ಎಳ್ಳು ಅತೀ ಸಣ್ಣ ಧಾನ್ಯ. ಎಳ್ಳಿಗೆ ಸಮಾನ ಎನ್ನುತ್ತಾರೆ. ಅದು ಅತೀ ಲಘುವಾದುದರ, ಅತೀ ಸೂಕ್ಷ್ಮವಾದುದರ ಪ್ರತೀಕ. ಸೂಕ್ಷ್ಮ ಜಗತ್ತಿನೊಡನೆ ಒಂದಾಗಲು ನಾವೂ ಸಹ ಸೂಕ್ಷ್ಮರಾಗಿರಬೇಕು.
ಗುರುದೇವ್ ಶ್ರೀ ಶ್ರೀ ರವಿಶಂಕರ್
ಎಳ್ಳು ಅತೀ ಸಣ್ಣ ಧಾನ್ಯ. ಎಳ್ಳಿಗೆ ಸಮಾನ ಎನ್ನುತ್ತಾರೆ. ಅದು ಅತೀ ಲಘುವಾದುದರ, ಅತೀ ಸೂಕ್ಷ್ಮವಾದುದರ ಪ್ರತೀಕ. ಸೂಕ್ಷ್ಮ ಜಗತ್ತಿನೊಡನೆ ಒಂದಾಗಲು ನಾವೂ ಸಹ ಸೂಕ್ಷ್ಮರಾಗಿರಬೇಕು. ನಾವು ದುಃಖಿಗಳಾದಾಗ ನಮ್ಮ ಮನಸ್ಸು ಕಲ್ಲಿನಂತಿರುತ್ತದೆ. ನಾವು ಪ್ರಸನ್ನರಾಗಿದ್ದರೆ ಮನಸ್ಸು ಹಗುರವಾಗಿರುತ್ತದೆ. ಆಧ್ಯಾತ್ಮಿಕ ವಿಚಾರಗಳಿಂದ ಮನಸ್ಸು ತುಂಬಿದಾಗ ಮನಸ್ಸು ಅತೀ ಹಗುರವಾಗಿರುತ್ತದೆ.
ಋಷಿತ್ವದ ಪ್ರಾಪ್ತಿಗಾಗಿ ನಾವು ಅಣುವಂತಾಗಬೇಕು. ಸಪ್ತ ಋಷಿಗಳೆಲ್ಲರೂ ಒಂದೇ ಒಂದು ಎಳ್ಳನ್ನು ತಿಂದರೆಂದರೆ, ಅವರು ಇನ್ನೆಷ್ಟು ಸೂಕ್ಷ್ಮರಾಗಿರಬೇಕು? ನಮ್ಮ ಕಲ್ಪನೆಯಲ್ಲಿ ಋಷಿ-ಮುನಿಗಳು ಬಹಳ ದೊಡ್ಡ ಗಾತ್ರದವರಾಗಿದ್ದರು, ಜಠಾಧಾರಿಗಳಾಗಿದ್ದರು ಎಂದೆಲ್ಲಾ ಇದೆ. ಇಲ್ಲ, ಚೇತನವು ಅಷ್ಟು ಸೂಕ್ಷ್ಮವಾದಾಗ ಋಷಿಗಳಾಗುತ್ತೇವೆ. ಅಣೋರಣೀಯಾನ್, ಅಣುವಿಗಿಂತಲೂ ಸೂಕ್ಷ್ಮರಾಗಿರಬೇಕು. ಅದೇ ನಮ್ಮ ಚೈತನ್ಯದ, ಆತ್ಮದ ಕ್ಷೇತ್ರ. ಇದರ ಅನುಭವವಾದ ನಂತರ ತಿಳಿಯುತ್ತದೆ. ಒಂದು ಎಳ್ಳೂ ಸಹ ದೊಡ್ಡದಾಗಿ ಕಾಣಿಸುತ್ತದೆಯೆಂದರೆ, ಅಷ್ಟೊಂದು ಸೂಕ್ಷ್ಮರಾಗಿದ್ದೇವೆ ಎಂದರ್ಥ. ಅದೇ ಅಣೋರಣೀಯಾನ್. ಅಣುವಿಗಿಂತಲೂ ಸೂಕ್ಷ್ಮವಾದದ್ದು ನಮ್ಮ ಸ್ವರೂಪ ಎಂದು ತಿಳಿಸಲು ಎಳ್ಳಿನ ಬಗ್ಗೆ ಹೇಳಿದರು. ಮಹತೋಮಹೀಯಾನ್ ಅಂದರೆ, ಬ್ರಹ್ಮಾಂಡಕ್ಕಿಂತಲೂ ದೊಡ್ಡದು. ಒಂದು ತರಂಗವು ವಿಶ್ವವ್ಯಾಪ್ತಿಯಾಗಿದೆ, ಮತ್ತದೇ ಸಮಯದಲ್ಲಿ ಅಣುವಿಗಿಂತಲೂ ಸೂಕ್ಷ್ಮವಾಗಿದೆ.
ಜನರು ಎಳ್ಳನ್ನು ಹಾಗೆಯೇ ನೇರವಾಗಿ ತಿನ್ನುವುದಿಲ್ಲ. ಎಳ್ಳು ಶನಿದೇವರ ಪ್ರತೀಕ. ತಿಲತರ್ಪಣವನ್ನು ನೀಡುತ್ತೇವೆ. ದಾನಗಳಲ್ಲಿ ತಿಲದಾನವನ್ನು ಶ್ರೇಷ್ಠ ದಾನ ಎಂದು ಪರಿಗಣಿಸಲಾಗಿದೆ. ದೊಡ್ಡ ದೊಡ್ಡ ವಸ್ತುಗಳನ್ನು ನೀಡುವುದರ ಬದಲಿಗೆ ಸಣ್ಣ ವಸ್ತುವನ್ನು ಕೊಡುವುದು, ಎಂದರೆ ಎಲ್ಲರೊಡನೆಯೂ ಅಷ್ಟು ಭಾವದಿಂದ ಬೆರೆಯುವುದು, ಪ್ರೇಮದಿಂದ ಬೆರೆಯುವುದು.
ಎಳ್ಳನ್ನು ನೇರವಾಗಿ ಯಾರೂ ಸ್ವೀಕರಿಸುವುದಿಲ್ಲ. ಎಳ್ಳನ್ನು ಬೆಲ್ಲದೊಡನೆ ಬೆರೆಸಿ ತಿನ್ನುತ್ತಾರೆ. ಇದರ ಅರ್ಥ, ಕೇವಲ ಸೂಕ್ಷ್ಮರಾಗಿದ್ದರಷ್ಟೇ ಸಾಲದು, ಮಧುರವಾಗಿಯೂ ಇರಬೇಕು. ವಾಣಿ ಕೇವಲ ಮಧುರವಾಗಿದ್ದರಷ್ಟೇ ಸಾಲದು, ಸತ್ಯವೂ ಆಗಿರಬೇಕು. ನಾವು ಎಷ್ಟು ಸೂಕ್ಷ್ಮರಾಗಿರುತ್ತೇವೋ, ಅಷ್ಟು ಸತ್ಯವೂ ನಮ್ಮಲ್ಲಿ ಇರುತ್ತದೆ. ಯಾವುದು ಬದಲಿಸುವುದಿಲ್ಲವೋ, ಪರಿವರ್ತನಶೀಲವಲ್ಲವೋ ಅದು ಸೂಕ್ಷ್ಮವೂ ಆಗಿರುತ್ತದೆ. ಆದ್ದರಿಂದಲೇ ಮಹಾರಾಷ್ಟ್ರದಲ್ಲಿ "ಎಳ್ಳು ಬೆಲ್ಲ ತಿಂದು ಶುಭವನ್ನೇ ಮಾತನಾಡು" ಎಂದು ಪರಸ್ಪರ ಎಳ್ಳು ಬೆಲ್ಲ ಹಂಚಿಕೊಂಡು ಹೇಳುವುದು. ಜನರೊಡನೆ ಮಧುರತೆಯಿಂದ ಸಂಪರ್ಕಿಸಬೇಕೆಂದು ಅದು ಸೂಚಿಸುತ್ತದೆ. ಕರ್ನಾಟಕದಲ್ಲೂ, "ಎಳ್ಳು ಬೆಲ್ಲವ ತಿಂದು ಒಳ್ಳೆಯ ಮಾತನಾಡು" ಎಂದು ಹೇಳುವ ಸಂಪ್ರದಾಯವಿದೆ.
ಎಳ್ಳಿನಿಂದ ಎಳ್ಳೆಣ್ಣೆಯನ್ನು ಮಾಡುತ್ತಾರೆ. ನಮ್ಮ ತಲೆಯ ಮೇಲೆ ಹಚ್ಚಿಕೊಂಡು, ದೇಹಕ್ಕೆ ಎಳ್ಳೆಣ್ಣೆಯ ಅಭ್ಯಂಜನವನ್ನು ಮಾಡಿಕೊಳ್ಳುತ್ತೇವೆ. ಎಳ್ಳೆಣ್ಣೆಯು ದೇಹಕ್ಕೂ ಆರೋಗ್ಯಕರ. ಎಳ್ಳನ್ನು ದಾನವಾಗಿ ಕೊಡುತ್ತಿದ್ದರು ಮತ್ತು ಆ ಎಳ್ಳಿನಿಂದ ಎಣ್ಣೆ ಮಾಡಿ ದೀಪಗಳನ್ನು ಬೆಳಗಿಸುತ್ತಿದ್ದರು. ಅಂದಿನ ದಿನಗಳಲ್ಲಿ ದೀಪಗಳನ್ನು ಬೆಳಗಿಸಲು ವಿದ್ಯುಚ್ಛಕ್ತಿ ಇರಲಿಲ್ಲವಲ್ಲ?
ಗೋಮಾತೆಯನ್ನು ಪೂಜಿಸಿ, ಗೋದಾನವನ್ನು ಶ್ರೇಷ್ಠ ದಾನ ಎಂದು ಹೇಗೆ ಪರಿಗಣಿಸುತ್ತಾರೋ, ಅದೇ ರೀತಿಯಾಗಿ ಎಳ್ಳಿನ ದಾನವನ್ನು ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಬರುವ ಮೊದಲ ಫಸಲನ್ನು ನಾವು ಮಾತ್ರ ಉಪಯೋಗಿಸದೆ, ಭಗವಂತನಿಗೆ ಮೊದಲು ಅರ್ಪಿಸುವುದು, ಸೂರ್ಯ ಭಗವಾನನನ್ನು ಪ್ರಾರ್ಥಿಸಿ, ನಮಗೆ ಬೆಳೆಗಳನ್ನು ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಹೇಳುವುದು. ನಂತರ ಸಮಾಜದಲ್ಲಿ ಎಲ್ಲರಿಗೂ ಹಂಚಿ ನಾವೂ ತಿನ್ನುವುದು. ತೋಟದಲ್ಲಿ ಬೆಳೆದ ಕಬ್ಬು, ಎಳ್ಳು, ಅಕ್ಕಿ, ಬೆಲ್ಲ, ತರಕಾರಿ, ಬೆಳೆಯಲಾದ ಎಲ್ಲಾ ಧಾನ್ಯಗಳನ್ನೂ ಸುತ್ತಮುತ್ತಲಿನವರಿಗೆ ಕೊಟ್ಟು, ನಾವು ಅದರ ಉಪಭೋಗ ಮಾಡುವುದು. ಬೆಳೆದ ಮೊದಲ ಅಕ್ಕಿಯಲ್ಲಿ ಪೊಂಗಲ್ ಅನ್ನು, ಖಿಚಡಿಯನ್ನು ಮಾಡುತ್ತಾರೆ. ಹಾಲಿನಲ್ಲಿ ಬೇಯಿಸಲಾದ ಅಕ್ಕಿಯಿಂದ ಸಿಹಿಯಾದ ಪೊಂಗಲ್ ಹಾಗೂ ಅರಿಶಿಣವನ್ನು ಸೇರಿಸಿದ ಖಾರದ ಪೊಂಗಲ್ ಅನ್ನು ಮಾಡುತ್ತಾರೆ. ಎಂದರೆ, ವಯೋಸ್ಥಾಪನವಾದ ಪದಾರ್ಥಗಳನ್ನು; ಮುಪ್ಪನ್ನು ನಿಧಾನಿಸುವ ಪದಾರ್ಥಗಳನ್ನು ಬಳಸುತ್ತೇವೆ. ಶುಂಠಿ, ಅರಿಶಿಣ, ಅಕ್ಕಿ, ಬೇಳೆಯನ್ನು ಉಪಯೋಗಿಸಿ ಮಾಡಲಾಗುವ ಅಡುಗೆಯನ್ನು ಮೊದಲು ಸೂರ್ಯದೇವನಿಗೆ ಅರ್ಪಿಸುತ್ತೇವೆ. ಸೂರ್ಯನಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಇದೇ ಮಕರ ಸಂಕ್ರಾಂತಿಯ ಸಂದೇಶ.