ದೀಪಾವಳಿ ರೈತರ ಪಾಲಿಗೂ ಬಹುದೊಡ್ಡ ಹಬ್ಬ. ಮೂರು ದಿನಗಳ ಕಾಲ ಬಲೀಂದ್ರನನ್ನು ತಂದು ಪೂಜೆ ಸಲ್ಲಿಸುವುದರ ಜತೆಗೆ ರೈತರ ಒಡನಾಡಿ ಗೋವುಗಳಿಗೂ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಅದ್ದೂರಿಯಾಗಿ ಹಬ್ಬವನ್ನು ಆಚರಿಸಲಾಗಿದ್ದು, ವಿಶಿಷ್ಠ ಸಂಪ್ರದಾಯಗಳೊಂದಿಗೆ ಸಂಭ್ರಮದ ಗೋಪೂಜೆ ನಡೆದಿದೆ.
ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರ ಕನ್ನಡ (ಅ.26): ದೀಪಾವಳಿ ರೈತರ ಪಾಲಿಗೂ ಬಹುದೊಡ್ಡ ಹಬ್ಬ. ಮೂರು ದಿನಗಳ ಕಾಲ ಬಲೀಂದ್ರನನ್ನು ತಂದು ಪೂಜೆ ಸಲ್ಲಿಸುವುದರ ಜತೆಗೆ ರೈತರ ಒಡನಾಡಿ ಗೋವುಗಳಿಗೂ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಅದ್ದೂರಿಯಾಗಿ ಹಬ್ಬವನ್ನು ಆಚರಿಸಲಾಗಿದ್ದು, ವಿಶಿಷ್ಠ ಸಂಪ್ರದಾಯಗಳೊಂದಿಗೆ ಸಂಭ್ರಮದ ಗೋಪೂಜೆ ನಡೆದಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ. ಒಂದೆಡೆ ಕಾಲ್ಕಿತ್ತು ಓಡುತ್ತಿರೋ ಹೋರಿಗಳು. ಇನ್ನೊಂದೆಡೆ ಅವುಗಳನ್ನು ಹಿಡಿಯಲು ಹರಸಾಹಸ ಪಡುತ್ತಿರೋ ಯುವಕರು. ಮತ್ತೊಂದೆಡೆ ಈ ಸಾಹಸಮಯ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಿರುವ ಸಾರ್ವಜನಿಕರು.
ಅರೆ. ಇದೇನು ಹೋರಿ ಓಡಿಸೊ ಸ್ಪರ್ಧೆ ಅಂಡ್ಕೊಂಡ್ರಾ.? ಅಲ್ಲ..! ರೈತರ ಪಾಲಿನ ದೊಡ್ಡಹಬ್ಬ ಎಂದು ಕರೆಯಿಸಿಕೊಳ್ಳುವ ದೀಪಾವಳಿ ಸಂಭ್ರಮ. ಹೌದು! ಸಿದ್ದಾಪುರ ತಾಲ್ಲೂಕಿನ ದೊಡ್ಮನೆ ವ್ಯಾಪ್ತಿಯ ಉಡಳ್ಳಿ ಬೀಳೆಗೊಡ, ಕೊಲಸಿರ್ಸಿ ಗುಡ್ಡೆಕೇರಿ, ಭುವನಗಿರಿ ಹಾಗೂ ಅಲ್ಕುಣಿ ಗ್ರಾಮಗಳ ಜನರು ದೀಪಾವಳಿ ಹಬ್ಬವನ್ನು ಸಂಪ್ರದಾಯಗಳೊಂದಿಗೆ ಅದ್ಧೂರಿಯಾಗಿ ಆಚರಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ದೀಪಾವಳಿ ಹಬ್ಬವನ್ನ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಬಲೀಂದ್ರನನ್ನು ತಂದು ವಿಶೇಷ ಪೂಜೆ ಸಲ್ಲಿಸಿದ ರೈತರು ಬಲಿಪಾಡ್ಯದ ದಿನವಾದ ಇಂದು ಗೋವುಗಳಿಗೆ ಸಿಂಗಾರ, ರೊಟ್ಟಿ, ಪತ್ತೆತೆನ್ನೆ ಎಲೆಗಳಿಂದ ಮಾಡಿದ ದಂಡೆಗಳನ್ನು ಕಟ್ಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
Chamarajanagar: ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ: ವಿಜೃಂಭಣೆಯಿಂದ ಜರುಗಿದ ರಥೋತ್ಸವ
ನಂತರ ಅವುಗಳನ್ನು ಚೌಲೂ, ಬಲೂನು, ಬಾಸಿಂಗ ಸೇರಿದಂತೆ ಬಣ್ಣದ ಕಾಗದ ಹೂವುಗಳಿಂದ ಶೃಂಗರಿಸಿ ಬೆದರಿಸಲಾಯಿತು. ಸದಾ ನಮ್ಮ ಒಡನಾಡಿಯಾಗಿರುವ ಗೋವುಗಳಿಗೆ ಈ ದಿನದಂದು ವಿಶೇಷ ಪೂಜೆ ಸಲ್ಲಿಸಿದ ಸಂತೃಪ್ತಿ ನಮ್ಮದಾಗಿದೆ ಅಂತಾರೆ ಸ್ಥಳೀಯರು. ದೀಪಾವಳಿಯ ಈ ಸಂಭ್ರಮದಲ್ಲಿ ರೈತರ ಮನೆಗೆ ಆಧಾರವಾಗಿರುವ ಗೋವುಗಳಿಗೆ ವಿಶೇಷ ಪೂಜೆ ಹಾಗೂ ಗೋ ಕ್ರೀಡೆಯನ್ನು ಶ್ರದ್ಧಾ ಭಕ್ತಿ ಮತ್ತು ವಿಜೃಂಭಣೆಯಿಂದ ನಡೆಸಲಾಯಿತು. ರೈತರು ತಮ್ಮ ದನಕರುಗಳಿಗೆ ಸ್ನಾನ ಮಾಡಿಸಿ, ಅಲಂಕಾರ ಮಾಡಿ ಕೊಟ್ಟಿಗೆಯಲ್ಲಿ ಪೂಜೆ ಸಲ್ಲಿಸಿದರು. ಗೋ ಗ್ರಾಸ ನೀಡಿದ ನಂತರ ಊರಿನ ಎಲ್ಲಾ ದನಕರುಗಳನ್ನು ಬೆಚ್ಚುವ ಕಟ್ಟೆಯವರಿಗೆ ಕರೆತಂದರು. ನಂತರ ಬೆಚ್ಚುವ ಕಟ್ಟೆಯ ಭೂತಪ್ಪನಿಗೆ ಸುಳಿಗಾಗಿ ಒಡೆದು ಪೂಜೆ ಸಲ್ಲಿಸಲಾಯಿತು.
Udupi: ಕರಾವಳಿಯಲ್ಲಿ ಸತ್ತವರೂ ಸಂಭ್ರಮಿಸುವ ಹಬ್ಬ ದೀಪಾವಳಿ
ಅದಾದ ನಂತರ ಗ್ರಾಮದ ಸುತ್ತಲಿನ ಎಲ್ಲಾ ದೇವತೆಗಳಿಗೆ ಹಣ್ಣು ಕಾಯಿ ಸಮರ್ಪಿಸಿದರು. ಈ ವೇಳೆ ಅವುಗಳನ್ನು ಶೃಂಗರಿಸಿ ಮೆರವಣಿಗೆ ಕೂಡಾ ನಡೆಸಲಾಗಿತ್ತು. ಗ್ರಾಮದಲ್ಲಿ ಬಹುತೇಕರು ಕೃಷಿಯನ್ನೇ ನಂಬಿ ಬದುಕುತ್ತಿದ್ದವರು. ಸದಾ ಗೋವುಗಳೊಂದಿಗೆ ಒಡನಾಟ ಹೊಂದಿರುವ ಕಾರಣ ದೀಪಾವಳಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಅದರಂತೆ ಈ ಭಾರಿಯೂ ಅದ್ದೂರಿಯಾಗಿ ಆಚರಿಸಿದ್ದು, ಗೋವುಗಳನ್ನು ಅಲಂಕರಿಸಿ ಬೆದರಿಸುವ ಮೂಲಕ ಸಂಭ್ರಮಿಸಿದರು. ಒಟ್ಟಿನಲ್ಲಿ ದೀಪಾವಳಿಯ ಈ ಹಬ್ಬದ ಸಂಭ್ರಮದಲ್ಲಿ ರೈತರು ತಮ್ಮ ಜೀವನಾಧಾರವಾದ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬಂದರಲ್ಲದೇ, ಹಬ್ಬವನ್ನು ಸಂಭ್ರಮಿಸಿ, ಅದ್ಧೂರಿಯಾಗಿ ಆಚರಿಸಿದ್ದಾರೆ.