನ ಸಂಘಟನೆಗಳು ಬಸ್ತಿ ಗೊಮ್ಮಟನ ಅಭಿವೃದ್ಧಿಗೆ ಮುಂದಾಗಿವೆ. ಕೆಲವು ವರ್ಷಗಳಿಂದ ಬಸ್ತಿ ಗೊಮ್ಮಟನಿಗೆ ಮಹಾ ಮಸ್ತಕಾಭಿಷೇಕ, ಪೂಜೆ ಪುನಸ್ಕಾರಗಳು ನಡೆಯುತ್ತಿದ್ದು, ಬಸ್ತಿ ಕ್ಷೇತ್ರವನ್ನು ಪ್ರವಾಸಿ ಕೇಂದ್ರವಾಗಿಸುವತ್ತ ಜೈನ ಸಂಘಟನೆಗಳು ಶ್ರಮಿಸುತ್ತಿವೆ. ಮಾಜಿ ಸಂಸದ ಸಿ.ಎಸ್‌.ಪುಟ್ಟರಾಜು ಅವರು ಕ್ಷೇತ್ರದ ಅಭಿವೃದ್ಧಿಗೆ 38 ಲಕ್ಷ ರು. ಅನುದಾನವನ್ನು ತಮ್ಮ ಅಧಿಕಾರದ ಅವಧಿಯಲ್ಲಿ ಒದಗಿಸಿದ್ದು ಕ್ಷೇತ್ರದ ಅಭಿವೃದ್ಧಿಗೆ ಮೊದಲ ಮುನ್ನುಡಿ ಬರೆದಿದ್ದಾರೆ.

click me!